/newsfirstlive-kannada/media/post_attachments/wp-content/uploads/2024/07/Bhole-Baba-on-Stampede.jpg)
ಉತ್ತರ ಪ್ರದೇಶದಲ್ಲಿ ಮಂಗಳವಾರ (ಜುಲೈ 02) ಮಹಾ ದುರಂತವೊಂದು ಸಂಭವಿಸಿದೆ. ಭೋಲೇ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, ನೂಕು ನುಗ್ಗಲು ಉಂಟಾಗಿ ನೂರಾರು ಜನರು ನರಕ ದರ್ಶನ ಮಾಡಿದ್ದಾರೆ. ಇದೀಗ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಜೊತೆಗೆ ಘನಘೋರ ಘಟನೆಗೆ ಕಾರಣವೇನು ಎಂಬ ಸ್ಫೋಟಕ ಅಂಶಗಳು ಬಟಾ ಬಯಲಾಗಿದೆ.
ಇದನ್ನೂ ಓದಿ: 100ಕ್ಕೂ ಹೆಚ್ಚು ಮಂದಿ ಬಲಿ ಪಡೆದ ಭೋಲೆ ಬಾಬಾ ಯಾರು..? ಏನಿವರ ಮಿಸ್ಟ್ರಿ?
ಇದು ಸತ್ಸಂಗ ಸ್ಮಶಾನವಾಗಿರೋ ಕಥಾನಕ. ಆಧ್ಯಾತ್ಮದ ಬೋಧನೆ ಹೆಸರಲ್ಲಿ ನಡೆದಿರೋ ಮಾರಣಹೋಮ. ಕಾಪಾಡು ಭೋಲೇ ಬಾಬಾ ಅಂತ ಮೌಢ್ಯದ ಹಿಂದೆ ಬಿದ್ದ ಜನರು ಮಸಣ ಸೇರಿರೋ ಮಹಾ ದುರಂತ. ಪವಾಡ ಪುರುಷ ಬಾಬಾನ ಮೇಲಿನ ಭಕ್ತಿ ಪರಾಕಾಷ್ಠೆಯಿಂದ ನೂರಾರು ಕುಟುಂಬಗಳ ಕಣ್ಣೀರಿನ ದ್ಯೋತಕ.
ಭೋಲೆ ಬಾಬಾನ ಸತ್ಸಂಗ.. ಮಸಣ ಸೇರಿದ 121 ಜನ
ಪಾದದ ಧೂಳಿಗಾಗಿ ಹೋಯ್ತಾ ನೂರಾರು ಜನರ ಪ್ರಾಣ
ದೇಶದ ಇತಿಹಾಸದಲ್ಲೇ ಅತಿ ಘೋರ ದುರಂತವೊಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದು ಬಿಟ್ಟಿದೆ. ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ನೂರಾರು ಜನ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಒದ್ದಾಡಿ ಒದ್ದಾಡಿ ಜೀವ ತೆತ್ತಿದ್ದಾರೆ. ಇದೀಗ ನಾರಾಯಣ್ ಸಾಕಾರ್ ಹರಿ ಸತ್ಸಂಗ ಕಾರ್ಯಕ್ರಮದಲ್ಲಿ ನೂಕು ನುಗ್ಗಲಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ.
ಹಲವಾರು ಜನ ಕಾಲ್ತುಳಿತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಪ್ರಾಣತೆತ್ತಿದ್ದಾರೆ. ಅಲ್ಲದೇ 50ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ದುರಂತ ಅಂದ್ರೆ ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರೋದು. ಮತ್ತೊಂದು ದುರಂತ ಅಂದ್ರೆ ಈ ಘೋರ ಘಟನೆಗೆ ಜನರ ಮೌಢ್ಯವೇ ಕಾರಣ ಅನ್ನೋದು.
ಇದನ್ನೂ ಓದಿ: ಭೋಲೇ ಬಾಬಾ ನೋಡಲು ಹೋಗಿ 130ಕ್ಕೂ ಹೆಚ್ಚು ಮಂದಿ ಸಾವು.. ಮೋದಿ ಸಂತಾಪ; ಮೃತರಿಗೆ ಎಷ್ಟು ಲಕ್ಷ ಪರಿಹಾರ?
ಪಾದದ ಧೂಳಿಗಾಗಿ ಪ್ರಾಣಗಳು ಬಲಿ!
ಹತ್ರಾಸ್‌ನಲ್ಲಿ ಭೋಲೆ ಬಾಬಾ ಸತ್ಸಂಗಕ್ಕೆ ಸೇರಿದ್ದು 2 ಲಕ್ಷಕ್ಕೂ ಹೆಚ್ಚು ಜನ
ಸತ್ಸಂಗ ಮುಗಿಸಿ ಬಾಬಾನ ಕಾನ್ವಾಯ್ ತೆರಳುವಾಗ ಕಾಲ್ತುಳಿತ
ಸಾಕಾರ್ ಬಾಬಾನ ಪಾದದ ಧೂಳಿಗಾಗಿ ಮುಗಿಬಿದ್ದಿದ್ದ ಭಕ್ತರು
ಭೋಲೇ ಬಾಬಾ ತೆರಳುತ್ತಿದ್ದ ಕಾರಿನ ಹಿಂದೆ ಬೆನ್ನಟ್ಟಿದ್ದ ಜನರು
ಬಾಬಾ ಹೋದ ದಾರಿಯಲ್ಲಿದ್ದ ಮಣ್ಣು ಸಂಗ್ರಹಿಸಲು ಪೈಪೋಟಿ
ಹೊರಗೆ ತೆರಳಲು ಇದ್ದ ಕಿರಿದಾದ ಜಾಗದಲ್ಲಿ ಹೆಚ್ಚು ಜನ ಸಂದಣಿ
ಒಬ್ಬರ ಮೇಲೊಬ್ಬರು ಬಿದ್ದು ಮತ್ತಷ್ಟು ಕಾಲ್ತುಳಿತ ಸಂಭವಿಸಿದೆ
ಘೋರ ದುರಂತದಲ್ಲಿ 121 ಮಂದಿ ಸಾವನ್ನಪ್ಪಿರುವ ವರದಿ
ಸತ್ಸಂಗ ಕಾರ್ಯಕ್ರಮ ಆಯೋಜಕರ ವಿರುದ್ಧ ಕೇಸ್
ಬಂಧನದ ಭೀತಿಯಿಂದ ‘ಭೋಲೆ ಬಾಬಾ’ ನಾಪತ್ತೆ
ಹತ್ರಾಸ್‌ನ ಸತ್ಸಂಗ ಕಾರ್ಯಕ್ರಮದಲ್ಲಿ 80 ಸಾವಿರ ಜನರು ಭಾಗಿಯಾಗಲು ಮಾತ್ರ ಅನುಮತಿ ನೀಡಲಾಗಿತ್ತು. ಆದ್ರೆ, ನಿನ್ನೆ ಕಾರ್ಯಕ್ರಮದಲ್ಲಿ ಸೇರಿದ್ದು ಸುಮಾರು ಎರಡೂವರೆ ಲಕ್ಷ ಜನ. ಹೀಗಾಗಿ 14 ಮಂದಿ ಆಯೋಜಕರ ವಿರುದ್ಧ ಸಿಕಂದರ ರಾವ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ನಿನ್ನೆಯಿಂದ ಭೋಲೇ ಬಾಬಾಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಬಂಧನದ ಭೀತಿಯಿಂದ ಸ್ವಯಂಘೋಷಿತ ಪವಾಡ ಪುರುಷ ತಲೆಮರೆಸಿಕೊಂಡಿದ್ದಾನೆ.
ಅಜ್ಞಾತ ಸ್ಥಳದಿಂದ ಸ್ಫೋಟಕ ಹೇಳಿಕೆ
ಹತ್ರಾಸ್ ಕಾಲ್ತುಳಿತದ ಬಳಿಕ ನಾಪತ್ತೆ ಆಗಿರುವ ಭೋಲೆ ಬಾಬಾ ಅಜ್ಞಾತ ಸ್ಥಳದಿಂದಲೇ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಗೆ ಕಾರಣ ನಾವಲ್ಲ. ಸಮಾಜಘಾತಕ ಶಕ್ತಿಗಳಿಂದ ಕಾಲ್ತುಳಿತದ ಘಟನೆ ನಡೆದಿದೆ. ನಾನು ಅಲ್ಲಿಂದ ಹೊರಟ ಬಳಿಕ ಕಾಲ್ತುಳಿತದ ದುರಂತ ನಡೆದಿದೆ ಎಂದು ಭೋಲೆ ಬಾಬಾ ಹೇಳಿದ್ದಾರೆ.
ಭೋಲೆ ಬಾಬಾನ ಚರಿತ್ರೆ ಏನು?
ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹದ್ದೂರ್‌ನ ನಿವಾಸಿ
ತಮ್ಮ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದ
ಉತ್ತರ ಪ್ರದೇಶ ಗುಪ್ತಚರ ಘಟಕದಲ್ಲಿ ಹೆಡ್ ಕಾನ್‌ಸ್ಟೆಬಲ್
18 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿ ರಾಜೀನಾಮೆ
1999ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ
ಹೆಸರು ನಾರಾಯಣ ಸಾಕಾರ್ ಹರಿ ಎಂದು ಬದಲಾಯಿಸಿಕೊಂಡಿದ್ದ
ಭೋಲೆ ಬಾಬಾ ಆಗಿ ಬದಲಾಗಿದ್ದ ಸೂರಜ್ ಪಾಲ್
ಸದಾ ಬಿಳಿ ವಸ್ತಗಳನ್ನೇ ಧರಿಸುತ್ತಿದ್ದ ಭೋಲೆ ಬಾಬಾ
ಸ್ವಯಂಪ್ರೇರಿತ ದೇವಮಾನವ ಅಂತ ಹೇಳಿಕೊಳ್ತಿದ್ದ
ನನಗೆ ಯಾವುದೇ ಗುರುಗಳು ಇಲ್ಲ ಅಂತಿದ್ದ ಬಾಬಾ
ತನ್ನ ಪತ್ನಿಯನ್ನೂ ಪಕ್ಕದಲ್ಲೇ ಕೂರಿಸಿಕೊಂಡು ಸತ್ಸಂಗ
ಈತನಿಗೆ ಕೆಲ ರಾಜಕಾರಣಿಗಳೂ ಅನುಯಾಯಿಗಳು
ಈತನ ಮೇಲೆ 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ
ಕಾಲ್ತುಳಿತ ದುರಂತದ ಕುರಿತು ತನಿಖೆ ನಡೆಸಲು ಎಡಿಜಿ ಆಗ್ರಾ ಮತ್ತು ಅಲಿಗಢ ವಿಭಾಗೀಯ ಆಯುಕ್ತರನ್ನು ಒಳಗೊಂಡ ತಂಡವನ್ನ ರಚಿಸಲಾಗಿದೆ. 24 ಗಂಟೆಯೊಳಗೆ ಸರ್ಕಾರಕ್ಕೆ ವರದಿ ನೀಡಲು ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸೋದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: 45 ದಿನಗಳಲ್ಲಿ 5 ಬಾರಿ ಹಾವು ಕಚ್ಚಿದ್ರೂ ಬದುಕಿದ ಯುವಕ.. ಶಾಕ್ ಆದ ವೈದ್ಯರು!
ಮೌಢ್ಯದ ಹಿಂದೆ ಬಿದ್ದ ನೂರಾರು ಜನರು ಮಸಣ ಸೇರಿದ್ದಾರೆ. ಭಕ್ತರನ್ನ ಕಾಪಾಡುವ ಸೋಗಿನಲ್ಲಿ ಸ್ವಯಂಘೋಷಿತ ಭೋಲೇ ಬಾಬಾ ನರಬಲಿಯನ್ನೇ ಪಡೆದಿದ್ದಾನೆ. ಜನ ಮರುಳೋ ಜಾತ್ರೆ ಮರುಳೋ ಅಂತ ಡೋಂಗಿ ಬಾಬಾಗಳ ಸತ್ಸಂಗ ಸೇರಿ ಜನರು ಪ್ರಾಣಕ್ಕೆ ಸಂಚಕಾರ ತಂದುಕೊಂಡಿರೋದು ಮಹಾ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ