/newsfirstlive-kannada/media/post_attachments/wp-content/uploads/2024/10/bihar.jpg)
4 ವರ್ಷಗಳ ಹಿಂದೆ ಪತ್ನಿಯನ್ನು ಕೊಂದ ಆರೋಪದಲ್ಲಿ ಪತಿ, ಆತನ ಅಣ್ಣ, ಆತನ ತಂದೆ, ತಾಯಿಯನ್ನು ಜೈಲಿಗೆ ಹಾಕಲಾಗಿತ್ತು. ಇತ್ತೀಚೆಗೆ ದಸರಾ ಹಬ್ಬದ ವೇಳೆ ಆ ನಾಲ್ವರಿಗೆ ಜಾಮೀನು ಕೂಡ ಸಿಕ್ಕಿತ್ತು. ಕೋರ್ಟ್​ನಲ್ಲಿ ವಿಚಾರಣೆ ಕೂಡ ಮುಂದುವರೆದಿತ್ತು. ಇದೀಗ 4 ವರ್ಷಗಳ ಹಿಂದೆ ವರದಕ್ಷಿಣೆ ಕೇಸ್​​ನಲ್ಲಿ ಕೊಲೆಯಾಗಿದ್ದಾಳೆ ಎಂದು ತಿಳಿದಿದ್ದ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದಾಳೆ.
2015ರ ಮೇ3ರಂದು ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಕ್​ಪುರಿ ಗ್ರಾಮದ ಅವಧ್​ಕುಮಾರ್​ ಸಿಂಗ್ ಪುತ್ರಿ ಧರ್ಮಶೀಲಾ ದೇವಿಯನ್ನು ಬಹುರಾ ಛಾಪ್ರಾ ಗ್ರಾಮದ ಪ್ರಮೋದ್​ ಸಿಂಗ್ ಪುತ್ರ ದೀಪಕ್​ ಜೊತೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಪತಿ-ಪತ್ನಿ ನಡುವೆ ಆಗಾಗ ಮನಸ್ತಾಪ, ಜಗಳ ನಡೆಯುತ್ತಲೇ ಇತ್ತು. ಗಂಡನ ಕಿರುಕುಳ ತಾಳದೇ ಧರ್ಮಶೀಲಾದೇವಿ ತನ್ನ ತವರು ಮನೆಗೆ ತೆರಳಿದ್ದಾಳೆ. ಇದಾದ ಕೆಲ ದಿನಗಳಲ್ಲಿ ಮನೆಯಿಂದ ಧರ್ಮಶೀಲಾ ದೇವಿ ನಾಪತ್ತೆಯಾಗಿದ್ದಾಳೆ.
2020ರ ಅ.19ರಂದು ಧರ್ಮಶೀಲಾದೇವಿ ಕಾಣೆಯಾಗಿದ್ದಾಳೆಂದು ಜನಕ್​ಪುರಿ ಗ್ರಾಮದ ಸ್ವತಃ ಆಕೆಯ ತಂದೆಯೇ ಪೊಲೀಸರಿಗೆ ದೂರು ನೀಡಿದ್ದ. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಅ.29ರಂದು ಸಹರ್ ಠಾಣಾ ವ್ಯಾಪ್ತಿಯ ಖಡಾವ್ ಗ್ರಾಮದ ಬಳಿಯ ಸೋನ್ ನದಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ. ತಕ್ಷಣ ದೂರುದಾರ ಅವಧ್​ಕುಮಾರ್​ ಸಿಂಗ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವಧ್​ಕುಮಾರ್ ಮಗಳದ್ದೇ ಮೃತದೇಹ ಅಂತ ಗುರುತಿಸಿದ್ದಾನೆ. ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಪೊಲೀಸರು ಧರ್ಮಶೀಲಾದೇವಿಯ ಪತಿ ದೀಪಕ್, ಆತನ ಅಣ್ಣ, ಆಕೆಯ ಮಾವ, ಅತ್ತೆ ಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದಾಗಿ 4 ವರ್ಷಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದ್ದು, ಕೋರ್ಟ್​ನಲ್ಲಿ ವಿಚಾರಣೆಯೂ ಮುಂದುವರೆದಿದೆ.
ಜೈಲಿನಿಂದ ಹೊರಬಂದ ಬಳಿಕ ಧರ್ಮಶೀಲಾದೇವಿ ಪತಿ ದೀಪಕ್​ ಪುಣೆಗೆ ದುಡಿಯಲು ಹೋಗಿದ್ದಾನೆ. ಇತ್ತ ಪ್ರಮೋದ್​ ಕುಮಾರ್ ಸಿಂಗ್ ಛಾಪ್ರಾ ಗ್ರಾಮದಿಂದ ಅರಾ ಗ್ರಾಮಕ್ಕೆ ದುರ್ಗಾದೇವಿ ಜಾತ್ರೆಗೆಂದು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಜಾತ್ರೆಯಲ್ಲಿ ಮಹಿಳೆಯೊಬ್ಬಳನ್ನು ನೋಡಿ ಶಾಕ್​ಗೊಳಗಾಗಿದ್ದಾನೆ. ಕೂಡಲೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಕೆಯನ್ನು ಹಿಂಬಾಲಿಸಿದವನಿಗೆ ಅಸಲಿ ವಿಷಯ ಗೊತ್ತಾಗಿದೆ. ಆ ಮಹಿಳೆ ಬೇರಾರೂ ಅಲ್ಲ ತನ್ನ ಸೊಸೆ ಧರ್ಮಶೀಲಾದೇವಿಯೇ ಅಂತ ಕನ್ಫರ್ಮ್ ಆಗಿದೆ. ಕೂಡಲೇ ಪೊಲೀಸರನ್ನು ವಿಷಯ ತಿಳಿಸಿದ್ದಾನೆ. ಮಹಿಳೆಯ ಗುಡಿಸಲಿಗೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆಕೆಯ ಕಥೆ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ದೀಪಕ್​ನನ್ನು ಮದುವೆಯಾಗಿದ್ದ ಧರ್ಮಶೀಲಾದೇವಿ 1 ವರ್ಷದೊಳಗೆ ಗಂಡು ಮಗು ಕೂಡ ಆಗಿತ್ತು. ಅನಂತರ ಅನಾರೋಗ್ಯದಿಂದ ಮಗು ಮೃತಪಟ್ಟ ಬಳಿಕ, ಗಂಡ-ಹೆಂಡತಿ ನಡುವೆ ಮನಸ್ತಾಪ, ಕಿರಿಕಿರಿ ಆಗಿದೆ. ಗಂಡನ ಟಾರ್ಚರ್ ತಾಳದೇ ಧರ್ಮಶೀಲಾದೇವಿ ತವರು ಮನೆ ಸೇರಿದ್ದಳು. ಬಳಿಕ ಪತಿ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳು. ಅದಾದ ಕೆಲ ದಿನಗಳಲ್ಲಿಯೇ ಆಕೆಯ ತಾಯಿಯೂ ತೀರಿಹೋಗಿದ್ದಾಳೆ. ಪತಿಯಿಂದ ದೂರವಾಗಿ ತಾಯಿ ಸತ್ತ ಚಿಂತೆಯಲ್ಲಿದ್ದವಳಿಗೆ ಮತ್ತೊಂದು ಆಘಾತ ಎದುರಾಗಿದೆ. ಮಗಳ ಮೇಲೆ ಅಪ್ಪನ ಕಣ್ಣು ಬಿದ್ದಿದೆ. ರಾತ್ರಿ ಹೊತ್ತು ತನ್ನ ಹೆತ್ತ ತಂದೆಯೇ ಅಕ್ರಮ ಸಂಬಂಧ ಹೊಂದಲು ಪ್ರಯತ್ನಿಸಿದ್ದಾನೆ.
ತಂದೆಯ ಕಿರುಕುಳದಿಂದ ಬೇಸತ್ತು ಮಹಿಳೆ ಅರಾ ರೈಲು ನಿಲ್ದಾಣಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆ ವೇಳೆ ಆಪದ್​ಬಾಂಧವನಾಗಿ ಬಂದ ಆಟೋ ಚಾಲಕ ಅಜಯ್ ಆಕೆಯ ಜೀವ ಉಳಿಸಿದ್ದಾನೆ. ಬಳಿಕ ಆಕೆಯನ್ನು ಮೀರಗಂಜ್​ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ. ಆಕೆಯ ಕಷ್ಟ ಕೇಳಿ ನನಗೂ ಯಾರು ಇಲ್ಲ ಅಂತ ಅವಳನ್ನು ಮದುವೆಯಾಗಿದ್ದಾನೆ. ಈಗ ಆಕೆಗೆ ಎರಡನೇ ಗಂಡನಿಂದ ಮಗ ಮತ್ತು ಮಗಳು ಇದ್ದಾರೆ. ಸದ್ಯ 2ನೇ ಗಂಡನೊಂದಿಗೆ ಇರಲು ಬಯಸುವುದಾಗಿ ಹೇಳಿದ್ದಾಳೆ. ಮಹಿಳೆಯಿಂದ ಸೆಕ್ಷನ್ 164 ಅಡಿ ಹೇಳಿಕೆ ಪಡೆದಿರುವ ಪೊಲೀಸರು ಆಕೆಯ ತಂದೆ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಬೋಜಪುರ ಎಎಸ್ಪಿ ಕೆಕೆ ಸಿಂಗ್ ಅವರು 2020ರಲ್ಲಿ ದಾಖಲಾದ ಪ್ರಕರಣದಲ್ಲಿ ಮೃತ ದೇಹವನ್ನು ತಪ್ಪಾಗಿ ಗುರುತಿಸಲಾಗಿದೆ ಮತ್ತು ಆ ಪ್ರಕರಣದಲ್ಲಿ ವಿಚಾರಣೆಯನ್ನು ಸಹ ನಡೆಸುತ್ತೇವೆ ಅಂತ ಹೇಳಿದ್ದಾರೆ. ಇದೀಗ ಮಹಿಳೆ ಪತ್ತೆಯಾದ ನಂತರ ನ್ಯಾಯಾಲಯದ ಆದೇಶದಂತೆ ಮುಂದಿನ ಕಾನೂನು ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.
ವಿಶೇಷ ವರದಿ: ವಿಶ್ವನಾಥ್ ಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ