/newsfirstlive-kannada/media/post_attachments/wp-content/uploads/2025/01/Chikkamagalore-Accident-and-marriage-2.jpg)
ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ತರಳಬಾಳು ಮದುವೆ ಮಂಟಪ ಇವತ್ತು ಹೃದಯ ವಿದ್ರಾವಕ ಘಟನೆಗೆ ಸಾಕ್ಷಿ ಆಯಿತು. ಮಾಂಗಲ್ಯಂ ತಂತು ನಾನೇನಾ ಅಂತ ತಾಳಿ ಕಟ್ಟಿಸಿಕೊಂಡ ಮಗಳ ಸಂತೋಷ ಹೆಚ್ಚು ಕಾಲ ಉಳಿಯಲೇ ಇಲ್ಲ. ಮದುವೆ ಮುಹೂರ್ತ ಮುಗಿದು ಹೊರ ಬರುತ್ತಿದ್ದಂತೆ ಇಡೀ ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟಿತು.
ಈ ಕರುಣಾಜನಕ ಘಟನೆ ನಡೆದಿರೋದು ಚಂದ್ರು ಎಂಬುವರ ಮನೆಯಲ್ಲಿ. ಚಂದ್ರು ತನ್ನ ಮಗಳ ಮದುವೆಯನ್ನು ಭರ್ಜರಿಯಾಗಿ ಮಾಡಿ ಕುಟುಂಬಸ್ಥರ ಬಳಿ ಶಹಬ್ಬಾಸ್ ಅನ್ನಿಸಿಕೊಳ್ಳುವ ಆಸೆ ಹೊಂದಿದ್ದರು. ಮೊದಲ ಮಗಳ ಮದುವೆ ಸಮಯಕ್ಕೆ ಕೋವಿಡ್ ಪಾಸಿಟಿವಿ ಆಗಿದ್ದು ಮದುವೆ ನೋಡಲು ಆಗಿರಲಿಲ್ಲ. 2ನೇ ಮಗಳು ಲವ್ ಮ್ಯಾರೇಜ್ ಆಗಿದ್ದಳು. ಇದೀಗ ಕೊನೇ ಮಗಳ ಮದುವೆಯನ್ನು ನೋಡೋ ಭಾಗ್ಯ ಕೂಡ ಚಂದ್ರುಗೆ ಸಿಗಲೇ ಇಲ್ಲ.
ಈ ಹುಡುಗಿ ಖುಷಿಯಾಗಿಯೇ ಹಸೆಮಣೆ ಏರಿದ್ದಳು. ಅಪ್ಪ ಸುಸ್ತಾಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ವಿಷಯ ಮಾತ್ರ ತಲೆಯಲ್ಲಿ ಇತ್ತು. ಮದುವೆ ಮುಗಿಸಿಕೊಂಡು ನೇರವಾಗಿ ಹೋಗಿ ಆ ಸಂಭ್ರಮವನ್ನು ಹೇಳಿಕೊಳ್ಳೋಣ ಅಂತಾನೆ ಮದುವೆ ಮುಗಿಯೋದನ್ನೇ ಕಾದಿದ್ದಳು. ಮದುವೆಯೂ ಮುಗಿಯಿತು ಅಪ್ಪ ಎಲ್ಲಿ ಅಂದಾಗಲೇ ಅವಳಿಗೆ ಬರಸಿಡಿಲು ಬಡಿಯಿತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಚಂದ್ರು, ಮಮತಾಳ ಮೂರನೇ ಮಗಳು ದೀಕ್ಷಿತಾಳ ಮದುವೆಯನ್ನು ಕಡೂರು ತಾಲೂಕಿನ ಬೀರೂರಿನ ಯತಿರಾಜ್ ಜೊತೆಗೆ ನಿಶ್ವಿಯವಾಗಿತ್ತು. ನಿನ್ನೆ ಮನೆಯಿಂದ ವಧುವನ್ನ ಕಲ್ಯಾಣ ಮಂಟಪಕ್ಕೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಸಂಬಂಧಿಕರಿಗೆ ಒಂದು ಮಾಹಿತಿ ಸಿಕ್ಕಿದೆ. ವಧುವಿನ ತಂದೆ ಚಂದ್ರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಹಾಗೂ ಅವ್ರ ಜೊತೆ ಇದ್ದ ವ್ಯಕ್ತಿಗೆ ಗಾಯವಾಗಿದೆ ಅನ್ನೋದು. ಆಗ ಸಂಬಂಧಿಕರು ತೆಗೆದುಕೊಂಡ ನಿರ್ಧಾರ ಏನಂದ್ರೆ ಮದುವೆ ಮೊದಲು ನಂತ್ರ ಸಾವಿನ ಸುದ್ದಿ.
ಮಗಳು ಕಲ್ಯಾಣ ಮಂಟಪಕ್ಕೆ ಹೋಗುವಾಗಲೇ ಅಪ್ಪನ ಆಶೀರ್ವಾದ ಬೇಕು ಅಂದಿದ್ದಾಳೆ. ಆಗ ಸಂಬಂಧಿಕರು ನೋವಿದ್ರು ನಗುನಗುತ್ತಲೇ ಅಪ್ಪನಿಗೆ ಹುಷಾರಿಲ್ಲ ಸುಸ್ತಾಗಿದ್ದಾರೆ ಅಂತಾ ಹೇಳಿ ಕರ್ಕೊಂಡು ಹೋಗಿದ್ದಾರೆ. ಈ ವಿಚಾರವನ್ನ ಚಂದ್ರು ಪತ್ನಿ ಮಮತಾಗೂ ಹೇಳಿರಲಿಲ್ಲ.
ಇದನ್ನೂ ಓದಿ:BBK11: ಈ ಬಾರಿಯ ಬಿಗ್ಬಾಸ್ ವಿನ್ನರ್ ಯಾರಾಗ್ತಾರೆ? ಗೌತಮಿ, ಧನರಾಜ್ ಹೇಳಿದ್ದೇನು?
ನಿನ್ನೆ ರಾತ್ರಿ ಅರತಕ್ಷತೆಯೂ ನಡೆಯಿತು. ಕರೆದಿದ್ದ ಸಂಬಂಧಿಕರು ಬಂದು ಮದುವೆ ಶುಭಾಶಯವನ್ನೂ ಕೊರಿದರು. ಅಪ್ಪನ ಹತ್ರ ಆಮೇಲೆ ಹೋಗಿ ಆಶೀರ್ವಾದ ಪಡೆಯೋಣ ಅಂತಾನೇ ತಾಳಿ ಕಟ್ಟಿಸಿಕೊಂಡು ದೀಕ್ಷಿತ ಹೊಸ ಜೀವನಕ್ಕೆ ಕಾಲಿಟ್ಟಳು.
ಇಷ್ಟೆಲ್ಲಾ ಆದ ಕೆಲ ಕ್ಷಣದಲ್ಲಿಯೇ ಸಿಕ್ಕಿದ್ದು ಅಪ್ಪ ಇಲ್ಲ ಅಪ್ಪ ಬಾರದ ಲೋಕಕ್ಕೆ ಹೋಗಿದ್ದಾನೆ ಅನ್ನೋ ಶಾಕಿಂಗ್ ಸುದ್ದಿ. ಅಪ್ಪನ ಸಾವಿನ ನಡುವೆಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಕ್ಷಣಾರ್ಧದಲ್ಲಿಯೇ ಕಲ್ಯಾಣ ಮಂಟಪವೇ ಶೋಕಸಾಗರದಲ್ಲಿ ಮುಳುಗಿ ಹೋಗುವಂತೆ ಮಾಡಿತು.
ಚಂದ್ರು ಮೊದಲ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಕೋವಿಡ್ ಅಡ್ಡ ಬಂದಿತ್ತು. ಎರಡನೇ ಮಗಳ ಮದುವೆ ಲವ್ ಮ್ಯಾರೇಜ್ ಆದ ಕಾರಣ ಅದ್ದೂರಿಯಾಗಿ ಮಾಡಲು ಸಾಧ್ಯವಾಗಿರಲ್ಲ. ಈ ಹಿನ್ನೆಲೆಯಲ್ಲಿ ಮೂರನೇ ಮಗಳಾದ ದೀಕ್ಷಿತಾಳ ಮದುವೆಯನ್ನು ಭರ್ಜರಿಯಾಗಿ ಮಾಡಲು ಸಕಲ ಸಿದ್ದತೆಯನ್ನು ಮಾಡಿದ್ದರು. ಚಂದ್ರ ಹತ್ತಿರ ಸಂಬಂಧಿಕರಿಗೆ ನಿನ್ನೆ ಲಗ್ನಪತ್ರಿಕೆ ಕೊಡಲು ಹೋದಾಗ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತರೀಕೆರೆ ಸರ್ಕಾರಿ ಆಸ್ಪತ್ರಗೆ ದಾಖಲಿಸಿ ಅಲ್ಲಿ ಇಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಒಂದು ಕಡೆ ಮಗಳ ಮದುವೆ ಸಂಭ್ರಮ ಮತ್ತೊಂದು ಕಡೆ ಅಪ್ಪನ ಸಾವು ಎರಡರ ನಡುವೆ ಸಂಬಂಧಿಕರು ಅನಿರ್ವಾಯವಾಗಿ ಸಂಭ್ರಮವನ್ನೇ ಮೊದಲು ಆಯ್ಕೆ ಮಾಡಿಕೊಂಡಿದ್ದಾರೆ. ನಗುನಗುತ್ತಲೇ ಹೊಸ ಬದುಕಿನ ಕನಸು ಕಂಡವಳ ಬಾಳಲಿ ಅಪ್ಪನ ಸಾವಿನ ನೋವಿನ ಕಣ್ಣೀರು ಎಲ್ಲರ ಕಣ್ಣಲ್ಲಿಯೂ ನೀರು ತರಿಸಿದ್ದಂತೂ ನಿಜಕ್ಕೂ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ