/newsfirstlive-kannada/media/post_attachments/wp-content/uploads/2025/07/sunjay-kapur.jpg)
ಸಂಜಯ ಕಪೂರ್ ಅವರ ಅನಿರೀಕ್ಷಿತ ಸಾವಿನ ಬಳಿಕ ಮಾಲೀಕತ್ವದ ಕಂಪನಿಯಲ್ಲಿ ಕಲಹ ಶುರುವಾಗಿದೆ. ಬರೋಬ್ಬರಿ 30 ಸಾವಿರ ಕೋಟಿ ಮೌಲ್ಯದ ಕಂಪನಿಯ ಮೇಲಿನ ಹಿಡಿತಕ್ಕಾಗಿ ಸಂಜಯ ಕಫೂರ್ ತಾಯಿ ರಾಣಿ ಕಪೂರ್ ಮತ್ತು ಕಂಪನಿಯ ನಿರ್ದೇಶಕರ ಮಧ್ಯೆ ಸಂಘರ್ಷ ಆರಂಭವಾಗಿದೆ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ಮುಂದೂಡಬೇಕೆಂದು ಸಂಜಯ ಕಪೂರ್ ತಾಯಿ ಬರೆದಿದ್ದ ಪತ್ರವನ್ನು ಕಂಪನಿಯು ತಿರಸ್ಕರಿಸಿದೆ. ನಿಗದಿಯಂತೆ ಶುಕ್ರವಾರ (ಜುಲೈ 25ರಂದು) ತನ್ನ ವಾರ್ಷಿಕ ಸಾಮಾನ್ಯ ಸಭೆ (ಅನ್ಯೂಯಲ್ ಜನರಲ್ ಬಾಡಿ ಸಭೆ) ನಡೆಸಿದೆ. ಸಂಜಯ ಕಪೂರ್ ತಾಯಿ ರಾಣಿ ಕಪೂರ್ ಹಾಗೂ ಕಂಪನಿಯ ನಡುವಿನ ಹಿಡಿತಕ್ಕಾಗಿ ನಡೆಯುತ್ತಿರುವ ಈ ಸಂಘರ್ಷವು ಕೋರ್ಟ್ ಮೆಟ್ಟಿಲೇರಲಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?
ಸಂಜಯ ಕಪೂರ್ ಅವರ ಕುಟುಂಬದ ಒಡೆತನದ ಸೋನಾ ಕಾಮ್‌ಸ್ಟಾರ್ ಮೇಲೆ ಹಿಡಿತಕ್ಕಾಗಿ ತಾಯಿ ರಾಣಿ ಕಪೂರ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿದೆ. ರಾಣಿ ಕಪೂರ್ ಅವರು ಎತ್ತಿದ್ದ ಆಕ್ಷೇಪಗಳನ್ನು ಕಂಪನಿಯು ತಿರಸ್ಕರಿಸಿದೆ. ಸೋನಾ ಕಾಮ್‌ಸ್ಟರ್ ಅರ್ಥಾತ್ ಸೋನಾ ಬಿಎಲ್‌ಡಬ್ಲ್ಯು ಪ್ರಿಸಿಶನ್ ಪೋರ್ಜಿಂಗ್ಸ್ ಲಿಮಿಟೆಡ್ ಕಂಪನಿಯು ಸಂಜಯ ಅವರ ತಾಯಿ ರಾಣಿ ಕಪೂರ್ ಕಂಪನಿಯ ಷೇರುದಾರರಲ್ಲ ಎಂದು ಹೇಳಿದೆ. ರಾಣಿ ಕಪೂರ್ ಎತ್ತಿದ್ದ ಬಲವಂತ ಮತ್ತು ದುಷ್ಕೃತ್ಯದ ಆರೋಪವನ್ನು ಕಂಪನಿಯು ತಿರಸ್ಕರಿಸಿದೆ. ಸಂಜಯ ಕಪೂರ್ ತಾಯಿಯ ವಿರೋಧ, ಆಕ್ಷೇಪದ ಮಧ್ಯೆ ಶುಕ್ರವಾರ ನಿಗದಿಯಂತೆ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಸಲಾಗಿದೆ. ಕಾನೂನು ತಜ್ಞರ ಸಲಹೆ ಮೇರೆಗೆ ಕಂಪನಿಯು ಕಾರ್ಯನಿರ್ವಹಿಸಿದೆ. ಕಾರ್ಪೋರೇಟ್ ಆಡಳಿತ ಮತ್ತು ಪಾರದರ್ಶಕತೆಗೆ ಕಂಪನಿ ಬದ್ದವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ತಪ್ಪಿದ ಭಾರೀ ಅನಾಹುತ.. 173 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ -ಮುಂದೆ ಏನಾಯ್ತು..?
ಲಂಡನ್ನಲ್ಲಿ ಪೋಲೋ ಆಡುವಾಗ ಜೇನುನೊಣ ಮೂಗಿನೊಳಕ್ಕೆ ಹೋಗಿದ್ದರಿಂದ ಸಂಜಯ ಕಪೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಹೇಳಿದ್ದರು. ಪೋಲೋ ಆಡುವಾಗ ಮೈದಾನದಲ್ಲಿ ಕುಸಿದು ಬಿದ್ದಿದ್ದ ಸಂಜಯ ಕಪೂರ್ ಅವರನ್ನು ಬದುಕಿಸಲು ವೈದ್ಯರು, ಎಮರ್ಜೆನ್ಸಿ ಟೀಮ್ ಮೈದಾನಕ್ಕೆ ಬಂದಿತ್ತು. ಜೊತೆಗೆ ಮೆಡಿಕಲ್ ಹೆಲಿಕಾಪ್ಟರ್ ಕೂಡ ಮೈದಾನಕ್ಕೆ ಬಂದು ಲ್ಯಾಂಡಿಂಗ್ ಆಗಿತ್ತು. ಇದೆಲ್ಲದರ ಪೋಟೋ, ವಿಡಿಯೋಗಳು ಬಿಡುಗಡೆಯಾಗಿದ್ದವು. ಆಸ್ಪತ್ರೆಯಲ್ಲಿ ಸಂಜಯ ಕಪೂರ್ ನಿಧನದ ಬಗ್ಗೆ ವೈದ್ಯರು ದೃಢಪಡಿಸಿದ್ದರು. ಬಳಿಕ ದೆಹಲಿಗೆ ಅವರ ಪಾರ್ಥೀವ ಶರೀರವನ್ನು ತಂದು ಅಂತ್ಯಸಂಸ್ಕಾರ ನಡೆಸಲಾಗಿತ್ತು. ಅಂತ್ಯಸಂಸ್ಕಾರದಲ್ಲಿ ಸಂಜಯ ಕಪೂರ್ ಅವರ ಮೊದಲ ಪತ್ನಿ ಕರಿಷ್ಮಾ ಕಪೂರ್ ಕೂಡ ತಮ್ಮ ಮಕ್ಕಳ ಜೊತೆಗೆ ಭಾಗಿಯಾಗಿದ್ದರು.
ರಾಣಿ ಕಪೂರ್ ಆರೋಪಗಳು..?
ರಾಣಿ ಕಪೂರ್ ಕಂಪನಿ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಗೆ ಬರೆದ ಪತ್ರದಲ್ಲಿ "ಅನುಮಾನಾಸ್ಪದ ಸಂದರ್ಭಗಳನ್ನು" ಪ್ರಶ್ನಿಸಿದ ಕೆಲವೇ ಗಂಟೆಗಳ ನಂತರ ಕಂಪನಿಯ ಪ್ರತಿಕ್ರಿಯೆ ಬಂದಿತು. "ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದಿದೆ" ಎಂದು ರಾಣಿ ಕಪೂರ್ ಹೇಳಿದ್ದರು. ವಾರ್ಷಿಕ ಮಹಾಸಭೆಯನ್ನು ಮುಂದೂಡುವಂತೆ ಕೋರುತ್ತಾ, ರಾಣಿ, "ನಿಮಗೆ ತಿಳಿದಿರುವಂತೆ, 12.06.2025 ರಂದು, ನನ್ನ ಮಗ ಸಂಜಯ್ ಕಪೂರ್ ಇಂಗ್ಲೆಂಡ್ನಲ್ಲಿ ಅತ್ಯಂತ ಅನುಮಾನಾಸ್ಪದ ಮತ್ತು ವಿವರಿಸಲಾಗದ ಸಂದರ್ಭಗಳಲ್ಲಿ ದುರಂತವಾಗಿ ನಿಧನರಾದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನನ್ನ ಮಗನ ಸಾವಿನ ಬಗ್ಗೆ ನನಗೆ ಉತ್ತರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾನು ಮಾಹಿತಿಯನ್ನು ಹುಡುಕುತ್ತಿದ್ದರೂ, ಘಟನೆಯನ್ನು ವಿವರಿಸುವ ಯಾವುದೇ ಸಂಬಂಧಿತ ಉತ್ತರಗಳು ಮತ್ತು ದಾಖಲೆಗಳನ್ನು ಪಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಾವು ಶೋಕದಲ್ಲಿರುವಾಗ, ಕೆಲವರು ಕುಟುಂಬದ ಪರಂಪರೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ."
ರಾಣಿ ಕಪೂರ್ ತಮ್ಮನ್ನು ಸೋನಾ ಕಾಮ್‌ಸ್ಟಾರ್ ಕಂಪನಿಯ ಬಹುಮತದ ಷೇರುದಾರರೆಂದು ಗುರುತಿಸಿಕೊಂಡರು. ಶುಕ್ರವಾರ ನಿಗದಿಯಾಗಿದ್ದ ವಾರ್ಷಿಕ ಮಹಾಸಭೆಯನ್ನು (ಎಜಿಎಂ) ಮುಂದೂಡಬೇಕೆಂದು ಒತ್ತಾಯಿಸಿದರು. ರಾಣಿ ಕಪೂರ್ ತಮ್ಮ ಮಗನ ಮರಣದ ನಂತರ ಸ್ವಲ್ಪ ಸಮಯದ ನಂತರ ಅರ್ಥಮಾಡಿಕೊಳ್ಳದ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದರು. ದಯವಿಟ್ಟು ಗಮನಿಸಿ, ಮೇಲೆ ತಿಳಿಸಿದ ದುಃಖದ ಅವಧಿಯಲ್ಲಿ, ವಿವರಣೆಯಿಲ್ಲದೆ ಅಥವಾ ಓದಲು ಮತ್ತು ಅರ್ಥಮಾಡಿಕೊಳ್ಳಲು ಸಮಯವಿಲ್ಲದೆಯೇ ನನ್ನನ್ನು ಹಲವು ಬಾರಿ ಸಂಪರ್ಕಿಸಿ ವಿವಿಧ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ಅಪಾರ ಮಾನಸಿಕ ಮತ್ತು ಭಾವನಾತ್ಮಕ ಯಾತನೆಗೆ ಒಳಗಾಗಿದ್ದರೂ, ಬೀಗ ಹಾಕಿದ ಬಾಗಿಲುಗಳ ಹಿಂದೆ ಅಂತಹ ದಾಖಲೆಗಳಿಗೆ ಸಹಿ ಹಾಕುವಂತೆ ನನ್ನನ್ನು ಒತ್ತಾಯಿಸಲಾಯಿತು. ನಾನು ಪದೇ ಪದೇ ವಿನಂತಿಸಿದರೂ, ಅಂತಹ ದಾಖಲೆಗಳ ವಿಷಯಗಳು ನನಗೆ ಎಂದಿಗೂ ಬಹಿರಂಗಗೊಂಡಿಲ್ಲ, ಎಂದು ಅವರು ಹೇಳಿದರು.
ನಿಗದಿತ ಸಭೆಗೆ ಕೆಲವೇ ಗಂಟೆಗಳ ಮೊದಲು, ಜುಲೈ 24 ರಂದು ತಡವಾಗಿ ಸೋನಾ ಕಾಮ್‌ಸ್ಟಾರ್ ರಾಣಿ ಕಪೂರ್ ಮನವಿ ಪತ್ರ ಸ್ವೀಕರಿಸಲಾಗಿದೆ ಎಂದು ದೃಢಪಡಿಸಿದರು, ಆದರೆ ವಾರ್ಷಿಕ ಮಹಾಸಭೆಯನ್ನು ಮುಂದೂಡಲು "ಯಾವುದೇ ಕಾನೂನು ಆಧಾರವಿಲ್ಲ" ಎಂದು ಹೇಳಿದರು. ಶ್ರೀಮತಿ ರಾಣಿ ಕಪೂರ್ ಅವರ ಮೇಲಿನ ನಮ್ಮ ಗೌರವವನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ತುರ್ತು ಕಾನೂನು ಸಲಹೆಯನ್ನು ಕೋರಿತು. ಕಾನೂನು ಸಲಹೆಗಾರರು ಮತ್ತು ಶ್ರೀಮತಿ ರಾಣಿ ಕಪೂರ್ ಕಂಪನಿಯ ಷೇರುದಾರರಲ್ಲ ಎಂಬ ಅಂಶವನ್ನು ಆಧರಿಸಿ, ವಾರ್ಷಿಕ ಮಹಾಸಭೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಕಂಪನಿಯು ತೀರ್ಮಾನಿಸಿತು" ಎಂದು ತಿಳಿಸಿದೆ. ರಾಣಿ ಕಪೂರ್ ಕನಿಷ್ಠ 2019ರಿಂದ ಕಂಪನಿಯಲ್ಲಿ ಷೇರುದಾರರಾಗಿಲ್ಲ ಎಂಬುದನ್ನು ಕಂಪನಿಯು ಪರಿಗಣಿಸಿದೆ.
ಸಂಜಯ್ ಮರಣದ ನಂತರ ಸೋನಾ ಕಾಮ್‌ಸ್ಟಾರ್‌ನಲ್ಲಿ ಬದಲಾವಣೆಗಳು..
ಸಂಜಯ ಕಪೂರ್ ಮರಣದ ನಂತರ ಅವರ ಪತ್ನಿ ಪ್ರಿಯಾ ಸಚ್ ದೇವ್ ಕಪೂರ್ ರನ್ನು ಸೋನಾ ಕಾಮ್‌ಸ್ಟರ್ ಕಂಪನಿಯ ಹೆಚ್ಚುವರಿ ನಾನ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಆಗಿ ನೇಮಿಸಿಕೊಳ್ಳಲಾಗಿದೆ. ಸೋನಾ ಬಿಎಲ್‌ಡಬ್ಲ್ಯು ಪ್ರಿಸಿಶನ್ ಪೋರ್ಜಿಂಗ್ಸ್ ಲಿಮಿಟೆಡ್ ಕಂಪನಿಗೆ ಜೆಫ್ರಿ ಮಾರ್ಕ್ ಓವರ್ಲಿ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜಯ ತಾಯಿ ರಾಣಿ ಕಪೂರ್ಗೆ ಕಂಪನಿಯಲ್ಲಿ ಯಾವುದೇ ಸ್ಥಾನ ನೀಡಿಲ್ಲ. ಹೀಗಾಗಿ ರಾಣಿ ಕಪೂರ್ ಈಗ ಕೋರ್ಟ್ ಮೆಟ್ಟಿಲೇರುವುದು ಬಹುತೇಕ ನಿಶ್ಚಿತವಾಗಿದೆ. ತಾವೇ ಬಹುಮತದ ಷೇರುದಾರರೆಂದು ರಾಣಿ ಕಪೂರ್ ಕೋರ್ಟ್ ನಲ್ಲಿ ಪ್ರತಿಪಾದಿಸುವ ಸಾಧ್ಯತೆ ಇದೆ. ಹೀಗಾಗಿ ಕೋರ್ಟ್ ಆದೇಶದಿಂದಲೇ 30 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಮೇಲಿನ ಒಡೆತನ, ಹಿಡಿತ ಯಾರಿಗೆ ಸಿಗುತ್ತೆ ಎಂಬುದು ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ