ಬೆಂಗಳೂರಲ್ಲಿ 114 Km ಎಲಿವೇಟೆಡ್ ಕಾರಿಡಾರ್.. ಭೂಮಿ ಬೆಲೆ ಏರಿಕೆ, ರಿಯಲ್​ ಎಸ್ಟೇಟ್​ಗೆ ಭಾರೀ ಲಾಭ?

author-image
Bheemappa
Updated On
ಬೆಂಗಳೂರಲ್ಲಿ 114 Km ಎಲಿವೇಟೆಡ್ ಕಾರಿಡಾರ್.. ಭೂಮಿ ಬೆಲೆ ಏರಿಕೆ, ರಿಯಲ್​ ಎಸ್ಟೇಟ್​ಗೆ ಭಾರೀ ಲಾಭ?
Advertisment
  • ನಗರದಲ್ಲಿ ಎಲ್ಲೆಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗುತ್ತೆ?
  • ಈ ಕಾರಿಡಾರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ
  • ಬೆಂಗಳೂರಿಗೆ ಎಲಿವೇಟೆಡ್ ಕಾರಿಡಾರ್ ಪ್ರಾಜೆಕ್ಟ್​ ಯಾಕೆ ಬೇಕು.?

ಬೆಂಗಳೂರು ನಗರದ ಬೆಳವಣಿಗೆ ಮತ್ತು ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ ನಗರದಲ್ಲಿ 114 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಉದ್ದೇಶಿಸಿದೆ. ಇದು ನಗರದ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಮತ್ತು ಪ್ರಯಾಣದ ಅವಧಿ ಕಡಿಮೆ ಮಾಡಲು ಸಹಾಯಕವಾಗುತ್ತೆ. ಜೊತೆಗೆ ಬೆಂಗಳೂರು ನಗರ ಮತ್ತು ಹೊರ ವಲಯದಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಗೂ ವೇಗ ನೀಡುವ ಗುರಿ ಹೊಂದಿದೆ.

ಈ ಎಲಿವೇಟೆಡ್ ಕಾರಿಡಾರ್ ನಗರದಾದ್ಯಂತ ಅಡ್ಡಲಾಗಿ ಹಾದು ಹೋಗುತ್ತದೆ. ಪ್ರಮುಖ ರಸ್ತೆಗಳು, ಜಂಕ್ಷನ್​​ಗಳನ್ನು ಸಂಪರ್ಕಿಸುತ್ತದೆ. ನಗರದ ಮೆಟ್ರೋ ಮತ್ತು ಉಪನಗರ ರೈಲು ಜಾಲಗಳೊಂದಿಗೆ ಸರಾಗವಾಗಿ ಸಂಯೋಜನೆಯಾಗುತ್ತೆ. ಅಸ್ತಿತ್ವದಲ್ಲಿರುವ ರಸ್ತೆಗಳಲ್ಲಿ ಹೆಚ್ಚಾಗಿ ಚಲಿಸುವಂತೆ ವಿನ್ಯಾಸಗೊಳಿಸಲಾದ ಈ ಕಾರಿಡಾರ್, ತಡೆ ಗೋಡೆಗಳು, ಸೇತುವೆಗಳು ಮತ್ತು ಮಳೆನೀರು ಒಳಚರಂಡಿ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಪರಿಸರಕ್ಕೆ ಹೆಚ್ಚಿನ ಹಾನಿಯು ಎಲಿವೇಟೆಡ್ ಕಾರಿಡಾರ್​ನಿಂದ ಆಗಲ್ಲ.

publive-image

ಬೆಂಗಳೂರಿಗೆ ಇದು ಏಕೆ ಬೇಕು?

ನಗರದ ಹಳೆಯ ರಸ್ತೆ ವ್ಯವಸ್ಥೆ ಮತ್ತು ಭಾರೀ ಪ್ರಮಾಣದಲ್ಲಿ ನಗರ ವಿಸ್ತರಣೆಯು ದೀರ್ಘಕಾಲದ ಟ್ರಾಫಿಕ್ ಜಾಮ್​ಗೆ ಕಾರಣ. ವಿಶೇಷವಾಗಿ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಮತ್ತು ಸುತ್ತಲೂ. ತಜ್ಞರು ಎಲಿವೇಟೆಡ್ ಕಾರಿಡಾರ್‌ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಭೂಮಿ ಬೇಕಾಗಲ್ಲ. ಭೂಗತ ಮೆಟ್ರೋ ಮಾರ್ಗಗಳಿಗೂ ಈ ಎಲಿವೇಟೆಡ್ ಕಾರಿಡಾರ್ ಪರ್ಯಾಯ ಆಗಲಿವೆ. ಮೆಟ್ರೋ ಕಾಮಗಾರಿಯೂ ಈಗ ದುಬಾರಿಯಾಗಿದೆ. ಹೀಗಾಗಿ ಮೆಟ್ರೋ ಮಾರ್ಗಕ್ಕೂ ಎಲಿವೇಟೆಡ್ ಕಾರಿಡಾರ್ ಪರ್ಯಾಯ ಆಗಲಿದೆ. ಎಲಿವೇಟೆಡ್ ಕಾರಿಡಾರ್ ಕಕ್ಷೀಯ ಸಂಪರ್ಕವನ್ನು ನೀಡುತ್ತೆ. ನಗರದ ಹೆದ್ದಾರಿಗಳಲ್ಲಿ ಬಾಟಲ್ ನೆಕ್ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಇದನ್ನು ಪರಿಹರಿಸುತ್ತೆ. ಜೊತೆಗೆ ಹೊಸ ನಗರ ಪ್ರದೇಶ ಹಾಗೂ ಈಗಾಗಲೇ ಹೆಚ್ಚಿನ ಜನವಸತಿ ಇರೋ ನಗರ ಪ್ರದೇಶಗಳ ಸುಲಭ ಸಂಪರ್ಕಕ್ಕೆ ಎಲಿವೇಟೆಡ್ ಕಾರಿಡಾರ್ ನಿಂದ ಅನುಕೂಲವಾಗಲಿದೆ.

ಕಾರಿಡಾರ್​​ನಲ್ಲಿ 6 ಪ್ರಮುಖ ಮಾರ್ಗಗಳು

  • ಉತ್ತರ-ದಕ್ಷಿಣ (NS): ಎಸ್ಟೀಮ್ ಮಾಲ್​ಅನ್ನು ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುತ್ತದೆ
  • ಪೂರ್ವ-ಪಶ್ಚಿಮ- 1 (EW-1): ಬಟ್ಟರಹಳ್ಳಿಯಿಂದ ಇಂದಿರಾನಗರ ಮತ್ತು ಯಶವಂತಪುರ ಮೂಲಕ ಗೋರಗುಂಟೆಪಾಳ್ಯಕ್ಕೆ
  • ಪೂರ್ವ–ಪಶ್ಚಿಮ- 2 (EW-2): ವರ್ತೂರು ಕೋಡಿಯಿಂದ ಮಾರತ್ತಹಳ್ಳಿ ಮತ್ತು ಶಿರಸಿ ವೃತ್ತದ ಮೂಲಕ NICE ರಸ್ತೆಗೆ
  • ಕನೆಕ್ಟಿಂಗ್‌ ಕಾರಿಡಾರ್‌- 1 (CC-1 ರಿಂದ CC-3): ಸರ್ಜಾಪುರ, ರಿಚ್‌ಮಂಡ್ ರಸ್ತೆ ಮತ್ತು ಬಾಣಸವಾಡಿಯಂತಹ ಪ್ರದೇಶಗಳನ್ನು ಮುಖ್ಯ ಜಾಲಕ್ಕೆ ಸಂಪರ್ಕಿಸುತ್ತದೆ.
  • ಕನೆಕ್ಟಿಂಗ್ ಕಾರಿಡಾರ್ 2- ರಿಚಮಂಡ್ ರೋಡ್- ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ, ಟ್ರಿನಿಟಿ ಸರ್ಕಲ್ ಮೂಲಕ ಹಲಸೂರು ಕೆರೆ
  • ಕನೆಕ್ಟಿಂಗ್ ಕಾರಿಡಾರ್ 3- ಸೇಂಟ್ ಜಾನ್ ಚರ್ಚ್ ರೋಡ್​ನಿಂದ ಔಟರ್ ರಿಂಗ್ ರೋಡ್ (ಕಲ್ಯಾಣ್ ನಗರ)

ರಿಯಲ್ ಎಸ್ಟೇಟ್ ಮೇಲೆ ಪರಿಣಾಮ

ರಿಯಲ್ ಎಸ್ಟೇಟ್ ಉದ್ಯಮಿಗಳು ಆಶಾವಾದಿಗಳಾಗಿದ್ದಾರೆ. ಯೋಜನೆಯ ಘೋಷಣೆಯ ನಂತರ ವೈಟ್‌ಫೀಲ್ಡ್, ಸರ್ಜಾಪುರ, ಯಲಹಂಕ ಮತ್ತು ದೇವನಹಳ್ಳಿಯಂತ ಬೆಂಗಳೂರು ನಗರದ ಹೊರವಲಯಗಳು ಈಗಾಗಲೇ ಭೂಮಿಯ ಬೆಲೆಯಲ್ಲಿ ಶೇ.10-25ರಷ್ಟು ಏರಿಕೆ ಕಂಡಿವೆ. ಭವಿಷ್ಯದಲ್ಲಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಶೇ. 20 ರಿಂದ ಶೇ.40 ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಈ ಏರಿಳಿತವು ಮೆಟ್ರೋ ವಿಸ್ತರಣೆ ಅವಲಂಬಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್‌ಗಳು ಸಹ ಈಗಾಗಲೇ ಉತ್ಸಾಹದಿಂದ ಇದ್ದಾರೆ. ಭೂಮಿಯನ್ನು ಖರೀದಿಸುತ್ತಿದ್ದಾರೆ.

ಟೌನ್‌ಶಿಪ್ ಮತ್ತು ಮಿಶ್ರ-ಬಳಕೆಯ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಬಾಡಿಗೆ ಆದಾಯವು ಏರುತ್ತಿದೆ, ವಿಶೇಷವಾಗಿ ಕಾರಿಡಾರ್ ಟೆಕ್ ಹಬ್‌ಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳು ಇರುವ ಪ್ರದೇಶಗಳಲ್ಲಿ ಮನೆ ಬಾಡಿಗೆಯ ಆದಾಯವು ಏರಿಕೆಯಾಗುತ್ತಿದೆ. ನಿರ್ದಿಷ್ಟವಾಗಿ ದೇವನಹಳ್ಳಿ ಮತ್ತು ಬನ್ನೇರುಘಟ್ಟ ರಸ್ತೆಗಳು ಹೂಡಿಕೆದಾರರ ಆಸಕ್ತಿಗೆ ಸಾಕ್ಷಿಯಾಗಿವೆ.

ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿ ಮಾಡೋರಿಗೆ ಗುಡ್​ನ್ಯೂಸ್​.. ಷೋರೂಮ್ ಉದ್ಘಾಟನೆ, ಬೆಲೆ ಎಷ್ಟು?

publive-image

ಆರ್ಥಿಕ ಮತ್ತು ಮೂಲಸೌಕರ್ಯದ ಮೇಲೆ ಪರಿಣಾಮ

ಎಲಿವೇಟೆಡ್ ಕಾರಿಡಾರ್ ನಗರದ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ, ಅಭಿವೃದ್ಧಿಯನ್ನು ನಗರದ ಹೊರವಲಯಕ್ಕೆ ತಳ್ಳುವ ಮತ್ತು ನಗರದ ಮಧ್ಯಭಾಗದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಇದು ದೇವನಹಳ್ಳಿ ವಿಮಾನ ನಿಲ್ದಾಣ ಸಂಪರ್ಕವನ್ನು ಉತ್ತಮಪಡಿಸುತ್ತದೆ.
ಗೋದಾಮು, ಆತಿಥ್ಯ ಮತ್ತು ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡುತ್ತೆ.

ಆದರೂ ಬೆಂಗಳೂರು ನಗರದಲ್ಲಿ ಈಗಿನ ಸ್ಥಿತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ದೊಡ್ಡ ಸವಾಲು. ಏಕೆಂದರೇ 93 ಕಿ.ಮೀ ಕಾರಿಡಾರ್ ಪ್ರಸ್ತಾವನೆಯಲ್ಲಿ ಕಂಡುಬರುವಂತೆ ಭೂಸ್ವಾಧೀನವು ಎಲಿವೇಟೆಡ್ ಕಾರಿಡಾರ್ ಪ್ರಗತಿ ವಿಳಂಬಗೊಳಿಸಬಹುದು. ಮರ ಕಡಿಯುವಿಕೆ ಮತ್ತು ನೈಸರ್ಗಿಕ ಜಲಚರಗಳ ಅಡ್ಡಿಯಿಂದಾಗಿ ಪರಿಸರ ಕಾಳಜಿಗಳು ಸಹ ಗಮನಾರ್ಹವಾಗಿವೆ. ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯೂ ನಿರ್ಣಾಯಕವಾಗಿದೆ. ವಿಶೇಷವಾಗಿ 37 ಕಿ.ಮೀ. ಸುರಂಗ ರಸ್ತೆ ಮತ್ತು ಮೆಟ್ರೋ ವಿಸ್ತರಣಾ ಯೋಜನೆಯ ವ್ಯಾಪ್ತಿಯಲ್ಲೇ ಎಲಿವೇಟೆಡ್ ಕಾರಿಡಾರ್ ಕೂಡ ಸಾಗುತ್ತೆ. ಸಿಲ್ಕ್ ಬೋರ್ಡ್-ಹೆಬ್ಬಾಳ ವಿಭಾಗದಂತಹ ಹೆಚ್ಚಿನ ಟ್ರಾಫಿಕ್ ಜಾಮ್ ಮಾರ್ಗಗಳಿಂದ ನಿರ್ಮಾಣವನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತೆ.

ಸಾರ್ವಜನಿಕರಿಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣದಿಂದ ಆಗುವ ತೊಂದರೆಯನ್ನು ಕಡಿಮೆ ಮಾಡಲು 5-10 ಕಿಮೀ ವಿಭಾಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತೆ. ದಕ್ಷವಾಗಿ ಕಾರ್ಯಗತಗೊಳಿಸಿದರೆ, ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ಯೋಜನೆಯು ಆರ್ಬನ್ ಮೊಬಿಲಿಟಿಯಲ್ಲಿ ಕ್ರಾಂತಿ ಉಂಟು ಮಾಡಲಿದೆ. ಟ್ರಾಫಿಕ್ ಜಾಮ್ ಅನ್ನು ಭಾರೀ ಪ್ರಮಾಣದಲ್ಲಿ ತಗ್ಗಿಸಲಿದೆ. ಜೊತೆಗೆ ಭಾರತದಾದ್ಯಂತ ಮೂಲಸೌಕರ್ಯ ಚಾಲಿತ ಅಭಿವೃದ್ಧಿಗೆ ಬ್ಲೂಪ್ರಿಂಟ್ ಆಗಲಿದೆ. ಈ ಎಲಿವೇಟೆಡ್ ಕಾರಿಡಾರ್, ನಗರದಲ್ಲಿ ಪ್ರಯಾಣ ಸುಧಾರಿಸುವ ಉದ್ದೇಶ ಹೊಂದಿದೆ. ಎಲಿವೇಟೆಡ್ ಕಾರಿಡಾರ್​ನಿಂದ ಅಕ್ಕಪಕ್ಕದ ಆಸ್ತಿಗಳ ಬೆಲೆಗಳು ಏರಿಕೆಯಾಗಲಿವೆ. ನಗರದ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವಾಗಲಿದೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment