/newsfirstlive-kannada/media/post_attachments/wp-content/uploads/2023/06/dharawada.jpg)
ಧಾರವಾಡ: ಪ್ರೀತಿಸಿ ಮದುವೆಯಾದ ಯುವಕನಿಗೆ ಯುವತಿಯ ಮನೆಯವರು ಮಾರಣಾಂತಿಕ ಹಲ್ಲೆ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ಶಿವನಗೌಡ ಪಾಟೀಲ್ ಮತ್ತು ಅಕ್ಕಮ್ಮ ಎಂಬವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅವರ ಪ್ರೀತಿಗೆ ಯುವತಿಯರ ಕುಟುಂಬಸ್ಥರ ವಿರೋಧವಿತ್ತು. ಈ ನಡುವೆ ಅವರಿಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ಮದುವೆಯಾದ ಬಳಿಕ ಅಕ್ಕಮ್ಮ ತನ್ನ ಮನೆಗೆ ಹೋಗಿದ್ದಾಳೆ. ಆಗ ಆಕೆಯ ಮೇಲೂ ಮನೆಯವರು ಹಲ್ಲೆ ಮಾಡಿದ್ದಾರೆ. ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿದ್ದಾರೆ. ಬಳಿಕ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾಗ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಶಿವನಗೌಡ ಆರೋಪಿಸಿದ್ದಾರೆ. ನಾನು ಆಕೆಯನ್ನು ಕರೆದೊಯ್ಯಲು ಹೋದಾಗ ಅಕ್ಕಮ್ಮನ ಮನೆಯವರು ಕಣ್ಣಿಗೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದರ ನಡುವೆ ನನ್ನ ಹೆಂಡತಿಯ ಬ್ರೇನ್ ವಾಷ್ ಮಾಡಿದ್ದಾರೆ. ನಾನು ಅವಳನ್ನು ಹೆದರಿಸಿ ಮದುವೆ ಆಗಿದ್ದೇನೆ ಎಂದು ಆರೋಪ ಮಾಡ್ತಿದ್ದಾರೆ. ಅವಳು ಕೂಡಾ ಮನೆಯವರಿಗೆ ಹೆದರಿ ಈಗ ನನ್ನ ಜತೆ ಬರುವುದಿಲ್ಲ ಎಂದು ಹೇಳುತ್ತಿದ್ದಾಳೆ. ನನಗೆ ನನ್ನ ಹೆಂಡತಿ ಬೇಕೇ ಬೇಕು ಎಂದು ಶಿವನಗೌಡ ಪಾಟೀಲ್ ಅಳಲನ್ನು ತೋಡಿಕೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ