ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

author-image
Bheemappa
Updated On
ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?
Advertisment
  • ಮೊಘಲರು ಆಗ ಬಚ್ಚಿಟ್ಟಿದ್ದ ನಿಧಿಗಳು ಈಗ ಸಿಗುತ್ತಿವೆಯಾ?
  • ಹೊಲಕ್ಕೆ ಹೋಗಿದ್ದಾಗ ಕೂಲಿ ಕಾರ್ಮಿಕರಿಗೆ ಸಿಕ್ಕ ನಾಣ್ಯಗಳು
  • ರಾತ್ರೋರಾತ್ರಿ ಭೂಮಿ ಅಗೆಯುತ್ತಿರುವ ಸ್ಥಳೀಯ ಗ್ರಾಮಸ್ಥರು

ಭೋಪಾಲ್: ಬಾಲಿವುಡ್​ ಸೇರಿದಂತೆ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಛಾವ ಸಿನಿಮಾ ಅಬ್ಬರಿಸುತ್ತಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ. ಆದ್ರೆ ಈ ಸಿನಿಮಾದಲ್ಲಿನ ಎಳೆಯನ್ನ ಆಧರಿಸಿದ ಜನರು ಚಿನ್ನದ ನಿಧಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನ, ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಅಭಿನಯದ ಛಾವಾ ಸಿನಿಮಾದಲ್ಲಿ ಮಧ್ಯಪ್ರದೇಶದ ಬುರ್ಹಾನ್‌ಪುರ, ಅಸೀಘರ್ ಕೋಟೆ ಕುರಿತು ಉಲ್ಲೇಖವಿದೆ. ಈ ಸಿನಿಮಾ ಮೊಘಲರ ಕಾಲದ ಕಥೆಯನ್ನು ಹೇಳುತ್ತದೆ. ಮೊಘಲರು, ಮರಾಠರಿಂದ ಅಪಾರ ಚಿನ್ನ, ವಜ್ರ, ವೈಡ್ಯೂರ್ ಲೂಟಿ ಮಾಡಿ ಅಸೀಘಾರ್ ಕೋಟೆಯಲ್ಲಿ ಇಟ್ಟಿದ್ದರು ಎಂದು ಸಿನಿಮಾ ಹೇಳುತ್ತದೆ. ಸದ್ಯ ಈ ಸಿನಿಮಾದ ಕಥೆ ನಿಜ ಎಂಬುವಂತೆ ಘಟನೆಯು ನಡೆದಿದೆ. ಇದರ ಜೊತೆಗೆ ಜನರು ಚಿನ್ನದ ಶೋಧಕ್ಕೂ ಇಳಿದಿದ್ದಾರೆ ಎನ್ನಲಾಗಿದೆ.

publive-image

ಇತ್ತೀಚಿಗೆ ಬುರ್ಹಾನ್‌ಪುರದಿಂದ 18 ಕಿ.ಮೀ ದೂರದಲ್ಲಿರುವ ಆಸಿರ್‌ಗಢ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಾಗ ದರ್ಗಾದ ಬಳಿ ಇರುವ ಮಣ್ಣನ್ನು ಅಗೆದಿತ್ತು. ಈ ಮಣ್ಣನ್ನು ಹಾರೂನ್ ಶೇಖ್ ಎಂಬವರ ಹೊಲದಲ್ಲಿ ಹೋಗಿ ಹಾಕಲಾಗಿತ್ತು. ಹೊಲಕ್ಕೆ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರಿಗೆ, ಹಾಕಿದ್ದ ಮಣ್ಣಿನಲ್ಲಿ ಇತಿಹಾಸ ಕಾಲದ ಲೋಹದ ನಾಣ್ಯಗಳು ಸಿಕ್ಕಿವೆ. ಆದರೆ ಹೊಲದಲ್ಲಿ ಚಿನ್ನ, ಬೆಳ್ಳಿಯ ನಾಣ್ಯಗಳು ಸಿಗುತ್ತಿವೆ ಎಂದು ವದಂತಿ ಸುತ್ತಲಿನ ಹಳ್ಳಿಗಳಲ್ಲಿ, ಎಲ್ಲೆಡೆ ಹಬ್ಬಿದೆ ಎಂದು ಹೇಳಲಾಗಿದೆ.

ಹೀಗಾಗಿ ಜನರು ರಾತ್ರೋರಾತ್ರಿ ಆ ಗ್ರಾಮದಲ್ಲಿ ಭೂಮಿ ಅಗೆಯುವ ಕೆಲಸ ಮಾಡುತ್ತಿದ್ದಾರೆ. ನೂರಾರು ಜನರು ಗುದ್ದಲಿ, ಹಾರೆ ಹಿಡಿದು ಭೂಮಿ ಅಗೆದು ಚಿನ್ನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಮೊಘಲರು ಅಸೀಘಾರ್ ಕೋಟೆ ಬಳಿ ಚಿನ್ನ, ಬೆಳ್ಳಿ, ವಜ್ರ ಹುದುಗಿಸಿಟ್ಟಿದ್ದಾರೆಂದು ಜನರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚಿನ್ನ ಸಿಗುತ್ತದೆಂದು ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಎಲ್ಲವನ್ನೂ ಬಿಟ್ಟು ಜನರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಮತಾಂತರ ಕೂಗು; ಪ್ರೀತಿಸಿ ಮದ್ವೆಯಾದ ಜೋಡಿ ಮಧ್ಯೆ ಆಗಿದ್ದೇನು..?

publive-image

ಇನ್ನು ಇತಿಹಾಸ ತಜ್ಞರ ಪ್ರಕಾರ, ಬುರ್ಹಾನ್‌ಪುರದಲ್ಲಿ ನಾಣ್ಯಗಳ ಪತ್ತೆ ಹೊಸದು ಏನಲ್ಲ. ಮೊಘಲ್ ಯುಗದ ನಾಣ್ಯಗಳು ನಿಜವಾಗಿ ಹೊಲಗಳಲ್ಲಿ ಕಂಡು ಬಂದರೆ, ಸರ್ಕಾರ ನಿಗಾ ಇಡಬೇಕು. ಅಂತಹ ನಾಣ್ಯಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೊಘಲ್ ನಾಣ್ಯ ಪಡೆದುಕೊಂಡವರನ್ನು ತನಿಖೆ ಮಾಡಬೇಕು. ಸಿಕ್ಕ ನಾಣ್ಯಗಳನ್ನು ಸರ್ಕಾರಿ ಭದ್ರವಾಗಿ ಕಾಪಾಡಬೇಕು ಎಂದು ಇತಿಹಾಸಕಾರರು ಹೇಳುತ್ತಾರೆ.

ಈ ಹಿಂದೆ ಮೊಘಲರ ಕಾಲದಲ್ಲಿ ಬುರ್ಹಾನ್ಪುರ್ ಬಹಳ ಸಂಪತ್ತಿನಿಂದ ಸಮೃದ್ಧವಾಗಿತ್ತು. ಇಲ್ಲಿ ನಾಣ್ಯಗಳನ್ನು ತಯಾರಿಸಲು ಒಂದು ಟಂಕಸಾಲೆ ಇತ್ತು ಎಂದು ಇತಿಹಾಸ ಹೇಳುತ್ತದೆ. ಆಗಿನ ಜನರು ತಮ್ಮಲ್ಲಿದ್ದ ಸಂಪತ್ತು ಎಲ್ಲಿಡಬೇಕು ಎಂದು ಗೊತ್ತಾಗದೇ ಭೂಮಿ ಅಗೆದು ಭದ್ರವಾಗಿ ಇಡುತ್ತಿದ್ದರು. ಹೀಗಾಗಿ ಭೂಮಿ ಅಗೆದಾಗ ನಾಣ್ಯಗಳು ಈಗ ಪತ್ತೆ ಆಗುತ್ತಿವೆ ಎನ್ನುವುದು ಅಲ್ಲಗಳೆಯುವಂತಿಲ್ಲ ಎಂದು ಹೇಳುತ್ತಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment