ಕಾಲೇಜುಗಳಲ್ಲಿ ಜಾತಿ ನಿಂದನೆಗೆ ಯುಜಿಸಿ ಕಡಿವಾಣ : ಹೊಸ ನಿಯಮಕ್ಕೆ ಪ್ರಬಲ ಜಾತಿಗಳ ತೀವ್ರ ವಿರೋಧ

ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಜಾತಿ ತಾರತಮ್ಯ ತಪ್ಪಿಸಲು ಯುಜಿಸಿ, ಸಮಾನತೆ ಉತ್ತೇಜನ ನಿಯಮ-2026 ಅನ್ನು ಜಾರಿಗೆ ತಂದು ಅಧಿಸೂಚನೆ ಹೊರಡಿಸಿದೆ. ಪ್ರತಿಯೊಂದು ವಿವಿ, ಕಾಲೇಜು ಸಮಾನತೆ ಸಮಿತಿಯನ್ನು ಕಡ್ಡಾಯವಾಗಿ ರಚನೆ ಮಾಡಬೇಕು. ಆದರೇ, ಇದಕ್ಕೆ ಮೇಲ್ವರ್ಗಗಳು ವಿರೋಧಿಸುತ್ತಿವೆ.

author-image
Chandramohan
UGC

ಯುಜಿಸಿ ನಿಯಮದ ಬಗ್ಗೆ ಪರ-ವಿರೋಧ ಚರ್ಚೆ

Advertisment
  • ಯುಜಿಸಿ ನಿಯಮದ ಬಗ್ಗೆ ಪರ-ವಿರೋಧ ಚರ್ಚೆ
  • ಜಾತಿ ತಾರತಮ್ಯ ತಪ್ಪಿಸಲು ಸಮಾನತೆ ಸಮಿತಿ ರಚನೆಗೆ ಯುಜಿಸಿ ಆದೇಶ
  • ಯುಜಿಸಿ ಆದೇಶಕ್ಕೆ ಮೇಲ್ವರ್ಗಗಳ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ಯುಜಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದ್ರೀಗ ಈ ನಿಯಮಗಳು ರಾಜೀನಾಮೆ ಮತ್ತು ಪ್ರತಿಭಟನೆಗಳಿಗೆ ವೇದಿಕೆ ಆಗಿದೆ. ದೇಶಾದ್ಯಂತ ಹಲವು ವಿವಿಗಳಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ಮೌನ ಮುರಿದ ಕೇಂದ್ರ ಸರ್ಕಾರ, ಯಾರಿಗೂ ತಾರತಮ್ಯ ಆಗಲ್ಲ ಎಂದು ಭರವಸೆ ನೀಡಿದೆ.

ಕಾಲೇಜುಗಳಲ್ಲಿ ಜಾತಿ ನಿಂದನೆಗೆ ಯುಜಿಸಿ ಕಡಿವಾಣ
ಹೊಸ ನಿಯಮಕ್ಕೆ ಪ್ರಬಲ ಜಾತಿಗಳ ತೀವ್ರ ವಿರೋಧ
ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ಜಾತಿ ತಾರತಮ್ಯದ ಪಿಡುಗನ್ನು ಹೋಗಲಾಡಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅರ್ಥಾತ್‌  ಯುಜಿಸಿ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. 2026ರ ಜನವರಿ 15 ರಂದು ಯುಜಿಸಿ ಅಧಿಕೃತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು-2026 ಅಧಿಸೂಚನೆಯನ್ನು ಹೊರಡಿಸಿದೆ. ಆದ್ರೆ ಈ ಹೊಸ ನಿಯಮಗಳು ಭಾರೀ ಪ್ರತಿಭಟನೆಗೆ ನಾಂದಿಯಾಡಿದ್ದು, ರಾಜಕೀಯ ಮೇಲಾಟಕ್ಕೂ ಕಾರಣವಾಗಿವೆ.
2025ರಲ್ಲಿ ನಡೆದ ರೋಹಿತ್ ವೇಮುಲ ಮತ್ತು ಪಾಯಲ್ ತದ್ವಿಯಂಥ ಪ್ರತಿಭಾವಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ತಲ್ಲಣ ಮೂಡಿಸಿದ್ದವು. ಅಂತಹ ದುರಂತಗಳು ಮರುಕಳಿಸದಂತೆ ತಡೆಯಲು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಕಲ್ಪಿಸಲು ಸುಪ್ರೀಂಕೋರ್ಟ್​​ ನಿರ್ದೇಶನದಂತೆ ಯುಜಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 

ಪ್ರತಿಯೊಂದು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಮಾನತಾ ಸಮಿತಿ ಕಡ್ಡಾಯ
ಜಾತಿ ಆಧಾರಿತ ದೂರುಗಳನ್ನು ಆಲಿಸಿ, ನಿಗದಿತ ಅವಧಿಯಲ್ಲಿ ಪರಿಹರಿಸಬೇಕು
ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಕಲರು, ಮಹಿಳಾ ಪ್ರತಿನಿಧಿ ಇರಬೇಕು
ಕಾಲೇಜಿನ ಕ್ಯಾಂಪಸ್‌ನಲ್ಲಿ ಸಮಾನತೆಯ ವಾತಾವರಣವನ್ನು ನಿರ್ಮಿಸುವುದು
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವುದು
ಜಾತಿ ತಾರತಮ್ಯ ತಡೆಗಟ್ಟುವ ಜಾಗೃತಿಯನ್ನು ಮೂಡಿಸುವುದು ಸಮಿತಿಯ ಕರ್ತವ್ಯ


ಪ್ರತಿಯೊಂದು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಮಾನತಾ ಸಮಿತಿಯನ್ನು ಕಡ್ಡಾಯವಾಗಿ ರಚನೆ ಮಾಡ್ಬೇಕು. ಜಾತಿ ಆಧಾರಿತ ದೂರುಗಳನ್ನು ಆಲಿಸಿ, ನಿಗದಿತ ಅವಧಿಯಲ್ಲಿ ಅವುಗಳನ್ನು ಪರಿಹರಿಸಬೇಕು. ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಕಲರು, ಮಹಿಳಾ ಪ್ರತಿನಿಧಿ ಇರಬೇಕು. ಕಾಲೇಜಿನ ಕ್ಯಾಂಪಸ್‌ನಲ್ಲಿ ಸಮಾನತೆಯ ವಾತಾವರಣವನ್ನು ನಿರ್ಮಿಸುವುದು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವುದು, ಜಾತಿ ತಾರತಮ್ಯ ತಡೆಗಟ್ಟುವ ಜಾಗೃತಿಯನ್ನು ಮೂಡಿಸುವುದು ಸಮಾನ ಸಮಿತಿಯ ಪ್ರಮುಖ ಕರ್ತವ್ಯಗಳಾಗಿವೆ.

ಯುಜಿಸಿಯ ಹೊಸ ನಿಮಯಗಳ ವಿರುದ್ಧ ಭಾರೀ ಪ್ರತಿಭಟನೆ
ಜ.13ರಂದು ಯುಜಿಸಿ ಹೊರಡಿಸಿದ್ದ ಅಧಿಸೂಚನೆ ದೇಶಾದ್ಯಂತ ಭಾರೀ ವಿವಾದಕ್ಕೀಡಾಗಿದೆ. ಅದರಲ್ಲೂ ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್‌ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ದೇಶದ ವಿವಿಧ ವಿವಿಗಳಲ್ಲಿ ಮೇಲ್ವರ್ಗದ ವಿದ್ಯಾರ್ಧಿಗಳು ಬೀದಿಗಿಳಿದಿದ್ದಾರೆ. ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಿಯಮಗಳು ತಾರತಮ್ಯವನ್ನು ಕಡಿಮೆ ಮಾಡುವ ಬದಲು ಹೊಸ ರೀತಿಯ ವಿಭಜನೆಗೆ ಕಾರಣವಾಗಬಹುದು ಅನ್ನೋದು ಪ್ರತಿಭಟನಾಕಾರರ ಆರೋಪವಾಗಿದೆ. 

ಪ್ರತಿಭಟನೆ, ರಾಜೀನಾಮೆ ಹೆಚ್ಚಾಗ್ತಿದ್ದಂತೆ ಮೌನ ಮುರಿದ ಕೇಂದ್ರ
 UGC 2026ರ ಸಮಾನತೆಯ ನಿಯಮಗಳ ಬಗ್ಗೆ ವಿವಾದ ತಾರಕಕ್ಕೇರಿತ್ತಿದ್ದಂತೆ ಕೇಂದ್ರ ಸರ್ಕಾರ ಕೊನೆಗೂ ಮೌನ ಮುರಿದಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೃಢವಾಗಿ ಪ್ರತಿಕ್ರಿಯಿಸಿದ್ದು, ಹೊಸ ನಿಯಮಗಳು ತಾರತಮ್ಯಕ್ಕೆ ಕಾರಣವಾಗುವುದಿಲ್ಲ ಮತ್ತು ಯಾರೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

UGC New


ಒಂದು ಕಡೆ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ಅಗತ್ಯ ಇದೆ. ಇನ್ನೊಂದು ಕಡೆ, ನಿಯಮಗಳ ದುರುಪಯೋಗದ ಭಯ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಮೂಡಿದೆ.  ಸದ್ಯ ಯುಜಿಸಿಯ ಹೊಸ ನಿಯಮಗಳನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್​​​ಗೆ ಅರ್ಜಿ ಸಲ್ಲಿಸಲಾಗಿದ್ದು, ಈಗ ಈ ವಿಷಯದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ಕೈಯಲ್ಲಿದೆ.

ನ್ಯೂಸ್​ಫಸ್ಟ್​​ ಬ್ಯೂರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UGC RULES POLITICS
Advertisment