/newsfirstlive-kannada/media/post_attachments/wp-content/uploads/2025/01/PRIYANKA_GANDHI.jpg)
ದೆಹಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಮೊನ್ನೆಯಷ್ಟೇ ಬಿಜೆಪಿ ಮೊದಲ ರಣಕಲಿಗಳ ಲಿಸ್ಟ್ ಬಿಡುಗಡೆ ಮಾಡಿತ್ತು. ಈ ನಡುವೆ ಕೆಲ ನಾಯಕರು ನಾಲಗೆ ಹರಿಬಿಟ್ಟು ವಿವಾದಕ್ಕೀಡಾಗುತ್ತಿದ್ದಾರೆ. ಬಿಜೆಪಿ ನಾಯಕ ಹಾಗೂ ದಕ್ಷಿಣ ದೆಹಲಿಯ ಕಲ್ಕಾಜಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬಗ್ಗೆ ಮಾತಾಡಿ ಇರಲಾರದೆ ಇರುವೆ ಬಿಟ್ಟುಕೊಂಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಕಾವು ದಿನಕಳೆದಂತೆ ರಂಗೇರುತ್ತಿದೆ. ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಟ್ಟು ಆಮ್ ಆದ್ಮಿ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಸತತ 2 ಬಾರಿ ಗೆದ್ದಿರುವ ಎಎಪಿ ಗೆಲುವಿನ ನಾಗಾಲೋಟಕ್ಕೆ ಲಗಾಮು ಹಾಕಲು ಬಿಜೆಪಿ ನಾನಾ ಕಸರತ್ತು ಮಾಡುತ್ತಿದೆ. ಆದ್ರೆ ಇದೆಲ್ಲ ಸರ್ಕಸ್ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ನಾಯಕ ಹೇಳಿಕೆ ಕೊಟ್ಟಿದ್ದಾರೆ. ಪ್ರಚಾರದ ಬಿರುಸಿನ ಮಧ್ಯೆ ದೆಹಲಿ ಬಿಜೆಪಿ ಮುಖಂಡ ಆಕ್ಷೇಪಾರ್ಹ ಹೇಳಿಕೆ ನೀಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.
‘ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಕೆನ್ನೆಯಂತ ನೈಸ್ ರಸ್ತೆ ಮಾಡಿಸ್ತೀನಿ’
ಈ ಹಿಂದೆ ಬಿಹಾರದ ಚುನಾವಣೆ ಪ್ರಚಾರದ ವೇಳೆ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೆ ಕಾರಣರಾಗಿದ್ದರು. ಬಿಹಾರದಲ್ಲಿ ನಮ್ಮ ಪಕ್ಷ ಗೆದ್ದರೆ ನಾವು ಹೇಮಾ ಮಾಲಿನಿ ಕೆನ್ನೆಯಂತೆ ರಸ್ತೆಗಳನ್ನ ಮಾಡಿಸುತ್ತೇವೆ ಅಂತ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಬಿಜೆಪಿ ನಾಯಕ ರಮೇಶ್ ಬಿಧುರಿ ಕೂಡ ಪ್ರಿಯಾಂಕಾ ಗಾಂಧಿ ಕೆನ್ನೆ ವಿಚಾರ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲ್ಕಾಜಿಯಲ್ಲಿನ ಅಭಿವೃದ್ಧಿ ಕೇಂದ್ರದ ಮುಂದೆ, ಒಳಗೆ, ಹೊರಗಿರುವ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಯ ಹಾಗೆ ಮಾಡುತ್ತೇವೆ. ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಹೇಳಿದ್ದರು. ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ಮಾಡುತ್ತೇನೆ ಎಂದು. ಲಾಲು ಸುಳ್ಳು ಹೇಳಿದ್ರು, ಮಾಡೋದಕ್ಕೆ ಆಗಿಲ್ಲ. ಆದ್ರೆ ನಾನು ನಿಮಗೆ ಒಂದು ಭರವಸೆ ನೀಡುತ್ತೇನೆ. ಕಲ್ಕಾಜಿಯಲ್ಲಿನ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ಮಾಡುತ್ತೇವೆ.
ರಮೇಶ್ ಬಿಧುರಿ, ಬಿಜೆಪಿ ನಾಯಕ
ರಮೇಶ್ ಬಿಧುರಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಇನ್ನು ಚುನಾವಣೆ ಪ್ರಚಾರದ ಮಧ್ಯೆ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕುರಿತ ವಿವಾದಾತ್ಮಕ ಹೇಳಿಕೆಗೆ ಹಸ್ತ ಪಡೆ ಕೆಂಡವಾಗಿದೆ. ಬಿಧುರಿ ವಿರುದ್ಧ ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಇನ್ನು ತಮ್ಮ ಹೇಳಿಕೆಗೆ ವ್ಯಾಪಕ ವಿರೋಧಕ್ಕೆ ತುತ್ತಾಗುತ್ತಲೇ ಬಿಜೆಪಿ ನಾಯಕ ರಮೇಶ್ ಬಿಧುರಿ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಪ್ರಪಾತಕ್ಕೆ ಉರುಳಿ ಬಿದ್ದ ಮತ್ತೊಂದು ಸೇನಾ ವಾಹನ.. ಯೋಧರು ಹುತಾತ್ಮ
ಕೆಲವು ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆಯನ್ನು ಆಧರಿಸಿ ಕೆಲವರು ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಗ್ರಹಿಕೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ.
ರಮೇಶ್ ಬಿಧುರಿ, ಬಿಜೆಪಿ ನಾಯಕ
ಚುನಾವಣೆ ಹೊತ್ತಲ್ಲಿ ರಾಜಕೀಯ ನಾಯಕರ ಈ ರೀತಿಯ ಹೇಳಿಕೆಗಳು ಮೊದಲೇನಲ್ಲ. ಆದ್ರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ಮುಂಚೆ ನೋಡಿ, ಯೋಚಿಸಿ ಮಾತ್ನಾಡಬೇಕು. ಇಲ್ಲದಿದ್ರೆ ಮತದಾರರ ಕೈಯಲ್ಲೇ ಬುದ್ಧಿ ಕಲಿಯಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ