/newsfirstlive-kannada/media/post_attachments/wp-content/uploads/2025/07/Bomb-Scare-at-Kalasipalya-BMTC-Bus-Stand2.jpg)
ಬೆಂಗಳೂರು: ಜನನಿಬಿಡ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಬಸ್ ನಿಲ್ದಾಣದ ಬದಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಕವರ್ನಲ್ಲಿ 6 ಜಿಲೆಟಿನ್ ಕಡ್ಡಿಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಹಾಗೂ ಆ್ಯಂಟಿ ಟೆರರಿಸ್ಟ್ ಸೆಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲೆಟಿನ್ ಕಡ್ಡಿ ಜೊತೆಗೆ ಕೆಲವು ಡಿಟೋನೇಟರ್ ಕೂಡ ಪತ್ತೆಯಾಗಿವೆ. ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಎರಡೂ ಬೇರೆ ಬೇರೆಯಾಗಿ ಪತ್ತೆಯಾಗಿವೆ. ಕಲಾಸಿಪಾಳ್ಯದ BMTC ಬಸ್ ನಿಲ್ದಾಣದ ಶೌಚಾಲಯದ ಹೊರಭಾಗದಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ಗಳು ಪತ್ತೆಯಾಗಿವೆ. ಪ್ರಕರಣ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ರಾಶಿ ರಾಶಿ ಚಿನ್ನಾಭರಣದ ಗೊಂಚಲು.. ಲೋಕಾಯುಕ್ತ ಅಧಿಕಾರಿಗಳೇ ಬೆರಗಾದ್ರು..
ಸ್ಫೋಟಕಗಳು ಪತ್ತೆಯಾದ ಕಲಾಸಿಪಾಳ್ಯ ಬಸ್ ನಿಲ್ದಾಣದ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆ ಬಾಂಬ್ ನಿಷ್ಕ್ರಿಯ ದಳ ಕೂಡ ಸ್ಥಳಕ್ಕೆ ಭೇಟಿ ನೀಡಿದೆ. ಡಿಸಿಪಿ ಗೀರೀಶ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಈ ಸ್ಫೋಟಕಗಳು ಪತ್ತೆಯಾಗಿವೆ. ಸ್ಫೋಟಕಗಳು ಪತ್ತೆಯಾದ ಬಳಿಕ ಪೊಲೀಸರು ಇಡೀ ಬಸ್ ನಿಲ್ದಾಣವನ್ನು ತಪಾಸಣೆ ಮಾಡಿದ್ದಾರೆ. ಬಸ್ ನಿಲ್ದಾಣದ ಮೂಲೆ ಮೂಲೆಯನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಒಂದು ಬ್ಯಾಗ್ನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಮಾಹಿತಿ ತಿಳಿಯುತ್ತಿದ್ದಂತೆ, ಬಸ್ ನಿಲ್ದಾಣಕ್ಕೆ ಬಂದ ಕಲಾಸಿಪಾಳ್ಯ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ಗಳನ್ನು ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇನ್ನೂ, ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಇನ್ನೆರೆಡು ದಿನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸುವ ಕಾರ್ಯಕ್ರಮ ನಿಗದಿಯಾಗಿದೆ. ಸದ್ಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಕಲಾಸಿಪಾಳ್ಯ ಬಸ್ ನಿಲ್ದಾಣ ಎಂದೇ ಹೆಸರಿದೆ. ಇದನ್ನು ಬದಲಾಯಿಸಿ, ಜನೋಪಕಾರಿ ಶ್ರೀ ದೊಡ್ಡಣ್ಣ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸಿಎಂ ಸಿದ್ದರಾಮಯ್ಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ಇದೇ ಬಸ್ ನಿಲ್ದಾಣಕ್ಕೆ ಬಂದು ಸಿಎಂ ಸಿದ್ದರಾಮಯ್ಯ, ಬಸ್ ನಿಲ್ದಾಣದ ಹೆಸರು ಅನ್ನು ಬದಲಾಯಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೂ 2 ದಿನ ಮುನ್ನ ಈಗ ಅದೇ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಕಡ್ಡಿ, ಪತ್ತೆಯಾಗಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಇಂದು ಸಿಎಂ ಕಾರ್ಯಕ್ರಮದ ಹಿನ್ನಲೆಯಲ್ಲಿ ಪೊಲೀಸರು ಬಸ್ ನಿಲ್ದಾಣವನ್ನ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾಗಲೇ, ಈ ಜಿಲೆಟಿನ್ ಕಡ್ಡಿ, ಡೀಟೋನೇಟರ್ ಪತ್ತೆಯಾಗಿವೆ ಎಂಬ ಮಾಹಿತಿ ಇದೀಗ ಸಿಕ್ಕಿದೆ.
ಹೀಗಾಗಿ ಈ ಜಿಲೆಟಿನ್ ಕಡ್ಡಿ ಪತ್ತೆಗೂ, ಶನಿವಾರ ನಡೆಯುವ ಸಿಎಂ ಕಾರ್ಯಕ್ರಮಕ್ಕೂ ಲಿಂಕ್ ಇದೆಯೇ ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸಬೇಕಾಗಿದೆ. ಈ ಜಿಲೆಟಿನ್ ಕಡ್ಡಿಗಳನ್ನು ಬಸ್ ನಿಲ್ದಾಣಕ್ಕೆ ತಂದ ಉದ್ದೇಶ ಏನು? ಎಂಬ ಪ್ರಶ್ನೆ ಉದ್ಭವವಾಗಿದೆ. ಯಾರು ಈ ಜಿಲೆಟಿನ್ ಕಡ್ಡಿ, ಡೀಟೋನೇಟರ್ಸ್ಗಳನ್ನು ಬಸ್ ನಿಲ್ದಾಣಕ್ಕೆ ತಂದರು? ಯಾವ ಕಾರಣಕ್ಕಾಗಿ ತಂದರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಜಿಲೆಟಿನ್ ಕಡ್ಡಿ, ಡೀಟೋನೇಟರ್ಸ್ಗಳನ್ನು ಕಲ್ಲು ಬಂಡೆ ಸ್ಫೋಟಕ್ಕೆ, ಕ್ವಾರಿಗಳ ಸ್ಫೋಟಕ್ಕೆ ಬಳಕೆ ಮಾಡಲಾಗುತ್ತೆ. ಬೇರೆ ಕಡೆಗೆ ಸಾಗಾಟ ಮಾಡಲು ಬಸ್ ನಿಲ್ದಾಣಕ್ಕೆ ಯಾರಾದರೂ ತಂದಿರಬಹುದು ಎಂಬ ಅನುಮಾನ ಇದೆ. ಬೇರೆ ಏರಿಯಾಗೆ ಸಾಗಾಟ ಮಾಡಲು ತಂದವರು, ಶೌಚಾಲಯದ ಬಳಿ ಇಟ್ಟು ಶೌಚಾಲಯಕ್ಕೋ, ಬೇರೆ ಕಡೆಗೋ ಹೋಗಿರಬಹುದು, ಅಷ್ಟರಲ್ಲಿ ಜಿಲೆಟಿನ್ ಬ್ಯಾಗ್ ಜನರ ಕಣ್ಣಿಗೆ ಬಂದು ಪೊಲೀಸರಿಗೆ ಮಾಹಿತಿ ರವಾನೆ ಆಗಿರಬಹುದು ಇಲ್ಲವೇ ಬಸ್ ನಿಲ್ದಾಣದಲ್ಲೇ ಸ್ಪೋಟ ನಡೆಸುವ ಸಂಚು ಅನ್ನು ರೂಪಿಸಿ ಯಾರಾದರೂ ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿಗಳನ್ನು ಬಸ್ ನಿಲ್ದಾಣಕ್ಕೆ ತಂದಿದ್ರಾ ಎಂಬ ಅನುಮಾನದ ಪ್ರಶ್ನೆ ಕೂಡ ಉದ್ಭವವಾಗಿದೆ.
ಜಿಲೆಟಿನ್ ಕಡ್ಡಿ ಮತ್ತು ಡೀಟೋನೇಟರ್ಸ್ ಬಳಸಿ ಕಲ್ಲು ಬಂಡೆಗಳನ್ನೇ ಪುಡಿ ಪುಡಿ ಮಾಡಲಾಗುತ್ತೆ. ಇನ್ನೂ ಬಸ್ ನಿಲ್ದಾಣವನ್ನು ಸ್ಪೋಟಿಸುವುದು ಕೂಡ ಸಾಧ್ಯ ಎಂಬ ದುಷ್ಟ ಲೆಕ್ಕಾಚಾರದಿಂದ ಯಾರಾದರೂ ಜಿಲೆಟಿನ್ ಕಡ್ಡಿ, ಡೀಟೋನೇಟರ್ಸ್ ಅನ್ನು ಬಸ್ ನಿಲ್ದಾಣಕ್ಕೆ ತಂದಿದ್ರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಸಾಕಷ್ಟು ಸಿಸಿಟಿವಿಗಳನ್ನು ಆಳವಡಿಸಿದೆ. ಅವುಗಳ ಮೂಲಕ ಈ ಬ್ಯಾಗ್ ಅನ್ನು ಬಸ್ ನಿಲ್ದಾಣದ ಒಳಭಾಗಕ್ಕೆ ತಂದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಬೆಂಗಳೂರಿನಲ್ಲಿ ಈ ಹಿಂದೆ 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಪೋಟ, ಸರಣಿ ಬಾಂಬ್ ಸ್ಪೋಟದ ಘಟನೆಗಳು ನಡೆದಿವೆ. ಹೀಗಾಗಿ ಇದನ್ನು ಲಘುವಾಗಿ ಪೊಲೀಸರು ಪರಿಗಣಿಸಬಾರದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ