/newsfirstlive-kannada/media/post_attachments/wp-content/uploads/2025/01/SAIF-1-1.jpg)
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಈ ಆರೋಪಿಗೂ, ಪ್ರಕರಣಕ್ಕೂ ಸಂಬಂಧವಿಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ನಟ ಸೈಫ್ ಅಲಿ ಖಾನ್ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಚೇತರಿಸಿಕೊಳ್ತಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಅದ್ಯಾಕೋ ಸೇಫ್ ಸಿಟಿಯಲ್ಲ ಅನ್ನೋದು ಭಾಸವಾಗ್ತಿದೆ. ಇತ್ತೀಚೆಗೆ ರಾಜಕೀಯ ಗಣ್ಯರು, ಸೆಲೆಬ್ರಿಟಿಗಳ ಮೇಲೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಎನ್ಸಿಪಿಯ ಬಾಬಾ ಸಿದ್ಧಿಕಿ, ನಟ ಸಲ್ಮಾನ್ ಖಾನ್ ಮೇಲೆ ದಾಳಿ ಬಳಿಕ ಸದ್ಯ ನಟ ಸೈಫ್ ಅಲಿ ಖಾನ್ ಮೇಲಿನ ಡೆಡ್ಲಿ ಅಟ್ಯಾಕ್ ಬೆಚ್ಚಿ ಬೀಳಿಸಿದೆ.
ಬಾಂದ್ರಾ ಪೊಲೀಸರಿಂದ ಶಂಕಿತ ಆರೋಪಿ ಅರೆಸ್ಟ್
ಬಾಲಿವುಡ್ ನವಾಬ ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆ ನಡೆದ 30 ಗಂಟೆಗಳ ಬಳಿಕ ಮುಂಬೈನ ಬಾಂದ್ರಾ ಪೊಲೀಸರು ಓರ್ವ ಶಂಕಿತ ಆರೋಪಿಯನ್ನ ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. ಈತನೇ ಸೈಫ್ ಅಲಿಖಾನ್ ಕೇಸ್ಗೆ ಸಂಬಂಧಿಸಿದ ಆರೋಪಿ ಎನ್ನಲಾಗ್ತಿತ್ತು. ಆದ್ರೆ ಆತ ಬೇರೊಂದು ಕೇಸ್ನ ಆರೋಪಿ ಎನ್ನಲಾಗ್ತಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಬಂಧಿತ ಆರೋಪಿಗೂ ಈ ಕೇಸ್ಗೆ ಸಂಬಂಧಪಟ್ಟವನಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ನಟ ಸೈಫ್ ಅಲಿ ಖಾನ್ ಸೇಫ್
ಗಾಯಗೊಂಡಿರುವ ಸೈಫ್ ಅಲಿ ಖಾನ್ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು ಚೇತರಿಸಿಕೊಳ್ತಿದ್ದಾರೆ. ಐಸಿಯುನಿಂದ ನಾರ್ಮಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಅಂತ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್ಗೆ 6 ಬಾರಿ ಚಾಕುವಿನಿಂದ ಇರಿಯಲಾಗಿದ್ದು ಸೈಫ್ ದೇಹ ಸೇರಿದ್ದ ಸುಮಾರು 2 ಇಂಚಿನ ಉದ್ದದ ಚಾಕುವನ್ನ ವೈದ್ಯರು ಹೊರ ತೆಗೆದಿದ್ದಾರೆ. 5 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಚಾಕು ಹೊರತೆಗೆದಿದ್ದು ಸೈಫ್ ಅಲಿಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ವೈದ್ಯರು ಸೈಫ್ ದೇಹದಿಂದ ಹೊರ ತೆಗೆದ ಚಾಕು ದೃಶ್ಯ ಲಭ್ಯವಾಗಿದೆ.
ಸೈಫ್ ಅಲಿ ಖಾನ್ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ತಿದ್ದಾರೆ ಹಾಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಳೆ ಐಸಿಯುನಿಂದ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಿದ್ದೇವೆ, ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದಾರೆ ವೈದ್ಯರು.
ಸೈಫ್ ಅಲಿಖಾನ್ ಗಾಯಗೊಂಡಿದ್ದ ವೇಳೆ ಸೈಫ್ ಅಲಿಖಾನ್ರನ್ನು ಆಸ್ಪತ್ರೆಗೆ ದಾಖಲಿಸಿದ್ದ ಇಬ್ರಾಹಿಂ ಖಾನ್ ಅಲ್ಲ, ಸೈಫ್ರ 7 ವರ್ಷದ ಪುತ್ರ ತೈಮೂರ್ ಅಂತ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್ ನಿವಾಸದ ಮತ್ತೊಂದು ಸಿಸಿಟಿವಿ ರಿಲೀಸ್ ಆಗಿದ್ದು, ಮಧ್ಯರಾತ್ರಿ 1.37ರ ಸುಮಾರಿಗೆ ಅಪಾರ್ಟ್ಮೆಂಟ್ಗೆ ಎಂಟ್ರಿ ಕೊಡುವ ದೃಶ್ಯ ಲಭ್ಯ ಆಗಿದೆ. ಮುಸುಕುಧಾರಿಯಾಗಿ ಎಂಟ್ರಿಕೊಟ್ಟ ಕಿರಾತಕ ತನ್ನ ಜೊತೆ ಒಂದು ಬ್ಯಾಗ್ ಸಹ ಹಿಡಿದು ಬಂದಿದ್ದು ಮಧ್ಯರಾತ್ರಿ 2.30ರ ಸುಮಾರಿಗೆ ಪುನಃ ಹೊರಹೋಗಿರೋದು ಸೆರೆಯಾಗಿದೆ.
ಶಾರೂಖ್ ಖಾನ್ ಮನೆಗೂ ನುಗ್ಗಲು ಯತ್ನಿಸಿದ್ನಾ ಕಿರಾತಕ?
ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ದಾಳಿ ನಡೆಸಿರುವ ಆರೋಪಿ ಬಾಲಿವುಡ್ ಬಾದ್ಷಾಹ ನಟ ಶಾರೂಖ್ ಖಾನ್ ಮನೆಗೂ ನುಗ್ಗಲು ಯತ್ನಿಸಿದ್ದ ಎನ್ನಲಾಗಿದೆ. ಕಳೆದ ಜನವರಿ 14ರಂದು ಮುಂಬೈನ ಶಾರೂಖ್ ಖಾನ್ ಮನ್ನತ್ ನಿವಾಸದ ಬಳಿ ಗಲಾಟೆ ನಡೆದಿತ್ತು. ಆತ ಶಾರೂಖ್ ಖಾನ್ ಮನೆಗೆ ನುಗ್ಗಲು ಯತ್ನಿಸಿದ್ದೇಕೆ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.
ಸೈಫ್ ಅಲಿಖಾನ್ ಮೇಲೆ ಚಾಕುವಿನ ದಾಳಿಗೆ ಇಡೀ ಬಾಲಿವುಡ್ ಬೆಚ್ಚಿ ಬಿದ್ದಿದೆ. ಮೇಲಿಂದ ಮೇಲೆ ಗಣ್ಯರ ಮೇಲೆ ನಡೆಯುತ್ತಿರುವ ದಾಳಿಗಳು ಭಯಭೀತಗೊಳಿಸಿವೆ.
ಇದನ್ನೂ ಓದಿ:ಸೈಫ್ ಅಲಿಖಾನ್ಗೆ ಚಾಕು ಇರಿದವ ಅರೆಸ್ಟ್; ಘಟನೆಯ ಬೆನ್ನಲ್ಲೇ ಕರೀನಾ ಕಪೂರ್ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ