/newsfirstlive-kannada/media/post_attachments/wp-content/uploads/2024/08/NIKHIL.jpg)
ನವದೆಹಲಿ: ದೇಶದ 14 ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಚುನಾವಣಾ ಆಯೋಗವು ಚುನಾವಣೆ ನಡೆಸಿತ್ತು. ಸದ್ಯ ಇದೀಗ ಈ ಎಲ್ಲ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಿದ್ದು ಅಂತಿಮ ಫಲಿತಾಂಶ ಕೂಡ ಇಂದೇ ಹೊರ ಹೊಮ್ಮಲಿದೆ. ಇದರಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ಎದೆಯ ಬಡಿತ ಇನ್ನಷ್ಟು ಜೋರಾಗಿದೆ.
ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳು ಸೇರಿ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಈ 14 ರಾಜ್ಯಗಳ 48 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಈ ಕ್ಷೇತ್ರಗಳ ಫಲಿತಾಂಶ ಇವತ್ತು ಏನೆಂದು ಗೊತ್ತಾಗಲಿದೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಉಪ ಚುನಾವಣೆ ನಡೆದಿತ್ತು. ಚನ್ನಪಟ್ಟಣದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಉಳಿದಂತೆ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪೈಪೋಟಿ ಇದೆ. ಗೆಲುವಿನ ಮಾಲೆ ಯಾರಿಗೆ ಒಲಿಯಲಿದೆ ಎಂಬುದು ಮತ ಎಣಿಕೆ ಬಳಿಕ ತಿಳಿದು ಬರಲಿದೆ.
ಇದನ್ನೂ ಓದಿ:ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಫಲಿತಾಂಶ.. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ; ಸಮೀಕ್ಷೆ ನಿಜವಾಗುತ್ತಾ?
ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕುತೂಹಲಕಾರಿಯಾಗಿದೆ. ಏಕೆಂದರೆ ಆಸ್ಪತ್ರೆ ವೈದ್ಯೆಯೊಬ್ಬರ ಜೀವ ತೆಗೆದ ಪ್ರಕರಣ ಬಂಗಾಳದ್ಯಾಂತ ಭಾರೀ ಸಂಚಲನ ಮೂಡಿಸಿತ್ತು. ಹೀಗಾಗಿ ಆಡಳಿತ ಪಕ್ಷ ಟಿಎಂಸಿಯನ್ನು ಜನರು ಕಡೆಗಣಿಸುತ್ತಾರಾ, ಕೈ ಹಿಡಿಯುತ್ತಾರಾ ಎಂದು ಕಾದು ನೋಡಬೇಕಿದೆ.
ಬಿಹಾರದಲ್ಲಿ 4 ವಿಧಾನಸಭಾ ಸ್ಥಾನಗಳಿಗೆ 38 ಅಭ್ಯರ್ಥಿಗಳು ಸ್ಪರರ್ಧಿಸಿದ್ರೆ, ಛತ್ತೀಸ್‌ಗಢದ ರಾಯ್‌ಪುರ ನಗರ ದಕ್ಷಿಣ ಕ್ಷೇತ್ರಕ್ಕೆ ಈ ಒಂದೇ ಒಂದು ಸ್ಥಾನಕ್ಕೆ ಒಟ್ಟು 30 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಯಾರು ಗೆಲ್ಲುತ್ತಾರೋ ಎನ್ನುವುದು ಕುತೂಹಲವಿದೆ. ರಾಜಸ್ಥಾನ ಉಪಚುನಾವಣೆಯಲ್ಲಿ 7 ಸ್ಥಾನಗಳಿಗೆ 69 ಅಭ್ಯರ್ಥಿಗಳು ಸ್ಪರ್ಧಿಸಿದ್ದು ರಿಸಲ್ಟ್ ಅನ್ನು ಎದುರು ನೋಡುತ್ತಿದ್ದಾರೆ.
ಬ್ರಿಜ್‌ಮೋಹನ್ ಅಗರವಾಲ್ ರಾಜೀನಾಮೆ ನಂತರ ಛತ್ತೀಸ್‌ಗಢದ ರಾಯ್‌ಪುರ ನಗರದ ದಕ್ಷಿಣ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಬಿಜೆಪಿಯ ಸುನೀಲ್ ಕುಮಾರ್ ಸೋನಿ ಮತ್ತು ಕಾಂಗ್ರೆಸ್‌ನ ಆಕಾಶ್ ಶರ್ಮಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಒಟ್ಟು 30 ಅಭ್ಯರ್ಥಿಗಳು ಕಣದಲ್ಲಿ ಇದ್ದಿದ್ದರು. ಇದರಿಂದ ಈ ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ