/newsfirstlive-kannada/media/media_files/2025/08/09/kap-2025-08-09-18-02-11.jpg)
ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಎರಡನೇ ಭಾರಿಗೆ ಕಪಿಲ್ ಶರ್ಮಾ ಮಾಲೀಕತ್ವದ ಕ್ಯಾಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರ ಹಿಂದೆ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಈ ದಾಳಿಗೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದವನಾದ ಹ್ಯಾರಿ ಬಾಕ್ಸರ್ ವಿಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಸಲ್ಮಾನ್ ಖಾನ್ ಜತೆ ಕೆಲಸ ಮಾಡುವ ನಿರ್ದೇಶಕರು, ನಿರ್ಮಾಪಕರು ಅಥವಾ ನಟರ ಎದೆಗೆ ಗುಂಡು ಹೊಡೆಯುವುದಾಗಿ ಬೆದರಿಸಿದ್ದಾನೆ. ಅತ್ತ ಬಿಷ್ಣೋಯಿ ಆಪ್ತನಾದ ಇನ್ನೊಬ್ಬ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಪ್ರತಿಕ್ರಿಯಿಸಿ, ‘ಕಪಿಲ್‌ರನ್ನು ಸಂಪರ್ಕಿಸಲು ಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಕೆಫೆ ಮೇಲೆ ದಾಳಿಯಾಯಿತು. ಅವರು ಇದನ್ನೂ ನಿರ್ಲಕ್ಷಿಸಿದರೆ, ಮುಂದಿನ ದಾಳಿ ಮುಂಬೈನಲ್ಲೇ ನಡೆಯುತ್ತದೆ’ ಎಂದು ಎಚ್ಚರಿಸಿದ್ದಾನೆ.
1998ರಲ್ಲಿ ಸಲ್ಮಾನ್ ರಾಜಸ್ಥಾನದಲ್ಲಿ ಕೃಷ್ಣಮೃಗವನ್ನು ಕೊಂದಿದ್ದರು. ಹೀಗಾಗಿ ಅದನ್ನು ಪೂಜ್ಯಭಾವದಿಂದ ಕಾಣುವ ಬಿಷ್ಣೋಯಿಗಳು ಸಲ್ಲು ಮೇಲೆ ಕೆಂಗಣ್ಣು ಬೀರಿದ್ದರು. ಸಲ್ಲು ಹತ್ಯೆಗೂ ಯತ್ನ ನಡೆದಿತ್ತು ಮತ್ತು ಸಲ್ಮಾನ್ ಆಪ್ತ ಉದ್ಯಮಿ ಬಾಬಾ ಸಿದ್ದಿಖಿಯನ್ನು ಸಾಯಿಸಿದ್ದರು. ಇದೀಗ ಕಪಿಲ್ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್‌ರನ್ನು ಆಹ್ವಾನಿಸಿದ್ದರಿಂದ ಬಿಷ್ಣೋಯಿ ಗ್ಯಾಂಗ್ ದಾಳಿ ನಡೆದಿದೆ ಎನ್ನಲಾಗಿದೆ.ಈ ಮೊದಲು, ಕಪಿಲ್, ಕಾರ್ಯಕ್ರಮವೊಂದರಲ್ಲಿ ಸಿಖ್ಖರಿಗೆ ಅವಮಾನ ಮಾಡಿದ್ದರೆಂದು ಆರೋಪಿಸಿ ಖಲಿಸ್ತಾನಿಗಳು ಕೆಫೆ ಆರಂಭವಾದ ಕೆಲ ದಿನಗಳಲ್ಲಿ ಅದರ ಮೇಲೆ ದಾಳಿ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.