/newsfirstlive-kannada/media/post_attachments/wp-content/uploads/2024/11/ROHIT_SHARMA-6.jpg)
ಇಂಡೋ-ಆಸಿಸ್ ಮೆಗಾ ಫೈಟ್ಗೆ ದಿನಗಣನೆ ಶುರುವಾಗಿದೆ. ತವರಿನಲ್ಲಿ ಸೋತು ಆಸ್ಟ್ರೇಲಿಯಾಗೆ ಹಾರಿರುವ ಟೀಮ್ ಇಂಡಿಯಾ ಕಾಂಗರೂ ನಾಡಲ್ಲಿ ಗೆಲುವಿನತ್ತ ಚಿತ್ತ ನೆಟ್ಟಿದೆ. ಪರ್ತ್ನಲ್ಲಿ ನಡೆಯೋ ಮೊದಲ ಯುದ್ಧಕ್ಕೆ ಸಮರಾಭ್ಯಾಸ ಆರಂಭಿಸಿದೆ. ಇಂಡಿಯನ್ ಟೀಮ್ ಪರ್ತ್ನಲ್ಲಿ ಅಭ್ಯಾಸ ನಡೆಸಿದ್ರೆ, ಕ್ಯಾಪ್ಟನ್ ಮುಂಬೈನಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
ವಿಶ್ವ ಕ್ರಿಕೆಟ್ ಲೋಕದ ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕಾವು ಕ್ರಿಕೆಟ್ ಲೋಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ತವರಿನಂಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಟೀಮ್ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳೋ ಲೆಕ್ಕಾಚಾರ ಹಾಕಿಕೊಂಡಿದೆ. ಕಾಂಗರೂ ನಾಡಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ಮೇಲೆ ಭಾರತ ತಂಡ ಕಣ್ಣಿಟ್ಟಿದೆ. ಸೇಡು ತೀರಿಸಿಕೊಳ್ಳಲು ಪಣ ತೊಟ್ಟಿರೋ ಎದುರಾಳಿ ಆಸ್ಟ್ರೇಲಿಯಾ, ಭಾರತಕ್ಕೆ ಶಾಕ್ ಕೊಡಲು ತಯಾರಿದೆ.
ಇದನ್ನೂ ಓದಿ: ಯಂಗ್ ಇಂಡಿಯಾಕ್ಕೆ ಕಪ್ ಗೆಲ್ಲುವ ತವಕ.. ಸೂರ್ಯ ಪಡೆಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೇಗಿದೆ?
ಪ್ರತಿಷ್ಠೆಯ ಯುದ್ಧಕ್ಕೆ ಟೀಮ್ ಇಂಡಿಯಾ ಸಮರಾಭ್ಯಾಸ.!
ಇಂಡೋ-ಆಸಿಸ್ ಪ್ರತಿಷ್ಠೆಯ ಯುದ್ಧಕ್ಕೆ ಉಭಯ ತಂಡಗಳ ಸಮರಾಭ್ಯಾಸ ಕೂಡ ಆರಂಭವಾಗಿದೆ. ಪರ್ತ್ ತಲುಪಿರೋ ಟೀಮ್ ಇಂಡಿಯಾ ಆಟಗಾರರು ಫಸ್ಟ್ ಪ್ರಾಕ್ಟಿಸ್ ಸೆಷನ್ ಮುಗಿಸಿದ್ದಾರೆ. ಪರ್ತ್ನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದಾರೆ.
ನೆಟ್ಸ್ನಲ್ಲಿ ಕಿಂಗ್ ಕೊಹ್ಲಿಯ ಇಂಟೆನ್ಸಿವ್ ಅಭ್ಯಾಸ.!
ಟೀಮ್ ಇಂಡಿಯಾದ ನೆಟ್ ಸೆಷನ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ವಿರಾಟ್ ಕೊಹ್ಲಿ. ಹೀನಾಯ ಪರ್ಫಾಮೆನ್ಸ್ ನೀಡಿ ಟೀಕೆಗೆ ಗುರಿಯಾಗಿರೋ ವಿರಾಟ್ ಕೊಹ್ಲಿ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಅಗ್ನಿ ಪರೀಕ್ಷೆಯ ಕಣವಾಗಿದೆ. ಕಾಂಗರೂ ನಾಡಲ್ಲಿ ಕೊಹ್ಲಿ ಕಮ್ಬ್ಯಾಕ್ನ ಎದುರು ನೋಡುತ್ತಿದ್ದಾರೆ. ಮೊದಲ ನೆಟ್ ಸೆಷನ್ನಲ್ಲೇ ಇಂಟೆನ್ಸಿವ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದಾರೆ. ಅರ್ಧಗಂಟೆಗೂ ಅಧಿಕ ಕಾಲ ಸುದೀರ್ಘ ಬ್ಯಾಟಿಂಗ್ ನಡೆಸಿದ್ದಾರೆ.
ಕೋಚ್ ಗೌತಮ್ ಗಂಭೀರ್ ಹದ್ದಿನ ಕಣ್ಣು.!
ಟೀಮ್ ಇಂಡಿಯಾದ ಉಳಿದ ಆಟಗಾರರು ಕೂಡ ಪರ್ತ್ ಸ್ಟೇಡಿಯಂ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ವೇಗಿ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹೆಚ್ಚು ಕಾಲ ಬೌಲಿಂಗ್ ನಡೆಸಿದ್ದಾರೆ. ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಹೆಚ್ಚು ಬೌನ್ಸಿ ಎಸೆತಗಳನ್ನ ಎದುರಿಸಿದ್ದಾರೆ. ಎಲ್ಲರ ಅಭ್ಯಾಸದ ಮೇಲೆ ಕೋಚ್ ಗೌತಮ್ ಗಂಭೀರ್ ಹದ್ದಿನ ಕಣ್ಣಿಟ್ಟಿದ್ರು.
ಪರ್ತ್ನಲ್ಲಿ ಟೀಮ್ ಇಂಡಿಯಾ, ಮುಂಬೈನಲ್ಲಿ ನಾಯಕ.!
2ನೇ ಮಗುವಿನ ನಿರೀಕ್ಷೆಯಲ್ಲಿರುವ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಜೊತೆ ಪ್ರಯಾಣಿಸದೇ ಭಾರತದಲ್ಲೇ ಉಳಿದಿದ್ದಾರೆ. ಮೊದಲ ಟೆಸ್ಟ್ನಲ್ಲಿ ರೋಹಿತ್ ಆಡ್ತಾರಾ.? ಆಡಲ್ವಾ.? ಅನ್ನೋದು ಇಂದಿಗೊ ಗೊಂದಲವಾಗಿ ಉಳಿದಿದೆ. ಸ್ವತಃ ಕೋಚ್ ಗಂಭೀರ್ಗೂ ಕ್ಲಾರಿಟಿ ಸಿಕ್ಕಿಲ್ಲ. ಇದ್ರ ನಡುವೆ ಮುಂಬೈ ಜಿಯೋ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಅಭ್ಯಾಸ ಆರಂಭಿಸಿದ್ದಾರೆ. ಬ್ಯಾಟಿಂಗ್ ಅಭ್ಯಾಸ ನಡೆಸಿರುವ ರೋಹಿತ್ ಶರ್ಮಾ ಮೊದಲ ಟೆಸ್ಟ್ಗೆ ಮುನ್ನ ತಂಡ ಸೇರುವ ಸುಳಿವು ನೀಡಿದ್ದಾರೆ.
ಜಿಮ್ನಲ್ಲಿ ಬೆವರಿಳಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್.!
ಮೈದಾನದಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ನಡೆಸಿದ್ದು ಮಾತ್ರವಲ್ಲ. ಜಿಮ್ನಲ್ಲೂ ವರ್ಕೌಟ್ ಮಾಡಿ ಬೆವರಿಳಿಸಿದ್ದಾರೆ. ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡ್ತಿರುವ ರೋಹಿತ್ ಶರ್ಮಾ, ವಿವಿಧ ವರ್ಕೌಟ್ಗಳನ್ನ ಮಾಡಿ ಮ್ಯಾಚ್ ಫಿಟ್ನೆಸ್ ಕಾಯ್ದುಕೊಳ್ಳೋ ಯತ್ನ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದೆ. ಅಷ್ಟರೊಳಗೆ ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ್ರೆ, ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ತೆರಳಿ ತಂಡವನ್ನ ಕೂಡಿಕೊಳ್ಳಲಿದ್ದಾರೆ. ಇಲ್ಲದಿದ್ರೆ, 2ನೇ ಟೆಸ್ಟ್ಗೂ ಆಸಿಸ್ಗೆ ಹಾರಲಿದ್ದಾರೆ ಅನ್ನೋದು ಸದ್ಯಕ್ಕಿರೋ ಮಾಹಿತಿ.
ಮೊದಲ ಟೆಸ್ಟ್ನಲ್ಲಿ ರೋಹಿತ್ ಆಡ್ತಾರಾ.? ಇಲ್ವಾ.? ಅನ್ನೋದು ಸ್ವತಃ ರೋಹಿತ್ಗೂ ಇನ್ನೂ ಕನ್ಫರ್ಮ್ ಆಗಿಲ್ಲ. ಈ ಗೊಂದಲದ ನಡುವೆಯೇ ಆಸ್ಟ್ರೇಲಿಯಾ ತಲುಪಿರೋ ಟೀಮ್ ಇಂಡಿಯಾ ಅಭ್ಯಾಸವನ್ನ ಆರಂಭಿಸಿದೆ. ಈ ಪ್ರಾಕ್ಟಿಸ್ ಸೆಷನ್ನೊಂದಿಗೆ ಆಸಿಸ್ ಕಂಡಿಷನ್ಸ್ಗೆ ಹೊಂದಿಕೊಳ್ಳೋ ಸರ್ಕಸ್ ಆರಂಭವಾಗಿದ್ದು, ಮುಂದಿನ ಹಂತದ ಪ್ರಿಪರೇಶನ್ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ