/newsfirstlive-kannada/media/post_attachments/wp-content/uploads/2025/01/RAMULU.jpg)
ರಾಜ್ಯ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದೆ. ಈ ನಡುವೆ ಪ್ರತಿ ಜಿಲ್ಲೆಯಿಂದ ಮೂವರು ನಾಯಕರ ಹೆಸರುಗಳನ್ನು ಶಿಫಾರಸು ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿ, ಪಟ್ಟಿ ನೀಡಿದೆ. ಈ ಜವಾಬ್ದಾರಿಯನ್ನು ಕೆಲ ನಾಯಕರಿಗೆ ಒಪ್ಪಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯ ಕೋರ್ ಕಮಿಟಿ ಸಭೆ ಬಳಿಕ ನಾಯಕರೆಲ್ಲಾ ಒಂದೆಡೆ ಸೇರಿ ಮಹತ್ವದ ಸಭೆ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಸೂಚನೆಯಂತೆ ಕಳೆದ ರಾತ್ರಿ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ನಿವಾಸದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಅಶ್ವತ್ಥ್ ನಾರಾಯಣ ಭಾಗಿಯಾಗಿದ್ದರು. ರಾಜ್ಯ ಬಿಜೆಪಿಯಲ್ಲಿನ ಆತಂರಿಕ ಗೊಂದಲ, 39 ಸಂಘಟನಾತ್ಮಕ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಇವತ್ತು ಮತ್ತೊಂದು ಸುತ್ತಿನ ಸಭೆ ನಡೆಸಿ, ಅಂತಿಮ ವರದಿಯನ್ನು ಹೈಕಮಾಂಡ್ಗೆ ರವಾನೆ ಮಾಡಲಿದ್ದಾರೆ.
‘ಸುಖಾಂತ್ಯಗೊಳ್ಳುವ ವಿಶ್ವಾಸ ಇದೆ’
ಮತ್ತೊಮ್ಮೆ ಕುಳಿತು ಪಟ್ಟಿಯನ್ನು ವಿಮರ್ಶೆ ಮಾಡಿ, ಎಲ್ಲ ಕೂಡ ಸಹಮತದಲ್ಲಿ ನಡೆಯುವಂತೆ ಆಗಲಿ. ಪ್ರತ್ಯೇಕವಾಗಿ ಕುಳಿತು ಚರ್ಚೆ ಮಾಡಿ ಎಂದು ಅಗರ್ವಾಲ್ ಹೇಳಿದ್ದರು. ಅದರಂತೆ ನಾವೆಲ್ಲಾ ಕುಳಿತು ಚರ್ಚೆ ಮಾಡಿ ಮಾಹಿತಿ ಕಲೆ ಹಾಕಿ ವರದಿಯನ್ನು ಕೇಂದ್ರದ ವರಿಷ್ಠರಿಗೆ ಕಳಿಸಿಕೊಡುತ್ತೇವೆ.
ಡಿ.ವಿ.ಸದಾನಂದಗೌಡ, ಮಾಜಿ ಸಿಎಂ
‘ಸಂಜೆಯೊಳಗೆ ವರದಿಕೊಡುತ್ತೇವೆ’
ರಾಜ್ಯದಲ್ಲಿ ಒಮ್ಮತವಾದ ಜಿಲ್ಲಾಧ್ಯಕ್ಷರ ಆಯ್ಕೆ ಆಗಬೇಕು ಎಂದು ಅಗರ್ವಾಲ್ ಅವರು ಸೂಚನೆ ಕೊಟ್ಟಿದ್ದಾರೆ. ಸೂಕ್ತವಾದ ಅಭ್ಯರ್ಥಿಗಳು ಇರಬೇಕೆಂದು ಪಟ್ಟಿ ಕೂಡ ಕಳಿಸಿಕೊಟ್ಟಿದ್ದಾರೆ. ಆ ಪಟ್ಟಿಯಲ್ಲಿ ಯಾರು ಯಾರು ಸೂಕ್ತ ಎನ್ನುವುದನ್ನು 2 ದಿನದಲ್ಲಿ ತಿಳಿಸಿ ಎಂದು ಕೇಳಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ಯಾರು ಆಗಬೇಕು ಎಂದು ಚರ್ಚೆ ಮಾಡಬೇಕು. ಹೆಸರುಗಳನ್ನು ಕೇಂದ್ರದ ನಾಯಕರ ಸೂಚನೆ ಮೇರೆಗೆ ಕೊಡುತ್ತಿದ್ದೇವೆ.
ಆರ್.ಅಶೋಕ್, ವಿಪಕ್ಷ ನಾಯಕ
ಜಿಲ್ಲಾಧ್ಯಕ್ಷರ ಪೈಪೋಟಿ ಒಂದೆಡೆಯಾದ್ರೆ, ಬಿಜೆಪಿ ಒಳಗಿನ ಆತಂರಿಕ ಕಿತ್ತಾಟ ಮತ್ತೆ ಭುಗಿಲೆದಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಬಿ.ಶ್ರೀರಾಮುಲು ಆಕ್ರೋಶ ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ರಾಮುಲು ಬಿಜೆಪಿಯನ್ನು ತೊರೆಯುತ್ತಾರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ನಾಯಕರು, ರಾಮುಲು ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಇಂದು ಬೆಂಗಳೂರಿಗೆ ಶ್ರೀರಾಮುಲು ಆಗಮಿಸುತ್ತಿದ್ದು, ಮಾತುಕತೆ ನಡೆಸುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಮತ್ತೊಂದೆಡೆ ಜನಾರ್ದನ ರೆಡ್ಡಿ ಕೂಡ ಇವತ್ತು ಮಾಧ್ಯಮಗೋಷ್ಠಿ ನಡೆಸುವ ಸಾಧ್ಯತೆ ಇದೆ. ರಾಮುಲು ಆರೋಪಕ್ಕೆ ಗಣಿಧಣಿಯ ಉತ್ತರ ಹೇಗಿರುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?
ಪಕ್ಷ ಇನ್ನು ಮುಂದೆ ಹೇಗೆ ಹೋಗಬೇಕು ಎನ್ನುವುದು ಬಿಟ್ಟರೇ ಯಾವುದೇ ಚರ್ಚೆ ಆಗಿಲ್ಲ. ಶ್ರೀರಾಮುಲು ಅವರ ಮನೆಯಲ್ಲಿ ಏನೋ ಪೂಜೆ ಇದೆಯಂತೆ. ಈ ಪೂಜೆ ಆದ ಮೇಲೆ ಅವರು ಬೆಂಗಳೂರಿಗೆ ಬರುತ್ತಾರೆ. ಬಳಿಕ ಅವರ ಜೊತೆ ಮಾತನಾಡುತ್ತೇವೆ. ಅವರದ್ದು ಸಮಸ್ಯೆ ಆಗಲ್ಲ ಅಂತ ಅನಿಸುತ್ತೆ.
ಆರ್.ಅಶೋಕ್, ವಿಪಕ್ಷ ನಾಯಕ
ಬಿಜೆಪಿಯಲ್ಲಿ ಬಳ್ಳಾರಿ ಬಣ ಬಡಿದಾಟದ ಬಾಣ ಬಾಂಬ್ನಂತೆ ಸಿಡಿದಿದ್ದು, ಈ ರೋಷಾಗ್ನಿ ತಣ್ಣಗೆ ಮಾಡಲು ಹರಸಾಹಸ ನಡೆದಿದೆ. ಇದರ ನಡುವೆ ಜಿಲ್ಲಾಧ್ಯಕ್ಷರ ಆಯ್ಕೆಗೂ ಕಸರತ್ತು ಜೋರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ