/newsfirstlive-kannada/media/post_attachments/wp-content/uploads/2024/10/DREAMS-ALERT.jpg)
ನಿಮಗೆ ಗೊತ್ತಿದೆಯಾ ಕನಸುಗಳು ನಮಗೆ ಮುಂದೆ ಉಂಟಾಗಲಿರುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ. ಅಂತಾ? ಹೌದು ನೀವು ಓದಿದ್ದು ಸರಿಯಾಗಿಯೇ ಇದೆ. ನಿಮಗೆ ಸಿನಿಮಾದ ಒಂದು ಪ್ರಮುಖವಾದ ಸೌಂಡ್ನಂತೆ ಇವು ನಿಮಗೆ ಮುಂದೆ ಒದಗಬಹುದಾದ ಆರೋಗ್ಯದ ಆಪತ್ತನ್ನು ತಿಳಿಸುತ್ತವೆ. ಇದಕ್ಕೆ ದೊಡ್ಡ ನಿದರ್ಶನ ಅಂದ್ರೆ ಒಮ್ಮೆ ಹಾಲಿವುಡ್ ನಟ ಮಾರ್ಕ್ ರಫೇಲೋ ತಮಗೆ ಬ್ರೇನ್ ಟ್ಯೂಮರ್ ಇದ್ದಂತೆ ಕನಸು ಕಂಡಿದ್ದರು ಅದು ಅವರ ಬದುಕಲ್ಲಿ ನಿಜವೂ ಆಯಿತು.
ಇದು ಕಾಕತಾಳಿಯವೂ ಕೂಡ ಇರಬಹುದು. ಆದ್ರೆ ನಿಜಕ್ಕೂ ಕನಸುಗಳು ನಮಗೆ ಭವಿಷ್ಯದಲ್ಲಿ ಎದುರಾಗುವ ಆರೋಗ್ಯದ ವಿಪತ್ತಿನ ಮುನ್ಸೂಚನೆ ನೀಡುತ್ತವಾ ಅಂತ. ನಮ್ಮ ದೇಹದಲ್ಲಿ ಏನು ನಡೆಯುತ್ತಿದೆ ಎಂದು ಮುನ್ಸೂಚನೆ ನೀಡುತ್ತವಾ? ಈ ಒಂದು ವಿಲಕ್ಷಣ ರಹಸ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರ್ಕ್ ರಫೆಲೋ ಕನಸು ಇದು ನಿಜ ಜಗತ್ತಿನ ಸಿನಿಮಾ
ಈಗಾಗಲೇ ಹೇಳಿದಂತೆ ಹಾಲಿವುಡ್ ನಟ ಮಾರ್ಕ್ ರಫೆಲೋ ಕನಸು ಇದಕ್ಕೆ ನಿದರ್ಶನ 2001ರಲ್ಲಿ ಮಾರ್ಕ್ ರಫೆಲೋ ಸಿನಿಮಾವೊಂದರ ಶೂಟಿಂಗ್ನಲ್ಲಿದ್ದ ವೇಳೆ ಕನಸೊಂದನ್ನ ಕಾಣುತ್ತಾರೆ. ಅದು ಅವರ ಬದುಕನ್ನೇ ಬದಲಾಯಿಸಿ ಬಿಡುತ್ತೆ. ಅವರ ಕನಸಿನಲ್ಲಿ ಅವರಿಗೆ ಬ್ರೇನ್ ಟ್ಯೂಮರ್ ಆಗಿರುವ ಹಾಗೆ ಒಂದು ಘಟನೆ ಬಂದಿರುತ್ತದೆ. ಅದನ್ನೂ ಅತೀ ಗಂಭೀರವಾಗಿ ಪರಿಗಣಿಸಿದ ರಫೆಲೋ ನೇರವಾಗಿ ಆಸ್ಪತ್ರೆಗೆ ಧಾವಿಸುತ್ತಾರೆ. ವೈದ್ಯರು ಆರಂಭದಲ್ಲಿ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸದಿದ್ದರೂ, ರಫೆಲೋ ಗಾಬರಿ ನೋಡಿ ಯಾವುದಕ್ಕೂ ಇರಲಿ ಅಂತ ಒಂದು ಸಿಟಿ ಸ್ಕ್ಯಾನಿಂಗ್ ಮಾಡಿ ನೋಡಿದಾಗ ರಫೆಲೋಗೆ ಬ್ರೇನ್ ಟ್ಯೂಮರ್ ಇರುವುದು ಬೆಳಕಿಗೆ ಬರುತ್ತದೆ. ಈ ಒಂದು ಘಟನೆ ನಮ್ಮನ್ನು ಹಲವು ಪ್ರಶ್ನೆಗಳಿಗೆ ದೂಡುತ್ತದೆ. ನಮ್ಮ ಅಪ್ರಜ್ಞಾವಸ್ಥೆಯ ಮೆದುಳು ಪ್ರಜ್ಞಾವಸ್ಥೆಯ ಮೆದುಳಿಗಿಂತ ಬೇಗ ನಮ್ಮ ಆರೋಗ್ಯದ ಸಮಸ್ಯೆಗಳನ್ನು ಕಂಡು ಹಿಡಿಯುತ್ತದೆಯಾ ಎಂದು.
ಇದನ್ನೂ ಓದಿ:ಜೇನುತುಪ್ಪ ಸೇವಿಸುವುದು ಸಕ್ಕರೆ ಕಾಯಿಲೆಯವರಿಗೆ ಒಳ್ಳೆಯದಲ್ವಾ..? ಈ ಬಗ್ಗೆ ತಜ್ಞರು ಹೇಳುವುದೇನು?
ಮನುಷ್ಯ ಹುಟ್ಟಿದಾಗಿನಿಂದಲೂ ನಿದ್ದೆಯಲ್ಲಿ ಕನಸು ಕಾಣುತ್ತಲೇ ಇರುತ್ತಾರೆ. ಕನಸನ್ನು ಒಂದು ಚಿಕಿತ್ಸೆಯ ಸಾಧನವಾಗಿ ಮೊದಲು ಪರಿಗಣಿಸಿದ್ದವರು ಪ್ರಾಚೀನ ಗ್ರೀಕರು. ಅವರು ಕನಸುಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಮುಂಬರುವ ಆರೋಗ್ಯ ಸಮಸ್ಯೆಯನ್ನು ಗುರುತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದ್ರೆ ಇತ್ತೀಚೆಗೆ ಬಂದಿರುವ ಸಂಶೋಧನೆಗಳ ಪ್ರಕಾರ ಮನುಷ್ಯ ಮಲಗಿರುವಾಗಲೂ ನಮ್ಮ ಮೆದಳು ದೇಹಕ್ಕೆ ಆಗಿರುವ ತೊಂದರೆಗಳ ಮಾಹಿತಿಗಳನ್ನು ವಿವರಿಸುತ್ತಲೇ ಇರುತ್ತದೆ. ಸೊಳ್ಳೆ ಕಚ್ಚಿದಾಗ ನಾವು ನಿದ್ದೆಗಣ್ಣಲ್ಲಿ ಬಡಿಯುವಂತೆಯೇ ಮಾಡುವ ಮೆದುಳೇ ಕನಸಿನ ಮೂಲಕ ನಮಗೆ ಮುಂಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಹೊಸ ಸಂಶೋಧನೆಗಳು ವರದಿ ಮಾಡಿವೆ. ಕನಸುಗಳು ನಮ್ಮ ಭಾವನೆಯ, ಒತ್ತಡದ, ನಿತ್ಯದ ಸಮಸ್ಯೆಗಳ ಪ್ರತಿಬಿಂಬ ಎಂದೇ ಕರೆಯಲಾಗುತ್ತದೆ. ಕೆಲವು ವಿಜ್ಞಾನಿಗಳು ಕನಸುಗಳು ನಮ್ಮ ದೈಹಿಕ ಸಮಸ್ಯೆಗಳನ್ನು ಮುಂಚಿತವಾಗಿ ತಿಳಿಸುವ ಪಾತ್ರವನ್ನು ನಿಭಾಯಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Body Language ಬಗ್ಗೆ ಇರಲಿ ನಿಮಗೆ ಅರಿವು, ನಮ್ಮ ದೇಹಭಾಷೆ ಹೇಗಿರಬೇಕು? ಇಲ್ಲಿವೆ ಸಲಹೆಗಳು
ನಮ್ಮ ದೇಹವು ಹಲವು ಅನಾರೋಗ್ಯದಿಂದ ಬಳಲುತ್ತಿದ್ದರೆ ಕನಸುಗಳಲ್ಲಿ ಮುಂದಾಗುವ ಅದರ ಭೀಕರತೆಯ ಬಗ್ಗೆ ಸ್ಪಷ್ಟ ಸಂದೇಶ ನೀಡುತ್ತವೆ ಎಂದು ಹೇಳಲಾಗಿದೆ. 1981ರಲ್ಲಿ ಪ್ರಕಟನೆಗೊಂಡ ಅಧ್ಯಯನವು ಹೇಳುವ ಪ್ರಕಾರ ಇದು ನಿಜವಂತೆ. ಈ ಅಧ್ಯಯನ ಕನಸುಗಳು ಹೇಗೆ ಮನುಷ್ಯನ ವೈದ್ಯಕೀಯ ಪರಿಸ್ಥಿತಿಗಳೊಂದಿಗೆ ನಂಟು ಹೊಂದಿವೆ ಅನ್ನೋದರ ಮೇಲೆಯೇ ಕೈಗೊಳ್ಳಲಾಗಿತ್ತು. ಒಟ್ಟು ಅವರು 60 ಜನ ರೋಗಿಗಳ ಕನಸುಗಳನ್ನು ಅಧ್ಯಯನ ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳಲ್ಲಿ ಯಾರೋ ಅವರನ್ನು ದೂರದಲ್ಲಿ ತಿನ್ನುತ್ತಿರುವಂತ ಕನಸುಗಳು. ಹೃದಯ ಸಂಬಂಧಿ ಕಾಯಿಲೆ ಇದ್ದವರಲ್ಲಿ ಯಾರೋ ಉಸಿರುಕಟ್ಟಿಸುತ್ತಿದ್ದಾರೆ ಅನ್ನುವ ರೀತಿಯ ಕನಸು ಬೀಳುತ್ತಿದ್ದವಂತೆ ಈ ರೀತಿ ಅನೇಕ ರೋಗಿಗಳ ಅನೇಕ ಕನಸುಗಳನ್ನು ಅಧ್ಯಯನ ಮಾಡಿ ಕನಸುಗಳು ಭವಿಷ್ಯದಲ್ಲಿ ಆಗುವ ಆರೋಗ್ಯದ ಆಪತ್ತುಗಳನ್ನು ತೆರೆದಿಡುತ್ತವೆ ಎಂದು ಈ ಅಧ್ಯಯನ ಕೊನೆಯ ನಿಲುವಿಗೆ ಬಂದಿದೆ.
ಹಾಗಂತ ನಾವು ಎಲ್ಲ ಕನಸುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಅಂತಿಲ್ಲ. ಗಾಬರಿಗೊಳ್ಳಬೇಕಿಲ್ಲ. ಒಂದು ವೇಳೆ ನಿಮಗೆ ಚಿತ್ರ ವಿಚಿತ್ರ ಕನಸುಗಳು ಬೀಳುತ್ತಿದ್ದರೆ ವೈದ್ಯರನ್ನು ಕಾಣಿ. ಬಹಳಷ್ಟು ಸ್ವಪ್ನಗಳು ನಮ್ಮ ಚಿಂತನೆಯ ವಿಚಾರಗಳ, ಭಾವಗಳ, ಟೆನ್ಶನ್ಗಳ ಪ್ರತಿಬಿಂಬಗಳೇ ಆಗಿರುತ್ತವೆ.ಆದ್ರೆ ನಿಮ್ಮ ದೇಹದಲ್ಲಿ ಕನಸಿಗೆ ಹೋಲುವ ರೀತಿಯಲ್ಲಿ ಏನಾದರೂ ಸಮಸ್ಯೆಗಳು ಆಗುತ್ತಿದ್ದರೆ ಯಾವುದಕ್ಕೂ ಒಮ್ಮೆ ವೈದ್ಯರನ್ನು ಕಾಣುವುದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ