/newsfirstlive-kannada/media/post_attachments/wp-content/uploads/2025/07/CBI_ARRESTED.jpg)
ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ನಿಂದ ಬರೋಬ್ಬರಿ 8 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ, ನಿಗೂಢವಾಗಿ ನಾಪತ್ತೆ ಆಗಿದ್ದವರನ್ನು, ಬರೋಬ್ಬರಿ 20 ವರ್ಷದ ಬಳಿಕ ಸಿಬಿಐ ಪತ್ತೆ ಹಚ್ಚಿ ಬಂಧಿಸಿದೆ. ವೇಷ, ಹೆಸರು ಮರೆಸಿಕೊಂಡು, ಹಳೆಯ ಯಾವುದೇ ದಾಖಲೆ ಬಳಸದೇ, ನಿಗೂಢವಾಗಿದ್ದ ಮಹಿಳೆಯನ್ನು ಇಳಿವಯಸ್ಸಿನಲ್ಲಿ ಸಿಬಿಐ ಬಂಧಿಸಿರುವುದು ವಿಶೇಷ. ತಂತ್ರಜ್ಞಾನದ ಸಹಾಯದಿಂದ ಬೆಂಗಳೂರಿನಿಂದ ಮಧ್ಯ ವಯಸ್ಸಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಆರೋಪಿಯನ್ನು ಇಳಿ ವಯಸ್ಸಿನಲ್ಲಿ ಬಂಧಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಎಷ್ಟೇ ವರ್ಷ ತಲೆ ಮರೆಸಿಕೊಂಡರೂ ಸಿಬಿಐ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಮಹಿಳೆಗೆ ಸಾಧ್ಯವಾಗಲಿಲ್ಲ.
ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ನ ಸಾಗರೋತ್ತರ ಶಾಖೆಯಿಂದ ತಮಿಳುನಾಡು ಮೂಲದ ಮಣಿ ಎಂ.ಶೇಖರ್ ಅಲಿಯಾಸ್ ಗೀತಾ ಎಂಬ ಮಹಿಳೆ ಹಾಗೂ ಆಕೆಯ ಪತಿ ರಾಮಾನುಜಮ್ ಮುತ್ತು ರಾಮಲಿಂಗಂ ಅವರು, 8 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದರು. ರಾಮಾನುಜಮ್ ಮೆಸರ್ಸ್ ಇಂಡೋ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮಣಿ ಎಂ.ಶೇಖರ್ ಮೆಸರ್ಸ್ ಇಂಡೋ ಮಾರ್ಕ್ ಆ್ಯಂಡ್ ಬಿಟಿಸಿ ಹೋಂ ಪ್ರಾಡಕ್ಟ್ ಕಂಪನಿಯ ನಿರ್ದೇಶಕಿಯಾಗಿದ್ದರು.
ವಸಂತನಗರದಲ್ಲಿ ವಂಚಕಿ ವಾಸ
ಈ ದಂಪತಿಯು ಎಸ್‌ಬಿಐ ಬ್ಯಾಂಕ್ ಸಾಗರೋತ್ತರ ಬ್ಯಾಂಕ್ ಶಾಖೆಯಿಂದ 8 ಕೋಟಿ ರೂಪಾಯಿ ಸಾಲ ಪಡೆದು ದುರ್ಬಳಕೆ ಮಾಡಿಕೊಂಡು ಮರುಪಾವತಿಸದೇ ವಂಚಿಸಿದ್ದರು. 2002 ರಿಂದ 2005ರ ವರೆಗೆ ಬೆಂಗಳೂರಿನ ವಸಂತನಗರದಲ್ಲಿ ಈ ವಂಚಕಿ ವಾಸ ಇದ್ದರು. ಬಳಿಕ ಸಾಲ ಮರುಪಾತಿಸದೇ ಮೂಲ ಹೆಸರು ಬದಲಾಯಿಸಿಕೊಂಡು ವಂಚನೆ ಮಾಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ಮಧ್ಯಪ್ರದೇಶದ ಇಂದೋರ್ನಲ್ಲಿ ಮಹಿಳೆ ಹಾಗೂ ಆಕೆಯ ಪತಿ ರಾಮಾನುಜಮ್ ವಾಸವಿದ್ದರು.
ಮಣಿ ಎಂ.ಶೇಖರ್ ಎಂಬ ಮಹಿಳೆಯು ಬೆಂಗಳೂರಿನಿಂದ ಮಧ್ಯಪ್ರದೇಶದ ಇಂದೋರ್ಗೆ ಪಲಾಯನ ಮಾಡಿದ್ದರು. ಇಂದೋರ್ನಲ್ಲಿ ತಮ್ಮ ಹೆಸರು, ವೇಷ ಎಲ್ಲವನ್ನೂ ಬದಲಾಯಿಸಿಕೊಂಡಿದ್ದರು. ಗೀತಾ ಕೃಷ್ಣ ಕುಮಾರ್ ಗುಪ್ತಾ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು. ಎಸ್‌ಬಿಐ ಬ್ಯಾಂಕ್ಗೆ ವಂಚನೆ ಸಂಬಂಧ ಬ್ಯಾಂಕ್ ಅಧಿಕಾರಿಗಳು ಸಿಬಿಐಗೆ ದೂರು ನೀಡಿದ್ದರು. ವಂಚನೆ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದ ಸಿಬಿಐ, 2006 ರಲ್ಲಿ ತನಿಖೆ ಕೈಗೆತ್ತಿಕೊಂಡಿತ್ತು. ಆದರೇ, ದಂಪತಿ ತಲೆಮರೆಸಿಕೊಂಡಿದ್ದರು. ವಂಚಕ ದಂಪತಿಯ ಪತ್ತೆಗೆ ನಾನಾ ಮಾರ್ಗಗಳಲ್ಲಿ ತನಿಖೆ ನಡೆಸಿದರೂ, ದಂಪತಿ ಮಾತ್ರ ಪತ್ತೆಯಾಗಿರಲಿಲ್ಲ. ಹೀಗಾಗಿ ಸಿಬಿಐ ವಿಶೇಷ ಕೋರ್ಟ್, ಮಣಿ ಎಂ.ಶೇಖರ್ ಹಾಗೂ ರಾಮಾನುಜಮ್ ಉದ್ಘೋಷಿತ ಅಪರಾಧಿಗಳು ಎಂದು ಘೋಷಿಸಿ, 2009ರ ಫೆಬ್ರವರಿ 27 ರಂದು ಆದೇಶ ಹೊರಡಿಸಿತ್ತು.
ಇಬ್ಬರು ಹೆಸರು ಬದಲಿಸಿಕೊಂಡಿದ್ದರು
ಬೆಂಗಳೂರಿನಿಂದ ಪರಾರಿಯಾದ ದಂಪತಿ ಹಲವು ರಾಜ್ಯಗಳನ್ನು ಸುತ್ತಾಡಿ, ಕೊನೆಗೆ ಮಧ್ಯಪ್ರದೇಶದ ಇಂದೋರ್ನಲ್ಲಿ ವಾಸ ಇದ್ದರು. ತಮ್ಮ ಸಂಬಂಧಿಕರ ಜೊತೆಗೂ ಯಾವುದೇ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಈ ದಂಪತಿಯನ್ನು ಪತ್ತೆ ಹಚ್ಚುವುದೇ ಸವಾಲು ಆಗಿತ್ತು. ಇಂದೋರ್ನಲ್ಲಿ ತಮ್ಮ ಮೂಲ ಹೆಸರುಗಳನ್ನು ಬದಲಾಯಿಸಿಕೊಂಡಿದ್ದರು. ರಾಮಾನುಜಮ್ ತನ್ನ ಹೆಸರು ಅನ್ನು ಕೃಷ್ಣ ಕುಮಾರ್ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದರು. ಇನ್ನೂ ಮಣಿ ಎಂ. ಶೇಖರ್ ತಮ್ಮ ಹೆಸರು ಅನ್ನು ಗೀತಾ ಕೃಷ್ಣ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು. ಇದೇ ಹೆಸರುಗಳಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ಹೊಸ ಮೊಬೈಲ್ ನಂಬರ್ಗಳನ್ನು ಪಡೆದುಕೊಂಡಿದ್ದರು. ಹಳೆಯ ಹೆಸರಿನ ದಾಖಲೆಗಳನ್ನು ಎಲ್ಲಿಯೂ ಬಳಸಿರಲಿಲ್ಲ. 2008ರಲ್ಲಿ ರಾಮಾನುಜನ್ ಮೃತಪಟ್ಟಿದ್ದು, ಮಣಿ ಒಬ್ಬರೇ ಇಂದೋರ್ನಲ್ಲಿ ವಾಸಿಸುತ್ತಿದ್ದರು.
ಆದರೇ, ಇತ್ತ ದಂಪತಿ ನಾಪತ್ತೆಯಾಗಿದ್ದರೂ, ಸಿಬಿಐ ನಿರಂತರವಾಗಿ ದಂಪತಿಯ ಪತ್ತೆಗೆ ತನಿಖೆ, ಶೋಧ ಮುಂದುವರಿಸಿತ್ತು. ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ಇತ್ತೀಚೆಗೆ ಇಂದೋರ್ನಲ್ಲಿ ನೆಲೆಸಿದ್ದ ಗೀತಾ ಕೃಷ್ಣಕುಮಾರ್ ಬಗ್ಗೆ ಸಿಬಿಐಗೆ ಅನುಮಾನ ಬಂದಿತ್ತು. ಗೀತಾ ಕೃಷ್ಣ ಕುಮಾರ್ ಅವರ ಈಗಿನ ಪೋಟೋ ಹಾಗೂ ಮಣಿ ಎಂ ಶೇಖರ್ ಅವರ ಹಿಂದಿನ ಭಾವಚಿತ್ರಗಳನ್ನು ಸುಧಾರಿತ ತಂತ್ರಜ್ಞಾನ ಆಧರಿಸಿ ವಿಶ್ಲೇಷಿಸಿದಾಗ, ಶೇ.90 ರಷ್ಟು ಸಾಮ್ಯತೆ ಕಂಡು ಬಂದಿತ್ತು. ಹೀಗಾಗಿ ಸಿಬಿಐ ತನಿಖಾ ತಂಡ ಬೆಂಗಳೂರಿನಿಂದ ಇಂದೋರ್ಗೆ ತೆರಳಿ, ಗೀತಾ ಕೃಷ್ಣ ಕುಮಾರ್ ಗುಪ್ತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆಯೇ 20 ವರ್ಷದ ಹಿಂದೆಯೇ ಬೆಂಗಳೂರಿನಿಂದ ಪರಾರಿಯಾಗಿದ್ದ ಮಣಿ ಎಂ.ಶೇಖರ್ ಅನ್ನೋದು ಖಚಿತವಾಗಿದೆ.
ಇದನ್ನೂ ಓದಿ: ಭಾರತ- ಪಾಕ್ ಸಂಘರ್ಷದಲ್ಲಿ 5 ಜೆಟ್ ವಿಮಾನ ಹೊಡೆದುರುಳಿಸಲಾಗಿತ್ತು.. ಟ್ರಂಪ್ ಹೇಳಿದ್ದು ನಿಜನಾ, ಸುಳ್ಳಾ?
ಜೈಲು ಪಾಲಾದ ವೃದ್ಧೆ
ಬಳಿಕ ಬೆಂಗಳೂರಿನ ಸಿಬಿಐ ಅಧಿಕಾರಿಗಳು ಗೀತಾ ಕೃಷ್ಣ ಕುಮಾರ್ ಗುಪ್ತಾ ಅಲಿಯಾಸ್ ಮಣಿ ಎಂ.ಶೇಖರ್ ಎಂಬ ಈ ಆರೋಪಿ ಮಹಿಳೆಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಸಿಬಿಐ ವಿಶೇಷ ಕೋರ್ಟ್ಗೆ ಹಾಜರುಪಡಿಸಿ, ಪರಪ್ಪನ ಆಗ್ರಹಾರ ಜೈಲಿಗೆ ಕಳಿಸಿದ್ದಾರೆ. ಮಣಿ ಎಂ.ಶೇಖರ್ ಅಲಿಯಾಸ್ ಗೀತಾ ಕೃಷ್ಣ ಕುಮಾರ್ ಗುಪ್ತಾಗೆ ಈಗ 69 ವರ್ಷ ವಯಸ್ಸು. ಮಧ್ಯ ವಯಸ್ಸಿನಲ್ಲಿ ಬೆಂಗಳೂರಿನಿಂದ ನಾಪತ್ತೆಯಾದವರು, ಇಳಿ ವಯಸ್ಸಿನಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಬೆಂಗಳೂರು ಜೈಲು ಸೇರಿದ್ದಾರೆ.
ಭಾವಚಿತ್ರ ಹೋಲಿಕೆ ತಂತ್ರಜ್ಞಾನ ಸಹಾಯದಿಂದ ಆರೋಪಿಯನ್ನು ಬಂಧಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಹಳೆಯ ಕೇಸ್ಗಳ ತನಿಖೆಯ ವೇಳೆ ಹೆಚ್ಚಿನ ಮಾಹಿತಿ ಸಿಗದೇ ಇದ್ದರೇ, ಕೈ ಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ 20 ವರ್ಷ ಹಳೆಯ ಕೇಸ್ ಅನ್ನು ಸಿಬಿಐ ಬೆನ್ನತ್ತಿ ಹೋಗಿ ಈಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ