/newsfirstlive-kannada/media/post_attachments/wp-content/uploads/2024/06/dboss30.jpg)
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸಾಕಷ್ಟು ಸಾಕ್ಷ್ಯಾಧಾರಗಳನ್ನೂ ಕಲೆ ಹಾಕಲಾಗಿದೆ. 17 ಆರೋಪಿಗಳನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ತಪ್ಪಿದ್ದರೆ ಶಿಕ್ಷೆ ಆಗಬೇಕು ಅನ್ನೋ ಕೂಗು ಕೂಡ ಬಲವಾಗಿ ಕೇಳಿ ಬಂದಿದೆ. ಅಷ್ಟಕ್ಕೂ ದರ್ಶನ್‌ಗೆ ಶಿಕ್ಷೆ ಆಗುತ್ತಾ? ಅಥವಾ ಪಾರಾಗಲು ಅವಕಾಶವಿದೆಯಾ ಅನ್ನೋದೇ ಸದ್ಯದ ಕುತೂಹಲ.
ಇದನ್ನೂ ಓದಿ:ದರ್ಶನ್ ತಲೆಗೂದಲು ಟೆಸ್ಟ್.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?
ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್ ಗ್ಯಾಂಗ್ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಕಂಬಿ ಎಣಿಸತೊಡಗಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಸಾಥ್ ಕೊಟ್ಟ 17 ಆರೋಪಿಗಳು ಈಗಾಗಲೇ ಅಂದರ್ ಆಗಿದ್ದಾರೆ. ಪೊಲೀಸರು ಬಹುತೇಕ ತನಿಖೆ ಪೂರ್ಣಗೊಳಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ನಡೀತಿದೆ. ಈ ನಡುವೆ ಪೊಲೀಸ್ ಕಸ್ಟಡಿಗೆ ಪಡೆಯುವ ವೇಳೆ ಸಲ್ಲಿಸಲಾದ ರಿಮಾಂಡ್ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿಗಳು ದಾಖಲಾಗಿವೆ. ಅವುಗಳನ್ನ ಕೂಲಂಕುಷವಾಗಿ ಗಮನಿಸಿದ್ರೆ ದರ್ಶನ್‌ಗೆ ಶಿಕ್ಷೆಯಾಗೋ ಸಾಧ್ಯಾಸಾಧ್ಯತೆಗಳ ಬಗ್ಗೆ ಮನವರಿಕೆಯಾಗುತ್ತೆ.
ರೇಣುಕಾಸ್ವಾಮಿಯ ಕಿಡ್ನಾಪ್ ಮತ್ತು ಹತ್ಯೆ ಪ್ರಕರಣದಲ್ಲಿ ಅರೆಸ್ಟಾಗಿರೋ ಆರೋಪಿಗಳು 17 ಮಂದಿ. ಸುಮಾರು 10 ಜನರನ್ನ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಎಲ್ಲರ ಸ್ವ ಇಚ್ಛಾ ಹೇಳಿಕೆಗಳನ್ನ ದಾಖಲಿಸಲಾಗಿದೆ. ಈ ಪೈಕಿ ದರ್ಶನ್‌ಗೆ ಮುಳುವಾಗುವ ಅಂಶಗಳಾವುವು ಅನ್ನೋದು ಮಹತ್ವ ಪಡೆದುಕೊಳ್ಳುತ್ತೆ.
ದರ್ಶನ್‌ಗೆ ಮುಳುವಾಗುವ ಅಂಶಗಳೇನು?
ಸಹ ಆರೋಪಿಗಳ ಹೇಳಿಕೆಗಳೇ ಇಲ್ಲಿ ದರ್ಶನ್ ವಿರುದ್ಧ ಪ್ರಮುಖ ಸಾಕ್ಷಿಗಳಾಗಲಿವೆ. ಯಾಕಂದ್ರೆ ಇತರೆ ಆರೋಪಿಗಳ ಜೊತೆ ಸಂಚಿನಲ್ಲಿ ಭಾಗಿಯಾಗಿರೋದು ಹೇಳಿಕೆಗಳಿಂದ ಸಾಬೀತಾಗಲಿದೆ. ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನ್ಯಾಯಾಧೀಶರ ಮುಂದೆಯೇ ಹೇಳಿಕೆ ಕೊಟ್ಟಿದ್ದು ಆತನ ಹೇಳಿಕೆ ದರ್ಶನ್‌ಗೆ ಮುಳುವಾಗುವ ಸಾಧ್ಯತೆ ಇದೆ. ದರ್ಶನ್ ಹಲ್ಲೆ ನಡೆಸಿದ್ದನ್ನ ಆತ ನೋಡಿದ್ದಲ್ಲಿ, ಹೇಳಿಕೆಯಲ್ಲಿ ದಾಖಲಿಸಿದ್ದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣನೆಯಾಗುತ್ತೆ. ಇನ್ನು, ರೇಣುಕಾಸ್ವಾಮಿಯ ಮೃತದೇಹವನ್ನ ಸಾಗಿಸಲು ಸ್ಕಾರ್ಪಿಯೋ ಕಾರು ನೀಡಿದ್ದ ಪುನೀತ್‌ನನ್ನ ಈ ಕೇಸ್‌ನಲ್ಲಿ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆತನ ಸಾಕ್ಷ್ಯವೂ ಮಹತ್ವ ಪಡೆದುಕೊಳ್ಳುತ್ತೆ. ದರ್ಶನ್ ಕಾಲ್ ಡಿಟೇಲ್‌ಗಳು ಕೂಡ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಲಿದೆ. ಕಿಡ್ನಾಪ್ ಮಾಡಿರೋ ಆರೋಪಿಗಳು, ಹತ್ಯೆಯಲ್ಲಿ ಭಾಗಿಯಾದ ಇತರೆ ಆರೋಪಿಗಳ ಜೊತೆಗೆ ನಡೆದಿರೋ ಸಂಭಾಷಣೆಗಳು ಮಹತ್ವದ ಸಾಕ್ಷ್ಯವಾಗಲಿವೆ.
ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್ ಗ್ಯಾಂಗ್ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ!
ಶೆಡ್‌ನ ಸಿಸಿಟಿವಿ ಪೂಟೇಜ್ ಕೂಡಾ ಈ ಪ್ರಕರಣದಲ್ಲಿ ದರ್ಶನ್ ವಿರುದ್ಧ ಸಾಕ್ಷ್ಯವಾಗಲಿವೆ. ಶೆಡ್‌ಗೆ ಆತ ಬಂದಿರೋದು, ಹಲ್ಲೆ ನಡೆಸಿರೋದು ಸಿಸಿಟಿವಿಯಲ್ಲಿ ದಾಖಲಾಗಿದ್ದಲ್ಲಿ ದರ್ಶನ್‌ಗೆ ಸಂಕಷ್ಟ ಫಿಕ್ಸ್. ಆದ್ರೆ ಕಾನೂನಿನಲ್ಲಿ ಆರೋಪಿ ಸ್ಥಾನದಲ್ಲಿ ನಿಂತ ವ್ಯಕ್ತಿ, ಅಪರಾಧಿ ಅನ್ನೋದು ಸಾಬೀತಾಗದೇ ಶಿಕ್ಷೆ ವಿಧಿಸುವುದಿಲ್ಲ. ಹಾಗೇನೇ ಆರೋಪಿ ಸ್ಥಾನದಲ್ಲಿ ನಿಲ್ಲೋ ದರ್ಶನ್‌ನ ಪಾರು ಮಾಡಲು ಆತನ ಪರ ವಕೀಲರು ಸಕಲ ರೀತಿಯಲ್ಲೂ ಪ್ರಯತ್ನಿಸಲಿದ್ದಾರೆ. ಹಾಗೇನೇ ದರ್ಶನ್‌ಗೆ ಕೇಸಿನಲ್ಲಿ ಪಾರಾಗಲು ಕೂಡಾ ಕೆಲ ಅಂಶಗಳು ಸಹಕಾರಿಯಾಗೋ ಸಾಧ್ಯತೆಯಿದೆ. ಪೊಲೀಸರು ಸಲ್ಲಿಸಿರೋ ರಿಮಾಂಡ್ ಅರ್ಜಿಯನ್ನ ಕೂಲಂಕುಷವಾಗಿ ಗಮನಿಸಿದ್ರೆ ರೇಣುಕಾಸ್ವಾಮಿಯ ಹತ್ಯೆಯಲ್ಲಿ ಆರೋಪಿಗಳೆಲ್ಲರೂ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆಯೇ ಹೊರತು ದರ್ಶನ್ ಹೆಸರನ್ನ ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ದರ್ಶನ್ ಹಲ್ಲೆಯಿಂದಲೇ ರೇಣುಕಾಸ್ವಾಮಿ ಸಾವಾಗಿದೆ ಅಂತಾನೂ ಉಲ್ಲೇಖವಾಗಿಲ್ಲ. ಅಥವಾ ದರ್ಶನ್ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದಾನೆ ಅನ್ನೋದನ್ನೂ ನಿರ್ದಿಷ್ಟವಾಗಿ ತಿಳಿಸಿಲ್ಲ. ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಬೇಕಾದ್ರೆ ನಿರ್ದಿಷ್ಟ ಉಲ್ಲೇಖ ತೀರಾ ಅಗತ್ಯ.
ದರ್ಶನ್ ಪಾರಾಗಲು ಸಾಧ್ಯವೇ?
ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಲಾಗಿದೆ ಎಂದು ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ದರ್ಶನ್ ತಾನೇ ಸೂಚನೆ ನೀಡಿ ಕಿಡ್ನಾಪ್ ಮಾಡಿಸಿದ್ದನ್ನ ಸಾಬೀತು ಪಡಿಸಲು ಪೂರಕ ಸಾಕ್ಷಿಗಳ ಅಗತ್ಯ ಬೀಳುತ್ತೆ. ಶವ ವಿಲೇವಾರಿಗೆ ದರ್ಶನ್ 30 ಲಕ್ಷ ಹಣವನ್ನ ಕೊಟ್ಟಿದ್ದಾಗಿ ತಿಳಿಸಲಾಗಿದೆ. ಈ ಹಣವನ್ನ ಪ್ರದೋಶ್‌ಗೆ ಕೊಟ್ಟಿರೋದಾಗಿ ತಿಳಿಸಲಾಗಿದೆ. ಆದ್ರೆ ಬ್ಯಾಂಕ್ ಟ್ರಾನ್ಸಾಕ್ಷನ್ ನಡೆದಿಲ್ಲ ಅಂದ್ರೆ ಹಣ ಕೊಟ್ಟಿರೋದು ಸಾಬೀತು ಪಡಿಸೋದು ಸುಲಭವಿಲ್ಲ. ಶೆಡ್‌ನಲ್ಲಿನ ಸಿಸಿಟಿವಿ ಪೂಟೇಜ್ಗಳಲ್ಲಿ ದರ್ಶನ್ ಬಂದಿರೋದು ಸಾಬೀತಾಗುತ್ತೆ. ಆದ್ರೆ ಹಲ್ಲೆ ನಡೆಸಿರೋದು ಸೆರೆಯಾಗಿಲ್ಲ ಅಂದ್ರೆ ಮಹತ್ವ ಪಡೆದುಕೊಳ್ಳುತ್ತೆ. ಮೃತ ದೇಹವನ್ನ ಸೆಕ್ಯೂರಿಟಿ ರೂಮ್‌ನಲ್ಲಿ ತಂದು ಇರಿಸಲಾಗಿತ್ತು ಅಂತಾ ಆರೋಪಿಗಳೇ ಹೇಳಿದ್ದಾರೆ. ಅಲ್ಲಿ ಸಿಸಿಟಿವಿ ಕ್ಯಾಮರಾ ಇದೆಯಾದ್ರೂ ಆ ಕೋಣೆಗೆ ದರ್ಶನ್ ಹೋಗಿಲ್ಲ. ಎಲ್ಲಕ್ಕಿಂತಾ ಮುಖ್ಯವಾಗಿ ಮೃತದೇಹದ ವಿಲೇವಾರಿಗೆ ದರ್ಶನ್ ಹೋಗಿಲ್ಲ ಅನ್ನೋದು ಈಗಾಗಲೇ ಸ್ಪಷ್ಟವಾಗಿದೆ. ವಿನಯ್ ಮತ್ತು ಇತರೆ ಆರೋಪಿಗಳು ಮೃತದೇಹದ ವಿಲೇವಾರಿಗೆ ತೆರಳಿದ್ದರು.
ಇದನ್ನೂ ಓದಿ:ದರ್ಶನ್ ತಲೆಗೂದಲು ಟೆಸ್ಟ್.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?
ದರ್ಶನ್‌ನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ. ಅಲ್ಲಿ ಮೂರು ಕಡೆ ಮಹಜರು ನಡೆದಿದೆ. ಆದ್ರೆ ದರ್ಶನ್‌ನ ನಿಲ್ಲಿಸಿಕೊಂಡು ಮಹಜರು ನಡೆಸಿರೋದು ಹಲ್ಲೆ ನಡೆದಿದೆ ಎನ್ನಲಾದ ಒಂದು ಜಾಗದಲ್ಲಿ ಮಾತ್ರ. ಅಂದ್ರೆ ಮಿಕ್ಕ ಎರಡು ಜಾಗದಲ್ಲಿ ದರ್ಶನ್ ಇರಲಿಲ್ಲ ಅನ್ನೋದು ಸ್ಪಷ್ಟವಾದಂತೆಯೇ ಆಗುತ್ತೆ. ಇಂಥ ಸೂಕ್ಷ್ಮ ವಿಚಾರಗಳನ್ನೇ ದರ್ಶನ್ ಪರ ವಕೀಲರು ಪಾಯಿಂಟ್ ಔಟ್ ಮಾಡುವ ಸಾಧ್ಯತೆಯಿದೆ. ಇಷ್ಟಾದ್ರೂ ಇಡೀ ಪ್ರಕರಣದಲ್ಲಿ ದರ್ಶನ್ ನೆರಳು ಇರೋದಂತೂ ಸ್ಪಷ್ಟವಾಗಿ ಎದ್ದು ಕಾಣುತ್ತೆ. ಇದೆಲ್ಲ ನಡೆದಿರೋದೇ ದರ್ಶನ್ ಸೂಚನೆ ಮೇರೆಗೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಹೀಗಾಗಿ ಅಪರಾಧಿ ಅಂತಾ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ಫಿಕ್ಸ್ ಅಂತಾನೇ ಹೇಳಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ