/newsfirstlive-kannada/media/post_attachments/wp-content/uploads/2025/07/CKM_ELEPHANT_1.jpg)
ಚಿಕ್ಕಮಗಳೂರು: ಆನೆ ದಾಳಿಯಿಂದ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದ್ದು ಕೇವಲ 4 ದಿನದ ಅಂತರದಲ್ಲಿ 2ನೇ ಜೀವ ಹೋಗಿದೆ. ಅರಣ್ಯ ಇಲಾಖೆ ವಿರುದ್ಧ ಸುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡು ಆನೆ ದಾಳಿಗೆ ವೃದ್ಧರೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದ ಬಳಿ ನಡೆದಿದೆ. ಅಂಡುವಾನೆಯ ಸುಬ್ರಾಯಗೌಡ (65) ಮೃತರು. ಕಳೆದ ಗುರುವಾರವಾಷ್ಟೇ 25 ವರ್ಷದ ಯುವತಿಯೊಬ್ಬರು ಆನೆ ದಾಳಿಯಿಂದ ಜೀವ ಕಳೆದುಕೊಂಡಿದ್ದರು. ಕೇವಲ 4 ದಿನ ಕಳೆಯುವಷ್ಟರಲ್ಲಿ ಇಂದು ಆನೆ ದಾಳಿಗೆ ಮತ್ತೊಂದು ಬಲಿ ಆಗಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ
ಮಲೆನಾಡು ಭಾಗದಲ್ಲಿ ಕಾಡಾನೆ ಹಾವಾಳಿ ಮಿತಿ ಮೀರಿದ್ದು ಇವತ್ತು ಮೂಡಿಗೆರೆ- ಬೇಲೂರು ಗಡಿ ಭಾಗದಲ್ಲಿ ಬರೋಬ್ಬರಿ 25 ಆನೆಗಳು ಕಾಣಿಸಿಕೊಂಡಿದ್ದವು. ಅಲ್ಲದೇ ಮೇಲಿಂದ ಮೇಲೆ ಆನೆ ದಾಳಿ ಘಟನೆ ಆಗುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೊಲಗಳಿಗೆ, ಕಾಫಿ ತೋಟಗಳಿಗೆ ಹೋಗಲು ಭಯ ಬೀಳುವಂತೆ ಆಗಿದೆ.
ವೃದ್ಧ ಜೀವ ಬಿಟ್ಟ ಹಿನ್ನೆಲೆಯಲ್ಲಿ ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರು ಕೆಂಡವಾಗಿದ್ದು ನಿಮ್ಮ ಪರಿಹಾರ ಬೇಡ, ಮೊದಲು ಜೀವ ಉಳಿಸಿ ಎಂದು ಮನವಿ ಮಾಡಿದ್ದಾರೆ. ಬಾಳೆಹೊನ್ನೂರಿನಲ್ಲಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ದಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ