/newsfirstlive-kannada/media/post_attachments/wp-content/uploads/2024/12/BDR_ROBBERY_1.jpg)
ಕೆಲಸ ಕೊಟ್ಟಿದ್ದ ಮಾಲೀಕನ ಹಣಕ್ಕೆ ಕನ್ನ ಹಾಕಿದ ಖತರ್ನಾಕ್ ಆಸಾಮಿ ಪೊಲೀಸರ ಅತಿಥಿಯಾಗಿದ್ದಾನೆ. ಸುಮಾರು ವರ್ಷಗಳಿಂದ ಅಲ್ಲೆ ಕೆಲಸ ಮಾಡಿ ನಂಬಿಕೆ ಗಳಿಸಿಕೊಂಡಿದ್ದವ ದ್ರೋಹ ಬಗೆದು, ಹಣ ಎಗರಿಸಿದ್ದ. ದರೋಡೆಯ ಕಥೆ ಕಟ್ಟಿ, ಬಚಾವಾಗಲು ಯತ್ನಿಸಿದ್ದ. ಆದ್ರೆ ಅಖಾಡಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದರು.
ಮಾಲೀಕನ ಹಣ ದೋಚಲು ದರೋಡೆ ಕಥೆ ಕಟ್ಟಿದ ಆಸಾಮಿ
ಈಗಿನ ಕಾಲದಲ್ಲಿ ಯಾರನ್ನ ನಂಬಬೇಕು ಅಂತಾನೇ ಗೊತ್ತಾಗಲ್ಲ. ನಂಬಿದವರೇ ಬೆನ್ನಿಗೆ ಚೂರಿ ಹಾಕುವ ಕಾಲ ಇದು. ಈ ಜ್ಞಾನೇಶ್ವರ, ಹಲವು ವರ್ಷಗಳಿಂದ ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡ್ಕೊಂಡು ಮಾಲೀಕನ ನಂಬಿಕೆ ಗಳಿಸಿದ್ದ. ಅದೇ ನಂಬಿಕೆ ಮೇಲೆ ಪೆಟ್ರೋಲ್ ಬಂಕ್ ಮಾಲೀಕನ ಹಣದ ವ್ಯವಹಾರ ನೋಡಿಕೊಳ್ಳುತ್ತಿದ್ದ. ಆದ್ರೆ ಅದನ್ನೇ ದುರುಪಯೋಗ ಪಡಿಸಿಕೊಂಡ ನಯವಂಚಕ ಹಣ ದೋಚಲು ಸ್ಕೆಚ್ ರೂಪಿಸಿದ್ದ. ಅದನ್ನು ಹೇಳೋಕೂ ಮೊದಲು ಅಮಾಯಕನಂತೆ ರಾಬರಿ ಕಥೆ ಕಟ್ಟಿದ್ದನು.
ಇವನ ಪರಿಸ್ಥಿತಿ ನೋಡಿದ್ರೆ ಕರುಣೆ ಉಕ್ಕಿಬರಬಹುದು. ಆದ್ರೆ ಇವನೇ ಇಲ್ಲಿ ಖಳನಾಯಕ. ಹೆಸರು ಜ್ಞಾನೇಶ್ವರ ಮೇತ್ರೆ. ಹೆಸರಿಗೆ ತಕ್ಕಂತೆ ಅದೇನ್ ಜ್ಞಾನ. ಅದೆಂತಾ ಸ್ಕೆಚ್. ಭಾಲ್ಕಿ ತಾಲೂಕಿನ ಹಲಬರ್ಗಾ ಹತ್ತಿರದ ಸಿದ್ದೇಶ್ವರ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದವ. ಮಾಲೀಕರ ನಂಬಿಕೆ ಗಳಿಸಿ ಹಣದ ವ್ಯವಹಾರವನ್ನೂ ಮಾಡುತ್ತಿದ್ದ. ನಿತ್ಯ ಪೆಟ್ರೊಲ್ ಬಂಕ್‌ನಲ್ಲಿ ಸಂಗ್ರಹವಾಗುತ್ತಿದ್ದ ಲಕ್ಷ ಲಕ್ಷ ಹಣವನ್ನ ಬೀದರ್‌ನ ಶಿವನಗರದಲ್ಲಿರೊ ಎಸ್‌ಬಿಐ ಬ್ಯಾಂಕ್‌ನ ಮಾಲೀಕರ ಖಾತೆಗೆ ಜಮೆ ಮಾಡುತ್ತಿದ್ದ. ಆದ್ರೆ ಕಂತೆ ಕಂತೆ ಹಣ ನೋಡಿ ಅವನ ತಲೆ ತಿರುಗಿದೆ. ಆ ಹಣ ಎಗರಿಸಿ, ದರೋಡೆ ಕಥೆ ಕಟ್ಟಿ ಬಚಾವಾದರಾಯಿತು ಅಂತ ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಸ್ಕೆಚ್ ಹಾಕಿದ್ದ. ಇದಕ್ಕಾಗಿ ಸಾಥ್ ಕೊಟ್ಟವರೇ ಇವನ ಸ್ನೇಹಿತರು.
ಅನ್ನ ಹಾಕಿದ ಮನೆಗೆ ಕನ್ನ
ಆರೋಪಿ ಜ್ಞಾನೇಶ್ವರ ಮೇತ್ರೆ ಹಾಗೂ ಆತನ ನಾಲ್ಕು ಸಹಚರರು ಸೇರಿ ರಾಬರಿ ಕಥೆ ಕಟ್ಟಲು ಯತ್ನಿಸಿದ್ರು. ಪ್ಲಾನ್ ಪ್ರಕಾರ ಮೊದಲೇ ನಿರ್ಣಯಿಸಿದಂತೆ ನವೆಂಬರ್ 25 ನೇ ತಾರೀಖು ಬೆಳಿಗ್ಗೆ 11-45 ಕ್ಕೆ ಬೀದರ್‌ನ ಎಸ್‌ಬಿಐ ಬ್ಯಾಂಕ್‌ಗೆ ಹಣ ಜಮಾ ಮಾಡಲು 4 ಲಕ್ಷ 96 ಸಾವಿರ 640 ರೂಪಾಯಿಯ ಬ್ಯಾಗ್ ಹಿಡಿದು ಬೈಕ್ ಮೇಲೆ ಏರಿದ್ದ. ಹಲಬರ್ಗಾದಿಂದ ಐದಾರು ಕಿಲೊ ಮೀಟರ್ ದೂರದಲ್ಲೇ ಇರುವ ಶನಿ ಮಹಾತ್ಮ ದೇವಸ್ಥಾನದ ಕಮಾನ್ ಹತ್ತಿರ ಬೈಕ್ ಮೇಲೆ ಹೋಗ್ತಿದ್ದ ಜ್ಞಾನೇಶ್ವರಗೆ ಆತನ ಸಹಚರರು ಟಾಟಾ ಪಂಚ್ ಕಾರ್ ಮೇಲೆ ಬಂದು ಡಿಕ್ಕಿ ಹೊಡೆದು ಕಣ್ಣಿಗೆ ಕಾರದಪುಡಿ ಎರಚಿದಂತೆ ವರ್ತಿಸಿದ್ರು. ಅಲ್ಲದೇ ತನ್ನ ಶರ್ಟ್ ತಾನೇ ಹರಿದುಕೊಂಡ ರಾಬರಿ ಆಗಿದೆ ಎಂಬಂತೆ ಬಿಂಬಿಸಿದ್ದ. ಪ್ಲಾನ್ ಪ್ರಕಾರ ಎಲ್ಲವೂ ನಡೆದಿತ್ತು. ಆದ್ರೆ ಪೊಲೀಸರು ಎಂಟ್ರಿ ಕೊಟ್ಟು ಎಲ್ಲವನ್ನೂ ತಲೆಬುಡ ಮಾಡಿದರು. ಪ್ರಕರಣ ತನಿಖೆ ನಡೆಸಿ ಜ್ಞಾನೇಶ್ವರ ಮೇತ್ರೆ ಹಾಗೂ ಇನ್ನಿತರ 4 ಸಹಚರರನ್ನ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ; Bigg Boss; ‘ನಾವು ಒಳ್ಳೆ ಮನುಷ್ಯರಲ್ಲ, ಕೆಟ್ಟೋರೇ’ ರಜತ್- ಗೋಲ್ಡ್ ಸುರೇಶ್ ಮಧ್ಯೆ ಮಾತಿನ ಸಮರ
ಅಮಾಯಕನಂತೆ ವರ್ತಿಸಿ ಮಾಲೀಕನ ಹಣಕ್ಕೆ ಕನ್ನ ಹಾಕಲು ಯತ್ನಿಸಿದ ಖತರ್ನಾಕ್ ಆಸಾಮಿ ಆ್ಯಂಡ್ ಗ್ಯಾಂಗ್ನ್ನೂ ಬೀದರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ 5 ಆರೋಪಿಗಳಿಂದ 4 ಲಕ್ಷ 2 ಸಾವಿರದ 580 ರೂಪಾಯಿ ಹಾಗೂ 10 ಲಕ್ಷ ಮೌಲ್ಯದ ಟಾಟಾ ಪಂಚ್ ಕಾರ್ ಜಪ್ತಿ ಮಾಡಿದ್ದಾರೆ. ಆರೋಪಿಗಳು ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಅನ್ನೋದನ್ನ ಪೊಲೀಸರು ಸಾಬೀತುಪಡಿಸಿದ್ದು, 13 ದಿನಗಳಲ್ಲೇ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ