/newsfirstlive-kannada/media/post_attachments/wp-content/uploads/2024/07/Srikanth-Bolla-2.jpg)
ಯಾರಿಗಾದ್ರೂ ಅಂಗ ವೈಕಲ್ಯ ಇದೆ ಅಂದ್ರೆ, ನಾರ್ಮಲ್ ಆಗಿರೋ ಜನರ ಮೊದಲ ಎಕ್ಸ್​ಪ್ರೆಷನ್ ಅಯ್ಯೋ ಪಾಪ ಅನ್ನೋದು. ಛೇ ಇವ್ರಿಗೆ ಹಿಂಗಾಗಬಾರ್ದಿತ್ತು ಅಂತ ಸಿಂಪತಿ ತೋರಿಸುತ್ತಾರೆ. ಕೈಲಾದಷ್ಟು ಸಹಾಯ ಮಾಡೋರೂ ಇದ್ದಾರೆ. ಆದ್ರೆ ಆ ಅಂಗ ವೈಕಲ್ಯ ಇರೋ ವ್ಯಕ್ತಿ ಯಾರ ಮೇಲೂ ಡಿಪೆಂಡ್ ಆಗದಂತೆ ಜೀವನ ನಡೆಸೋಕೆ ಸಾಧ್ಯ ಇದೆ ಅನ್ನೋದನ್ನ ಮಾತ್ರ ಯಾರೂ ಹೇಳಲ್ಲ.
ಇವ್ರ ಹೆಸರು ಶ್ರೀಕಾಂತ್ ಬೊಲ್ಲಾ. 1991ರ ಜುಲೈ 7ರಂದು ಆಂಧ್ರಪ್ರದೇಶದ ಮಚಲಿಪಟ್ಟಣಂ ಜಿಲ್ಲೆಯ ಸೀತಾರಾಮಪುರಂನ ಕೃಷಿಕ ಕುಟುಂಬದಲ್ಲಿ ಹುಟ್ಟಿದ್ದು. ಹುಟ್ಟುತ್ತಲೇ ಕುರುಡಾಗಿದ್ದರಿಂದ, ಮಗುವೇ ಬೇಡ ಅಂತ ಶ್ರೀಕಾಂತ್​ರ ತಂದೆ, ತಾಯಿಗೆ ಸಂಬಂಧಿಕರು, ಊರವರೆಲ್ಲಾ ಹೇಳಿದ್ರಂತೆ. ನಿಮ್ಮ ಮುಪ್ಪಿನಲ್ಲಿ ಕಣ್ಣಿಲ್ಲದ ಈ ಕುರುಡ ನಿಮ್ಮನ್ನೇನು ನೋಡಿಕೊಳ್ತಾನೆ ಅಂತ ಪ್ರಶ್ನಿಸಿದ್ದರಂತೆ. ಆದ್ರೆ, ಅವರಿವರ ಮಾತಿಗೆ ಕಿವಿಗೊಟ್ಟು, ಶ್ರೀತಕಾಂತ್​ರ ಅಪ್ಪ, ಅಮ್ಮ ತಮ್ಮ ಮಗನನ್ನ ನೋಡಿಕೊಳ್ಳೋ ಜವಾಬ್ದಾರಿಯನ್ನ ಬಿಡಿಲಿಲ್ಲ.
/newsfirstlive-kannada/media/post_attachments/wp-content/uploads/2024/07/Srikanth-Bolla.jpg)
ಶ್ರೀಕಾಂತ್​ರ ಜೀವನವೇನೂ ಸುಖದ ಸುಪ್ಪತ್ತಿಗೆಯಲ್ಲಿ ಇರಲಿಲ್ಲ. ಬಡ ಕೃಷಿಕ ಕುಟುಂಬ. ಜೊತೆಗೆ ಅಪ್ಪ, ಅಮ್ಮ ಶಿಕ್ಷಣ ಕೊಡಿಸಬೇಕು ಅಂತ ಕಳಿಸಿದ್ರೂ ಶಾಲೆಯಲ್ಲಿ ಸಾಮಾನ್ಯ ಮಕ್ಕಳ ಜೊತೆ ಪಾಠ ಕಲಿಯೋ ಸವಾಲು. ಅಲ್ಲಿ ಶ್ರೀಕಾಂತ್​ರ ಕುರುಡುತನವನ್ನ ಹಂಗಿಸುತ್ತಿದ್ರೆ, ಅವಮಾನ ಸಹಿಸಿಕೊಂಡು ಇರೋದು ಆಗೋ ಮಾತಾಲ್ಲ. ಕಡೆಗೆ ಹೈದರಾಬಾದ್​ನಲ್ಲಿ ವಿಶೇಷ ಚೇತನರಿಗಾಗಿಯೇ ಇರೋ ಶಾಲೆಗೆ ಅಪ್ಪ, ಅಮ್ಮ ಶ್ರೀಕಾಂತ್​ರನ್ನ ಸೇರಿಸುತ್ತಾರೆ. ಓದಿನಲ್ಲಿ ಅದ್ಭುತವಾಗಿದ್ದ ಶ್ರೀಕಾಂತ್ ಬೊಲ್ಲಾ, 10ನೇ ತರಗತಿಯಲ್ಲಿ ತಗೊಂಡಿದ್ದು ಬರೋಬ್ಬರಿ 90 ಪರ್ಸೆಂಟ್.
ಎಷ್ಟೋ ಜನ ಕನಸು ಕಾಣುವ ಮಾರ್ಕ್ಸ್​​ನ, ಕಣ್ಣೇ ಕಾಣದ ಶ್ರೀಕಾಂತ್ ಬೊಲ್ಲಾ ತಗೊಂಡು, ಸಾಧಿಸಿ ತೋರಿಸಿದ್ರೂ, ಅವ್ರಿಷ್ಟ ಪಟ್ಟ ಸೈನ್ಸ್ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಸಿಗೋದಿಲ್ಲ. ಕಣ್ಣು ಕಾಣದವರಿಗೆ ಸೈನ್ಸ್ ವಿಭಾಗವನ್ನ ಕೊಡೋಕೆ ಅವಕಾಶವಿಲ್ಲ ಅಂತ ಕಾಲೇಜುಗಳು ಶ್ರೀಕಾಂತ್​ರ ಅರ್ಜಿಯನ್ನ ತಳ್ಳಿಹಾಕಿದ್ವು. ಬೇಕಿದ್ರೆ ಆರ್ಟ್ಸ್, ಕಾಮರ್ಸ್ ವಿಭಾಗದಲ್ಲಿ ಅವಕಾಶ ಕೊಡ್ತೀವಿ ಅನ್ನೋ ಸಹಾನುಭೂತಿ ತೋರಿಸಿದ್ವು. ಆದ್ರೆ, ಛಲ ಬಿಡದ ಶ್ರೀಕಾಂತ್, ನನಗೆ ವಿಜ್ಞಾನ ವಿಷಯವೇ ಬೇಕು ಅಂತ ಕೋರ್ಟ್ ಮೆಟ್ಟಿಲೇರುತ್ತಾರೆ. ಕಟಕಟೆಯಲ್ಲಿ ತಮ್ಮ ಛಲವನ್ನ ಸಾಧಿಸುವ ಶ್ರೀಕಾಂತ್, ಆಂಧ್ರಪ್ರದೇಶದಲ್ಲಿ ಸೈನ್ಸ್ ಸ್ಟ್ರೀಮ್​ನಲ್ಲಿ ಅಡ್ಮಿಷನ್ ಪಡೆದ ಮೊಟ್ಟ ಮೊದಲ ದೃಷ್ಟಿ ರಹಿತ ವಿದ್ಯಾರ್ಥಿ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂರ ಕನಸು ಲೀಡ್ ಇಂಡಿಯಾ 2020 ಮೂಮೆಂಟ್​ನಲ್ಲಿ ಶ್ರೀಕಾಂತ್ ಭಾಗಿಯಾಗಿದ್ರು. ಈ ವೇಳೆ ಮುಂದೆ ನೀನೇನಾಗ್ತೀಯಾ ಅನ್ನೋ ಪ್ರಶ್ನೆಗೆ ಶ್ರೀಕಾಂತ್​ರ ಉತ್ತರ ಕಲಾಂ ಕೂಡ ತಲೆದೂಗುವಂತೆ ಮಾಡಿತ್ತು. ನಾನು ಭಾರತದ ಮೊದಲ ಅಂಧ ರಾಷ್ಟ್ರಪತಿಯಾಗುತ್ತೇನೆ ಅಂತ ಶ್ರೀಕಾಂತ್ ಉತ್ತರಿಸಿದ್ರು.
/newsfirstlive-kannada/media/post_attachments/wp-content/uploads/2024/07/Srikanth-Bolla-1.jpg)
ಶ್ರೀಕಾಂತ್​ರ ಹೋರಾಟದ ಬದುಕು ಇಲ್ಲಿಗೆ ಮುಗಿಯೋದಿಲ್ಲ. ಸೈನ್ಸ್ ವಿಭಾಗದಲ್ಲಿ 98 ಪರ್ಸೆಂಟ್ ಮಾರ್ಕ್ಸ್ ತಗೊಂಡು, ಇಂಜಿನಿಯರಿಂಗ್ ಮಾಡೋಕೆ ಅಂತ ಐಐಟಿ ಕೋಚಿಂಗ್​ಗೆ ಅರ್ಜಿ ಹಾಕ್ತಾರೆ. ಆದ್ರೆ, ಮತ್ತದೇ ಸಮಸ್ಯೆ. ಕಣ್ಣು ಕಾಣದವರಿಗೆ ಅವಕಾಶವಿಲ್ಲ ಅನ್ನೋ ಉತ್ತರ. ಐಐಟಿಗೆ ಹೋಗಲು ಸಾಧ್ಯವಿಲ್ಲ ಅಂತ, ಮತ್ತೆ ಶ್ರೀಕಾಂತ್ ಕಾನೂನು ಹೋರಾಟದ ಮೊರೆ ಹೋಗಲಿಲ್ಲ. ಬದಲಿಗೆ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಬಗ್ಗೆ ಯೋಚನೆ ಮಾಡಿದ್ರು. ವಿದೇಶಿ ಕಾಲೇಜುಗಳಿಗೆ ಅರ್ಜಿಗಳನ್ನ ಸಲ್ಲಿಸಿದ್ರು. ಇಲ್ಲಿ ಸಲ್ಲದವನು ಅಲ್ಲಿಯೂ ಸಲ್ಲನಯ್ಯ ಅನ್ನೋ ಗಾದೆ ಮಾತನ್ನ, ಶ್ರೀಕಾಂತ್ ಬೊಲ್ಲಾ ತಮ್ಮ ಲೈಫ್​ನಲ್ಲೇ ಸುಳ್ಳಾಗಿಸಿದರು.
ಅಮೆರಿಕಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಕಾಂತ್ ಬೊಲ್ಲಾ ಆಯ್ಕೆಯಾಗಿದ್ರು. ಎಂಐಟಿ, ಸ್ಟಾನ್​ಫರ್ಡ್, ಬರ್ಕಲಿ, ಕಾರ್ನಿಯೇ ಮೆಲ್ಲಾನ್ ಸೇರಿ 5 ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮಾಡೋ ಅವಕಾಶ ಸಿಕ್ಕಿತ್ತು. ಕಡೆಗೆ ಶ್ರೀಕಾಂತ್ ಬೊಲ್ಲಾ, ಕೇಂಬ್ರಿಡ್ಜ್​ನಲ್ಲಿರುವ ಪ್ರತಿಷ್ಠಿತ ತಂತ್ರಜ್ಞಾನ ಶಿಕ್ಷಣ ಸಂಸ್ಥೆ ಮ್ಯಾಸಾಚ್ಯುಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂಐಟಿಗೆ ಪ್ರವೇಶ ಪಡೆಯುತ್ತಾರೆ. ಇಲ್ಲಿ ದಾಖಲಾತಿಯನ್ನ ಪಡೆದ ಮೊದಲ ವಿಶ್ಯುವಲಿ ಚಾಲೆಂಜ್ಡ್ ವಿದ್ಯಾರ್ಥಿ ಶ್ರೀಕಾಂತ್ ಬೊಲ್ಲಾ. ಅಷ್ಟೇ ಅಲ್ಲಾ, ಶ್ರೀಕಾಂತ್​ಗೆ ಅವ್ರ ಶಿಕ್ಷಣಕ್ಕೆ ಸಂಪೂರ್ಣ ಆರ್ಥಿಕ ನೆರವು ಕೂಡ ಸಿಗುತ್ತೆ. ಸಿಸ್ಟಮ್ ಇಂಜಿನಿಯರಿಂಗ್​ನಲ್ಲಿ ಮ್ಯಾನೇಜ್​ಮೆಂಟ್ ಸೈನ್ಸ್ ಮೇಜರ್​ನೊಂದಿಗೆ ತಮ್ಮ ಪದವಿಯನ್ನ ಮುಗಿಸಿದ್ದರು.
ಇದನ್ನೂ ಓದಿ: ಮಾಟ-ಮಂತ್ರಕ್ಕಾಗಿ ಡಿಕೆ ಶೂ ಕಳ್ಳತನ ಮಾಡಿದ್ರಾ? ಪತ್ತೆ ಹಚ್ಚಲು ಪೊಲೀಸರಿಗೆ ಕಟ್ಟಪ್ಪಣೆ; ಏನಿದರ ಅಸಲಿಯತ್ತು?
ಕಣ್ಣು ಕಾಣದಿದ್ರೂ, ಕನಸು ಕಾಣೋದ್ರಲ್ಲಿ ಶ್ರೀಕಾಂತ್ ಬೊಲ್ಲಾ ಯಾವುದೇ ಚೌಕಾಸಿ ಮಾಡ್ತಿರಲಿಲ್ಲ. ಈಗ ಆ ಕನಸುಗಳನ್ನೂ ಸಹ ಶ್ರೀಕಾಂತ್ ಸಾಧಿಸಿ ತೋರಿಸುತ್ತಿದ್ದಾರೆ. ಎಂಐಟಿಯಲ್ಲಿ ಇರುವಾಗಲೇ ಉದ್ಯಮಿಯಾಗಿ ಏನಾದ್ರೂ ಮಾಡಬೇಕು ಅನ್ನೋ ಆಸೆ ಚಿಗುರುತ್ತೆ. ತಮ್ಮ ಪದವಿ ಮುಗಿಸಿದ ಬಳಿಕ ಭಾರತಕ್ಕೆ ಮರಳುವ ಶ್ರೀಕಾಂತ್ ಮೊದಲಿಗೆ 2011ರಲ್ಲಿ ಹೈದರಾಬಾದ್​ನಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಸಮನ್ವಯಿ ಕೇಂದ್ರವನ್ನ ಸಹ ಸ್ಥಾಪಿಸುತ್ತಾರೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್, ಮೊಟ್ಟ ಮೊದಲ ಬ್ರೈಲ್ ಲೈಬ್ರರಿಯನ್ನ ಶುರು ಮಾಡ್ತಾರೆ, ಜೊತೆಗೆ ವಿಶೇಷ ಚೇತನ ಮಕ್ಕಳಿಗೆ ಅದ್ರಲ್ಲೂ ಕಣ್ಣು ಕಾಣದ ಮಕ್ಕಳಿಗಾಗಿ ಕಂಪ್ಯೂಟರ್ ಶಿಕ್ಷಣವನ್ನ ನೀಡ್ತಾರೆ. ಆದ್ರೆ, ಪರಿಸರ ಸ್ನೇಹಿ ಉದ್ಯಮವನ್ನ ಸ್ಥಾಪಿಸೋ ತುಡಿತ ಮಾತ್ರ ಕಡಿಮೆಯಾಗಲ್ಲ.
ಮರು ವರ್ಷ ಅಂದ್ರೆ 2012ರಲ್ಲಿ ಹೈದರಾಬಾದ್​ನಲ್ಲಿ ತಮ್ಮದೇ ಸ್ಟಾರ್ಟಪ್, ಬೋಲ್ಯಾಂಟ್ ಇಂಡಸ್ಟ್ರಿಯನ್ನ ಶ್ರೀಕಾಂತ್ ಬೊಲ್ಲಾ ಸ್ಥಾಪಿಸುತ್ತಾರೆ. ಪರಿಸರ ಸ್ನೇಹಿ ಪ್ಯಾಕೇಜ್ ಮೆಟೀರಿಯಲ್​ಗಳನ್ನ ತಯಾರಿಸುವ ಈ ಸಂಸ್ಥೆಯ ಆರಂಭಿಕ ಹೂಡಿಕೆದಾರರಲ್ಲಿ ಖುದ್ದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕೂಡ ಒಬ್ಬರು. ಬೋಲ್ಯಾಂಡ್ ಇಂಡಸ್ಟ್ರಿಯಲ್ಲಿ ಅರೆಕಾದಿಂದ, ವಿವಿಧ ಮರು ಬಳಕೆ ಮಾಡಬಹುದಾದಂಥ, ಸುಲಭವಾಗಿ ಡಿಸ್ಪೋಸ್ ಮಾಡಬಹುದಾದಂಥ ಪ್ಲೇಟ್​ಗಳು, ಪ್ಯಾಕೇಜ್ ಬಾಕ್ಸ್​ಗಳು ಸೇರಿದಂತೆ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮೆಟೀರಿಯಲ್​ಗಳು ಇಲ್ಲಿ ತಯಾರಾಗುತ್ತಿವೆ. ವಿಶೇಷ ಅಂದ್ರೆ, ಭಾರತದಲ್ಲಿ ಪರಿಸರ ಸ್ನೇಹಿ ಪ್ಯಾಕೇಂಜಿಂಗ್ ಮಾರ್ಕೆಟ್​ ದೊಡ್ಡದಾಗಿ ಬೆಳೆಯುತ್ತೆ ಅಂತ ಗುರುತಿಸಿದವರಲ್ಲಿ ಮೊದಲಿಗರು ಶ್ರೀಕಾಂತ್. ಶ್ರೀಕಾಂತ್ ಬೊಲ್ಲಾರ ದೂರದೃಷ್ಟಿಯನ್ನ, ಅವ್ರ ಬ್ಯುಸಿನೆಸ್ ಐಡಿಯಾವನ್ನ ಮೆಚ್ಚಿದ ಭಾರತದ ಮತ್ತೊಬ್ಬ ಖ್ಯಾತ ಉದ್ಯಮಿ, ವಿಷನರಿ ರತನ್ ಟಾಟಾ ಕೂಡ, ಬೊಲ್ಯಾಂಟ್ ಇಂಡಸ್ಟ್ರಿಯಲ್ಲಿ ಹೂಡಿಕೆಯನ್ನ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Srikanth-Bolla-3.jpg)
ಇವತ್ತು ಭಾರತದಲ್ಲಿ ಸಸ್ಟೇನಬಲ್ ಪ್ಯಾಕೇಜಿಂಗ್ ವಸ್ತುಗಳನ್ನ ತಯಾರಿಸುವ ಟಾಪ್ ಕಂಪನಿಗಳಲ್ಲಿ ಬೊಲ್ಯಾಂಟ್ ಇಂಡಸ್ಟ್ರೀಸ್ ಒಂದು. ಬೊಲ್ಯಾಂಟ್ ಇಂಡಸ್ಟ್ರೀಸ್​ನ ಉತ್ಪಾದನಾ ಘಟಕಗಳು ನಮ್ಮ ಕರ್ನಾಟಕದ ಹುಬ್ಬಳ್ಳಿ, ತೆಲಂಗಾಣದ ಹೈದರಾಬಾದ್, ನಿಜಾಮಾಬಾದ್ ಸೇರಿದಂತೆ 4 ಕಡೆಗಳಲ್ಲಿವೆ. 150 ಕೋಟಿಗೂ ಹೆಚ್ಚು ಆದಾಯವನ್ನ ಬೊಲ್ಯಾಂಟ್ ಇಂಡಸ್ಟ್ರೀಸ್ ಗಳಿಸುತ್ತಿದೆ. ಕಂಪನಿಯ ವ್ಯಾಲ್ಯೂಯೇಷನ್ ಸುಮಾರು 500 ಕೋಟಿಯಷ್ಟಿದೆ. ಇಷ್ಟೆಲ್ಲವನ್ನೂ ಕನಸು ಕಂಡಿದ್ದು, ಸಾಧಿಸಿ ತೋರಿಸಿದ್ದು ಕಣ್ಣೇ ಕಾಣದ ಒಬ್ಬ ಯುವಕ.
ಶ್ರೀಕಾಂತ್​ರ ಸಾಧನೆಗೆ ಹಲವು ಪ್ರಶಸ್ತಿಗಳ ಗರಿ ಕೂಡ ಮೂಡಿದ್ದು, 2017ರಲ್ಲಿ ಫೋರ್ಬ್ಸ್ ಮ್ಯಾಗಜಿನ್ ಏಷ್ಯಾದ 30 ಅಂಡರ್ 30 ಉದ್ಯಮಿಗಳ ಪಟ್ಟಿಯಲ್ಲಿ ಶ್ರೀಕಾಂತ್​ರನ್ನ ಗುರುತಿಸಿತ್ತು. 2016ರಲ್ಲಿ ಮಲೇಷ್ಯಾ, ECLIF ಎಮರ್ಜಿಂಗ್ ಲೀಡರ್​ಶಿಪ್, ಅಂದ್ರೆ ಉದಯಿಸುತ್ತಿರುವ ನಾಯಕ ಅನ್ನೋ ಅವಾರ್ಡ್​ ನೀಡಿ ಗೌರವಿಸಿದೆ. 2019ರಲ್ಲಿ ಭಾರತ ಸರ್ಕಾರ ಕೂಡ ನ್ಯಾಷನಲ್ ಎಂಟರ್​ಪ್ರನರ್​ಶಿಪ್ ಅವಾರ್ಡ್ ನೀಡಿ ಸನ್ಮಾನಿಸಿದೆ. ಅಲ್ಲದೆ ಯುಕೆ ಒನ್ ಎಂಗ್ ವರ್ಲ್ಡ್​ನಿಂದ ಎಂಟರ್​ಪ್ರನರ್ ಆಫ್ ದಿ ಗ್ಲೋಬ್ ಗೌರವ ಕೂಡ ಲಭಿಸಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು?
2030ರ ವೇಳೆಗೆ ಭಾರತವು ಸುಸ್ಥಿರ ಗುರಿಯನ್ನ ಸಾಧಿಸಲು ಸ್ಥಾಪಿಸಿರುವ ಸರ್ಜ್ ಇಂಪ್ಯಾಕ್ಟ್ ಫೌಂಡೇಷನ್​ನ ನಿರ್ದೇಶಕರಾಗಿ 2016ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 2022ರಲ್ಲಿ ಸ್ವಾತಿ ಎನ್ನುವವರನ್ನ ಮದುವೆಯಾದ ಶ್ರೀಕಾಂತ್, ಈಗ, ಮುದ್ದಾದ ಹೆಣ್ಣು ಮಗುವಿನ ತಂದೆ. ಕಣ್ಣು ಕಾಣದ, ಬಾಲ್ಯದಿಂದಲೇ ಸಾಕಷ್ಟು ಟೀಕೆ, ಅವಮಾನಗಳನ್ನ ಎದುರಿಸಿದ ಶ್ರೀಕಾಂತ್ ಬೊಲ್ಲಾ ಇವತ್ತು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಇನ್​ಸ್ಪಿರೇಷನ್. ಬ್ಯುಸಿನೆಸ್ ವಿಷಯಕ್ಕೆ ಬಂದ್ರೆ, ಯಾವುದೇ ಅಂಗ ವೈಕಲ್ಯವಿಲ್ಲದೆ, ನಾರ್ಮಲ್ ಆಗಿರೋರಿಗೆ ಕೂಡ ಶ್ರೀಕಾಂತ್ ಮಾದರಿ. ಸಾಧನೆಯ ಮೆಟ್ಟಿಲುಗಳನ್ನ ಹತ್ತುತ್ತಿರುವ ಶ್ರೀಕಾಂತ್ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಕನಸುಗಳನ್ನ ತಮ್ಮದೇ ಕಣ್ಣುಗಳಲ್ಲಿ ಇಂದಿಗೂ ಕಾಣುತ್ತಿದ್ದಾರೆ.
ವಿಶೇಷ ವರದಿ: ನವೀನ್ ಕುಮಾರ್​ ಕೆ​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us