/newsfirstlive-kannada/media/post_attachments/wp-content/uploads/2025/04/Bill-gates-family.jpg)
ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಸದಾ ಒಂದಿಲ್ಲೊಂದು ವಿಷಯವಾಗಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಹಲವು ಸಲ ಅವರ ಆಸ್ತಿ ಹೆಚ್ಚಳದ ವಿಚಾರವೇ ಸೌಂಡ್ ಮಾಡ್ತಾ ಇರುತ್ತೆ. ಇನ್ನೂ ಕೆಲವು ಸಲ ಅವರ ಪತ್ನಿ ಮೆಲಿಂಡಾ ವಿಚ್ಛೇದನದ ಗಾಸಿಪ್ ಪ್ರತಿಧ್ವನಿಸುತ್ತದೆ. ಆದರೆ, ಈ ಸಲ ಮಾತ್ರ ಥೇಟ್ ರತನ್ ಟಾಟಾ ರೀತಿ ಬಿಲ್ ಗೇಟ್ಸ್ ತೆಗೆದುಕೊಂಡ ನಿರ್ಧಾರ ಅಚ್ಚರಿ ಮೂಡಿಸುತ್ತಿದೆ.
ಆಸ್ತೀಲಿ ಇಬ್ಬರು ಮುಖೇಶ್ ಅಂಬಾನಿಗೆ ಒಬ್ಬ ಬಿಲ್‌ಗೇಟ್ಸ್ ಸಮ
ಮುಖೇಶ್ ಅಂಬಾನಿಯೇ ಕುಬೇರ ಅಂತೀವಿ.. ಅಂಥಾ ಮುಖೇಶ್ ಅಂಬಾನಿಯ ಸರಿ ಸುಮಾರು 2 ಪಟ್ಟು ಆಸ್ತಿ ಹಾಕಿದ್ರೆ ಅದು ಬಿಲ್ ಗೇಟ್ಸ್ ಎಂದು ಹೇಳಬಹುದು. ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಆಸ್ತಿ 162 ಬಿಲಿಯನ್ ಡಾಲರ್. ಇದನ್ನೇ ರೂಪಾಯಿಗಳಲ್ಲಿ ಬರೆಯೋದಾದರೇ ಸೊನ್ನೆಗಳನ್ನ ಎಣಿಸೋಕಾಗದೇ ಸುಸ್ತಾಗ್ತೀವಿ. ಈ ಪೈಕಿ ಬರೀ 1% ಅಂದ್ರೂ 1.62 ಶತ ಕೋಟಿ ಡಾಲರ್ ಆಗುತ್ತದೆ. ಹೆಚ್ಚು ಕಮ್ಮಿ ₹150 ಕೋಟಿ ರೂಪಾಯಿ. ಇಷ್ಟು ಹಣವನ್ನಷ್ಟೇ ಬಿಲ್ ಗೇಟ್ಸ್ ತಮ್ಮ ಮಕ್ಕಳಿಗೆ ಕೊಡೋದು ಅಂತಿದ್ದಾರೆ. ಯಾಕಂದ್ರೆ, ಯಾವುದೇ ಕಾರಣಕ್ಕೂ ಅವರು ತನ್ನ ಹಣಕ್ಕಾಗಿ ಕಾಯುತ್ತಾ ಕೂರದೇ, ಸ್ವಂತ ದುಡಿಮೆಯಿಂದ ಸಂಪಾದಿಸಿಕೊಳ್ಳಬೇಕು ಎಂದು ಬಯಸಿದ್ದಾರೆ.
ಉತ್ತರಾಧಿಕಾರಿ ನೇಮಿಸೋ ರಾಜವಂಶದ ಸಂಪ್ರದಾಯ ಇಲ್ಲ
ಭಾರತೀಯ ಯುಟ್ಯೂಬರ್ ರಾಜ್ ಶಮಾನಿಗೆ ನೀಡಿದ್ದ ಪಾಡ್ ಕಾಸ್ಟ್ನಲ್ಲಿ ಬಿಲ್ ಗೇಟ್ಸ್ ಮಹತ್ವದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥೆ ಆಸ್ತಿಯನ್ನು ಮುಂದಿನ ಪೀಳಿಗೆಗೆ ಹಂಚುವ ಉತ್ತರಾಧಿಕಾರಿಗಳನ್ನ ನೇಮಿಸುವ ಸಂಪ್ರದಾಯ ಇಟ್ಟುಕೊಳ್ಳೋದಿಲ್ಲ ಅನ್ನೋದನ್ನ ಸ್ಪಷ್ಟವಾಗಿ ಹೇಳಿದ್ದಾರೆ. ಹೌದು, ಬಿಲ್‌ಗೇಟ್ಸ್ ಪಾಡ್ ಕಾಸ್ಟ್ ಒಂದರಲ್ಲಿ ಮಾತಾಡುತ್ತಾ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನನ್ನ ಮಕ್ಕಳಿಗೆ ನನ್ನ ಆಸ್ತಿಯನ್ನಲ್ಲ, ಅವಕಾಶವನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದು ರಾಜವಂಶವಲ್ಲ ಎಂದು ಹೇಳಿರುವ ಬಿಲ್‌ಗೇಟ್ಸ್, ನನ್ನ ಮಕ್ಕಳು ಮೈಕ್ರೋಸಾಫ್ಟ್ ನಡೆಸುತ್ತಾರೆಂದು ನಾನು ನಿರೀಕ್ಷಿಸುವುದಿಲ್ಲ. ಅವರು ತಮ್ಮದೇ ಆದ ಗುರುತನ್ನು ಸೃಷ್ಟಿಸಿಕೊಳ್ಳಬೇಕು. ನನ್ನ ಮಕ್ಕಳಿಗೆ ಉತ್ತಮ ಪಾಲನೆ ಮತ್ತು ಶಿಕ್ಷಣ ಸಿಕ್ಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 12 ಸಾವಿರ ಕೋಟಿ ವೆಚ್ಚದ ಹೆದ್ದಾರಿಗೆ ಅಡ್ಡಿಯಾದ ಒಂಟಿ ಮನೆ; 25 ವರ್ಷದಿಂದ ಖಾಲಿ ಮಾಡಿಸಲು ಆಗಿಲ್ಲ!
2 ಹೆಣ್ಣು ಮಕ್ಕಳಿಗೆ, ಒಬ್ಬ ಮಗನಿಗೆ ತಲಾ ₹83 ಕೋಟಿ ಕೊಡ್ತಾರಾ?
ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ದಂಪತಿಗೆ ಮೂವರು ಮಕ್ಕಳು. ಮಗಳು ಜೆನ್ನಿಫರ್ ಕ್ಯಾಥರೀನ್, ಮಗ ರೋರಿ ಜಾನ್ ಗೇಟ್ಸ್, ಮಗಳು ಪೋಬೆ ಅಡೆಲೆ ಈ ಮೂವರಿಗೂ ತಲಾ ₹83 ಕೋಟಿ ರೂಪಾಯಿಗಳನ್ನ ಎಂದರೇ ಕೇವಲ 10 ಮಿಲಿಯನ್ ಡಾಲರ್ ಮಾತ್ರವೇ ನೀಡುತ್ತೇನೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಹೆಚ್ಚು ಹಣ ನೀಡುವುದು ಒಳ್ಳೆಯದಲ್ಲ ಅಂತಲೂ ಎಚ್ಚರದ ಮಾತು ಹೇಳಿದ್ದಾರೆ. ಹಾಗಿದ್ರೆ ಇನ್ನುಳಿದ 99% ಸಂಪತ್ತು ಯಾರಿಗೆ ಸಿಗಲಿದೆ ಗೊತ್ತಾ? ಇದೇ ಕಾರಣಕ್ಕೇ ನೋಡಿ ಬಿಲ್ ಗೇಟ್ಸ್ ಕೂಡ ಭಾರತದ ಆಧುನಿಕ ಕರ್ಣ ಅನಿಸಿಕೊಂಡಿದ್ದ ರತನ್ ಟಾಟಾ ಮಾದರಿಯಲ್ಲೇ ಯೋಚಿಸುತ್ತಿದ್ದಾರೆ ಅನಿಸುತ್ತದೆ. ಯಾಕಂದ್ರೆ, ಬಿಲ್ ಗೇಟ್ಸ್ ತಮ್ಮ ಸಂಪತ್ತಿನ ಬಹುಪಾಲು ಮೊತ್ತವನ್ನು ಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಷನ್ಗೆ ನೀಡುತ್ತಿದ್ದಾರೆ.. ಈ ಸಂಪತ್ತನ್ನು ಆರೋಗ್ಯ, ಶಿಕ್ಷಣ ಹಾಗೂ ಬಡತನ ನಿರ್ಮೂಲನೆಯಂಥಾ ಜನೋಪಕಾರಿ ಕೆಲಸಕ್ಕೆ ಬಳಸಬೇಕು ಎಂದು ಬಯಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ