/newsfirstlive-kannada/media/media_files/2026/03/07/aastha-jain-2026-03-07-16-37-53.jpg)
ಛಲವೊಂದಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದನ್ನು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಆಸ್ಥಾ ಜೈನ್ ಸಾಬೀತುಪಡಿಸಿದ್ದಾರೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2025ರ ಫಲಿತಾಂಶ ಪ್ರಕಟವಾಗಿದ್ದು, ಆಸ್ಥಾ ಅಖಿಲ ಭಾರತ ಮಟ್ಟದಲ್ಲಿ 9ನೇ ಱಂಕ್ ಪಡೆಯುವ ಮೂಲಕ ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ.
ಐಪಿಎಸ್‌ನಿಂದ ಐಎಎಸ್‌ಗೆ ಹಾದಿ ಸುಲಭವಿರಲಿಲ್ಲ!
ಆಸ್ಥಾ ಜೈನ್ ಅವರ ಈ ಯಶಸ್ಸು ಹೆಚ್ಚು ವಿಶೇಷವಾಗಿರಲು ಕಾರಣ ಅವರ ಹಿಂದಿನ ಹೋರಾಟ. ಆಸ್ಥಾ ಈಗಾಗಲೇ ಐಪಿಎಸ್ (IPS) ಅಧಿಕಾರಿಯಾಗಿ ದೇಶ ಸೇವೆ ಮಾಡುತ್ತಿದ್ದಾರೆ.
- ಮೊದಲ ಪ್ರಯತ್ನ: 131ನೇ ಱಂಕ್ ಪಡೆದು ಐಪಿಎಸ್‌ಗೆ ಆಯ್ಕೆಯಾಗಿದ್ದರು.
- ಎರಡನೇ ಪ್ರಯತ್ನ: ಐಎಎಸ್ ಆಗುವ ಗುರಿಯೊಂದಿಗೆ ಮತ್ತೊಮ್ಮೆ ಪರೀಕ್ಷೆ ಬರೆದಾಗ 186ನೇ ಱಂಕ್ ಬಂದಿತ್ತು.
- ಮೂರನೇ ಪ್ರಯತ್ನ: ಹಠ ಬಿಡದ ಆಸ್ಥಾ, ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯುವ ನಡುವೆಯೇ ಓದಿ ಅಂತಿಮವಾಗಿ 9ನೇ ಱಂಕ್ ಗಳಿಸಿ ತಮ್ಮ ಐಎಎಸ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಪೊಲೀಸ್ ತರಬೇತಿಯ ನಡುವೆ ಸತತ ಅಧ್ಯಯನ
ಐಪಿಎಸ್ ಅಧಿಕಾರಿಯಾಗುವುದು ಸುಲಭದ ಮಾತಲ್ಲ. ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ದಿನವಿಡೀ ಕಠಿಣ ದೈಹಿಕ ತರಬೇತಿ ಇರುತ್ತಿತ್ತು. ಇಂತಹ ದಣಿವಿರುವ ಕೆಲಸದ ನಡುವೆಯೂ ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದ ಆಸ್ಥಾ, ಕೇವಲ ಒಂದು ವರ್ಷದಲ್ಲಿ 186ನೇ ಱಂಕ್‌ನಿಂದ ಟಾಪ್ 10ರ ಪಟ್ಟಿಗೆ ಜಿಗಿಯುವ ಮೂಲಕ ತಮ್ಮ ಶಿಸ್ತು ಮತ್ತು ಏಕಾಗ್ರತೆಯನ್ನು ತೋರಿಸಿದ್ದಾರೆ.
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ
ಆಸ್ಥಾ ಅವರ ತಂದೆ ಶಾಮ್ಲಿ ಜಿಲ್ಲೆಯ ಕಾಂದ್ಲಾ ಎಂಬ ಪುಟ್ಟ ಪಟ್ಟಣದಲ್ಲಿ ಸಣ್ಣ ಸಿಹಿತಿಂಡಿ ಮತ್ತು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದ ಆಸ್ಥಾ ಅವರಿಗೆ ಸಂಪನ್ಮೂಲಗಳ ಕೊರತೆಯಿದ್ದರೂ, ಅವರ ತಂದೆ-ತಾಯಿ ಮಗಳ ಶಿಕ್ಷಣಕ್ಕೆ ಪೂರ್ಣ ಬೆಂಬಲ ನೀಡಿದ್ದರು. ಶಾಮ್ಲಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಆಸ್ಥಾ, ನಂತರ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ 'ಮಿರಾಂಡಾ ಹೌಸ್' ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು.
ಇಂದಿನ ಕಾಲದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಲಕ್ಷಾಂತರ ರೂಪಾಯಿ ವೆಚ್ಚದ ಕೋಚಿಂಗ್ ಬೇಕು ಎಂಬ ಭ್ರಮೆಯಿದೆ. ಆದರೆ ಆಸ್ಥಾ ಜೈನ್ ಯಾವುದೇ ದೊಡ್ಡ ಕೋಚಿಂಗ್ ಸಂಸ್ಥೆಗಳ ಮೊರೆ ಹೋಗಲಿಲ್ಲ. ಬದಲಾಗಿ ಸ್ವಯಂ ಅಧ್ಯಯನ (Self-study), ಕಟ್ಟುನಿಟ್ಟಾದ ದಿನಚರಿ ಮತ್ತು ಸ್ವಂತ ಕಾರ್ಯತಂತ್ರದ ಮೂಲಕ ಅವರು ಈ ಐತಿಹಾಸಿಕ ಜಯ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us