/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ನಟ ದರ್ಶನ್ ಹಾಗೂ ಬೆಂಗಳೂರು ಜೈಲು
ನಟ ದರ್ಶನ್ ಗೆ ಜೈಲಿನಲ್ಲಿ ಕನಿಷ್ಟ ಸವಲತ್ತು ನೀಡದ ಆರೋಪಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶರೇ ಖುದ್ದಾಗಿ ಜೈಲಿಗೆ ಭೇಟಿ ನೀಡಿ ತಮಗೆ ನೀಡಿರುವ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ನಟ ದರ್ಶನ್ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯ ಬಗ್ಗೆ ಇಂದು 57ನೇ ಸಿಸಿಎಚ್ ಕೋರ್ಟ್ ನ ಇನ್ ಚಾರ್ಜ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಆದೇಶ ನೀಡಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಸವಲತ್ತು ಪರಿಶೀಲಿಸಬೇಕು. ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು . ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಎಂದು ಪರಿಶೀಲನೆ ನಡೆಸುವಂತೆ 57ನೇ ಸಿಸಿಎಚ್ ಕೋರ್ಟ್ ಆದೇಶ ನೀಡಿದೆ. ಅಕ್ಟೋಬರ್ 18 ರೊಳಗೆ ಭೇಟಿ ನೀಡಿ ವರದಿ ನೀಡಲು ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗೆ ಕೋರ್ಟ್ ಈ ಸೂಚನೆ ನೀಡಿದೆ. ಇದರಿಂದಾಗಿ ಕೋರ್ಟ್ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದಂತೆ ಆಗಿದೆ.
ಕೋರ್ಟ್ ಆದೇಶದಂತೆ ಸೌಲಭ್ಯ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ರು. ಆದ್ರೆ, ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲರು ಆರೋಪ ಮಾಡಿದ್ರು. ದರ್ಶನ್ ಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ನ್ಯಾಯಾಧೀಶರೇ ಪರಿಶೀಲಿಸಲು ನಟ ದರ್ಶನ್ ಕೋರ್ಟ್ ಗೆ ಮನವಿ ಮಾಡಿದ್ದರು. ಸಿ.ಆರ್.ಪಿ.ಸಿ. ಸೆಕ್ಷನ್ 310 ರಡಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ಬಗ್ಗೆ ಈಗ ಕೋರ್ಟ್ ಮಹತ್ವದ ಆದೇಶ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.