/newsfirstlive-kannada/media/post_attachments/wp-content/uploads/2025/07/JP_NADDA_MODI.jpg)
ಬಿಜೆಪಿ ಪಕ್ಷ ಕೆಲವು ರಾಜ್ಯಗಳಲ್ಲಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಸುತ್ತಿದೆ. ಇದರೊಂದಿಗೆ ಬಿಜೆಪಿಯ ಹೊಸ ರಾಷ್ಟ್ರೀಯ ಘಟಕದ ಅಧ್ಯಕ್ಷರನ್ನು ನೇಮಿಸುವ ಕಾಲ ಕೂಡ ಹತ್ತಿರ ಬಂದಿದೆ. ಸೋಮವಾರ ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಬಿಜೆಪಿ ಘಟಕಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಹೈಕಮ್ಯಾಂಡ್ ಸೂಚಿಸಿದವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ ನಡ್ಡಾ, ಕೇಂದ್ರದ ಆರೋಗ್ಯ ಖಾತೆ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಕೇಂದ್ರದ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಚ್ಛೆ ಜೆ.ಪಿ ನಡ್ಡಾ ಅವರಿಗೆ ಇದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಸದ್ಯದಲ್ಲೇ ನಡೆಸಲಿದೆ. ಅದಕ್ಕೂ ಮುನ್ನ ಈಗ ರಾಜ್ಯ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸುತ್ತಿದೆ.
ಬಿಜೆಪಿ ಸಂವಿಧಾನದ ಪ್ರಕಾರ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೂ ಮುನ್ನ 37 ಸಾಂಸ್ಥಿಕ ರಾಜ್ಯಗಳ ಪೈಕಿ ಕನಿಷ್ಠ 19 ರಾಜ್ಯಗಳಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಕಡ್ಡಾಯಗೊಳಿಸಿದೆ. ಹೀಗಾಗಿ ಕೆಲ ರಾಜ್ಯ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಿಜೆಪಿ ನಡೆಸುತ್ತಿದೆ. ನಿನ್ನೆ ಪುದುಚೇರಿ ರಾಜ್ಯ ಘಟಕದ ಅಧ್ಯಕ್ಷರಾಗಿ ವಿ.ಪಿ ರಾಮಲಿಂಗಂ ಆಯ್ಕೆಯಾದರೇ, ಮಿಜೋರಾಂ ಘಟಕದ ಅಧ್ಯಕ್ಷರಾಗಿ ಕೆ.ಬೀಚುವಾ ಆಯ್ಕೆ ಆಗಿದ್ದಾರೆ. ಮಹಾರಾಷ್ಟ್ರ, ಉತ್ತರಾಖಂಡ್, ತೆಲಂಗಾಣ, ಆಂಧ್ರಪ್ರದೇಶ ರಾಜ್ಯ ಘಟಕಗಳ ಅಧ್ಯಕ್ಷರ ಹುದ್ದೆಗೆ ಒಬ್ಬರೇ ಸೋಮವಾರ( ಜೂನ್30 ) ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಮಂಗಳವಾರ (ಜುಲೈ, 1,2025) ಅವಿರೋಧವಾಗಿ ಆಯ್ಕೆಯನ್ನು ಘೋಷಿಸಲಾಗುತ್ತೆ ಎಂದು ಹೇಳಲಾಗಿದೆ.
ಬಿಜೆಪಿಯು ಈಗ 16 ರಾಜ್ಯಗಳಲ್ಲಿ ಹೊಸ ರಾಜ್ಯ ಘಟಕದ ಅಧ್ಯಕ್ಷರನ್ನು ಹೊಂದಿದೆ. ಕೆಲ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಹೊಸದಾಗಿ ಆಯ್ಕೆಯಾಗುವರು. ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಬೇಕಾದ 19ಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಹೊಂದಿದಂತೆ ಆಗಲಿದೆ. ಕರ್ನಾಟಕ, ಮಧ್ಯಪ್ರದೇಶದಂಥ ದೊಡ್ಡ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತೆ.
ಪಿ.ವಿ.ಎನ್. ಮಾಧವ್ ನಾಮಪತ್ರ
ತೆಲಂಗಾಣದ ಬಿಜೆಪಿ ಅಧ್ಯಕ್ಷರಾಗಿ ರಾಮಚಂದ್ರರಾವ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಹುದ್ದೆಗೆ ಪಿ.ವಿ.ಎನ್. ಮಾಧವ್ ನಾಮಪತ್ರ ಸಲ್ಲಿಸಿದ್ದಾರೆ. ಈ ಇಬ್ಬರು ಇಂದು (ಮಂಗಳವಾರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗುತ್ತೆ. ಈ ಇಬ್ಬರು ಸಾರ್ವಜನಿಕ ರಂಗದಲ್ಲಿ ಲೋ ಪ್ರೊಫೈಲ್ ಕಾಪಾಡಿಕೊಂಡಿರುವ ನಾಯಕರು. ತೆಲಂಗಾಣದಲ್ಲಿ ಬಂಡಿ ಸಂಜಯ್ ಮತ್ತೆ ರಾಜ್ಯ ಘಟಕದ ಅಧ್ಯಕ್ಷರಾಗಬೇಕೆಂದು ಅವರ ಬೆಂಬಲಿಗರು ಅಪೇಕ್ಷಿಸಿದ್ದರು. ಆದರೇ, ಅಧ್ಯಕ್ಷ ಹುದ್ದೆ ರಾಮಚಂದ್ರರಾವ್ ಪಾಲಾಗಿದೆ. ಬಂಡಿ ಸಂಜಯ್ ಸದ್ಯ ಕೇಂದ್ರ ಸಚಿವರಾಗಿದ್ದಾರೆ. ಕಿಶನ್ ರೆಡ್ಡಿ ಕೂಡ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆಂಧ್ರದಲ್ಲಿ ದಗ್ಗುಬಾಟಿ ಪುರಂದರೇಶ್ವರಿ ಸ್ಥಾನಕ್ಕೆ ಪಿವಿಎನ್ ಮಾಧವ್ರನ್ನು ಪಕ್ಷ ಆಯ್ಕೆ ಮಾಡಿದೆ. ತೆಲಂಗಾಣದ ನೂತನ ಅಧ್ಯಕ್ಷ ರಾಮಚಂದ್ರ ರಾವ್, ಬ್ರಾಹ್ಮಣ ಸಮುದಾಯದ ನಾಯಕ. ಆಂಧ್ರದ ನೂತನ ಅಧ್ಯಕ್ಷ ಪಿ.ವಿ.ಎನ್. ಮಾಧವ್, ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ.
ಇನ್ನೂ ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ರವೀಂದ್ರ ಚವ್ಹಾಣ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ. ರವೀಂದ್ರ ಚವ್ಹಾಣ್ , ಪ್ರಬಲ ಮರಾಠಿ ಸಮುದಾಯದ ನಾಯಕ.
ಉತ್ತರಾಖಂಡ್ ರಾಜ್ಯ ಘಟಕದ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಮಹೇಂದ್ರ ಭಟ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ. ಮಹೇಂದ್ರ ಭಟ್, ಬ್ರಾಹ್ಮಣ ಸಮುದಾಯದ ನಾಯಕ.
ಇದನ್ನೂ ಓದಿ:ಈಗೀಗ ಮೊಹಮ್ಮದ್ ಸಿರಾಜ್ ಅಟ್ಟರ್ ಫ್ಲಾಪ್ ಆಗಲು ಕಾರಣನೇ ಕಿಂಗ್ ಕೊಹ್ಲಿ..!
ಯಾರಿಗೆ ಅದೃಷ್ಟ ಒಲಿಯುತ್ತೆ..?
ಇನ್ನೂ ಈ ತಿಂಗಳಲ್ಲೇ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ರಾಷ್ಟ್ರೀಯ ಅಧ್ಯಕ್ಷರಾಗಿ ಯಾರು ಆಯ್ಕೆ ಮಾಡಲಾಗುತ್ತೆ ಎಂಬ ಬಗ್ಗೆ ಕುತೂಹಲಗಳಿವೆ. ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಅರ್ಜುನ್ ರಾಮ್ ಮೇಘವಾಲ್, ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಕಿಶನ್ ರೆಡ್ಡಿ, ಪುರಂದರೇಶ್ವರಿ, ವಿನೋದ್ ತಾವಡೆ, ವನತಿ ಶ್ರೀನಿವಾಸನ್ ಹೆಸರುಗಳು ಕೇಳಿ ಬರುತ್ತಿವೆ. ಅಂತಿಮವಾಗಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವುದು ಈ ತಿಂಗಳೊಳಗಾಗಿ ಗೊತ್ತಾಗಲಿದೆ.
ಜುಲೈ 22 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತೆ. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ ಒಪ್ಪಿಗೆಯೂ ಅಗತ್ಯ ಇದೆ. ಜೆ.ಪಿ ನಡ್ಡಾ ಅವರು 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದು, ಅವರ ಅವಧಿಯನ್ನು ವಿಸ್ತರಿಸಲಾಗಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ