/newsfirstlive-kannada/media/post_attachments/wp-content/uploads/2025/02/TMK_ONION_2.jpg)
ಬೈ ಒನ್ ಗೆಟ್ ಒನ್ ಫ್ರೀ, ಇಷ್ಟು ಪರ್ಸೆಂಟ್ ಆಫ್ ಈ ರೀತಯ ರಿಯಾಯಿತಿಗಳನ್ನು ದೊಡ್ಡ ದೊಡ್ಡ ಮಾಲ್ಗಳಲ್ಲಿ ಕೊಡುವುದು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಈರುಳ್ಳಿ ಮಂಡಿ ಮಾಲೀಕ, ಮಾಲ್ಗಳ ಆಫರ್ಗೆ ಟಕ್ಕರ್ ಕೊಡ್ತಿದ್ದಾರೆ. ಈರುಳ್ಳಿ ಖರೀದಿಸುವ ಗ್ರಾಹಕರಿಗೆ ಪ್ರತಿದಿನ ಬಹುಮಾನ ಕೊಡ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಗೋಲ್ಡ್ ಆಫರ್ ನೀಡಿದ್ದಾನೆ.
ಈರುಳ್ಳಿ ಖರೀದಿ ಮಾಡಿ, ಬಹುಮಾನ ಗೆಲ್ಲಿ. ಹೀಗೊಂದು ಆಫರ್ನ ಇರುವ ಬೋರ್ಡ್ ಅನ್ನು ತುಮಕೂರಿನ ಅಂತರಸನಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಕಲಾಗಿದೆ. ಪಿ.ವಿ. ನೃಪತುಂಗ ಆ್ಯಂಡ್ ಸನ್ಸ್ನ ಈರುಳ್ಳಿ ಮಂಡಿಯಿಂದ ವಿಶೇಷ ಆಫರ್ ಘೋಷಣೆ ಮಾಡಿದ್ದಾರೆ.
ಈರುಳ್ಳಿ ಖರೀದಿಸಿದ್ರೆ ಸಿಗಲಿದೆ ಬಂಗಾರದ ಬಹುಮಾನ!
100 ರೂ. ಮೇಲ್ಪಟ್ಟು ಈರುಳ್ಳಿ ಖರೀದಿಸಿದವರಿಗೆ ಈ ಆಫರ್ ಅನ್ವಯ ಆಗುತ್ತೆ. ಖರೀದಿಸಿದ್ದ ಪ್ರತಿಯೊಬ್ಬರಿಗೂ ಕೂಪನ್ ನೀಡಿ, ಗ್ರಾಹಕರ ಮಾಹಿತಿ ಸಮೇತ ಲಕ್ಕಿ ಡ್ರಾ ಡಬ್ಬಿಯಲ್ಲಿ ಹಾಕಲಾಗ್ತಿದೆ. ಪ್ರತಿದಿನ ರಾತ್ರಿ 7 ಗಂಟೆಗೆ ಗ್ರಾಹಕರ ಸಮ್ಮುಖ ಬಾಕ್ಸ್ ಓಪನ್ ಮಾಡಲಾಗ್ತಿದೆ. ಲಕ್ಕಿ ಡಿಪ್ ಮೂಲಕ ಕೂಪನ್ ಆಯ್ಕೆ ನಡೆಯಲಿದ್ದು, ವಿಜೇತರಿಗೆ ಗೃಹಪಯೋಗಿ ವಸ್ತುಗಳು ಬಹುಮಾನವಾಗಿ ಸಿಗ್ತಿದೆ.
ನಾವು ಗೌರಿ ಬಿದನೂರು ತಾಲೂಕಿನವರು. ಮಾರ್ಕೆಟ್ಗೆಂದು ಬಂದಿದ್ದೇವೆ. ಬೋರ್ಡ್ ನೋಡಿ ನಾನು ಈರುಳ್ಳಿ ಖರೀದಿ ಮಾಡಿದೆ. ಆದರೆ ಲಕ್ಕಿ ಡ್ರಾದಲ್ಲಿ 1500 ರೂಪಾಯಿಯ ಮನೆಯ ವಸ್ತುವೊಂದು ಬಹುಮಾನವಾಗಿ ಬಂದಿದೆ.
ಸುಬ್ಬರಾಜು, ಬಹುಮಾನ ವಿಜೇತರು
ಈರುಳ್ಳಿ ಮಂಡಿ ಆರಂಭ ಆಗಿ ಎರಡು ವರ್ಷ ಆಯ್ತು. ಅದರ ಪ್ರಯುಕ್ತ ಫೆ.1 ರಿಂದ ಮೇ 31ರ ವರೆಗೆ ಪ್ರತಿದಿನ ಆಫರ್ ಇರಲಿದೆ. ಇನ್ನೂ ವಿಶೇಷ ಅಂದ್ರೆ ಯುಗಾದಿ ಹಬ್ಬಕ್ಕೆ ಬಹುಮಾನ ವಿಜೇತ ಗ್ರಾಹಕರಿಗೆ 10 ಗ್ರಾಂ ಚಿನ್ನದ ರಿಂಗ್ ನೀಡುವ ಉದ್ದೇಶ ಇದೆ. ಪ್ರತಿದಿನ ರೈತರ ಭಾವಚಿತ್ರಕ್ಕೆ ಪೂಜೆ ಮಾಡಿ ವ್ಯಾಪಾರ ಆರಂಭಿಸುವ ನೃಪತುಂಗ, ದೊಡ್ಡ ದೊಡ್ಡ ಮಾಲ್ಗಳಲ್ಲಿ ಆಫರ್ ಕೊಡುವಾಗ ರೈತರ ಬೆಳೆಗಳಿಗೆ ಯಾಕೆ ಆಫರ್ ಕೊಡ್ಬಾರದು ಅಂತಾರೆ.
ಇದನ್ನೂ ಓದಿ: Kumbh Mela; ಮಹಾಕುಂಭಕ್ಕೆ ಹೋಗಲು ಆಗದ ಕನ್ನಡಿಗರಿಗೆ ಸರ್ಕಾರದಿಂದ ಗುಡ್ನ್ಯೂಸ್
ಏನೇ ಮಾಡಿದರೂ ಸ್ವಲ್ಪ ಯೋಚನೆ ಮಾಡಿ ಇಡಬೇಕು. ಎಷ್ಟು ದಿನದಿಂದ ಕೂಪನ್ ಕಲೆಕ್ಟ್ ಮಾಡಬೇಕು. ಈ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಆಫರ್ಗಳನ್ನು ಕೊಡಲಾಗುತ್ತದೆ.
ನೃಪತುಂಗ, ಈರುಳ್ಳಿ ಮಂಡಿ ಮಾಲೀಕ
ಕೇವಲ ಈರುಳ್ಳಿಗೆ ಆಫರ್ ಕೊಟ್ಟು ಈ ಮಂಡಿ ಮಾಲೀಕ ಮುನ್ನೆಲೆ ಬಂದಿಲ್ಲ. ಮಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 27 ರಿಂದ 30 ಸಾವಿರ ಸಂಬಳ ಸಹ ನೀಡ್ತಿದ್ದಾರೆ.. ಬಿಇ. ಓದಿದವರಿಗೂ 30 ಸಾವಿರ ಸಂಬಳ, ಈರುಳ್ಳಿ ತೂಕ ಮಾಡೋನಿಗೂ 30 ಸಾವಿರ ಅನ್ನೋ ಜಾಹಿರಾತು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ತುಮಕೂರಿನ ಈರುಳ್ಳಿ ಮಂಡಿ ಮಾಲೀಕ ಸದ್ಯ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ