/newsfirstlive-kannada/media/media_files/2025/08/07/state-scholarship-portal01-2025-08-07-13-37-57.jpg)
ಕರ್ನಾಟಕ ರಾಜ್ಯ ಸರ್ಕಾರ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್ ನೀಡಲು ವಿದ್ಯಾರ್ಥಿವೇತನ ಯೋಜನೆಯನ್ನು ರೂಪಿಸಿದೆ. ವಿದ್ಯಾರ್ಥಿಗಳು ಸ್ಟೇಟ್ ಸ್ಕಾಲರ್ ಷಿಪ್ ಪೋರ್ಟಲ್ ಅಂದ್ರೆ SSP ಮೂಲಕ ವಿದ್ಯಾರ್ಥಿವೇತನದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇಡೀ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳಿಗೆ ಪ್ರಕ್ರಿಯೆಯನ್ನು ಸರಳಗೊಳಿಸಲು ನಿರ್ಮಿಸಲಾದ ಪೋರ್ಟಲ್ ಇದಾಗಿದೆ. ಸ್ಕಾಲರ್ ಷಿಪ್‌ಗೆ ಅಪ್ಲೈ ಮಾಡಲು ಡಿಜಿಟಲ್ ಸ್ನೇಹಿ ಪೋರ್ಟಲ್ SSP ಅಂತಲೂ ಕರೆಯಬಹುದು.
ಇನ್ನೂ ಸ್ಟೇಟ್ ಸ್ಕಾಲರ್ ಷಿಪ್ ಪೋರ್ಟಲ್ ಏನು ಅಂತಾ ನೋಡೋದಾದ್ರೆ
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಮೂಲಕ ಸಹಾಯ ಮಾಡಲು ಶುರು ಮಾಡಿದ ಪೋರ್ಟಲ್ SSP. ಇದು ಶಾಲಾ ಶುಲ್ಕ, ಪುಸ್ತಕಗಳು ಮತ್ತು ಇತರ ಅಗತ್ಯಗಳಂತಹ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ. ಇಲ್ಲಿ ಸ್ಕಾಲರ್ ಷಿಪ್‌ಗೆ ಅಪ್ಲೈ ಮಾಡಲು ವಿದ್ಯಾರ್ಥಿಗಳಿಗೆ ಕೆಲವು ಮಾನದಂಡಗಳಿವೆ. ವಿದ್ಯಾರ್ಥಿಗಳು ಎಜುಕೇಷನ್ ಮುಂದುವರಿಸಲು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
SSP ಪೋರ್ಟಲ್ ಮೂಲಕ ಸ್ಕಾಲರ್ ಷಿಪ್ ನೀಡೋ ಇಲಾಖೆಗಳು ಯಾವುವು ಅಂತಾ ನೋಡೋದಾದ್ರೆ.
ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ SSP ಪೋರ್ಟಲ್ ಮೂಲಕ ಸ್ಕಾಲರ್ ಷಿಪ್ ನೀಡೋ ಇಲಾಖೆಗಳು ಆಗಿವೆ.
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳಿಗೆ ಅರ್ಹರು ಅರ್ಜಿ ಸಲ್ಲಿಸಬಹುದು. ಈ ಪೋರ್ಟಲ್ನಲ್ಲಿ ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿಯನ್ನು ರಿಯಲ್ ಟೈಮ್ನಲ್ಲಿ ಚೆಕ್ ಮಾಡಬಹುದು. ಇದನ್ನು ಮಾಡಲು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ID ಯೊಂದಿಗೆ ಲಾಗಿನ್ ಆಗಬೇಕು. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ತಮ್ಮ SATS ID ಯನ್ನು ಬಳಸಿಕೊಂಡು ಪರಿಶೀಲಿಸಬಹುದು. ಇದಕ್ಕೂ ಮುನ್ನ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
SSP ವಿದ್ಯಾರ್ಥಿವೇತನಗಳಿಗೆ ಅರ್ಹತಾ ಮಾನದಂಡಗಳು ಏನು?
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ವಾರ್ಷಿಕ ಕುಟುಂಬದ ಆದಾಯವು 2.5 ಲಕ್ಷ ರೂ. ಮೀರಬಾರದು. ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. SC, ST, OBC, ಅಲ್ಪಸಂಖ್ಯಾತ, ಆರ್ಥಿಕ ಹಿಂದುಳಿದವರು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ SSP ವಿದ್ಯಾರ್ಥಿವೇತನ ಪೋರ್ಟಲ್ ssp.postmatric.karnataka.gov.in ಗೆ ಭೇಟಿ ನೀಡಿ. ಹೊಸ ಖಾತೆಯನ್ನು ರಚಿಸಿ ಬಟನ್ ಕ್ಲಿಕ್ ಮಾಡಿ ನೋಂದಣಿ ಪೂರ್ಣಗೊಳಿಸಿ. ಅದಕ್ಕೆ ಅಗತ್ಯವಿರುವ ದಾಖಲೆಗಳು ಅಪ್ಲೋಡ್ ಮಾಡಿ. ಲಾಗಿನ್ ಆದ ನಂತರ ಡ್ಯಾಶ್‌ಬೋರ್ಡ್‌ನಲ್ಲಿರುವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿ.
ಸಮಾಜ ಕಲ್ಯಾಣ ಇಲಾಖೆ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 7,000 ರೂ.ವರೆಗೆ ಸಹಾಯಧನ ನೀಡಲಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ₹8,000, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 13,500 ರೂ. ವರೆಗೆ ನೀಡಲಿದೆ.
ಬುಡಕಟ್ಟು ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ST ವಿದ್ಯಾರ್ಥಿಗಳಿಗೆ ಕುಟುಂಬದ ಆದಾಯ ₹2.5 ಲಕ್ಷದವರೆಗೆ ಇದ್ದರೆ 100% ಶುಲ್ಕ ಮರುಪಾವತಿ ಮಾಡಲಿದೆ. 10 ಲಕ್ಷ ರೂ.ವರೆಗೆ ಆದಾಯವಿರುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ 50% ಶುಲ್ಕ ಮರುಪಾವತಿ ಮಾಡಲಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಸಿರಿ ಸ್ಕಾಲರ್ಶಿಪ್ ನೀಡಲಿದೆ. ಪ್ರತಿ ಶೈಕ್ಷಣಿಕ ವರ್ಷಕ್ಕೆ 10 ತಿಂಗಳ ಕಾಲ 1,500 ರೂ. ಮಾಸಿಕ ಸ್ಟೈಪೆಂಡ್ (ಊಟ ಮತ್ತು ವಸತಿಗಾಗಿ) ನೀಡಲಿದೆ. ಪ್ರತಿ ಅರ್ಹ ವಿದ್ಯಾರ್ಥಿಗೆ ವಾರ್ಷಿಕ 4,000 ರೂ. ಸಿಗಲಿದೆ. ಕೋರ್ಸ್‌ನ ಆಧಾರದ ಮೇಲೆ 5,000 ರೂ. ರಿಂದ 20,000 ರೂ.ವರೆಗೆ ನೀಡಲಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕರ್ನಾಟಕದ ಅಲ್ಪಸಂಖ್ಯಾತರಿಗೆ ಕೋರ್ಸ್ ಮತ್ತು ತರಗತಿಯ ಆಧಾರದ ಮೇಲೆ 3,000 ರೂ. ರಿಂದ 10,000 ರೂ. ವರೆಗೆ ಶುಲ್ಕ ಮರುಪಾವತಿ ಕೊಡಲಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯೂ ಇಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ಡಿಪ್ಲೊಮಾಗೆ ಶುಲ್ಕ ಮರುಪಾವತಿ ಮಾಡಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳೆರಡಕ್ಕೂ ಸಂಪೂರ್ಣ ಶುಲ್ಕ ಮರುಪಾವತಿ ಕೊಡಲಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕೂಡ ಸಂದೀಪನಿ ವಿದ್ಯಾರ್ಥಿವೇತನ ಕೊಡಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ಪೋರ್ಟಲ್ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ 1 ರಿಂದ 10ನೇ ತರಗತಿ ಪಾಸ್ ಆದವ್ರು, ಪಿಯುಸಿ, ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ಗೆ ಅಪ್ಲೈ ಮಾಡಬಹುದು.