/newsfirstlive-kannada/media/post_attachments/wp-content/uploads/2024/11/HVR_HORI.jpg)
ಅದೊಂದು ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಆ ಹೋರಿಯ ಸವಿನೆನಪಿಗಾಗಿ ಅಭಿಮಾನಿಗಳು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಅಧಿಕ ಹೋರಿಗಳು ಕಾರ್ಯಕ್ರಮಕ್ಕೆ ಬಂದಿದ್ದವು. ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ವಿಶಾಲವಾದ ಮೈದಾನ ಮಿಂಚಿನ ಸಂಚಲನ ಸೃಷ್ಟಿಸಿತ್ತು.
ಹೋರಿಗಳ ಶರವೇಗದ ಓಟ, ಅಖಾಡದಲ್ಲಿ ಜಿಂಕೆಯಂತೆ ಓಡಿದ ಕೊಬ್ಬರಿ ಹೋರಿಗಳು ನೋಡಲು ಎರಡು ಸಾಲದು. ಇದನ್ನು ನೋಡಲು ಸೇರಿದ್ದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕೇಕೆ, ಚಪ್ಪಾಳೆ, ಶಿಳ್ಳೆ ಹಾಕಿ ಹುಚ್ಚೆದ್ದು ಕುಣಿದರು.
ನಾಗೇಂದ್ರನಮಟ್ಟಿಯ ವಿಶಾಲ ಮೈದಾನದಲ್ಲಿ ಸ್ಪರ್ಧೆ
ಹಾವೇರಿ ರಾಕ್ಸ್ಟಾರ್ ಹೋರಿ ಸವಿನೆನಪಿಗಾಗಿ ಅಭಿಮಾನಿಗಳು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ನಾಗೇಂದ್ರನಮಟ್ಟಿಯ ವಿಶಾಲ ಮೈದಾನದಲ್ಲಿ ಆಯೋಜನೆ ಮಾಡಿದ್ದರು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ರಾಣೆಬೆನ್ನೂರು ಕಾ ರಾಜಾ, ಶಿವಮೊಗ್ಗದ ಕಿಂಗ್, ಕರ್ಜಗಿಯ ಓಂ, ಹಾವೇರಿ ಕಾ ರಾಜಾ, ಕರಿ ಚಿರತೆ, ಅನ್ನದಾತ, ಭೀಮ್ ಸೇರಿ ಸಾವಿರಾರು ಹೋರಿಗಳು ತಮ್ಮ ಸಾಹಸ ಮೆರೆದವು.
ಹೋರಿಗಳನ್ನ ಮಾಲೀಕರು ಬಲೂನ್, ರಿಬ್ಬನ್, ಜೂಲಾ, ಗೆಜ್ಜೆ, ಕೊಂಬೆಣಸು ಕೊಬ್ಬರಿ ಹಾರ ಕಟ್ಟಿ ಅಖಾಡಕ್ಕೆ ಬಿಟ್ಟಿದ್ದೇ ತಡ, ಮಿಂಚಿನಂತೆ ಓಡಿ ಮಾಯವಾಗುತ್ತಿದ್ದವು. ನವಯುವಕರು ಹೋರಿಯನ್ನ ಹಿಡಿಯೋ ದೃಶ್ಯಗಳು ನೋಡುಗರ ಮೈನವಿರೇಳಿಸುವಂತೆ ಇತ್ತು.
ಇದನ್ನೂ ಓದಿ:ನಗರವಾಸಿಗಳಿಗೆ ಪ್ರಾಣವಾಯು ಭಯ; ಇಂದು ಸುಪ್ರೀಂನಲ್ಲಿ ವಿಚಾರಣೆ, ಪರಿಸರ ಸಚಿವರಿಂದ ಮಹತ್ವದ ಸಭೆ!
30ಕ್ಕೂ ಹೆಚ್ಚು ಜನರಿಗೆ ಗಾಯ
ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆಗಳು ಸಹ ನಡೆದವು. ಕೊಬ್ಬರಿ ಹೋರಿಗಳ ತಿವಿತದಿಂದ ಎದೆ ಭಾಗ, ಕೈ ಕಾಲು ಸೇರಿ ಪೈಲ್ವಾನರ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಓರ್ವ ವ್ಯಕ್ತಿಯ ಕಣ್ಣು ಗುಡ್ಡೆಯೇ ಕಿತ್ತು ಹೋಗಿದ್ದು, ಹುಬ್ಬಳ್ಳಿಯ ಕಿಮ್ಸ್ಗೆ ಸೇರಿಸಲಾಗಿದೆ.
ಸ್ಪರ್ಧೆಯಲ್ಲಿ ಮೋಟಾರ್ ಸೈಕಲ್ ಸೇರಿದಂತೆ ಚಿನ್ನ ಮತ್ತು ಇತರ ವಸ್ತುಗಳನ್ನ ಬಹುಮಾನವಾಗಿ ಇಡಲಾಗಿತ್ತು. ಜನರು ಅತ್ಯಂತ ಹುರುಪಿನಿಂದ ಎತ್ತುಗಳನ್ನು ಓಡಿಸಿ ಖುಷಿಪಟ್ಟರು. ಹೋರಿ ಬೆದರಿಸೋ ಸ್ಪರ್ಧೆ ಕೆಲವರಿಗೆ ಮನರಂಜನೆ ನೀಡಿದರೆ, ಕೆಲವರನ್ನ ಸಂಕಷ್ಟಕ್ಕೆ ದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ