/newsfirstlive-kannada/media/post_attachments/wp-content/uploads/2024/10/CP-yogeshwar-Join-Congress.jpg)
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಹಿನ್ನೆಲೆಯಲ್ಲಿ ಇವತ್ತು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ MLC ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷಕ್ಕೆ ಸೈನಿಕನೇ ಸವಾಲಾಗಿದ್ದಾರೆ. ಸಿ.ಪಿ ಯೋಗೇಶ್ವರ್ ಸೇರ್ಪಡೆಯಿಂದ ಶತ್ರುಗಳ ಶತ್ರು ಮಿತ್ರ ಅನ್ನೋ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಗೆದ್ದೇ ಗೆಲ್ಲುವ ಹುಮ್ಮಸ್ಸು ಹೆಚ್ಚಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಸಿಪಿವೈ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ನಿವಾಸಕ್ಕೂ ತೆರಳಿ ಚರ್ಚಿಸಿದ್ದರು. ಇದಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದಿದ್ದಾರೆ.
ನಾಳೆ ನಾಮಪತ್ರ ಸಲ್ಲಿಕೆ!
ಕಾಂಗ್ರೆಸ್ ಪಕ್ಷ ಸೇರಿರುವ ಸಿ.ಪಿ ಯೋಗೇಶ್ವರ್ ಅವರು ನಾಳೆಯೇ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ನಾಳೆ ಚನ್ನಪಟ್ಟಣದಲ್ಲಿ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸಿಎಂ, ಡಿಸಿಎಂ, ಸಚಿವರು, ಶಾಸಕರ ಸಿ.ಪಿ ಯೋಗೇಶ್ವರ್ ಅವರು ಸಾಥ್ ನೀಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಾಳೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಆಗಮಿಸುವಂತೆ ಸೂಚನೆ ನೀಡಿದ್ದಾರೆ.
ಜೆಡಿಎಸ್ 30 ವರ್ಷಗಳಿಂದ ಎದುರಾಳಿ!
ಸಿ.ಪಿ ಯೋಗೇಶ್ವರ್ ಅವರು ತಾವು ಯಾಕೆ ಬಿಜೆಪಿ ಪಕ್ಷವನ್ನು ತೊರೆದೆ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಇಲ್ಲಿಗೆ ಯಾಕೆ ಬರ್ತಿದ್ದೆ. ವಿಜಯೇಂದ್ರ ಅವರು ನನ್ನ ಪರ ಮಾತನಾಡಿದ್ದರು. ರಾಜಕೀಯ ಸ್ನೇಹಿತರು ಮಾಡಿದ ಟೀಕೆಗೆ ಉತ್ತರ ಕೊಡಲ್ಲ. ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದಿದ್ದಾರೆ.
ಜಂಪಿಂಗ್ ಸ್ಟಾರ್ ಅಂತ ನನಗೆ ನಾನೇ ಹೇಳಿಕೊಂಡಿದ್ದೇನೆ. ಚನ್ನಪಟ್ಟಣ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಅಂತಿದ್ದೆ. ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕಿದೆ. ನಾನು 32 ವರ್ಷಗಳಿಂದ ಕಾರ್ಯಕರ್ತನಾಗೇ ಕೆಲಸ ಮಾಡಿದ್ದೇನೆ. ಮಧ್ಯೆ ಕೆಲವು ಕಾರಣಾಂತರದಿಂದ ಪಕ್ಷ ಬಿಟ್ಟಿದ್ದೆ.
ಇದನ್ನೂ ಓದಿ: ಮೈತ್ರಿ ರಣ ತಂತ್ರಕ್ಕೆ ಕೈಕೊಟ್ಟ ಸೈನಿಕ; ದಳಪತಿಗೆ ಬಿಗ್ ಟೆನ್ಶನ್, ಕಾರಣ ಇಲ್ಲಿದೆ..
ಜೆಡಿಎಸ್ ಪ್ರಾದೇಶಿಕ ಪಕ್ಷ ಎನ್‌ಡಿಎ ಜೊತೆ ಇದೆ. ಅವರು ಅವರ ವಿಚಾರದಲ್ಲಿ ಹೋರಾಟ ಮಾಡುತ್ತಾರೆ. ನಾವು ನಮ್ಮ ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ತಾಂತ್ರಿಕ ಕಾರಣದಿಂದ ನನಗೆ ಟಿಕೆಟ್ ಸಿಗಲಿಲ್ಲ. ಒಳ್ಳೆ ಕೆಲಸ ಮಾಡಬೇಕೆಂದು ಕಾಂಗ್ರೆಸ್‌ಗೆ ಬಂದೆ. ಯಾವುದೇ ಷರತ್ತು ಹಾಕಿಲ್ಲ. ಯಾರೇ ಅಭ್ಯರ್ಥಿಯಾದ್ರು ಕೆಲಸ ಮಾಡುತ್ತೇವೆ ಎಂದು ಸಿಪಿವೈ ಹೇಳಿದ್ದಾರೆ.
ನನಗೆ ಜೆಡಿಎಸ್ 30 ವರ್ಷದಿಂದ ಎದುರಾಳಿಯಾಗಿದೆ. ಜೆಡಿಎಸ್ ಪಕ್ಷದಿಂದ ನಿಲ್ಲಲ್ಲು ಮನಸಾಕ್ಷಿ ಒಪ್ಪಲಿಲ್ಲ. ಬಿಜೆಪಿಯಿಂದ ಅವಕಾಶ ಕೇಳಿದ್ದೆ ಕೊಡಲಿಲ್ಲ. ಬಿಜೆಪಿ ಪಕ್ಷದಲ್ಲಿ ನನ್ನ ಬೆಳವಣಿಗೆಗೆ ಪೂರಕವಾದ ವಾತಾವರಣ ಇರಲಿಲ್ಲ. ಇದೀಗ ಮತ್ತೆ ನಾನು ಮೂಲ ಪಕ್ಷಕ್ಕೆ ಬಂದಿದ್ದೇನೆ. ನಮ್ಮ ಜಿಲ್ಲೆ, ತಾಲೂಕು ಅಭಿವೃದ್ಧಿ ಮಾಡೋ ಉದ್ದೇಶದಿಂದ ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಆರಂಭಿಸಿರುವ ಸಿ.ಪಿ ಯೋಗೇಶ್ವರ್ ಅವರು ಈವರೆಗೂ 8 ಎಲೆಕ್ಷನ್ನಲ್ಲಿ 5 ಬಾರಿ ಗೆದ್ದು 3 ಬಾರಿ ಸೋಲು ಕಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳಿಂದ ಸ್ಪರ್ಧಿಸಿದ್ದ ಸಿಪಿವೈ ಅವರು ವ್ಯಕ್ತಿಗತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿ, ಬಿಜೆಪಿಯಿಂದ ಸಮಾಜವಾದಿ ಪಕ್ಷ, ಮತ್ತೆ ಬಿಜೆಪಿಗೆ ಈಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ.
ಬೊಂಬೆನಗರಿಯಲ್ಲಿ ಯೋಗೇಶ್ವರ್ ಜಾದು!
1999 ರಲ್ಲಿ ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಿಪಿವೈ ಗೆಲುವು
2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಗೆಲುವು
2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಗೆಲುವು
2009 ಬೈಎಲೆಕ್ಷನ್ನಲ್ಲಿ ಜೆಡಿಎಸ್ ವಿರುದ್ಧ ಯೋಗೇಶ್ವರ್ ಸೋಲು
2011 ಬೈಎಲೆಕ್ಷನ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯೋಗೇಶ್ವರ್ ಗೆಲುವು
2013ರಲ್ಲಿ ಸಮಾಜವಾದಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸಿಪಿವೈ
2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಯೋಗೇಶ್ವರ್
2023ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು, MLC ಆಗಿದ್ದ ಸಿಪಿವೈ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ