ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್​ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ

author-image
Bheemappa
Updated On
ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್​ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ
Advertisment
  • ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ದುರ್ಬಳಕೆ ತಡೆಗೆ ನಿರ್ದೇಶನಗಳು
  • ಹೆಂಡತಿ ವರದಕ್ಷಿಣೆ ಕಿರುಕುಳ ದೂರು ನೀಡಿದ ತಕ್ಷಣ ಬಂಧಿಸುವಂತಿಲ್ಲ
  • ಕುಟುಂಬದ ಎಲ್ಲ ಸದಸ್ಯರು ಕೋರ್ಟ್​ಗೆ ಹಾಜರಾಗುವ ಅಗತ್ಯವಿಲ್ಲ

ನಮ್ಮ ದೇಶದಲ್ಲಿ ಕೆಲವು ಕಾನೂನುಗಳು ಸದ್ಭಳಕೆಯಾದರೇ, ಇನ್ನೂ ಕೆಲವು ಕಾನೂನುಗಳು ದುರ್ಬಳಕೆ ಆಗುತ್ತಿವೆ. ಕಾನೂನಿನ ದುರ್ಬಳಕೆ ತಡೆಯಲು ಈ ಹಿಂದೆ ಪಾರ್ಲಿಮೆಂಟ್, ಸುಪ್ರೀಂಕೋರ್ಟ್ ಕೂಡ ಕ್ರಮ ಕೈಗೊಂಡಿದ್ದವು. ನಮ್ಮ ದೇಶದಲ್ಲಿ ಅತಿ ಹೆಚ್ಚು ದುರ್ಬಳಕೆಯಾದ ಕಾನೂನಿನಲ್ಲಿ ಆಗ್ರ ಸ್ಥಾನದಲ್ಲಿ ಇರೋದು ವರದಕ್ಷಿಣೆ ಕಿರುಕುಳ ತಡೆ ಕಾಯಿದೆ.

ವಿವಾಹಿತ ಮಹಿಳೆಯು ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಹಿಂಸೆ, ನೋವು ಅನುಭವಿಸುವುದನ್ನು ತಡೆಯಲು ಈ ಕಾಯಿದೆ ಜಾರಿಗೆ ತರಲಾಗಿತ್ತು. ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ ಪತಿಯಂದಿರನ್ನು ಶಿಕ್ಷಿಸುವುದು ಈ ಕಾಯ್ದೆಯ ಉದ್ದೇಶ. ಹೀಗಾಗಿ ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಯರು ಬಿಎನ್​ಎಸ್ ಸೆಕ್ಷನ್ 85(ಎ) ಅಡಿ ಕೇಸ್ ದಾಖಲಿಸಲು ಅವಕಾಶ ನೀಡಲಾಗಿತ್ತು.

publive-image

ಬಿಎನ್​ಎಸ್ ಸೆಕ್ಷನ್ 85  ಸೆಕ್ಷನ್​ ಬಗ್ಗೆ ಗಂಡಂದಿರಗೆ ಭಯ ಬೇಡ

ಆದರೇ, ಈ 498(ಎ) ಸೆಕ್ಷನ್ ಹೆಸರು ಹೇಳಿಯೇ ಗಂಡ, ಗಂಡನ ಮನೆಯವರನ್ನು ಬೆದರಿಸುವ, ಹಿಂಸಿಸುವ, ಹಣ, ಆಸ್ತಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ, ಕಿರುಕುಳ ನೀಡಿದ ಅನೇಕ ಕೇಸ್​ಗಳು ದೇಶದಲ್ಲಿ ನಡೆದಿವೆ. 498(ಎ) ಸೆಕ್ಷನ್ ಹೆಸರು ಕೇಳಿದರೂ, ಗಂಡಂದಿರುವ ನಡುಗುವ ಕಾಲವೂ ಇತ್ತು. ಈ ಸೆಕ್ಷನ್‌ನಡಿಯೇ ದೂರು ನೀಡಿದ ತಕ್ಷಣವೇ ಪೊಲೀಸರು ಗಂಡ, ಗಂಡನ ಮನೆಯವರನ್ನೆಲ್ಲಾ ಬಂಧಿಸಿ ಜೈಲಿಗೆ ಕಳಿಸಿಬಿಡುತ್ತಿದ್ದರು. ತಪ್ಪು ಮಾಡದಿದ್ದರೂ, ಗಂಡ, ಗಂಡನ ಮನೆಯವರು ಜೈಲು ಪಾಲಾಗಿ ತಮ್ಮ ಮಾನ, ಮರ್ಯಾದೆ ಕಳೆದುಕೊಳ್ಳಬೇಕಾಗಿತ್ತು. ಐಪಿಸಿ 498 ಎ ಸೆಕ್ಷನ್ ಅನ್ನು ಈಗ ಬಿಎನ್​ಎಸ್​ ಕಾಯ್ದೆಯಲ್ಲಿ ಸೆಕ್ಷನ್ 85 ಆಗಿ ಬದಲಾಯಿಸಲಾಗಿದೆ. ಈ ವರದಕ್ಷಿಣೆ ಕಿರುಕುಳ ಕೇಸ್​ಗಳನ್ನು ಬಿಎನ್​ಎಸ್​ ಸೆಕ್ಷನ್ 85 ಅಡಿಯಲ್ಲಿ ದಾಖಲಿಸಲಾಗುತ್ತದೆ.

ಹೀಗೆ ಈ ಕಾಯ್ದೆಯು ಕಳೆದ 10-15 ವರ್ಷಗಳಲ್ಲಿ ಭಾರಿ ದುರ್ಬಳಕೆಯಾಗಿದೆ. ಹೀಗಾಗಿಯೇ ಸುಪ್ರೀಂಕೋರ್ಟ್ ಈ ಕಾಯಿದೆ ದುರ್ಬಳಕೆಯಾಗುತ್ತಿದೆ ಅಂತ ಅನೇಕ ಭಾರಿ ತನ್ನ ತೀರ್ಪುಗಳಲ್ಲಿ ಹೇಳಿದೆ. ಜೊತೆಗೆ 2017 ಜುಲೈ 27 ರಂದೇ ವರದಕ್ಷಿಣೆ ಕಿರುಕುಳ ಕಾಯಿದೆಯ ದುರ್ಬಳಕೆ ತಡೆಗೆ ದೇಶದ ಎಲ್ಲ ರಾಜ್ಯಗಳ ಪೊಲೀಸರಿಗೆ ಸುಪ್ರೀಂಕೋರ್ಟ್ ಕೆಲ ಮಹತ್ವದ ನಿರ್ದೇಶನಗಳನ್ನು ನೀಡಿದೆ.

ಪೊಲೀಸರು ಕೂಡ ಇದನ್ನೂ ಪಾಲಿಸಲೇಬೇಕು

ಹೀಗಾಗಿ ನಿಮ್ಮ ನಿಮ್ಮ ಮನೆಗಳಲ್ಲಿ, ನಿಮ್ಮ ಸಂಬಂಧಿಕರು, ಪರಿಚಯಸ್ಥರು, ಸ್ನೇಹಿತರ ಕುಟುಂಬಗಳಲ್ಲಿ ಯಾರಾದರೂ ವಿವಾಹಿತ ಮಹಿಳೆ ವರದಕ್ಷಿಣೆ ಕಿರುಕುಳ ತಡೆ ಕಾಯಿದೆ ದುರ್ಬಳಕೆ ಮಾಡಿಕೊಳ್ಳುವುದು ಕಂಡು ಬಂದರೇ, ಸುಳ್ಳು ಕೇಸ್ ಹಾಕಿ, ಗಂಡನ ಮನೆಯವರನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಸಿದರೇ, ಹೆದರಬೇಡಿ. ಸುಪ್ರೀಂಕೋರ್ಟ್​ನ ಈ ನಿರ್ದೇಶನದ ಬಗ್ಗೆ ತಿಳಿಸಿ. ಹೆದರುವ ಅಗತ್ಯವೇ ಇಲ್ಲ. ಸುಳ್ಳು ಕೇಸ್​ನಿಂದ ಗಂಡ ಹಾಗೂ ಗಂಡನ ಮನೆಯವರನ್ನು ರಕ್ಷಿಸುವ ನಿರ್ದೇಶನವನ್ನು ಸುಪ್ರೀಂಕೋರ್ಟ್ 8 ವರ್ಷದ ಹಿಂದೆಯೇ ನೀಡಿದೆ. ಸುಪ್ರೀಂಕೋರ್ಟ್​ನ ಈ ನಿರ್ದೇಶನವನ್ನು ಕರ್ನಾಟಕದ ರಾಜ್ಯದ ಪೊಲೀಸರು ಸೇರಿದಂತೆ ಎಲ್ಲ ರಾಜ್ಯಗಳ ಪೊಲೀಸರು ಕೂಡ ಪಾಲಿಸಲೇಬೇಕು. ಪಾಲಿಸದೇ ಇದ್ದರೇ, ಸುಪ್ರೀಂಕೋರ್ಟ್ ಆದೇಶದ ಉಲಂಘನೆಯಾಗಿದೆ ಎಂದು ಅಂಥ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬಹುದು.

publive-image

ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ದುರ್ಬಳಕೆ ತಡೆಗೆ ಸುಪ್ರಿಂಕೋರ್ಟ್ ಕೊಟ್ಟ ನಿರ್ದೇಶನಗಳು

ಪೊಲೀಸರು, ವರದಕ್ಷಿಣೆ ಕಿರುಕುಳದ ದೂರು ಅನ್ನು ವಿವಾಹಿತ ಮಹಿಳೆ ನೀಡಿದ ತಕ್ಷಣ ಆರೋಪಿಗಳನ್ನು ಬಂಧಿಸುವಂತಿಲ್ಲ. ಆರೋಪಿಗಳ ವಿರುದ್ಧದ ಆರೋಪಗಳನ್ನು ಪೊಲೀಸರು ಕೂಲಂಕುಷವಾಗಿ ಪರಿಶೀಲಿಸಬೇಕು.

ಪ್ರತಿಯೊಂದು ಜಿಲ್ಲೆಯಲ್ಲೂ ಪೊಲೀಸ್ ಠಾಣೆಗಳಲ್ಲಿ ಕುಟುಂಬ ಕಲ್ಯಾಣ ಸಮಿತಿಗಳನ್ನೂ ರಚಿಸಬೇಕು. ಈ ಸಮಿತಿಗಳಲ್ಲಿ ಕೌಟುಂಬಿಕ ವ್ಯಾಜ್ಯದ ಬಗ್ಗೆ ಅರಿವು ಹೊಂದಿರುವವರು ಇರಬೇಕು. ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಈ ಕುಟುಂಬ ಕಲ್ಯಾಣ ಸಮಿತಿಯು ದೂರು ನೀಡಿದ ಮಹಿಳೆ ಹಾಗೂ ಗಂಡ, ಗಂಡನ ಮನೆಯವರನ್ನು ಕರೆದು ಮಾತನಾಡಬೇಕು. ಕೌನ್ಸಿಲಿಂಗ್ ಮಾಡಬೇಕು. ವಾಸ್ತವಾಂಶಗಳನ್ನು ಸಮಿತಿ ತಿಳಿದುಕೊಳ್ಳಬೇಕು. ನಿಜಕ್ಕೂ ವರದಕ್ಷಿಣೆ ಕಿರುಕುಳ ನೀಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.

ದೂರಿನ ಬಗ್ಗೆ ಪೊಲೀಸರು ಆರೋಪಿಗಳಿಗೆ ನೋಟೀಸ್ ನೀಡಿ, ಉತ್ತರ ನೀಡಲು ಕಾಲಾವಕಾಶ ನೀಡಬೇಕು.

ಕುಟುಂಬ ಕಲ್ಯಾಣ ಸಮಿತಿಯ ಕಾರ್ಯನಿರ್ವಹಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಆಗ್ಗಾಗ್ಗೆ ಪರಿಶೀಲಿಸಬೇಕು.

ಕುಟುಂಬ ಕಲ್ಯಾಣ ಸಮಿತಿಯು ತಮಗೆ ಬಂದ ದೂರುಗಳನ್ನು ಪರಿಶೀಲಿಸಿ, ವಾಸ್ತವಾಂಶದ ಬಗ್ಗೆ ಪೊಲೀಸ್ ಇಲಾಖೆಗೆ, ಪೊಲೀಸ್ ತನಿಖಾಧಿಕಾರಿಗೆ ವರದಿ ನೀಡಬೇಕು. ಕೇಸ್‌ನ ಮೆರಿಟ್ ಬಗ್ಗೆ ವರದಿ ನೀಡಬೇಕು.

ಕುಟುಂಬ ಕಲ್ಯಾಣ ಸಮಿತಿಯು ಮಹಿಳೆಯ ದೂರು ಅನ್ನು ಪರಿಶೀಲಿಸಿ, 2 ಕಡೆವರನ್ನು ಕರೆದು ಮಾತನಾಡಿದ ಬಳಿಕ ವರದಿ ಪೊಲೀಸರಿಗೆ ಇಲ್ಲವೇ ಮ್ಯಾಜಿಸ್ಟ್ರೇಟ್​ಗೆ ಸಲ್ಲಿಸಬೇಕು. ಸಮಿತಿಯು ವರದಿ ಸಲ್ಲಿಸುವವರೆಗೆ ಗಂಡ, ಗಂಡನ ಮನೆಯವರನ್ನು ಪೊಲೀಸರು ಬಂಧಿಸುವಂತಿಲ್ಲ.

publive-image

ತನಿಖಾಧಿಕಾರಿಗೆ ತರಬೇತಿ
ವರದಕ್ಷಿಣೆ ಕೇಸ್​ಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೂ ಕನಿಷ್ಠ ಒಂದು ವಾರ ಸೂಕ್ತ ತರಬೇತಿಯನ್ನು ನೀಡಬೇಕು.

ಬೇಲ್ ಅರ್ಜಿ ವಿಚಾರ

ಸೆಟ್ಲಮೆಂಟ್ ಮಾಡಿಕೊಳ್ಳಲು 2 ಕಡೆಯವರು ಒಪ್ಪಿದರೇ, ಅಂಥ ಕೇಸ್​ಗಳನ್ನು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜಡ್ಜ್ ವಿಲೇವಾರಿ (Case dispose) ಮಾಡಬೇಕು. ವೈವಾಹಿಕ ಸಮಸ್ಯೆಯಿಂದ ಯಾವುದೇ ಕ್ರಿಮಿನಲ್ ಕೇಸ್ ದಾಖಲಿಸಿದ್ದರೇ, ಅಂಥ ಕ್ರಿಮಿನಲ್ ಕೇಸ್​ಗಳನ್ನು ಕ್ಲೋಸ್ ಮಾಡುವುದು ಕೂಡ ಕೇಸ್ ವಿಲೇವಾರಿಯಲ್ಲಿ ( case disposal) ಸೇರಿರುತ್ತೆ.

ವರದಕ್ಷಿಣೆ ಕೇಸ್​ನಲ್ಲಿ ಬೇಲ್ ಕೋರಿ ಅರ್ಜಿ ಸಲ್ಲಿಸಿದರೇ, ಪಬ್ಲಿಕ್ ಪ್ರಾಸಿಕ್ಯೂಟರ್, ಅರ್ಜಿದಾರರಿಗೆ 1 ದಿನದ ನೋಟೀಸ್ ನೀಡಬೇಕು. ಬಳಿಕ ಅಂದೇ ಜಾಮೀನು ಅರ್ಜಿ ಬಗ್ಗೆ ಆದೇಶ ನೀಡಬೇಕು.

ವಿವಾದಿತ ವರದಕ್ಷಿಣೆಯನ್ನು ವಶಪಡಿಸಿಕೊಂಡಿರುವುದು ಜಾಮೀನು ನಿರಾಕರಿಸಲು ಕಾರಣವಾಗಬಾರದು.

ಜಾಮೀನು ಅರ್ಜಿಗಳಲ್ಲಿ ನ್ಯಾಯದ ಹಿತಾಸಕ್ತಿಯನ್ನು ಎಚ್ಚರಿಕೆಯಿಂದ ಪರಿಗಣನೆಗೆ ತೆಗೆದುಕೊಳ್ಳಬೇಕು.

ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದ ಎಲ್ಲ ಸಂಬಂಧಿತ ಕೇಸ್​ಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಬಹುದು.

ಕುಟುಂಬದ ಎಲ್ಲ ಸದಸ್ಯರು, ನಗರದಿಂದ ಹೊರಗಿರುವವರು ಖುದ್ದಾಗಿ ಕೋರ್ಟ್​ಗೆ ಹಾಜರಾಗುವ ಅಗತ್ಯವಿಲ್ಲ.

ಇದನ್ನೂ ಓದಿ:ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ದಿನ ಮುಂದೂಡಿಕೆ.. ಕಾರಣವೇನು?

publive-image

ವರದಕ್ಷಿಣೆ ತಡೆ ಕಾಯಿದೆಯ ದುರ್ಬಳಕೆಗೆ ಬ್ರೇಕ್

ಹೀಗೆ ಸುಪ್ರೀಂ ಕೋರ್ಟ್ ಪೊಲೀಸರು, ಕೆಳ ಹಂತದ ನ್ಯಾಯಾಲಯಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ವರದಕ್ಷಿಣೆ ತಡೆ ಕಾಯಿದೆಯ ದುರ್ಬಳಕೆಗೆ ಬ್ರೇಕ್ ಹಾಕಿದೆ. 8 ವರ್ಷದ ಹಿಂದಿನವರೆಗೂ ನಮ್ಮ ದೇಶದಲ್ಲಿ ಯಾರಾದರೂ ವರದಕ್ಷಿಣೆ ಕೇಸ್ ನೀಡಿದರೇ, ಗಂಡ, ಗಂಡನ ಮನೆಯವರು ಮನೆ ಬಿಟ್ಟು, ಊರು ಬಿಟ್ಟು ಬಂಧನದ ಭಯದಿಂದ ಪರಾರಿಯಾಗುತ್ತಿದ್ದರು. ಈಗ ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ಅಂಥ ಸ್ಥಿತಿ ಇಲ್ಲ. ದೇಶದಲ್ಲಿ ಶೇ.85 ರಷ್ಟು ವರದಕ್ಷಿಣೆ ಕಿರುಕುಳ ಕೇಸ್​ಗಳು ಕೋರ್ಟ್​ನಲ್ಲಿ ಸಾಬೀತಾಗಿಲ್ಲ. ಹೀಗಾಗಿಯೇ ಸುಪ್ರೀಂಕೋರ್ಟ್ ಈ ಕಾಯಿದೆ, 498(ಎ) ಸೆಕ್ಷನ್ ದುರ್ಬಳಕೆ ಆಗುತ್ತಿದೆ ಎಂಬ ವ್ಯಾಪಕ ದೂರುಗಳ ಹಿನ್ನಲೆಯಲ್ಲಿ ಈ ಎಲ್ಲ ಮೇಲಿನ ನಿರ್ದೇಶನಗಳನ್ನು ಪೊಲೀಸರಿಗೆ, ಕೆಳ ಹಂತದ ಕೋರ್ಟ್​ಗಳಿಗೆ ನೀಡಿದೆ.

ಕಾನೂನು ದುರ್ಬಳಕೆಯ ವಿರುದ್ಧ ಗಂಡ ದೂರು ನೀಡಬಹುದು

ವರದಕ್ಷಿಣೆ ತಡೆ ಕಾಯಿದೆಯನ್ನು ನೊಂದ ಮಹಿಳೆಯರ ಸಹಾಯಕ್ಕಾಗಿ ಜಾರಿಗೆ ತರಲಾಗಿತ್ತು. ಆದರೇ, ಕಾಯಿದೆಯನ್ನು ಕೆಲ ಅಸಂತುಷ್ಟ ಮಹಿಳೆಯರು, ಗಂಡ, ಗಂಡನ ಮನೆಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಸ್ತ್ರವಾಗಿ ಬಳಕೆ ಮಾಡಿದ್ದರು. ಹೀಗಾಗಿ ಇದಕ್ಕೆ ಬ್ರೇಕ್ ಹಾಕಲು ಸುಪ್ರೀಂಕೋರ್ಟ್ ಈ ಮೇಲಿನ ನಿರ್ದೇಶನಗಳನ್ನು ನೀಡಿದೆ. ಹೀಗಾಗಿ ಇನ್ನೂ ಮುಂದೆ ಯಾವುದೇ ಮಹಿಳೆ ವರದಕ್ಷಿಣೆ ಕೇಸ್ ಹಾಕಿ ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ, ನನಗೆ ನಿಮ್ಮ ಮನೆಯ ಹಣ, ಆಸ್ತಿ ಕೊಡಿ , ಕೊಡದಿದ್ದರೇ, ವರದಕ್ಷಿಣೆ ಕೇಸ್ ಹಾಕುತ್ತೇನೆ ಎಂದು ಹೇಳಿದರೇ, ಹೆದರುವ ಅಗತ್ಯವಿಲ್ಲ. ಕಾನೂನು ದುರ್ಬಳಕೆಯ ವಿರುದ್ಧವೂ ಗಂಡ, ಗಂಡನ ಮನೆಯವರು ಪೊಲೀಸರಿಗೆ ದೂರು ನೀಡಿ, ಸುಳ್ಳು ಕೇಸ್​ನಿಂದ ರಕ್ಷಣೆ ಪಡೆಯಬಹುದು. ಜನರಿಗೆ ಈ ಎಲ್ಲ ಕಾನೂನುಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದು ಮುಖ್ಯ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment