/newsfirstlive-kannada/media/post_attachments/wp-content/uploads/2025/07/VICKY_KOUSHAL_2.jpg)
ಒಂದು ಸಮಯದಲ್ಲಿ ತಿಂಗಳಿಗೆ ಕೇವಲ 350 ರೂಪಾಯಿ ಸಂಪಾದನೆ ಮಾಡಿ ದಿನಕ್ಕೆ ಒಂದು ರೂಪಾಯಿ ಊಟಕ್ಕೆ ಖರ್ಚು ಮಾಡ್ತಿದ್ದ ಸಾಹಸ ಕಲಾವಿದರೊಬ್ಬರು ಈಗ ಕೋಟಿ ಕೋಟಿ ಹಣ ಗಳಿಸಿದ್ದಾರೆ. ಕೇವಲ 3000 ರೂಪಾಯಿಗಳೊಂದಿಗೆ ಮುಂಬೈ ನಗರದಲ್ಲಿ ಜೀವನ ಆರಂಭಿಸಿದ್ದ ಆಕ್ಷನ್ ಡೈರೆಕ್ಟರ್ ಕಷ್ಟಗಳೊಂದಿಗೆ ಹೋರಾಡಿ ಈಗ​ ಕೋಟ್ಯಧೀಶ. ಇಷ್ಟೇ ಅಲ್ಲ ಈಗ ಇವರ ಮಗನ ಸಿನಿಮಾ 800 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿರೋದು ವಿಶೇಷ.
ಶ್ಯಾಮ್ ಕೌಶಲ್​ ಸದ್ಯ ಬಾಲಿವುಡ್​ ಅಂಗಳದ ಆಕ್ಷನ್​ ಡೈರೆಕ್ಟರ್​. ಇವರು 1978ರಲ್ಲಿ ಮುಂಬೈಗೆ ಬಂದು ಕೇವಲ 3000 ರೂಪಾಯಿ ಇಂದ ಜೀವನ ಆರಂಭಿಸುತ್ತಾರೆ. ತಿಂಗಳಿಗೆ 350 ರೂಪಾಯಿ ಕೊಡುವ ಕೆಲಸವೊಂದನ್ನು ಹುಡುಕಿದರು. ಇದಕ್ಕಾಗಿ ಎರಡು ಬಸ್ಸು ಹಾಗೂ ಎರಡು ಟ್ರೈನ್​ಗಳನ್ನು ಬದಲಿಸಿ ಕೆಲಸದ ಸ್ಥಳ ಚೆಂಬೂರಿಗೆ ಬರತ್ತಿದ್ದರು. ಮಧ್ಯಾಹ್ನದ ಊಟ ಹಾಗು ಸಂಜೆ ಊಟ ಈ ಎರಡನ್ನು ಕೇವಲ 1 ರೂಪಾಯಿಯಲ್ಲಿ ಮಾಡುತ್ತಿದ್ದರು. ಎಷ್ಟೋ ಸಮಯ ಹಸಿವಾದಾಗ ಆಗ ಕೆಲವೇ ಪೈಸೆಗೆ ಸಿಗುತ್ತಿದ್ದ ಮಿಸಾಲ ಪಾವ್ ಮತ್ತು ಬಟಾಟ ವಡಾ ತಿಂದು ಜೀವ ನಡೆಸಿದ್ದರು.
ಬಾಡಿಗೆ ಕಟ್ಟಲಾಗದೇ ಇದ್ದಿದ್ದಕ್ಕೆ ಜಾಗ ಖಾಲಿ ಮಾಡಿಸಿದರು. ಹೀಗಾಗಿ ಕಚೇರಿಯಲ್ಲೇ ಉಳಿಯಲು ಪ್ರಾರಂಭಿಸಿದರು. ಇವರ ಬಳಿ ಕೆಲವೇ ಕೆಲವು ಬಟ್ಟೆಗಳಿದ್ದವು. ಘಾಟ್ಕಾಪುರ್​ಗೆ ಸ್ನೇಹಿತನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಒಂದು ವರ್ಷದ ನಂತರ ಇವರನ್ನು ಕೆಲಸದಿಂದ ತೆಗೆದರು. ಇಲ್ಲಿ ಕೆಲಸಕ್ಕೆ ತೆಗೆದಿದ್ದೇ ಇವರ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಯಿತಂತೆ. ಆದರೆ ಆಗ ಬದುಕಿನಲ್ಲಿ ಎರಡು ನಿರ್ಧಾರ ಮಾಡಿದರು. ಒಂದು ಯಾರ ಬಳಿಯೂ ಕೆಲಸ ಮಾಡಬಾರದು, ಇನ್ನೊಂದು ಮುಂಬೈ ಬಿಟ್ಟು ಹೊರಗೆ ಹೋಗಬಾರದು.
ಸಾಹಸ ಕಲಾವಿದರಾಗಿ ಕೆಲಸ ಮಾಡುತ್ತಿದ್ದ ಪಂಜಾಬಿಗಳ ಸ್ನೇಹ ಮಾಡಿಕೊಂಡರು. ಅವರೆಲ್ಲ ಸೇರಿ ಶ್ಯಾಮ್ ಕೌಶಲ್​ರನ್ನ ಸ್ಟಂಟ್​ಮ್ಯಾನ್​ ಅಸೋಷಿಯೇಷನ್​ಗೆ ಸೇರುವಂತೆ ಒತ್ತಾಯ ಮಾಡುತ್ತಾರೆ. ಹೀಗಾಗಿ 1980ರಲ್ಲಿ ಎಲ್ಲರೂ ಸೇರಿ 1000 ಹಣ ಕೂಡಿಸಿ ಶ್ಯಾಮ್ ಕೌಶಲ್​ ಅವರನ್ನ ಸೇರಿಸುತ್ತಾರೆ. ಇದು ಅವರಿಗೆ ಸಿನಿಮಾ ಕ್ಷೇತ್ರಕ್ಕೆ ಬರಲು ಸಹಾಯವಾಗುತ್ತದೆ.
ಆಗಿನ ಆಕ್ಷನ್ ಡೈರೆಕ್ಟರ್ ಆಗಿದ್ದ ವೀರ್​ ದೇವ್ಗಾನ್ ಅವರ ಕಣ್ಣಿಗೆ ಶ್ಯಾಮ್ ಕೌಶಲ್ ಬೀಳುತ್ತಾರೆ. ಇವರ ಸ್ಟಂಟ್​ಗಳನ್ನ ನೋಡಿ ತಮ್ಮಲ್ಲಿ ತಾತ್ಕಾಲಿಕ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಬಳಿಕ ಟೀ ಇಂದ ಹಿಡಿದು ಮನೆಯ ಕೆಲಸದವರೆಗೆ ಎಲ್ಲವನ್ನು ಮಾಡುತ್ತಾರೆ. ಹೀಗಾಗಿ ವೀರ್​ ದೇವ್ಗಾನ್, ಫೈಟ್​ ಸೀನ್​ನಲ್ಲಿ ಶ್ಯಾಮ್ ಕೌಶಲ್​ಗೆ ಸಿನಿಮಾದ ಆಫರ್ ಕೊಡುತ್ತಾರೆ. ಇಲ್ಲಿಂದಲೇ ಸಿನಿಮಾದಲ್ಲಿ ಆಫರ್ ಬರುತ್ತವೆ. ಇಲ್ಲಿಂದಲೇ ಹಣ ಗಳಿಕೆಯೂ ಪ್ರಾರಂಭವಾಗುತ್ತದೆ.
1983ರಲ್ಲಿ ಹೀರೋಗಳ ಸ್ಟಂಟ್​ ಹಾಗೂ ಡಬ್ಲಿಂಗ್ ಮಾಡಲು ಶುರು ಮಾಡುತ್ತಾರೆ. ಸನ್ನಿ ಡಿಯೋಲ್ ಅವರ ಬೀಟಾಬ್ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿತು. ಇದು ಕೌಶಲ್​ಗೂ ಹೆಸರು ತಂದಿತು. ಇದರಿಂದ 500 ರೂಪಾಯಿ ಸಂಭಾವನೆ ಪಡೆದರು. ಆಗ ಇದು ಅವರ ಗಳಿಕೆಯ ಐದು ಪಟ್ಟು ಆಗಿತ್ತು. 1990ರ ವೇಳೆಗೆ ಶ್ಯಾಮ್ ಕೌಶಲ್ ಜೀವನ ಉತ್ತುಂಗಕ್ಕೆ ಏರಿತು.
ಇಂದು ಬಾಲಿವುಡ್​ನ ಇಬ್ಬರು ಸ್ಟಾರ್​ ನಟರಾದ ವಿಕ್ಕಿ ಕೌಶಾಲ್ ಹಾಗೂ ಸನ್ನಿ ಕೌಶಲ್ ಅವರು ಶ್ಯಾಮ್ ಕೌಶಲ್ ಅವರ ಮಕ್ಕಳು. ಇದು ಅಲ್ಲದೇ ವಿಕ್ಕಿ ಕೌಶಲ್ ಅವರು 2021ರಲ್ಲಿ ಬಾಲಿವುಡ್​ನ ಬೆಡಗಿ ಕತ್ರಿನಾ ಕೈಫ್​ ಅವರನ್ನು ವಿವಾಹವಾಗಿದ್ದಾರೆ. ವಿಕ್ಕಿ ಕೌಶಲ್ ಸಿನಿಮಾ ರಂಗದಲ್ಲಿ ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದ್ದಾರೆ. ಇತ್ತೀಚೆಗೆ ಇವರ ಛಾವಾ ಸಿನಿಮಾ ಬರೋಬ್ಬರಿ 807.88 ಕೋಟಿ ರೂಪಾಯಿಗಳನ್ನು ಗಳಿಸಿ ದಾಖಲೆ ಸೃಷ್ಟಿಸಿದೆ. ಇದು ಕೇವಲ ವಿಕ್ಕಿ ಕೌಶಲ್ ಸಕ್ಸಸ್​ ಅಲ್ಲವೇ ಅಲ್ಲ, ಇಡೀ ಕೌಶಲ್​ ಕುಟುಂಬದ ಸಕ್ಸಸ್ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ