/newsfirstlive-kannada/media/post_attachments/wp-content/uploads/2024/07/Hathras-Bole-Baba.jpg)
ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಭೋಲೆ ಬಾಬಾನ ಸತ್ಸಂಗ ನಡೆಯುವಾಗ ಭೀಕರ ಕಾಲ್ತುಳಿತ ಸಂಭವಿಸಿದೆ. ಕಳೆದ ಜುಲೈ 2ರಂದು ಸಂಭವಿಸಿದ ಈ ದುರಂತದಲ್ಲಿ 121 ಮಂದಿ ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ ಇನ್ನೂ ಮುಂದುವರಿದಿದೆ. ಈ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆ ನಡೆದು 4 ದಿನದ ಬಳಿಕ ನಾಪತ್ತೆಯಾಗಿದ್ದ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಪ್ರತ್ಯಕ್ಷರಾಗಿದ್ದಾರೆ.
ಕಾಲ್ತುಳಿತ ಸಂಭವಿಸಿದ ಬಳಿಕ ಭೋಲೆ ಬಾಬಾ ಅಜ್ಞಾತ ಸ್ಥಳದಿಂದ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದರು. ಇದೀಗ ದುರಂತದ ಬಗ್ಗೆ ಮೊದಲ ಬಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜುಲೈ 2ರ ಘಟನೆಯ ಬಗ್ಗೆ ನನಗೆ ತೀವ್ರ ನೋವಾಗಿದೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ನಮಗೆ ಸರ್ಕಾರ ಮತ್ತು ಆಡಳಿತದಲ್ಲಿ ನಂಬಿಕೆ ಇರಲಿ. ಈ ಕಾಲ್ತುಳಿತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ ಎಂಬ ನಂಬಿಕೆ ನನಗೆ ಇದೆ. ನಮ್ಮ ವಕೀಲರಾದ ಎ.ಪಿ.ಸಿಂಗ್ ಮೂಲಕ ಸಂತ್ರಸ್ತ ಕುಟುಂಬಗಳ ಪರ ನಿಲ್ಲಲು ಸಮಿತಿಯ ಸದಸ್ಯರಿಗೆ ಮನವಿ ಮಾಡಿದ್ದೇನೆ. ಗಾಯಾಳುಗಳಿಗೆ ಸಹಾಯ ಮಾಡಲು ಸಮಿತಿಯ ಸದಸ್ಯರಿಗೆ ಹೇಳಿದ್ದೇನೆ ಎಂದು ಬೋಲೇನಾಥ್ ಬಾಬಾ ಹೇಳಿದ್ದಾರೆ.
ಇದನ್ನೂ ಓದಿ: 121 ಬಲಿಗೆ ಕಾರಣ ಆ ಶಕ್ತಿ.. ನಾಪತ್ತೆಯಾದ ಭೋಲೆ ಬಾಬಾನಿಂದ ಹೊಸ ನಾಟಕ; ಸ್ಫೋಟಕ ಟ್ವಿಸ್ಟ್!
ಮುಖ್ಯ ಆರೋಪಿ ಶರಣಾಗತಿ
ಹತ್ರಾಸ್ ಕಾಲ್ತುಳಿತದ ಘಟನೆ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ತೀವ್ರಗೊಂಡಿದೆ. ಸತ್ಸಂಗ ಆಯೋಜಿಸಿದ್ದ ಹಾಗೂ ಕಾಲ್ತುಳಿತದ ಮುಖ್ಯ ಆರೋಪಿ ದೇವಪ್ರಕಾಶ್ ಮಧುಕರ್ ಅವರು ಪೊಲೀಸರಿಗೆ ಶರಣಾಗಿದ್ದಾರೆ.
ದೇವಪ್ರಕಾಶ್ ಮಧುಕರ್ ಅವರು ಸತ್ಸಂಗ ಕಾರ್ಯಕ್ರಮ ಆಯೋಜನೆಗೆ ಪೊಲೀಸರಿಂದ ಅನುಮತಿ ಪಡೆದಿದ್ದರು. 80 ಸಾವಿರ ಜನರಿಗೆ ಅನುಮತಿ ಪಡೆದಿದ್ದ ಆಯೋಜಕರು ಸುಮಾರು 2.5 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿದ್ದರು. ಅಲ್ಲದೇ ಕಾಲ್ತುಳಿತದ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು. ಇದೀಗ ಮುಖ್ಯ ಆರೋಪಿ ದೇವಪ್ರಕಾಶ್ ಮಧುಕರ್ ಅವರು ಶರಣಾಗಿದ್ದು, ತನಿಖೆಗೆ ಸಹಕಾರ ಕೊಡ್ತೇವೆ ಎಂದು ಬಾಬಾ ಪರ ವಕೀಲರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ