/newsfirstlive-kannada/media/post_attachments/wp-content/uploads/2025/02/TMK_SIDDAGANGA_JATRE.jpg)
ಇದು ದೇಶದಲ್ಲಿ ಪ್ರಖ್ಯಾತಿ ಪಡೆದಿರುವ ಸಿದ್ಧಪುರುಷರ ಪುಣ್ಯಕ್ಷೇತ್ರ. ಇಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಪ್ರಸಿದ್ಧ. ಜಾತ್ರೆಯಲ್ಲಿ ಕಣ್ಮನ ಸೆಳೆಯುತ್ತವೆ ಅಂದ ಚೆಂದದ ದನಗಳ ಜೋಡಿ. ಲಕ್ಷ ಲಕ್ಷ ರೂಪಾಯಿಗೆ ನಡೆಯುತ್ತೆ ದನಗಳ ವ್ಯಾಪಾರ. ಇದು ತುಮಕೂರಿನ ಸಿದ್ದಗಂಗಾ ಕ್ಷೇತ್ರದ ದನಗಳ ಜಾತ್ರೆಯ ಸ್ಪೆಷಲ್.
ಕಲ್ಪತರು ನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಫೇಮಸ್, ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ರೈತರು ದನಗಳನ್ನ ಮಾರಾಟಕ್ಕೆ ಮತ್ತು ಖರೀದಿ ಮಾಡಲು ಈ ಜಾತ್ರೆಗೆ ಬರುತ್ತಾರೆ. ಅಷ್ಟೇ ಅಲ್ಲ, ಅದೆಷ್ಟೋ ಜನರು ಕೇವಲ ಈ ದನಗಳ ಜಾತ್ರೆಯನ್ನ ನೋಡಿ ಕಣ್ತುಂಬಿ ಖರೀದಿ ಮಾಡಲು ಬರ್ತಾರೆ. ಸುಮಾರು ದಶಕಗಳ ಇತಿಹಾಸವಿರುವ ಸುಪ್ರಸಿದ್ದ ದನಗಳ ಜಾತ್ರೆ ಮತ್ತೆ ಆರಂಭವಾಗಿದೆ.
8 ರಿಂದ 10 ಲಕ್ಷ ರೂಪಾಯಿ ವರೆಗೆ ದನಗಳ ಮಾರಾಟ
ಶಿವರಾತ್ರಿ ಹಬ್ಬಕ್ಕೆ 10 ದಿನಗಳ ಮುಂಚೆ ಈ ದನಗಳ ಜಾತ್ರೆ ಮಠದಲ್ಲಿ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸ್ತಾರೆ, ನೋಡುಗರ ಕಣ್ಣಿಗೆ ಕಾಣುವಷ್ಟೂ ದೂರ ದನಗಳ ಜಾತ್ರೆಯೇ ಕಾಣುತ್ತದೆ. ಇನ್ನು 30, 40, 50, ಸಾವಿರ ರೂಗಳಿಂದ ಪ್ರಾರಂಭವಾಗುವ ದನಗಳ ವ್ಯಾಪಾರ 8 ರಿಂದ 10 ಲಕ್ಷ ರೂಪಾಯಿಗಳವರೆಗೂ ನಡೆಯುತ್ತದೆ. ದನಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಇಂತಿಷ್ಟು ಹಣವನ್ನ ನಿಗದಿ ಮಾಡಲಾಗುತ್ತದೆ.
ಮಾಲೀಕರು ಕೂಡ ದನಗಳಿಗೆ ಸಾಕಷ್ಟು ಹಣ ಖರ್ಚು ಮಾಡಿ ಆರೈಕೆ ಮಾಡಿರುತ್ತಾರೆ. ಜಾತ್ರೆಯಲ್ಲಿ ಹೆಚ್ಚು ಹಣದ ದನಗಳಿಗೆ ಶಾಮಿಯಾನ ಹಾಕಿಸಿ, ದನಗಳನ್ನ ಸಿಂಗರಿಸಿ ಇರಿಸಲಾಗಿರುತ್ತೆ. ದುಬಾರಿ ದನಗಳನ್ನ ಮೆರವಣಿಗೆ ಮೂಲಕ ಜಾತ್ರೆಗೆ ಕರೆತರೋದೂ ಉಂಟು. ಸುತ್ತಮುತ್ತಲ ಜಿಲ್ಲೆಯವರು ಈ ಜಾತ್ರೆಗಾಗಿ ಕಾದು ಕುಳಿತ್ತಿರುತ್ತಾರೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ಜನರಿಗಿಂತ ಸಚಿವರಿಗೆ ಹೆಚ್ಚು ನಿರೀಕ್ಷೆ.. ಯಾಕೆ?
ವಿವಿಧ ಜಿಲ್ಲೆಗಳಿಂದ ಜಾತ್ರೆಗೆ ಬಂದಿರುವ ರೈತರು
ಇನ್ನೂ ಪ್ರತಿ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಮಠದ ಸುತ್ತ ಮುತ್ತಲಿನ ಗ್ರೌಂಡ್‌ನಲ್ಲಿ ಜಾತ್ರೆ ನಡೆಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ರೈತರು ತಾವು ತಂದಿರುವ ದನಗಳನ್ನ ಲಾಭಕ್ಕೆ ಮಾರಿ ಅದೇ ಹಣದಲ್ಲಿ ಮತ್ತೊಂದು ಜೋಡಿ ಕೊಂಡುಕೊಂಡು ಹೋಗ್ತಾರೆ. ಮತ್ತೆ ಅದನ್ನ ಒಂದು ವರ್ಷ ಸಾಕಿ, ವ್ಯವಸಾಯಕ್ಕೆ ಬಳಸಿಕೊಂಡು ಮುಂದಿನ ಜಾತ್ರೆಯಲ್ಲಿ ಮಾರಾಟ ಮಾಡುವುದು ವಾಡಿಕೆ ಇದೆ.
ಇನ್ನೂ ಈ ಬಾರಿ ಹಳ್ಳಿಕಾರ್ ಹಾಗೂ ಅಮೃತ ಮಹಲ್ ತಳಿಯ ಜೋಡಿಗಳು ಜಾತ್ರೆಯಲ್ಲಿ ಹೆಚ್ಚಿನ ಆಕರ್ಷಣೆ. ಅಲ್ಲದೇ ಅವುಗಳ ಸಿಂಗಾರ ಹಾಗೂ ಅವುಗಳ ದುಬಾರಿ ವೆಚ್ಚ ನಿಜಕ್ಕೂ ಅಚ್ಚರಿ. ಬಂಗಾರದ ಬೆಲೆಗಿಂತಲೂ ಇವುಗಳ ಬೆಲೆ ಜಾಸ್ತಿ ಅಂತಾರೆ ಜಾತ್ರೆಗೆ ಬಂದ ಮಂದಿ. ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದ್ದು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಜಾತ್ರೆಗೆ ಬಂದು ವ್ಯಾಪಾರ, ವಹಿವಾಟಿನಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ರಾಜ್ಯದ ಪ್ರಸಿದ್ಧವಾದ ಹಳ್ಳಿಕಾರ್ ತಳಿಯ ಎತ್ತುಗಳ ಜೋಡಿ ಈ ವರ್ಷವು ಮುಂಚೂಣೆಯಲ್ಲಿದೆ ಎಂಬುದು ವಿಶೇಷ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ