/newsfirstlive-kannada/media/post_attachments/wp-content/uploads/2025/04/KOHLI_SAD.jpg)
ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮತ್ತೆ ಕಿಕ್ಕೇರಿಸುವ ಮನರಂಜನೆ ಸಿಗಲಿದೆ ಎಂಬ ಮಹಾದಾಸೆ ಅಭಿಮಾನಿಗಳ ವಲಯದಲ್ಲಿದೆ. ಆದ್ರೆ, ಈ ಖುಷಿಯಲ್ಲಿರುವ ಫ್ಯಾನ್ಸ್ಗೆ ಹಾಗೂ ಫ್ರಾಂಚೈಸಿಗಳಿಗೆ ಸಂತೋಷದ ನಡುವೆ ಶಾಕ್ ಎದುರಾಗಿದೆ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಂತೂ ಎಲ್ಲಿಲ್ಲದ ಹೊರೆ ಎದುರಾಗಿದೆ. ಅದ್ಯಾಕೆ ಅಂತೀರಾ?.
ಇಂಡೋ- ಪಾಕ್ ಸಂಘರ್ಷದ ಕಾರಣಕ್ಕೆ ನಿಂತಿದ್ದ ಸೀಸನ್-18ರ ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮೇ 17ರಿಂದ ಕಲರ್ ಫುಲ್ ಲೀಗ್ಗೆ ಮರು ಚಾಲನೆ ಸಿಗಲಿದ್ದು, ಹೊಸ ವೇಳಾಪಟ್ಟಿ ಬಿಸಿಸಿಐ ಪ್ರಕಟಿಸಿದೆ. ಟೂರ್ನಿ ಮರು ಆಯೋಜನೆ ಕಾರ್ಯದಲ್ಲಿ ಬ್ಯುಸಿಯಾಗಿರುವ ಹೊತ್ತಿನಲ್ಲೇ ಫ್ರಾಂಚೈಸಿಗಳಿಗೆ ಬಿಗ್ ಶಾಕ್ ಎದುರಾಗುತ್ತಿದೆ.
ಐಪಿಎಲ್ ಮುಂದೂಡಿಕೆಯಾದ ಕಾರಣಕ್ಕೆ ವಿದೇಶಿ ಆಟಗಾರರು, ತವರಿಗೆ ಮರಳಿದರು. ಇದೀಗ ಪುನಾರಂಭಕ್ಕೆ ಡೇಟ್ ಫಿಕ್ಸ್ ಆದರೂ, ವಿದೇಶಿ ಆಟಗಾರರು ಭಾರತಕ್ಕಾಗಮಿಸಲು ಮೀನಾಮೇಶ ಎಣಿಸುತ್ತಿದ್ದಾರೆ. ಇದು ಐಪಿಎಲ್ ಫ್ರಾಂಚೈಸಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಐಪಿಎಲ್ ಆಡಲು ಆಸ್ಟ್ರೇಲಿಯಾ ಆಟಗಾರರು ಹಿಂದೇಟು..!
ಐಪಿಎಲ್ ಮರು ಆಯೋಜನೆಯ ಡೇಟ್ ಫಿಕ್ಸಾಗಿದೆ. ಈಗಾಗಲೇ ಕೆಲ ತಂಡಗಳು ಅಭ್ಯಾಸವನ್ನು ಆರಂಭಿಸಿವೆ. ಆದ್ರೆ, ತವರಿಗೆ ಮರಳಿದ್ದ ಆಸ್ಟ್ರೇಲಿಯಾ ಆಟಗಾರರು, ಮತ್ತೆ ಭಾರತಕ್ಕೆ ಬರಲು ಹಿಂದೇಟು ಹಾಕ್ತಿದ್ದಾರೆ. ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್, ಟ್ರಾವಿಡ್ ಹೆಡ್, ಜೋಶ್ ಹೇಜಲ್ವುಡ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಇನ್ನಿತರು ಐಪಿಎಲ್ ಆಡೋ ಉತ್ಸಾಹವನ್ನೇ ತೋರುತ್ತಿಲ್ಲ. ಇದರ ನಡುವೆ ಅಂಥಹ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲವನ್ನ ಸೂಚಿಸಿದೆ.
ಆಟಗಾರರ ನಿರ್ಧಾರಕ್ಕೆ ನಮ್ಮ ಬೆಂಬಲ!
ಸುರಕ್ಷತೆಯ ಬಗ್ಗೆ ಕಳವಳ ಮತ್ತು ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಬದ್ಧತೆಗಳೊಂದಿಗೆ ಹಲವು ಆಟಗಾರರು, ಸಿಬ್ಬಂದಿ ಮನೆಗೆ ಮರಳಿದ್ದಾರೆ. ಐಪಿಎಲ್ ಆಡುವ, ಆಡದಿರುವ ಆಟಗಾರರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆಕ್ರಿಕೆಟ್ ಆಸ್ಟ್ರೇಲಿಯಾ
ಒಂದ್ಕಡೆ ಆಸ್ಟ್ರೇಲಿಯಾ ಕ್ರಿಕೆಟರ್ಗಳು ಭಾರತಕ್ಕಾಗಮಿಸಲು ಮೀನಾಮೇಶ ಎಣಿಸ್ತಿದ್ದಾರೆ. ಈ ಹೊತ್ತಿನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಸಹ ಆಟಗಾರರ ನಿಲುವನ್ನ ಬೆಂಬಲಿಸಿ ನೀಡಿರುವ ಹೇಳಿಕೆ ಆಸಿಸ್ ಆಟಗಾರರು ಕೈಕೊಡೋ ಸಾಧ್ಯತೆಯನ್ನ ದಟ್ಟವಾಗಿಸಿದೆ. ಇದು ಫ್ರಾಂಚೈಸಿಗಳ ಹೊಸ ಟೆನ್ಶನ್ಗೂ ಕಾರಣವಾಗಿದೆ.
14 ಆಸಿಸ್ ಆಟಗಾರರ ಪೈಕಿ 5 ಮಂದಿ WTC ಫೈನಲ್ಗೆ..!
ಇದೇ ಜೂನ್ 11ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯಲಿದೆ. ಈ ಫೈನಲ್ ಪಂದ್ಯಕ್ಕಾಗಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದಾಗಿದೆ. ಈ ಟೆಸ್ಟ್ ತಂಡದಲ್ಲಿ ಐಪಿಎಲ್ ಆಡುವ 14 ಆಸ್ಟ್ರೇಲಿಯಾ ಆಟಗಾರರ ಪೈಕಿ 5 ಮಂದಿ ಮಾತ್ರ ಸ್ಥಾನ ಪಡೆದಿದ್ದಾರೆ. ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಪ್ರಮುಖರಾಗಿದ್ದಾರೆ. ಈ ಆಟಗಾರರು ಮರಳಿ ಭಾರತಕ್ಕಾಗಮಿಸಿದ್ರೆ, ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಅಭ್ಯಾಸಕ್ಕೆ ಅಡ್ಡಿಯಾಗಲಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ, ಆಟಗಾರರ ನಿರ್ಧಾರಕ್ಕೆ ನಮ್ಮ ಬೆಂಬಲ ಎಂಬ ಹೇಳಿಕೆ ನೀಡಿದೆ.
ಸೌತ್ ಆಫ್ರಿಕಾ, ಇಂಗ್ಲೆಂಡ್, ವಿಂಡೀಸ್ ಆಟಗಾರರ ಕಥೆ ಏನು?
ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಮಾತ್ರವಲ್ಲ. ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಆಟಗಾರರ ಅಲಭ್ಯತೆಯೂ ಕಾಡುವ ಸಾಧ್ಯತೆ ಇದೆ. ಯಾಕಂದ್ರೆ, ಸೌತ್ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸಿದ್ದತೆಯಲ್ಲಿದೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳ ದ್ವಿಪಕ್ಷೀಯ ಸರಣಿಗಳು ಆರಂಭವಾಗಲು ಕೆಲ ದಿನಗಳಷ್ಟೇ ಇದೆ. ಈ ಸ್ಟಾರ್ಗಳು ಅಲಭ್ಯರಾದ್ರೆ ಟಾಪ್-5 ಟೀಮ್ಸ್ಗೆ ಹೊಡೆತ ಬೀಳುವುದು ಕನ್ಫರ್ಮ್. ಅದ್ರಲ್ಲೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ಹೊಡೆತವೇ ಎದುರಾಗಲಿದೆ.
ಇದನ್ನೂ ಓದಿ:RCBಗೆ ಶಾಕ್ ಕೊಡ್ತಾರಾ ಕ್ಯಾಪ್ಟನ್ ರಜತ್.. ಕೊಹ್ಲಿ ಅಲ್ಲ, ವಿಕೆಟ್ ಕೀಪರ್ಗೆ ನಾಯಕನ ಪಟ್ಟ?
RCBಗೆ ಯಾವ ಆಟಗಾರರ ಟೆನ್ಶನ್..?
ಜೂನ್.11ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಜೋಶ್ ಹೇಜಲ್ವುಡ್, ಸೌತ್ ಆಫ್ರಿಕಾದ ಲುಂಗಿ ಎನ್ಗಿಡಿ ಅಲಭ್ಯರಾಗಲಿದ್ದಾರೆ. ಇನ್ನು ಇದೇ 21ರಿಂದ ಐರ್ಲೆಂಡ್, ಇದೇ ತಿಂಗಳ 29ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಏದುರಿನ ಏಕದಿನ ಸರಣಿಯಲ್ಲಿ ರೊಮಾರಿಯೋ ಶೆಫರ್ಡ್ ಸ್ಥಾನ ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಜೇಕಬ್ ಬೆಥಲ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಆರ್ಸಿಬಿ ಪ್ರಮುಖ ಆಟಗಾರರ ಸೇವೆಯನ್ನ ಕಳೆದುಕೊಳ್ಳಲಿದೆ.
ಆರ್ಸಿಬಿಗೆ ಮಾತ್ರವಲ್ಲ, ಗುಜರಾತ್ ಟೈಟನ್ಸ್ಗೂ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್, ವಿಂಡೀಸ್ನ ರುದರ್ಫೋಡ್, ಆಫ್ರಿಕಾದ ಜೆರಾಲ್ಡ್ ಕಾಟ್ಜೆ, ಕಗಿಸೋ ರಬಡಾ ಅಲಭ್ಯತೆ ಕಾಡಲಿದೆ. ಇನ್ನು ಡೆಲ್ಲಿ ತಂಡಕ್ಕೆ ಮಿಚೆಲ್ ಸ್ಟಾರ್ಕ್, ಟ್ರಿಸ್ಟನ್ ಸ್ಟಬ್ಸ್, ಪಂಜಾಬ್ಗೆ ಜೋಶ್ ಇಂಗ್ಲಿಸ್, ಮಾರ್ಕೊ ಯಾನ್ಸೆಲ್ ಅಲಭ್ಯತೆ ಎದುರಾಗುವ ಸಾಧ್ಯತೆ ಇದೆ. ಪ್ಲೇ ಆಫ್ ಎಂಟ್ರಿಯ ಕನಸಿನಲ್ಲಿದ್ದ ಈ ತಂಡಗಳಿಗೆ ಸದ್ಯ ಸಂಕಷ್ಟ ಎದುರಾಗಿದ್ದು, ಇದನ್ನ ಹೇಗೆ ನಿಭಾಯಿಸಲಿವೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ