/newsfirstlive-kannada/media/post_attachments/wp-content/uploads/2025/07/SIRAJ_BUMRHA_GILL.jpg)
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಬೇಕಾ?. ತಂಡ ಸಂಕಷ್ಟಕ್ಕೆ ಸಿಲುಕಿರೋವಾಗ ಪ್ರಮಖ ಆಟಗಾರ ಹಿಂದೆ ಸರಿಯೋದು ಸರಿನಾ?. ಬೂಮ್ರಾ ವರ್ಕ್ಲೋಡ್ ಮ್ಯಾನೇಜ್ಮೆಂಟ್ ವಿಚಾರವಾಗಿ ದಿಗ್ಗಜ ಕ್ರಿಕೆಟಿಗರು ಫುಲ್ ಗರಂ ಆಗಿದ್ದಾರೆ. ಬೂಮ್ರಾ ಆಡಲೇಬೇಕು ಎಂದು ಖಡಕ್ ಮಾತುಗಳಲ್ಲಿ ಹೇಳಿದ್ದಾರೆ. ಅಸಲಿಗೆ ಬೂಮ್ರಾಗಲ್ಲ.. ವಿಶ್ರಾಂತಿ ಬೇಕಿರೋದು ಸಿರಾಜ್ಗೆ. ಯಾಕೆ ಅಂತೀರಾ?.
ಇಂಡೋ-ಇಂಗ್ಲೆಂಡ್ ನಡುವಿನ ಮಹತ್ವದ 4ನೇ ಟೆಸ್ಟ್ ಪಂದ್ಯಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯವನ್ನ ಸೋತು, ಸರಣಿಯಲ್ಲಿ ಹಿನ್ನಡೆ ಅನುಭವಿಸಿರೋ ಟೀಮ್ ಇಂಡಿಯಾ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಸರಣಿ ಜೀವಂತವಾಗಿರಿಕೊಳ್ಳೋ ಒತ್ತಡಕ್ಕೆ ಸಿಲುಕಿರೋ ಯಂಗ್ ಇಂಡಿಯಾ, ಅಭ್ಯಾಸದ ಕಣದಲ್ಲಿ ಬೆವರಿಳಿಸ್ತಾ ಇದೆ. ಇದರ ನಡುವೆ ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ಗೆ ಮಾಜಿ ಕ್ರಿಕೆಟಿಗರು ಅಗತ್ಯ ಸಲಹೆ ನೀಡಿದ್ದಾರೆ.
ವೇಗಿ ಬೂಮ್ರಾ ಆಡಿಸಲೇಬೇಕು ಎಂದ ಲೆಜೆಂಡ್ಸ್.!
ಬ್ಯಾಕ್ ಇಂಜುರಿ ಸಮಸ್ಯೆಯಿಂದ ಬಳಲ್ತಾ ಇರೋ ಬೂಮ್ರಾ ವರ್ಕ್ಲೋಡ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳನ್ನ ಮಾತ್ರ ಆಡೋದಾಗಿ ತಿಳಿಸಿದ್ರು. ಅದ್ರಂತೆ ಮೊದಲ ಟೆಸ್ಟ್ ಆಡಿ, 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದ ಬೂಮ್ರಾ, 3ನೇ ಟೆಸ್ಟ್ನಲ್ಲಿ ಆಡಿದ್ರು. ಇದೀಗ 4ನೇ ಟೆಸ್ಟ್ನಿಂದ ವಿಶ್ರಾಂತಿ ಪಡೆಯೋ ಸಾಧ್ಯತೆ ದಟ್ಟವಾಗಿದೆ. ಆದ್ರೆ, ಸರಣಿ ಜೀವಂತವಾಗಿರಬೇಕು ಎಂದ್ರೆ ಮ್ಯಾಂಚೆಸ್ಟರ್ನಲ್ಲಿ ಗೆಲುವು ಅನಿವಾರ್ಯ. ಹೀಗಾಗಿ ಬೂಮ್ರಾ ಅಖಾಡದಲ್ಲಿ ಇರಬೇಕು.
‘ಬೂಮ್ರಾ ಆಡಲೇಬೇಕು’
ಮಹತ್ವದ ಪಂದ್ಯವಾಗಿರೋದ್ರಿಂದಾಗಿ ಬೂಮ್ರಾ ಮುಂದಿನ ಟೆಸ್ಟ್ ಆಡಲೇಬೇಕೆಂದು ಹೇಳುತ್ತೇನೆ. ಬೂಮ್ರಾ ಆಡದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಸರಣಿ ಕತೆ ಮುಗಿಯಲಿದೆ. ಮುಂದಿನ 2 ಪಂದ್ಯಗಳಲ್ಲಿ ಬೂಮ್ರಾ ಆಡಲೇಬೇಕು. ಮೊದಲೇ 3 ಟೆಸ್ಟ್ ಮಾತ್ರ ಆಡೋದಾಗಿ ಬೂಮ್ರಾ ಹೇಳಿದ್ರು. ಆದ್ರೆ, ಈ ಸರಣಿ ಅಂತ್ಯದ ಬಳಿಕ ಸಾಕಷ್ಟು ಬಿಡುವಿದೆ. ತವರಿನಲ್ಲಿ ನಡೆಯೋ ಸರಣಿಗಳಿಂದ ರೆಸ್ಟ್ ಪಡೆಯಬಹುದು.
ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ
ವೈಯಕ್ತಿಕ ನಿರ್ಧಾರವಲ್ಲ.. ದೇಶ ಮುಖ್ಯ.!
ಬೂಮ್ರಾಗೆ ವಿಶ್ರಾಂತಿ ನೀಡೋ ವಿಚಾರವಾಗಿ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಖಡಕ್ ಮಾತುಗಳನ್ನಾಡಿದ್ದಾರೆ. ಈ ಹಿಂದೆ 2ನೇ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದನ್ನೂ ಪ್ರಶ್ನೆ ಮಾಡಿದ್ದಾರೆ.
ಭಾರತಕ್ಕಾಗಿ ಆಡೋದು ಮುಖ್ಯ
ಭಾರತಕ್ಕಾಗಿ ಆಡೋದು ಮುಖ್ಯ. ನೀನು ಫಿಟ್ ಇಲ್ಲ ಅಂದ್ರೆ, ಆಡಲೇಬೇಡ. ಮೊದಲ ಟೆಸ್ಟ್ ಪಂದ್ಯದ ಬಳಿಕ 7-8 ದಿನ ಅಂತರವಿತ್ತು. ಆದ್ರೂ, 2 ಪಂದ್ಯ ಆಡಲಿಲ್ಲ. ಇದನ್ನ ಒಪ್ಪಲು ಸಾಧ್ಯವಿಲ್ಲ. ಬೌಲರ್ಗಳು ಕೆಲ ಪಂದ್ಯಗಳನ್ನ ಆಯ್ಕೆ ಮಾಡಿಕೊಳ್ಳುವುದರ ಪರವಾಗಿ ನಾನಿಲ್ಲ. ಬೂಮ್ರಾ ವಿಶ್ವ ಶ್ರೇಷ್ಟ ಬೌಲರ್ ಮತ್ತು ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡಬಲ್ಲ. ಆದ್ರೆ, ಒಂದು ಪ್ರವಾಸದಲ್ಲಿದ್ದ ಮೇಲೆ ಎಲ್ಲಾ ಪಂದ್ಯ ಆಡಬೇಕು. ವೈಯಕ್ತಿಕ ಆದ್ಯತೆಗಳ ಮೇಲೆ ಪಂದ್ಯಗಳ ಆಯ್ಕೆ ಮಾಡುವ ಪ್ರಶ್ನೆಯೇ ಬರಬಾರದು.
ದಿಲೀಪ್ ವೆಂಗ್ಸರ್ಕರ್, ಮಾಜಿ ಕ್ರಿಕೆಟಿಗ
ದಿಲೀಪ್ ವೆಂಗಸರ್ಕರ್ ಅಭಿಪ್ರಾಯ ಸರಿಯಾಗೇ ಇದೆ. ಪಂದ್ಯದಿಂದ ಪಂದ್ಯಕ್ಕೆ ರಿಕವರಿಯಾಗಲು ಬೂಮ್ರಾ ಸಿಗ್ತಾ ಇದೆ. ಲಾರ್ಡ್ಸ್ ಟೆಸ್ಟ್ ಅಂತ್ಯವಾಗಿದ್ದು ಜುಲೈ 14ಕ್ಕೆ. ಮುಂದಿನ ಟೆಸ್ಟ್ ಆರಂಭವಾಗೋದು ಜುಲೈ 23ಕ್ಕೆ. ಅಂದ್ರೆ, ಲಾರ್ಡ್ಸ್ ಟೆಸ್ಟ್ನಿಂದ ಮ್ಯಾಂಚೆಸ್ಟರ್ ಟೆಸ್ಟ್ಗೆ 9 ದಿನಗಳ ಅಂತರವಿದೆ. ರಿಕವರಿಗೆ ಇಷ್ಟು ಸಮಯ ಸಾಕು ಅನ್ನೋದು ಎಕ್ಸ್ಪರ್ಟ್ಗಳ ಅಭಿಪ್ರಾಯವೂ ಆಗಿದೆ.
ಬೂಮ್ರಾಗಿಂತ ಸಿರಾಜ್ಗೆ ಬೇಕಿದೆ ವಿಶ್ರಾಂತಿ.!
ಅಸಲಿಗೆ ವಿಶ್ರಾಂತಿ ನೀಡಬೇಕಿರೋ ವೇಗಿ ಮೊಹಮ್ಮದ್ ಸಿರಾಜ್ಗೆ. ಈ ಪ್ರವಾಸದ ಮೂರೂ ಪಂದ್ಯಗಳಲ್ಲಿ ಸಿರಾಜ್ ದಣಿವರಿಯದೆ ಬೌಲಿಂಗ್ ಮಾಡಿದ್ದಾರೆ. ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ 6 ವಿಕೆಟ್ ಕಬಳಿಸಿ ತಂಡವನ್ನ ಗೆಲ್ಲಿಸಿದ್ದಾರೆ. 3 ಪಂದ್ಯಗಳಿಂದ 109 ಓವರ್ಗಳನ್ ಬೌಲಿಂಗ್ ಮಾಡಿದ್ದಾರೆ. ಬೂಮ್ರಾ ಮಾಡಿರೋದು 86.4 ಓವರ್ ಮಾತ್ರ.!
ಇದನ್ನೂ ಓದಿ: ಕೇರಳಕ್ಕೆ ಗುಡ್ಬೈ ಹೇಳಲಿರೋ ಬ್ರಿಟನ್ F-35 ಫೈಟರ್ ಜೆಟ್.. ವಿಶ್ವದ ದುಬಾರಿ ವಿಮಾನಕ್ಕೆ ಏನಾಗಿತ್ತು..?
ಈ ಪ್ರವಾಸ ಮಾತ್ರವಲ್ಲ.. 2023ರ ಆರಂಭದಿಂದ ಈವರೆಗೆ ಸಿರಾಜ್ ಭಾರತ ತಂಡ ಆಡಿದ 27 ಟೆಸ್ಟ್ಗಳ ಪೈಕಿ 24 ಪಂದ್ಯಗಳನ್ನ ಆಡಿದ್ದಾರೆ. 569.4 ಓವರ್ ಬೌಲಿಂಗ್ ಮಾಡಿದ್ದಾರೆ. ಟೀಮ್ ಇಂಡಿಯಾದ ಬೌಲರ್ಗಳ ಪೈಕಿ ಅತಿ ಹೆಚ್ಚು ಓವರ್ ಹಾಕಿರೋದು ಮೊಹಮ್ಮದ್ ಸಿರಾಜ್. ಸಿರಾಜ್ ಬಿಟ್ರೆ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಇದಕ್ಕಿಂತ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ಬಳಿಕ ಬೂಮ್ರಾಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದೆ. ಸರಣಿ ಜೀವಂತವಾಗಿರಿಕೊಳ್ಳಲು ಮ್ಯಾಂಚೆಸ್ಟರ್ನಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಓಲ್ಡ್ ಟ್ರಾಪರ್ಡ್ನ ಪಿಚ್ ಪೇಸ್ & ಬೌನ್ಸ್ ಹೊಂದಿರೋದ್ರಿಂದ ಬೂಮ್ರಾ ಪರಿಣಾಮಕಾರಿ ಆಗಲಿದ್ದಾರೆ. ಹೀಗಾಗಿ, ಬೂಮ್ರಾನ ಕಣಕ್ಕಿಳಿಸಿದ್ರೆ, ಟೀಮ್ ಇಂಡಿಯಾಗೆ ಅಡ್ವಾಂಟೇಜ್. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಯುದ್ಧಭೂಮಿಯಲ್ಲಿ ಹೋರಾಡುವವನು ನಿಜವಾದ ವೀರನೇ ಹೊರತು, ಹಿಂದೆ ಸರಿಯುವವನಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ