/newsfirstlive-kannada/media/post_attachments/wp-content/uploads/2025/05/Bengaluru-rain-Sai-Layout-6.jpg)
ಬೆಂಗಳೂರಲ್ಲಿ ಒಂದು ದ್ವೀಪದಂತೆ ಕಾಣುತ್ತಿರುವ ಸಾಯಿ ಲೇಔಟ್ ಅಕ್ಷರಶಃ ನೀರಲ್ಲಿ ಮುಳುಗಿದೆ. ಅಲ್ಲಿನ ಜನರ ಸಂಕಷ್ಟ ಇನ್ನೂ ಸುಧಾರಿಸಿಲ್ಲ. 48 ಗಂಟೆ ಕಳೆಯುತ್ತಾ ಬಂದರೂ ಸಮಸ್ಯೆಗಳು ಹೆಚ್ಚಾಗುತ್ತಿವೆಯೇ ವಿನಃ ಕಮ್ಮಿಯಾಗುತ್ತಿಲ್ಲ. ಮಳೆರಾಯನ ರಣಕೇಕೆಗೆ ಅಲ್ಲಿನ ಜನರ ಸ್ಥಿತಿ ತೀರ ಹದಗೆಡುತ್ತಿದೆ.
ಇಂಥಾ ಮಹಾಮಳೆಯಾಗುತ್ತಾ ಇದ್ದರೂ ಸಾಯಿಲೇಔಟ್ನ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕಾರಣ ಅವರೆಲ್ಲಾ ಮನೆಯಲ್ಲಿ ಸಿಲುಕಿ ಬಿಟ್ಟಿದ್ದಾರೆ. ಮನೆಯಲ್ಲಿ ಕರೆಂಟ್ ಇಲ್ಲ, ನೀರಿಲ್ಲ, ದಿಕ್ಕು ಕಾಣದೇ ಕಂಗಾಲಾಗಿದ್ದಾರೆ. ಅವರಿಗೆ ಮುಖ್ಯವಾಗಿ ನೀರಿನ ಸಮಸ್ಯೆ ಆಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಬಿಎಂಪಿ ಸಿಬ್ಬಂದಿಗಳು ವಾಟರ್ ಬಾಟಲ್ಗಳನ್ನ ಮನೆ ಮನೆಗೆ ಜೆಸಿಬಿಯಲ್ಲಿ ಪೂರೈಕೆ ಮಾಡುತ್ತಿದ್ದಾರೆ.
ಹಿರಿಯರು ಆರೋಗ್ಯದಿಂದ ಬಳಲಿದ್ದಾರೆ.. ಬಿಸಿ ನೀರಿಗೆ ಪರದಾಟ
ಇಲ್ಲಿ ಮತ್ತೊಂದು ಸಮಸ್ಯೆ ಏನೆಂದರೆ ಇಲ್ಲಿ ಕೆಲವರು ಪೇಷೆಂಟ್ಗಳಿದ್ದಾರೆ. ಕೆಲ ಹಿರಿಯ ವ್ಯಕ್ತಿಗಳು, ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ಬಿಸಿ ನೀರು ಬೇಕು. ಆದರೇ ಬಾಟಲ್ನಲ್ಲಿ ಸಿಕ್ಕ ನೀರನ್ನ ಬಿಸಿ ಮಾಡಲು ಅವರಿಗೆ ಆಗುತ್ತಿಲ್ಲ. ಯಾಕಂದರೇ ಈಗ ಸಾಯಿಲೇಔಟ್ನಲ್ಲಿ ಕರೆಂಟ್ ಕಟ್ ಆಗಿದೆ. ಗ್ಯಾಸ್ ಹಚ್ಚಲು ನೀರಲ್ಲಿ ಮುಳುಗಿರುವ ಕಾರಣಕ್ಕೆ ಭಯ ಆವರಿಸಿದೆ.
ಇದನ್ನೂ ಓದಿ: ಪವಿತ್ರಾಗೌಡ ಕೈ ಹಿಡಿದುಕೊಂಡು ಹೊರಗೆ ಬಂದ ದರ್ಶನ್.. ಕೋರ್ಟ್‌ನಲ್ಲಿ ಅಸಲಿಗೆ ಆಗಿದ್ದೇನು?
ಸದ್ಯಕ್ಕೆ ಸಾಯಿ ಲೇಔಟ್ ನಿವಾಸಿಗಳಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ, ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಿಂದ ತುರ್ತು ಔಷಧಿಯ ವ್ಯವಸ್ಥೆ ಮಾಡಲಾಗಿದೆ. ರೋಗನಿರೋಧಕ ಔಷಧಿ ಸೇರಿದಂತೆ ಹಲವು ಬಗೆಯ ಔಷಧಿಗಳನ್ನ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿನ ಮಕ್ಕಳಿಗೂ ವಿಶೇಷವಾಗಿ ಔಷಧಿಗಳನ್ನ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಪೂರೈಕೆ ಮಾಡುತ್ತಿದ್ದಾರೆ.
ನೀರಲ್ಲಿ ಹಾವು ಮರಿಗಳ ತೊಳಲಾಟ
ಮಹಾಮಳೆಯಿಂದ ಸಾಯಿಲೇಔಟ್ ದ್ವೀಪವಾಗಿದ್ದು ನಿಜ. ಆದರೆ ಆ ದ್ವೀಪದ ನೀರಲ್ಲಿ ಹಾವುಗಳು ಸಹ ಒದ್ದಾಡುತ್ತಾ ಕಂಡಿವೆ. ಎಲ್ಲಿಂದಲೋ ಕೊಚ್ಚಿಕೊಂಡು ಬಂದ ಹಾವು ಮರಿಗಳು ಏಕಾಏಕಿ ಮನೆಗಳಲ್ಲಿ ಪ್ರತ್ಯಕ್ಷವಾಗಿವೆ. ಕೂಡಲೇ ಭೇಟಿ ಕೊಟ್ಟ ಉರಗ ತಜ್ಞರು, ಆ ಹಾವಿನ ಮರಿಗಳನ್ನ ಹಿಡಿದು ರಕ್ಷಣೆ ಮಾಡಿದ್ದಾರೆ.
ಸಾಯಿ ಲೇಔಟ್‌ಗೆ ಬಂದ ಸಿವಿಲ್ ಡಿಫೆನ್ಸ್ ಟೀಮ್
ಅತ್ತ ಇಡೀ ಲೇಔಟ್ ಮುಳುಗುತ್ತಿದ್ದಂತೆ ರಕ್ಷಣೆಗೆ ಬಂದಿದ್ದು ಅಗ್ನಿ ಶಾಮಕ ದಳ ಆಗಮಿಸಿದೆ. ಅಗ್ನಿ ಶಾಮಕ ಟೀಮ್ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದೆ. ಈ ದಿನ ಬೆಳಗ್ಗೆ ಮತ್ತೆ ಮಳೆ ರಣಕೇಕೆ ಹಾಕಿದ ಕಾರಣಕ್ಕೆ ಬೆಳಗ್ಗೆ ಮತ್ತೆ ನೀರಿನ ಪ್ರಮಾಣ ಹೆಚ್ಚಾಗಿದೆ. ಅಗ್ನಿಶಾಮಕ ದಳದ ಜೊತೆಗೆ ಈಗ ಸಾಯಿ ಲೇಔಟ್‌ಗೆ ಸಿವಿಲ್ ಡಿಫೆನ್ಸ್ ಟೀಂ ಎಂಟ್ರಿ ಕೊಟ್ಟಿದೆ. ಜೆಸಿಬಿ ಮೂಲಕ ಸಿವಿಲ್ ಡಿಫೆನ್ಸ್ ಸಿಬ್ಬಂದಿಯಿಂದ ರಕ್ಷಣಾಕಾರ್ಯಕ್ಕೆ ಇಳಿದು, ಹಲವಾರು ಮಂದಿಯನ್ನ, ಭೀತಿಯಲಿದ್ದ ಮಹಿಳೆಯರನ್ನ ಈ ಟೀಮ್ ರಕ್ಷಣೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ