/newsfirstlive-kannada/media/post_attachments/wp-content/uploads/2025/04/VENU_KERALA.jpg)
ಉದ್ಯಮಿಗಳು, ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಗಳಿಗೆ ಐಷಾರಾಮಿ ಕಾರು, ಬೈಕ್ ಖರೀದಿ ಮಾಡುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಅಲ್ಲದೇ ಅವುಗಳಿಗೆ ಅಷ್ಟೇ ದೊಡ್ಡ ಮೊತ್ತದ ಹಣ ಕೂಡ ಪಾವತಿ ಮಾಡುತ್ತಾರೆ. ಇದರ ಜೊತೆಗೆ ಕೆಲವೊಮ್ಮೆ ನಂಬರ್ ಪ್ಲೇಟ್ಗಾಗಿ ಜಿದ್ದಿಗೆ ಕೂಡ ಬೀಳುತ್ತಾರೆ. ಸದ್ಯ ಇಂತಹದ್ದೇ ಒಂದು ಸಂಗತಿ ನಡೆದಿದ್ದು ಉದ್ಯಮಿಯೊಬ್ಬರು ತಮ್ಮ ದುಬಾರಿ ಐಷಾರಾಮಿ ಕಾರಿಗೆ 40 ಲಕ್ಷ ರೂಪಾಯಿಗೂ ಅಧಿಕ ಮೊತ್ತ ನೀಡಿ ನಂಬರ್ ಪ್ಲೇಟ್ ಖರೀದಿ ಮಾಡಿದ್ದಾರೆ.
ಲಿಟ್ಮಸ್ ಕಂಪನಿಯ ಸಿಇಒ ಆಗಿರುವ ವೇಣು ಗೋಪಾಲಕೃಷ್ಣ ಏರ್‌ಬಸ್ H130 ಚಾಪರ್ ಖರೀದಿ ಮಾಡಲು ನ್ಯೂಜಿಲೆಂಡ್ಗೆ ತೆರಳಿದ್ದರು. ನ್ಯೂಜಿಲೆಂಡ್ಗೆ ತೆರಳುವ ಮೊದಲೇ ಉದ್ಯಮಿ ವೇಣು ಗೋಪಾಲಕೃಷ್ಣ ಅವರು ಹೊಸದಾಗಿ 6.6 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ (Lamborghini Urus Performante SUV) ಕಾರುನ್ನು ಖರೀದಿ ಮಾಡಿದ್ದರು. ಆದರೆ ಈ ಕಾರಿಗೆ ಇನ್ನೂ ನಂಬರ್ ಪ್ಲೇಟ್ ಅಳವಡಿಕೆ ಮಾಡಿರಲಿಲ್ಲ.
ಇದೇ ವೇಳೆ ಕೇರಳದ ಎರ್ನಾಕುಲಂನಲ್ಲಿರುವ ಮೋಟಾರ್ ವಾಹನ ಇಲಾಖೆಯು KL 7, DG 0007 ನಂಬರ್ ಪ್ಲೇಟ್ಗೆ ಹರಾಜು ಕರೆದಿತ್ತು. ಈ ಮಾಹಿತಿಯನ್ನು ತಮ್ಮ ಕಂಪನಿಯ ಸಿಬ್ಬಂದಿಯಿಂದ ಪಡೆದುಕೊಂಡ ವೇಣು ಗೋಪಾಲಕೃಷ್ಣ ಆ ನಂಬರ್ ಅನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಯೋಜಿಸಿದರು. ಇದಕ್ಕೆ ಎಷ್ಟೇ ಹಣ ಖರ್ಚು ಆದರೂ ಚಿಂತೆಬೇಡ ಎಂದು ಮೊದಲೇ ಅಂದುಕೊಂಡಿದ್ದರು.
ಸದ್ಯ ಈ ಬಗ್ಗೆ ಮಾತನಾಡಿದ ಉದ್ಯಮಿ ವೇಣು ಗೋಪಾಲಕೃಷ್ಣ ಅವರು, ಕೆಲವು ವರ್ಷಗಳ ಹಿಂದೆ ನನ್ನ ಬಳಿ ಅಂಬಾಸಿಡರ್ ಕಾರು ಇತ್ತು. ಅದರ ನಂಬರ್ಪ್ಲೇಟ್ 1717 ಇತ್ತು. ಇಲ್ಲಿಂದಲೇ ನನಗೆ 7 ಸಂಖ್ಯೆಯ ಮೇಲೆ ಆಸಕ್ತಿ ಬೆಳೆಯಿತು. ಇದನ್ನು ನಾನು ಅದೃಷ್ಟ ಎಂದು ಭಾವಿಸುತ್ತೇನೆ. ಈಗಲೂ ನಮ್ಮ ಮನೆಯಲ್ಲಿರುವ ಎಲ್ಲ ಫೋನ್ ನಂಬರ್ಗಳು 7 ಅಂಕಿಯಿಂದ ಕೊನೆಗೊಳ್ಳುತ್ತವೆ. ಇದು ಇಲ್ಲಿಗೆ ನಿಲ್ಲಲಿಲ್ಲ. ಲಿಟ್ಮಸ್ ಕಂಪನಿಗೂ ಕೂಡ Litmus7 ಎಂದು ನಾಮಕರಣ ಮಾಡಿದೆ. ಕೇರಳದ ಕೊಚ್ಚಿಯಲ್ಲಿರುವ ಈ ಕಂಪನಿ ವರ್ಷಕ್ಕೆ 450 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗುಜರಾತ್ ಗೆಲುವಿಗೆ ಬಿಗ್ ಬ್ರೇಕ್.. ಮಾರ್ಕ್ರಾಮ್, ಪೂರನ್ ಬ್ಯಾಟಿಂಗ್ ಅಬ್ಬರಕ್ಕೆ ತಲೆ ಬಾಗಿದ ಗಿಲ್ ಸೇನೆ
ನಾನು ನ್ಯೂಜಿಲೆಂಡ್ನಲ್ಲಿ ಇದ್ದಿದ್ದರಿಂದ KL 7, DG 0007 ನಂಬರ್ ಪ್ಲೇಟ್ ಅನ್ನು ಹೇಗದರೂ ಮಾಡಿ ನಮಗೆ ಬರಬೇಕು. ಹಣದ ಬಗ್ಗೆ ಚಿಂತಿಸಬೇಡ ಎಂದು ಸಿಬ್ಬಂದಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೆ. ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಕಾರಿಗಾಗಿ ಹರಾಜಿನಲ್ಲಿ 46.24 ಲಕ್ಷ ರೂಪಾಯಿಗಳನ್ನು ನೀಡಿ ನಂಬರ್ ಪ್ಲೇಟ್ ಖರೀದಿ ಮಾಡಲಾಯಿತು ಎಂದು ಹೇಳಿದ್ದಾರೆ.
ವೇಣು ಗೋಪಾಲಕೃಷ್ಣ ಅವರು ಕಾರುಗಳನ್ನು ತುಂಬಾ ಇಷ್ಟಪಡುತ್ತಾರಂತೆ. ಹೀಗಾಗಿಯೇ ಅವರ ಗ್ಯಾರೇಜ್ನಲ್ಲಿ ಹೊಸ ಲಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಎಸ್‌ಯುವಿ ಜೊತೆಗೆ ಲಂಬೋರ್ಘಿನಿ ಹುರಾಕನ್ ಸ್ಟೆರಾಟೊ, ಮಿನಿ ಕೂಪರ್ ಮತ್ತು ಮರ್ಸಿಡಿಸ್ ಬೆಂಜ್ ಜಿ-ವ್ಯಾಗನ್ ಕೂಡ ಇವೆ. ಇದರ ಜೊತೆ ಏರ್‌ಬಸ್ H130 ಚಾಪರ್ ಕೂಡ ಸದ್ಯದಲ್ಲೇ ನ್ಯೂಜಿಲೆಂಡ್ನಿಂದ ಕೊಚ್ಚಿ ನಗರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ