/newsfirstlive-kannada/media/post_attachments/wp-content/uploads/2025/07/FAMILY.jpg)
ಒಂದು ಕಾಲದಲ್ಲಿ ಭಾರತೀಯ ಸಮಾಜದ ಸ್ಥಿರ ಬೆನ್ನೆಲುಬು ಎಂದು ಪರಿಗಣಿಸಲ್ಪಟ್ಟಿದ್ದ ಮಧ್ಯಮ ವರ್ಗವು ಈಗ ಆರ್ಥಿಕ ಸಂಕಷ್ಟದಲ್ಲಿದೆ. ಆರ್ಥಿಕವಾಗಿ ಕವಲು ದಾರಿಯಲ್ಲಿದೆ. ವೈರಲ್ ಆಗಿರುವ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಥಾಪಕ ಶ್ಯಾಮ್ ಅಚ್ಯುತನ್ ಹೇಳುವ ಪ್ರಕಾರ, ಮಧ್ಯಮ ವರ್ಗ ಒಂದು ಕಾಲದಲ್ಲಿ ಮೇಲ್ಮುಖ ಚಲನಶೀಲತೆಯಿಂದ ವ್ಯಾಖ್ಯಾನಿಸಲ್ಪಟ್ಟ- ಸ್ಥಿರ ಉದ್ಯೋಗಗಳು, ಸಣ್ಣ ಐಷಾರಾಮಿಗಳು ಮತ್ತು ಮನೆಯ ಕನಸು ಹೊಂದಿದ್ದರು. ಆದರೆ ಈಗ 2 ಸ್ಪಷ್ಟ ಫಲಿತಾಂಶಗಳ ನಡುವೆ ಒದ್ದಾಡುತ್ತಿರುವ ಮಧ್ಯಮ ವರ್ಗದ ಗಂಭೀರ ಚಿತ್ರ ಚಿತ್ರಿಸಿದ್ದಾರೆ. ಮಧ್ಯಮ ವರ್ಗ ಈಗ ಶ್ರೀಮಂತರಾಗುವುದು ಅಥವಾ ದಿವಾಳಿಯಾಗುವುದು ಈ ಎರಡೂ ಆಯ್ಕೆಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಇನ್ನು ಮುಂದೆ ಮಧ್ಯಮ ಮಾರ್ಗವಿಲ್ಲ ಎಂದು ಅವರು ವಾದಿಸುತ್ತಾರೆ. ಅನೇಕರು ತಿಳಿಯದೆ ತಪ್ಪು ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದಾರೆ. ಆದರೇ, ಕೆಲವರು ಸದ್ದಿಲ್ಲದೇ, ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಸಂಪತ್ತು ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಧುನಿಕ ಮಧ್ಯಮ ವರ್ಗದಲ್ಲಿ ಆರ್ಥಿಕ ಆತ್ಮಹತ್ಯೆಯ ಟ್ರೆಂಡ್ ಬೆಳೆಯುತ್ತಿದೆ. ಇನ್ಸ್ಟಾಗ್ರಾಮ್ ತೋರಿಕೆಯ ಜೀವನ ಶೈಲಿ ಮತ್ತು ಇಎಂಐಗಳು ಸಂಬಳವನ್ನು ತಿಂದು ಹಾಕುತ್ತಿವೆ. ಜೀವನದಲ್ಲಿ ಇಂಪ್ರೂವ್ ಆಗುವ ಬದಲು ಬೇರೆಯವರನ್ನು ಇಂಪ್ರೆಸ್ ಮಾಡಲು ಕೆಲವರು ಜೀವಿಸುತ್ತಿದ್ದಾರೆ.
ತಿಂಗಳಿಗೆ 50 ಸಾವಿರ ರೂಪಾಯಿ ಸಂಬಳ ಬಂದರೇ, ಅದರಲ್ಲಿ 20 ಸಾವಿರ ಮನೆ ಬಾಡಿಗೆಗೆ ಹೋಗುತ್ತೆ. 10 ಸಾವಿರ ರೂಪಾಯಿ ಸಾಲದ ಇಎಂಐಗೆ ಹೋಗುತ್ತೆ. ವೀಕೆಂಡ್ ಖರ್ಚಿಗಾಗಿ 5 ಸಾವಿರ ರೂಪಾಯಿ ಖರ್ಚಾಗುತ್ತೆ. ನಿಜವಾದ ಉಳಿತಾಯಕ್ಕೆ ಸ್ವಲ್ಪ ಮಾತ್ರ ಹಣ ಇರುತ್ತೆ. ಇದು ಶ್ರೀಮಂತರಾಗಿ ಕಾಣಿಸಿಕೊಳ್ಳುವ ಸೈಕಲ್. ಆದರೇ, ವಾಸ್ತವವಾಗಿ ಜೀವನವೇ ಮುರಿದು ಬಿದ್ದಿರುತ್ತೆ. ಇಲ್ಲವೇ ಅದಕ್ಕಿಂತ ಕೆಟ್ಟದ್ದಾಗಿರುತ್ತೆ. ಇಲ್ಲವೇ ಸಾಲದ ಸುಳಿಗೆ ಸಿಲುಕಿರುತ್ತಾರೆ.
ಇನ್ಸ್ಟಾದ ಲೈಕ್ಸ್ಗಾಗಿ ಹಣ ಖರ್ಚು
ಆದರೇ, ಎಲ್ಲರೂ ಈ ಡೇಂಜರ್ ಗೇಮ್ ಆಡುತ್ತಿಲ್ಲ. ಮಧ್ಯಮ ವರ್ಗದ ಒಂದು ಗುಂಪು ಸಂಪೂರ್ಣ ಭಿನ್ನವಾದ ಆಯ್ಕೆ ಮಾಡಿಕೊಂಡಿದ್ದಾರೆ. ಕಣ್ಣು ಕುಕ್ಕುವ ಖರೀದಿಗಳನ್ನು ಮಾಡಲ್ಲ, ಅದ್ದೂರಿ ಮದುವೆಯನ್ನು ಮಾಡಲ್ಲ. ಹೊಸ ಕಾರಿನ ಬದಲು ಹಳೆಯ ಸೆಕೆಂಡ್ಸ್ ಹ್ಯಾಂಡ್ ಕಾರ್ ಖರೀದಿಸುತ್ತಾರೆ. ಹೆಚ್ಚಿನ ಹೂಡಿಕೆಯನ್ನು ಮಾಡುತ್ತಾರೆ. ಇಂಥವರು ಇಂದು ಸಕ್ಸಸಫುಲ್ ಆಗಿ ಕಾಣದೇ ಇರಬಹುದು. ಆದರೇ ದೀರ್ಘ ಕಾಲದ ಸಂಪತ್ತು ಅನ್ನು ನಿರ್ಮಾಣ ಮಾಡುತ್ತಿರುತ್ತಾರೆ. ಮಧ್ಯಮ ವರ್ಗದ ಒಂದು ಗುಂಪು, ಸೋಷಿಯಲ್ ಮೀಡಿಯಾ ಲೈಕ್ಗಳಿಗಾಗಿ ಹಣ ಖರ್ಚು ಮಾಡುತ್ತಿದ್ದರೇ, ಮತ್ತೊಂದು ಗುಂಪು, ದೀರ್ಘ ಕಾಲದ ಸ್ವಾತಂತ್ರ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡಿ ಬೆಳೆಸುತ್ತಿದ್ದಾರೆ.
ಮಧ್ಯಮ ವರ್ಗದ ಜನರು ಶ್ರೀಮಂತರಂತೆ ಕಾಣಿಸಿಕೊಳ್ಳಲು ಯತ್ನಿಸುವುದು, ಮಧ್ಯಮ ವರ್ಗದ ಸಂಬಳದಲ್ಲಿ ಎಫ್-1 ಫಾರ್ಮುಲಾ ಒನ್ ರೇಸ್‌ಗೆ ಸ್ಕೂಟರ್ನಲ್ಲಿ ಎಂಟ್ರಿ ಕೊಟ್ಟಂತೆ ಎಂದು ಶ್ಯಾಮ್ ಅಚ್ಯುತನ್ ಹೋಲಿಸಿದ್ದಾರೆ. ಸದ್ಯದಲ್ಲೇ ಇಲ್ಲವೇ ನಂತರವಾದರೂ, ನೀವು ನಿಮ್ಮ ಕೈಯನ್ನು ಖಾಲಿ ಮಾಡಿಕೊಳ್ಳುತ್ತೀರಿ. ಇಂದಿನ ಹಣದುಬ್ಬರ, ಬೆಲೆ ಏರಿಕೆ, ಲೇ ಆಫ್, ಎಐನಿಂದ ಉದ್ಯೋಗ ಕಡಿತದಿಂದ ಬಡವರು- ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಉದ್ದೇಶಪೂರ್ವಕವಾಗಿ ಯಾರೂ ಹೆಚ್ಚು ಹಣ ಹೂಡಿಕೆ ಮಾಡುತ್ತಾರೋ ಅವರು ಜೀವನದಲ್ಲಿ ಮುಂದುವರಿಯಲು, ಇಂಪ್ರೂವ್ ಆಗಲು ಸಾಧ್ಯ ಎಂದು ಶ್ಯಾಮ್ ಅಚ್ಯುತನ್ ಹೇಳಿದ್ದಾರೆ.
ಹಣ ಗಳಿಸುವುದಲ್ಲ, ಹಣದ ಬಗ್ಗೆ ತಿಳಿಯಿರಿ
ಶ್ಯಾಮ್ ಅಚ್ಯುತನ್ ಅವರ ಸಲಹೆ ಸರಳವಾಗಿದೆ. ಲೈಫ್ ಸ್ಟೈಲ್ ಖರ್ಚುಗಳನ್ನು ಕಡಿಮೆ ಮಾಡಿ. ಪ್ರತಿಯೊಂದು ರೂಪಾಯಿಯ ಖರ್ಚು ಅನ್ನು ಟ್ರ್ಯಾಕ್ ಮಾಡಿ. ನಿಮ್ಮ ಆದಾಯದ ಶೇ.20 ರಿಂದ 30 ರಷ್ಟು ಅನ್ನು ಹೂಡಿಕೆ ಮಾಡಿ. ಆಸ್ತಿ ನಿರ್ಮಾಣ ಮಾಡುವುದು, ಖರೀದಿಸುವುದರ ಕಡೆ ಗಮನ ಕೊಡಿ. ಸಾಲವನ್ನಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ, ಹಣದ ಬಗ್ಗೆ ತಿಳಿದುಕೊಳ್ಳಿ. ಬರೀ ಹಣ ಗಳಿಸುವುದಲ್ಲ, ಅದರ ಬಗ್ಗೆ ತಿಳಿದುಕೊಳ್ಳಬೇಕು. ಮಧ್ಯಮ ವರ್ಗ ಬರೀ ಕುಸಿಯುತ್ತಿಲ್ಲ. ಮಧ್ಯಮ ವರ್ಗ ಇಬ್ಬಾಗವಾಗುತ್ತಿದೆ. ಇಂದು ನೀವು ಮಾಡಿಕೊಳ್ಳುವ ಆಯ್ಕೆಯೂ ನಾಳೆ ನೀವು ಯಾವ ದಿಕ್ಕಿನಲ್ಲಿ ಹೋಗುತ್ತೀರಿ ಎಂಬುದನ್ನು ನಿರ್ಧರಿಸುತ್ತೆ ಎಂದು ಶ್ಯಾಮ್ ಅಚ್ಯುತನ್ ಹೇಳಿದ್ದಾರೆ.
ಇದನ್ನೂ ಓದಿ: ಹೆಂಡತಿ ರಹಸ್ಯ ಆಡಿಯೋ.. ಗಂಡ ರೆಕಾರ್ಡ್ ಮಾಡಿದ್ರೆ ವೈವಾಹಿಕ ಕೇಸ್ನಲ್ಲಿ ಸಾಕ್ಷಿ ಆಗುತ್ತೆ; ಸುಪ್ರೀಂ ಕೋರ್ಟ್
ದೀರ್ಘಾವಧಿಯಲ್ಲಿ ಗೆಲುವು ಸಿಗುತ್ತದೆ
ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಶ್ಯಾಮ್ ಅಚ್ಯುತನ್ ಅವರ ಪೋಸ್ಟ್ ಅನ್ನು ಬಹಳಷ್ಟು ಮಂದಿ ತಮ್ಮ ಜೀವನಕ್ಕೆ ಹೋಲಿಕೆ ಮಾಡಿಕೊಂಡಿದ್ದಾರೆ. ಮಧ್ಯಮ ವರ್ಗದ ವಾಸ್ತವತೆಯನ್ನು ಶ್ಯಾಮ್ ಅಚ್ಯುತನ್ ತೆರೆದಿಟ್ಟಿದ್ದಾರೆ, ಇನ್ಸ್ಟಾ ಲೈಫ್ ಸ್ಟೈಲ್ ಉಳಿತಾಯವನ್ನು ತಿಂದು ಹಾಕುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿ ತಿಂಗಳ ಸಂಬಳದ ಶೇ.20 ರಿಂದ 30 ರಷ್ಟು ಅನ್ನು ಹೂಡಿಕೆ ಮಾಡುವುದು ಮುಖ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಂದು ನೀವು ಮಾಡಿಕೊಳ್ಳುವ ಆಯ್ಕೆಯೂ ನಾಳೆ ನೀವು ಯಾವ ದಿಕ್ಕಿನಲ್ಲಿ ಹೋಗುತ್ತೀರಿ ಎಂಬುದನ್ನು ನಿರ್ಧರಿಸುತ್ತೆ ಅಂಥ ಹೇಳಿರುವುದು ಸರಿಯಾಗಿದೆ ಎಂದು ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಸಮಾಜದಲ್ಲಿ ಬಹಳಷ್ಟು ಮಂದಿ ಇಲಿ ರೇಸ್ ಆಡುತ್ತಿದ್ದಾರೆ. ಆದರೇ, ನಿಜವಾದ ಗೆಲುವು ಸಿಗೋದು ಲಾಂಗ್ ಟರ್ಮ್ ಗೇಮ್ ಅನ್ನು ಸ್ಮಾರ್ಟ್ ಆಗಿ ಆಡುವವರಿಗೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅದ್ದೂರಿ ಖರ್ಚುಗಳು ದೀರ್ಘಕಾಲದಲ್ಲಿ ತಿರುಗು ಬಾಣವಾಗುತ್ತಾವೆ ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ. ಆಲೋಚಿಸಿ ತೆಗೆದುಕೊಳ್ಳುವ ಹಣಕಾಸಿನ ತೀರ್ಮಾನಗಳು, ಕಷ್ಟ ಕಾಲದಲ್ಲಿ ಹೆಚ್ಚಿನ ಮೌಲ್ಯ ಪಡೆಯುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಉಳಿತಾಯ ವೈಯಕ್ತಿಕವಾಗಿ ಮಾತ್ರವಲ್ಲ, ರಾಷ್ಟ್ರೀಯ ಬಂಡವಾಳ ನಿರ್ಮಾಣ ಹಾಗೂ ಭವಿಷ್ಯದ ಬೆಳಣಿಗೆಗೆಗೂ ಮುಖ್ಯ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಬಂಡವಾಳವೂ ಯಾವಾಗಲೂ ಹಾಟ್ ಮನಿ ಇದ್ದಂತೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ