ಬೈ ಎಲೆಕ್ಷನ್​ ಭರಾಟೆ​; ಇಂದು ಮೂರು ಕ್ಷೇತ್ರಗಳಲ್ಲೂ ಘಟಾನುಘಟಿ ನಾಯಕರಿಂದ ಪ್ರಚಾರ​

author-image
Bheemappa
Updated On
ಬೈ ಎಲೆಕ್ಷನ್​ ಭರಾಟೆ​; ಇಂದು ಮೂರು ಕ್ಷೇತ್ರಗಳಲ್ಲೂ ಘಟಾನುಘಟಿ ನಾಯಕರಿಂದ ಪ್ರಚಾರ​
Advertisment
  • ಮೊಮ್ಮಗನ ಪರ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಕ್ಯಾಂಪೇನ್
  • ಸೈನಿಕ ಸಿ.ಪಿ ಯೋಗೇಶ್ವರ್‌ ಪರ ಡಿ.ಕೆ ಶಿವಕುಮಾರ್ ಮತಯಾಚನೆ
  • ಸಂಡೂರು ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚಾರ

ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಕದನ ರಂಗೇರಿದೆ. ಮತದಾನಕ್ಕೆ ಇನ್ನು 9 ದಿನಗಳಷ್ಟೇ ಬಾಕಿ ಇದೆ. ಬಿಜೆಪಿ-ಜೆಡಿಎಸ್ ದೋಸ್ತಿ ಹಾಗೂ ಆಡಳಿತಾರೂಢ ಕಾಂಗ್ರೆಸ್​​ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಇಂದು ಎರಡೂ ಕಡೆಯ ಘಟಾನುಘಟಿ ನಾಯಕರು ಕದನ ಕಣಕ್ಕಿಳಿದು ಅಬ್ಬರಿಸಲು ಸಜ್ಜಾಗಿದ್ದಾರೆ.

ಬೊಂಬೆನಾಡು ಚನ್ನಪಟ್ಟಣ, ಏಲಕ್ಕಿ ನಾಡು ಶಿಗ್ಗಾಂವಿ, ಗಣಿನಾಡು ಸಂಡೂರು ಈ ಮೂರು ಕ್ಷೇತ್ರಗಳ ಉಪಚುನಾವಣೆ ದೀಪಾವಳಿ ಪಟಾಕಿಯಷ್ಟೇ ಸದ್ದು ಮಾಡುತ್ತಿದೆ. ಚನ್ನಪಟ್ಟಣಕ್ಕಾಗಿ ಡಿ.ಕೆ ಶಿವಕುಮಾರ್ ಸಹೋದರರು ಹಾಗೂ ದಳಪತಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಹಲವು ವರ್ಷಗಳ ಬಳಿಕ ಖಾತೆ ತೆರೆಯುವ ಉಮೇದಿನಲ್ಲಿದೆ. ಇತ್ತ ಗಣಿನಾಡು ಸಂಡೂರಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಕಸರತ್ತು ಕೂಡ ನಡೀತಾ ಇದ್ದು, 3 ಕ್ಷೇತ್ರಗಳಲ್ಲೂ ಪ್ರಚಾರದ ಭರಾಟೆ ಜೋರಾಗಿದೆ.

ಇದನ್ನೂ ಓದಿ:ರೈತರ ಜಮೀನುಗಳಿಗೆ ವಕ್ಫ್​ ನೋಟಿಸ್​​.. ಇಂದು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

publive-image

ಇಂದು ಶಿಗ್ಗಾಂವಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಮತಬೇಟೆ

ಶಿಗ್ಗಾಂವಿಯಲ್ಲಿ ಹಲವು ವರ್ಷಗಳ ಬಳಿಕ ಗೆಲುವಿನ ಹಳಿಗೆ ಮರಳಲು ಕಾಂಗ್ರೆಸ್ ಪಣತೊಟ್ಟಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಎದುರಾಗಿದ್ದ ಬಂಡಾಯವನ್ನು ಶಮನ ಮಾಡಿದ್ದ ಸಿಎಂ, ಇವತ್ತು ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇವತ್ತು ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಸಿಎಂ ಪ್ರಚಾರ ಮಾಡಲಿದ್ದಾರೆ. 2 ದಿನಗಳ ಕಾಲ ಬಿಜೆಪಿಯ ಭದ್ರಕೋಟೆಯಲ್ಲಿ ಭರ್ಜರಿ ಮತಯಾಚನೆ ಮಾಡಲಿದ್ದಾರೆ.

ಮೊಮ್ಮಗನ ಪರ ಮಾಜಿ ಪ್ರಧಾನಿ ದೇವೇಗೌಡರಿಂದ ಮತಬೇಟೆ!

ಇವತ್ತು ಮೂರು ಕ್ಷೇತ್ರಗಳಲ್ಲೂ ಘಟಾನುಘಟಿ ನಾಯಕರುಗಳು ಪ್ರಚಾರ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದ ಅಖಾಡಕ್ಕೆ ಇವತ್ತು ದೇವೇಗೌಡ್ರು ಇಳಿಯುತ್ತಿದ್ದಾರೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ದೇವೇಗೌಡರು ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದೆಲ್ಲೆಡೆ ಸುತ್ತಾಡಿ ಮೊಮ್ಮಗನ ಪರ ಮತಬೇಟೆ ನಡೆಸಲಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​​ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ರಣಕಲಿ ಸೈನಿಕ ಸಿ.ಪಿ ಯೋಗೇಶ್ವರ್‌ ಪರ ಮತಯಾಚಿಸಲಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ.. ರೈತರಿಗೆ ಕೊಟ್ಟ ನೋಟಿಸ್ ವಾಪಸ್​ ಪಡೆಯಲು ಸೂಚನೆ

publive-image

ಗಣಿಭೂಮಿ ಸಂಡೂರು ಗೆಲ್ಲಲು ಬಿಜೆಪಿ ರಣತಂತ್ರ!

ಬೈಎಲೆಕ್ಷನ್​​ ಮಾಸ್ಟರ್​​.. ಪಕ್ಷಕ್ಕೆ ನೆಲೆಯೇ ಇಲ್ಲದ ಕಡೆ ಕಮಲ ಅರಳಿಸಿದ ಕೀರ್ತಿ ಹೊಂದಿರುವ ಬಿ.ವೈ.ವಿಜಯೇಂದ್ರ ಈಗಾಗಲೇ ಸಂಡೂರು ಕಣಕ್ಕೆ ಎಂಟ್ರಿ ಕೊಟ್ಟಿದ್ದು ಪ್ರಚಾರ ನಡೆಸ್ತಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನ ಛಿದ್ರ ಮಾಡಿ ಮೊದಲ ಬಾರಿಗೆ ಖಾತೆ ತೆರೆಯಲು ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಈಗಾಗಲೇ ಗಣಿಧಣಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಜಂಟಿ ಪ್ರಚಾರ ನಡೆಸಿದ್ದು ಈಗ ವಿಜಯೇಂದ್ರ ಆಗಮನದಿಂದ ಮತ್ತಷ್ಟು ಬಲ ಬಂದಂತಾಗಲಿದೆ. ಇವತ್ತೂ ಕೂಡ ಸಂಡೂರಿನಲ್ಲಿ ಸ್ಥಳೀಯ ನಾಯಕರ ಜೊತೆ ಸಭೆ ನಡೆಸಿ, ಗೆಲುವಿಗಾಗಿ ರಣತಂತ್ರ ರೂಪಿಸಲಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಇಂದಿನಿಂದ ಪ್ರಚಾರಕ್ಕೆ ಸಚಿವರ ದಂಡೇ ಹರಿದುಬರಲಿದೆ.

ಚನ್ನಪಟ್ಟಣದಲ್ಲಿ ಗೌಡರ ಎಂಟ್ರಿಯಿಂದ ನಿಖಿಲ್​ಗೆ ಆನೆಬಲ ಬಂದಂತಾಗಿದೆ. ಮತ್ತೊಂದೆಡೆ ದೀಪಾವಳಿ ಮುಗಿಸಿ ಉಪಚುನಾವಣೆಯತ್ತ ಚಿತ್ತ ಹರಿಸಿರುವ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರಚಾರ ತಂತ್ರ ಹೆಣೆದಿದ್ದಾರೆ. ಮೂರು ಕ್ಷೇತ್ರಗಳಲ್ಲಿನ ಪ್ರಚಾರ ತಂತ್ರ ಯಾರ ಪರ ಫಲಿತಾಂಶ ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment