/newsfirstlive-kannada/media/post_attachments/wp-content/uploads/2025/06/Banu_Mushtaq.jpg)
ಬಳ್ಳಾರಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ಮಹಿಳಾ ಸಾಹಿತಿ ಬಾನು ಮುಷ್ತಾಕ್ ಅವರನ್ನು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಬಳ್ಳಾರಿಯ ಖಾಸಗಿ ಹೋಟೆಲ್‌ನಲ್ಲಿ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:KPCC ಸೋಶಿಯಲ್ ಮೀಡಿಯಾ ವಿಭಾಗಕ್ಕೆ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್ ಆಯ್ಕೆ
ಇನ್ನು ಈ ಸಭೆ ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅವರು, ಇದೇ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರ ಜೊತೆಗೆ ದೀಪ ಬಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡದ ಪ್ರಸಿದ್ಧ ಮಹಿಳಾ ಸಾಹಿತಿ ಹಾಸನ ಜಿಲ್ಲೆಯ ಬಾನು ಮುಷ್ತಾಕ್ ಅವರು ಬರೆದ ಸಣ್ಣ ಕಥಾಸಂಕಲನ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರೇ ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಅವರು. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಬಸ್ತಿ ಕೂಡ ಬಾನು ಮುಷ್ತಾಕ್ ಅವರ ಜೊತೆಯಲ್ಲಿದ್ದರು. 2025ರ ಮೇ 21ರಂದು ನಡೆದ ಸಮಾರಂಭದಲ್ಲಿ ಈ ಇಬ್ಬರು ಬೂಕರ್ ಪ್ರಶಸ್ತಿ ಸ್ವೀಕರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ