ಮಗ ಕ್ರಿಕೆಟ್ ಆಡ್ತಿರಲಿಲ್ಲ​, ಮ್ಯಾಚ್, RCB ಅಂತ ಎಲ್ಲಿಗೂ ಹೋಗ್ತಿರಲಿಲ್ಲ.. ತಂದೆ ಮಾತು ಕರುಳು ಹಿಂಡುತ್ತೆ

author-image
Bheemappa
Updated On
ಮಗ ಕ್ರಿಕೆಟ್ ಆಡ್ತಿರಲಿಲ್ಲ​, ಮ್ಯಾಚ್, RCB ಅಂತ ಎಲ್ಲಿಗೂ ಹೋಗ್ತಿರಲಿಲ್ಲ.. ತಂದೆ ಮಾತು ಕರುಳು ಹಿಂಡುತ್ತೆ
Advertisment
  • ‘ಮಿಲ್ಟ್ರಿಗೆ ಹೋಗುತ್ತೇನೆ ಎಂದಿದ್ದ, ನಾನೇ ಡಾಕ್ಟರ್​ ಓದು ಎಂದಿದ್ದೆ’
  • ಯಾವುದೇ ಮಾಹಿತಿ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದು ತಪ್ಪು
  • ಶುಕ್ರವಾರ ಸಂಜೆ ಮನೆಗೆ ಬರುವುದಾಗಿ ಹೇಳಿದ್ದ- ತಂದೆ ಗಣೇಶ್​​

ಚಿಕ್ಕಬಳ್ಳಾಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲುವಿನ ವಿಜಯೋತ್ಸವದ ಕಾಲ್ತುಳಿತದಲ್ಲಿ ಚಿಕ್ಕಬಳ್ಳಾಪುರದ ಚಿಂತಾಮಣಿಯ ಗೋಪಲ್ಲಿ ಗ್ರಾಮದ ಪ್ರಜ್ವಲ್ ಎನ್ನುವರು ಕೊನೆಯುಸಿರೆಳೆದಿದ್ದಾರೆ. ಮಗ ಡಾಕ್ಟರ್ ಆಗಲೆಂದು ಕನಸು ಕಂಡಿದ್ದ ಪ್ರಜ್ವಲ್ ಅವರ ತಂದೆ ಗಣೇಶ್ ಹಾಗೂ ಕುಟುಂಬಸ್ಥರು ತೀವ್ರ ದುಃಖಿತರಾದ್ದಾರೆ.

ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ಮೃತ ಪ್ರಜ್ವಲ್ ತಂದೆ ಗಣೇಶ್ ಅವರು, ಚಿನ್ನಸ್ವಾಮಿ ಸ್ಟೇಡಿಯಂಗೆ ಮಗ ಹೋಗುವುದು ನಮಗೆ ಗೊತ್ತೇ ಇರಲಿಲ್ಲ. ಫ್ರೆಂಡ್ಸ್​ ಜೊತೆ ಹೋಗಿದ್ದಾನೆ. ಅವನಿಗೆ ಕ್ರಿಕೆಟ್​ ಬಗ್ಗೆ ಆಸಕ್ತಿ ಇರಲಿಲ್ಲ. ಯಾವಾಗಲಾದರೂ ಬೆಂಗಳೂರಿನಿಂದ ಮನೆಗೆ ಬಂದರೆ ಎಲ್ಲಿಗೂ ಹೋಗುತ್ತಿರಲಿಲ್ಲ. ಮನೆಯಲ್ಲೇ ಕೆಲಸ ಮಾಡಿಕೊಂಡು ಇರುತ್ತಿದ್ದನು. ಏನೋ ದುರದೃಷ್ಟ ಮಗ ಅಲ್ಲಿಗೆ ಹೋಗಿದ್ದಾಗ ನಡೆದು ಹೋಗಿದೆ ಎಂದು ತಂದೆ ಹೇಳುತ್ತ ಭಾವುಕರಾದರು.

ಮಗ ಎರಡು ವರ್ಷದಿಂದ ಬೆಂಗಳೂರಿನಲ್ಲಿ ಓದುತ್ತಿದ್ದ. ಅದಕ್ಕೂ ಮೊದಲು ನಾರಾಯಣ ಪಿಯು ಕಾಲೇಜಿನಲ್ಲಿ ಎರಡು ವರ್ಷ ಓದಿದ್ದನು. ಕಾರ್ಕಳದ ಜ್ಞಾನ ಸುಧಾ ಕಾಲೇಜಿನಲ್ಲಿ ಒಂದು ವರ್ಷ ಓದಿದ್ದ. ಆ ಮೇಲೆಯೇ ಮಗನಿಗೆ ಡಾಕ್ಟರ್​ ಸೀಟ್ ಸಿಕ್ಕಿತ್ತು. ಎಂಬಿಬಿಎಸ್​​ ಕೋರ್ಸ್​ನಲ್ಲಿ 2ನೇ ವರ್ಷದಲ್ಲಿ ಓದುತ್ತಿದ್ದನು. 15 ದಿನಕ್ಕೆ ಒಮ್ಮೆ ಅಂದರೆ ಶನಿವಾರ ಬಂದು ಸೋಮವಾರ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ. 15 ತಾರೀಕು ಹೋಗಿದ್ದ, ಈಗ ಶುಕ್ರವಾರ ಸಂಜೆ ಬರುವುದಾಗಿ ಹೇಳಿದ್ದನು ಎಂದು ತಂದೆ ಹೇಳಿದ್ದಾರೆ.

ಇದನ್ನೂ  ಓದಿ:ಡರ್ಟಿ ಪಾಲಿಟಿಕ್ಸ್​.. BJP, ಜೆಡಿಎಸ್​ ಯಾವತ್ತಿದ್ರೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ; ಡಿಕೆ ಶಿವಕುಮಾರ್

publive-image

ಭಾರತೀಯ ಸೇನೆಗೆ ಹೋಗುತ್ತೇನೆ ಎಂದಿದ್ದ. ಅದಕ್ಕೆ ನಾವು ಇರೋದು ನೀವು ಇಬ್ಬರು ಅಣ್ಣ-ತಮ್ಮ. ಓದಿದ್ರೆ ಡಾಕ್ಟರ್​ ಓದಿ. ಇಲ್ಲದಿದ್ದರೇ ಯಾವುದಾದರೂ ಕೆಲಸ ಬರುವಂತದ್ದನ್ನ ಓದಿ ಎಂದು ಹೇಳಿದ್ದೆ. ಊರಿಗೆ ಬಂದರೆ ಮನೆಯಲ್ಲೇ ಇರುತ್ತಿದ್ದ. ಅವನಾಯಿತು, ಅವನ ಕೆಲಸ, ಓದು ಆಯಿತು ಅಷ್ಟೇ.

ಮನೆಯಲ್ಲಿ ಇರುವಾಗ ಕಾಲೇಜಿನಿಂದ ಫೋನ್ ಮಾಡಿ, ಮಗನಿಗೆ ಹುಷಾರಿಲ್ಲ, ಆಸ್ಪತ್ರೆಗೆ ದಾಖಲು ಮಾಡಿದ್ದಾರಂತೆ ಹೇಳಿದ್ದರು ಅಂತ ಹೇಳಿದರು. ಆವಾಗ ಕಾರಿನಲ್ಲಿ ಸ್ಥಳಕ್ಕೆ ಹೋದಾಗ ಮಗ ಇಲ್ಲ ಎನ್ನುವುದು ಗೊತ್ತಾಯಿತು. ಅವನು ಕ್ರಿಕೆಟ್ ಆಡ್ತಿರಲಿಲ್ಲ​, ಮ್ಯಾಚ್ ಅಂತ ಎಲ್ಲಿಗೂ ಹೋಗುತ್ತಿರಲಿಲ್ಲ. ಆರ್​ಸಿಬಿ ಗೆದ್ದಾಗ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ತಪ್ಪು. ಭದ್ರತೆ ಇಲ್ಲದಿದ್ದಕ್ಕೆ ಈ ರೀತಿ ಆಗಿದೆ. ಸರ್ಕಾರ ಜನ ಸೇರುವ ಬಗ್ಗೆ ಯಾವುದೇ ಮಾಹಿತಿ ಕೊಡದೇ ಆಯೋಜಿಸಿ 11 ಮಕ್ಕಳ ಪ್ರಾಣ ತೆಗೆದಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment