/newsfirstlive-kannada/media/post_attachments/wp-content/uploads/2025/01/Padmasri-Bhimavva-Shillekyatar.jpg)
ಭಾರತದ ಅತ್ಯುನ್ನತ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿಗೆ ನಾಡಿನ ಮಹಾನ್ ಚೇತನ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಆಯ್ಕೆಯಾಗಿದ್ದಾರೆ. 14ನೇ ವಯಸ್ಸಿಗೇ ಕೈಯಲ್ಲಿ ಗೊಂಬೆ ಹಿಡಿದ ಈ ತಾಯಿ 70 ವರ್ಷಗಳ ಕಾಲ ಜಗತ್ತಿನ 12ಕ್ಕೂ ಅಧಿಕ ದೇಶಗಳಿಗೆ ಹೋಗಿ ತೊಗಲು ಗೊಂಬೆಯಾಟ ಪ್ರದರ್ಶಿಸಿದ್ದಾರೆ.
ಗೊಂಬೆಯಾಟದ ಮಹಾಮಾತೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅನಕ್ಷರಸ್ಥೆಯಾದ್ರೂ ಸಾಂಸ್ಕೃತಿಕವಾಗಿ ನೂರಾರು ಡಾಕ್ಟರೇಟ್ಗೆ ಸಮವಾಗಿದ್ದಾರೆ. ತಮ್ಮ ಸುದೀರ್ಘ 96 ವರ್ಷಗಳ ಆಯುಷ್ಯದಲ್ಲಿ ಮುಕ್ಕಾಲು ಪಾಲು ಜೀವನವನ್ನು ಭಾರತದ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಚಿಂತನೆಗಳನ್ನು ಜನಮಾನಸಕ್ಕೆ ಹಂಚುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಈ ಶಿಳ್ಳೆಕ್ಯಾತ ಅಥವಾ ಕಿಳ್ಳೆಕ್ಯಾತರ ಅನ್ನೋ ಸಮಾಜ ಎಂಥದ್ದು ಗೊತ್ತಾ? ಸರಸ್ವತಿಯ ಜ್ಞಾನ ಭಂಡಾರದ ಮುದ್ರೆ ಹಾಕಿಸಿಕೊಂಡೇ ಹುಟ್ಟುವ ಈ ಜನ ಇಂದಿಗೂ ಮಹಾಲಕ್ಷ್ಮಿಯ ಕಾಂಚಾಣದ ಬಲ ಸಿಕ್ಕಿಲ್ಲ. ಕೀರ್ತಿ ಲಕ್ಷ್ಮಿಯ ಕಳೆ ದಕ್ಕಿಲ್ಲ.
ಬಡಬಗ್ಗರ ಪರ್ಯಾಯ ಮಾಧ್ಯಮದ ಮೂಲ ಶಕ್ತಿ
ಕಿಳ್ಳೆ ಅಥವಾ ಶಿಳ್ಳೆ ಎಂದರೆ ಚೇಷ್ಟೆ ಅನ್ನೋ ಅರ್ಥವಿದೆ. ಇನ್ನೂ ಕೆಲವರು ಅಭಿಪ್ರಾಯಪಡುವಂತೆ ವಕ್ರ ಅಥವಾ ಸೊಟ್ಟಮೂತಿಯವನು ಅಂತ್ಲೂ ಅರ್ಥೈಸಲಾಗುತ್ತದೆ. ಹಾಗಾಗಿಯೇ ಚರ್ಮದಿಂದ ತಯಾರಿಸಿದ ವಕ್ರ ವಕ್ರವಾದ ಗೊಂಬೆಗಳ ಮೂಲಕ ರಂಜಿಸುವ ಕೆಲಸವನ್ನು ಕುಲ ಕಸುಬಾಗಿ ಈ ಸಮುದಾಯ ಮಾಡುತ್ತಾ ಬಂದಿದೆ. ಗುಡಾಣ ಹೊಟ್ಟೆ, ಸೊಟ್ಟ ಮೂಗಿನ, ಹುಬ್ಬು ಹಲ್ಲಿನ, ಜಡ್ಡು ಮೂಗಿನ ಗೊಂಬೆಗಳ ಮೂಲಕ ಇಡೀ ಜಗತ್ತಿಗೆ ಹಿಂದೂ ಧರ್ಮ ಹಾಗೂ ಭಾರತದ ವೀರಾಧಿವೀರರ ಕಥೆಗಳನ್ನು ಹೇಳುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ ಶಿಳ್ಳೆಕ್ಯಾತ ಸಮಾಜ. ಪರ್ಯಾಯ ಪತ್ರಿಕೋದ್ಯಮದ ಮೂಲ ರೂವಾರಿಗಳು ಎಂದರೇ ಇದೇ ತಳ ಸಮುದಾಯ ಎನ್ನಬಹುದು. ಹಾಗಾಗಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಷ್ಠ ಹಾಗೂ ಪ್ರಭಾವಿ ಮಾಧ್ಯಮವಾಗಿ ಇದೇ ಗೊಂಬೆರಾಮರು ಕ್ರಾಂತಿಯ ಕಿಡಿಯನ್ನೇ ಹಚ್ಚಿದ್ರು.
ಇದನ್ನೂ ಓದಿ: ವಿವಾದಗಳ ಚೆಲುವೆ ಈಗ ಎಲ್ಲವನ್ನೂ ತ್ಯಜಿಸಿದ ಸಾಧ್ವಿ; ಮಮತಾ ಕುಲಕರ್ಣಿ ಸನ್ಯಾಸಿ ಆಗಿದ್ದು ಯಾಕೆ?
ಗ್ರಾಮೀಣ ಭಾರತದ ರಿಯಲ್ ಸೂಪರ್ಸ್ಟಾರ್ಸ್
ಕಲಿಯುಗದ ಆರಂಭದಲ್ಲಿ ಚರ್ಮದ ಗೊಂಬೆ ಕುಣಿಸುವುದಕ್ಕಾಗಿ ದೇವರಿಂದ ನೇಮಕಗೊಂಡವರು ಕಲಿಕ್ಯಾತರು. ಇದೇ ಕಲಿಕ್ಯಾತರನ್ನೇ ಕಾಲಕ್ರಮೇಣ ಕಿಳ್ಳೆಕ್ಯಾತ, ಶಿಳ್ಳೆಕ್ಯಾತ ಅಂತ ಕರೆಯಲಾಗುತ್ತಿದೆ. ರಾಮನ ಕತೆಯನ್ನು, ಕೃಷ್ಣ ಕತೆಯನ್ನ ಪ್ರತೀ ಮನೆ ಮನೆಗೆ ತಲುಪಿಸಿದವರು ಇದೇ ಶಿಳ್ಳೆಕ್ಯಾತರು. ಇವರನ್ನು ಗ್ರಾಮೀಣ ಭಾರತದ ರಿಯಲ್ ಸೂಪರ್ಸ್ಟಾರ್ಗಳು ಎಂದರೂ ತಪ್ಪಾಗೋದಿಲ್ಲ. ಛತ್ರಪರಿ ಶಿವಾಜಿ ಮಹಾರಾಜರು ಕಾಲವಾದ ಬಳಿಕ ದಕ್ಷಿಣಕ್ಕೆ ವಲಸೆ ಬಂದವರಲ್ಲಿ ಈ ಕಿಳ್ಳೆಕ್ಯಾತರೂ ಇದ್ದಾರೆ. ಮರಾಠ ಮಾತೃಭಾಷೆಯಾದರೂ ಕನ್ನಡಿಗರನ್ನೂ ಮೀರಿಸೋ ಭಾಷಾಪ್ರೇಮ ಹೊಂದಿದ್ದಾರೆ. ಕನ್ನಡಿಗರೇ ಆಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ಅನಂತ್ನಾಗ್ಗೆ ಪದ್ಮಭೂಷಣ; ಕರ್ನಾಟಕದ 9 ಸಾಧಕರಿಗೆ ಅತ್ಯುನ್ನತ ಗೌರವ
ಕಲಾ ಸರಸ್ವತಿಯ ಮಕ್ಕಳಾದ್ರೂ ಲಕ್ಷ್ಮೀ ಪುತ್ರರಲ್ಲ!
ಗ್ರಾಮೀಣ ಭಾರತದಲ್ಲಿ ಮೊದಲ ಸಲ ಪ್ಯಾನ್ ಇಂಡಿಯಾ ಮನೋರಂಜನೆ ನೀಡಿದ್ದು. ಹಿಂದೂ ಪವಿತ್ರ ಗ್ರಂಥಗಳೊಂದಿಗೆ ಧರ್ಮ ಪ್ರಸಾರ ಮಾಡಿದ ಹಿಂದೂ ಧರ್ಮದ ಅಸಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಇದೇ ಕಿಳ್ಳೆಕ್ಯಾತ/ಶಿಳ್ಳೆಕ್ಯಾತರು. ಕಿಳ್ಳೆಕ್ಯಾತರು. ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಛತ್ರಿ, ಕ್ಷತ್ರಿ, ಕಿಳ್ಳೆಕ್ಯಾತರು, ಗೊಂಬೆಯಾಡಿಸುವವರು, ಗೊಂಬೆರಾಮರು, ಧುಮ್ಮಳ, ದಾಯಿತ್ಘರ್ ಅಂತೆಲ್ಲಾ ಕರೆಯಿಸಿಕೊಳ್ಳುವ ಈ ಕಲಾ ಸರಸ್ವತಿಯ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಇಂದಿಗೂ ಹಳೇ ಮೈಸೂರು ಭಾಗ ಹಾಗೂ ಕಿತ್ತೂರು ಕರ್ನಾಟಕದಲ್ಲಿ ಈ ಸಮಾಜದ ಬಂಧುಗಳನ್ನು ಕಾಣಬಹುದು. ಎಸ್ಸಿ ಸಮುದಾಯಕ್ಕೆ ಸೇರುವ ಈ ವೃತ್ತಪರ ಕಲಾವಿದ ಸಮಾಜ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದ್ದರೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತುಂಬಾನೇ ಹಿಂದುಳಿದಿದೆ. ಇವರು ಕರಿ ಕಂಬಳಿ ಸ್ಕ್ರೀನ್ ಮೇಲೆ ಪ್ಯಾನ್ ಇಂಡಿಯಾ ಜ್ಞಾನ ತೋರಿಸಿದ ಜ್ಞಾನಪೀಠಿಗಳು.
ವಿಶೇಷ ವರದಿ: ಬಸವರಾಜು ಕಹಳೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ