/newsfirstlive-kannada/media/post_attachments/wp-content/uploads/2025/05/IPS-alok-kumar.jpg)
ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ - ಎಡಿಜಿಪಿ) ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ನೀಡಿರುವ ನೋಟಿಸ್‌ಗೆ ಬೆಂಗಳೂರಿನ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದೆ.
ಕಳೆದ ಮೇ 9ರಂದು ಮುಖ್ಯ ಕಾರ್ಯದರ್ಶಿ ನೀಡಿದ್ದ ನೋಟಿಸ್‌ನಲ್ಲಿ 2019ರ ದೂರವಾಣಿ ಮಾತುಕತೆ ಧ್ವನಿಮುದ್ರಣ ಸೋರಿಕೆಯ ಪ್ರಕರಣದ ಕುರಿತು ಇಲಾಖಾ ವಿಚಾರಣೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ, ಈಗ ಸಿಎಟಿ ನಡೆ ಅಲೋಕ್ ಕುಮಾರ್ ಅವರಂತಹ ನೇರ ನಿಷ್ಠುರ, ಮತ್ತು ಅಸಾಧಾರಣ ಸೇವೆ ಸಲ್ಲಿಸಿರುವ ಅಧಿಕಾರಿಯೊಬ್ಬರನ್ನು ಅನಗತ್ಯವಾಗಿ ಗುರಿಯಾಗಿಸಿ ತೊಂದರೆ ಮಾಡುವುದರಿಂದ ರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದೆ. ಅದರಲ್ಲೂ ಅಲೋಕ್ ಕುಮಾರ್ ಅವರ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿ ಸಿಎಟಿ ಈ ಕ್ರಮ ಕೈಗೊಂಡಿರುವುದು ಅನುಕೂಲವಾಗಿದೆ.
/newsfirstlive-kannada/media/post_attachments/wp-content/uploads/2025/05/IPS-alok-kumar-1.jpg)
ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರು ತನ್ನ ಬದ್ಧತೆ, ನ್ಯಾಯನಿಷ್ಠುರತೆ ಮತ್ತು ಸಮರ್ಪಣಾ ಭಾವಕ್ಕೆ ಹೆಸರಾಗಿದ್ದಾರೆ. ಮುಖ್ಯ ಕಾರ್ಯದರ್ಶಿಯವರ ನೋಟಿಸ್ ಅನ್ನು ಪ್ರಶ್ನಿಸಿದ ಅಲೋಕ್ ಕುಮಾರ್, ಈ ಇಲಾಖಾ ವಿಚಾರಣೆ ಆಧಾರ ರಹಿತ ಮತ್ತು ಅನವಶ್ಯಕ ಎಂದು ವಾದಿಸಿದ್ದಾರೆ. ಮೇ 6, 2024ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸರ್ಕಾರ, ಅಲೋಕ್ ಕುಮಾರ್ ಅವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ಬಾಕಿ ಉಳಿದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದಲ್ಲದೆ, ಆಡಿಯೋ ಸೋರಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಸಹ ಮುಕ್ತಾಯದ ವರದಿಯನ್ನು (ಬಿ ರಿಪೋರ್ಟ್) ಸಲ್ಲಿಸಿದೆ. ಅಲೋಕ್ ಕುಮಾರ್ ಅವರನ್ನು ದೋಷಿ ಎನ್ನುವಂತಹ ಯಾವುದೇ ಸಾಕ್ಷಿ ಆಧಾರಗಳು ಲಭ್ಯವಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಫೆಬ್ರವರಿ 13, 2024ರಂದು ಸಿಬಿಐ ತನಿಖಾ ವರದಿಯನ್ನು ಸ್ವೀಕರಿಸಿದ ಬೆಂಗಳೂರಿನ ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಸಹ ವರದಿ ಸಮರ್ಪಕವಾಗಿದೆ ಎಂದಿದ್ದಾರೆ.
ಪ್ರತಿಷ್ಠಿತ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡೈರೆಕ್ಟರ್ ಜನರಲ್ ಆಫ್ ಪೊಲೀಸ್ - ಡಿಜಿಪಿ) ಹುದ್ದೆಗೆ ಅಲೋಕ್ ಕುಮಾರ್ ಅವರ ಹೆಸರನ್ನು ಡಿಪಾರ್ಟ್‌ಮೆಂಟಲ್ ಪ್ರೊಮೋಷನ್ ಕಮಿಟಿ (ಡಿಸಿಪಿ) ಮುಕ್ತಗೊಳಿಸುವ ಕೆಲ ದಿನಗಳ ಮುನ್ನ ಈ ತನಿಖಾ ಸೂಚನೆ ನೀಡಲಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಎಪ್ರಿಲ್ 23, 2025ರಂದು ಡೈರೆಕ್ಟರ್ ಜನರಲ್ ಆ್ಯಂಡ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಲೋಕ್ ಕುಮಾರ್ ಅವರ ಹೆಸರನ್ನು ಡಿಜಿ & ಐಜಿಪಿ ಹುದ್ದೆಗೆ ಪರಿಗಣಿಸುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿತ್ತು. ಅಲೋಕ್ ಕುಮಾರ್ ಅವರ ಕಾನೂನು ತಂಡ, 1969ರ ಆಲ್ ಇಂಡಿಯಾ ಸರ್ವಿಸಸ್ (ಡಿಸಿಪ್ಲಿನ್ ಆ್ಯಂಡ್ ಅಪೀಲ್) ನಿಯಮ 8(4) ಅಡಿಯಲ್ಲಿ ನೀಡಲಾದ ನೋಟಿಸ್ ಅಲೋಕ್ ಕುಮಾರ್ ಅವರಿಗೆ ಅರ್ಹವಾಗಿ ಸಲ್ಲಬೇಕಾದ ಪದೋನ್ನತಿಯನ್ನು ತಪ್ಪಿಸುವ ಉದ್ದೇಶ ಹೊಂದಿದೆ ಎಂದು ವಾದಿಸಿತ್ತು. ಈ ಹಿಂದೆ ಇದೇ ಆರೋಪದ ಕುರಿತು ನಡೆದ ವಿಚಾರಣೆಯಲ್ಲೂ ಅಲೋಕ್ ಕುಮಾರ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಹಾಗಿರುವಾಗ ಮತ್ತೆ ಇದೇ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವ ಉದ್ದೇಶವೇನು ಎಂದು ನ್ಯಾಯವಾದಿಗಳು ಪ್ರಶ್ನಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/Alok-Kumar-IPS.jpg)
ಅಲೋಕ್ ಕುಮಾರ್ ಪರ ನ್ಯಾಯವಾದಿಗಳು ಈ ನೋಟಿಸ್ ನೀಡಿರುವ ಪ್ರಕ್ರಿಯೆಯೇ ದೋಷಪೂರಿತವಾಗಿದ್ದು, ಅದರೊಡನೆ ಅಲೋಕ್ ಕುಮಾರ್ ಅವರ ವೃತ್ತಿಜೀವನದ ಉನ್ನತಿಯನ್ನು ತಡೆಯುವ ದುರುದ್ದೇಶವನ್ನೂ ಹೊಂದಿದೆ ಎಂದಿದ್ದಾರೆ. ನ್ಯಾಯವಾದಿಗಳು ಅಲೋಕ್ ಕುಮಾರ್ ಅವರ ಕಳಂಕ ರಹಿತ ವೃತ್ತಿಜೀವನವನ್ನು ಪ್ರಸ್ತಾಪಿಸಿದ್ದು, ಇಂತಹ ಅನಗತ್ಯ ಕ್ರಮಗಳು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಂಡೆ ಮಹಾಕಾಳಿ ದೇವಸ್ಥಾನದ ಅರ್ಚಕ.. ಏನಾಯ್ತು?
ಸಿಎಟಿ ನ್ಯಾಯಾಂಗ ಸದಸ್ಯರಾದ ಬಿಕೆ ಶ್ರೀವಾತ್ಸವ ಅವರು ಪ್ರಕರಣದ ಗಂಭೀರತೆಯನ್ನು ಒಪ್ಪಿಕೊಂಡು, ಈ ವಿಚಾರಕ್ಕೆ ಆ ಸಂದರ್ಭದಲ್ಲಿ ಲಭ್ಯವಿರದ ವಿಭಾಗೀಯ ಪೀಠದ ತೀರ್ಪಿನ ಅಗತ್ಯವಿದೆ ಎಂದಿದ್ದಾರೆ. ಶ್ಲಾಘನೀಯ ಮಧ್ಯಂತರ ಆದೇಶದಲ್ಲಿ ಶ್ರೀವಾತ್ಸವ ಅವರು ನೋಟಿಸ್‌ನ ಕಾರ್ಯಾಚರಣೆಯನ್ನು ಜೂನ್ 10ರಂದು ನಡೆಯಲಿರುವ ಮುಂದಿನ ವಿಚಾರಣೆಯ ತನಕ ತಡೆ ಹಿಡಿದಿದ್ದಾರೆ. ಈ ವಿಚಾರಣಾ ನಿಲುಗಡೆ ಅಲೋಕ್ ಕುಮಾರ್ ಅವರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ಅದರೊಡನೆ, ಪ್ರಾಮಾಣಿಕ ಅಧಿಕಾರಿಗಳನ್ನು ಆಡಳಿತ ಕ್ರಮಗಳಿಂದ ರಕ್ಷಿಸಲು ನ್ಯಾಯಾಂಗದ ಪಾತ್ರದ ಮಹತ್ವವನ್ನೂ ಸಾರಿದೆ. ಮುಂದಿನ ದಿನಾಂಕದಂದು ಈ ವಿಚಾರವನ್ನು ವಿಭಾಗೀಯ ಪೀಠ ಕೈಗೆತ್ತಿಕೊಳ್ಳಲಿದ್ದು, ಅಲ್ಲಿ ಮಧ್ಯಂತರ ಪರಿಹಾರಕ್ಕಾಗಿ ಅಲೋಕ್ ಕುಮಾರ್ ಅವರ ಮನವಿಯನ್ನು ಪರಿಶೀಲಿಸಲಾಗುತ್ತದೆ. ಮುಂದಿನ ವಿಚಾರಣೆಯು ಜೂನ್ 10ರಂದು ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us