ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ. ತಮ್ಮ ಜೀವನದ ಎಲ್ಲಾ ಸಾಧನೆಗಳು ದೇವಿಗೆ ಅರ್ಪಣೆ ಎನ್ನುವ ಭಾವಜೀವಿ. ತಮ್ಮ ಭಕ್ತಿಯ ಸಂಕೇತವಾಗಿ ತಾಯಿ ಮುಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ್ದಾರೆ.
ಭಕ್ತಿಗೆ ಬೆಲೆಕಟ್ಟಲಾಗದು ಅನ್ನೋ ಮಾತಿದೆ. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಈ ಮಾತು ಅಕ್ಷರಶಃ ಸಂಪನ್ನಗೊಂಡಿತು. ಸಾಟಿ ಇಲ್ಲದ ಸಂಗೀತದಿಂದ ಅಭಿಮಾನಿಗಳು ತಲೆದೂಗುವಂತೆ ಮಾಡುವ ಸುಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ, ತನ್ನ ಪ್ರೀತಿಯ ತಾಯಿಯ ಮುಡಿಗೆ ವಜ್ರದ ಕಿರೀಟವಿಟ್ಟಿದ್ದಾರೆ.
ವಜ್ರದ ಕಿರೀಟದ ಮೌಲ್ಯವೆಷ್ಟು ಗೊತ್ತಾ?
ಅಂದಾಗೆ ಇಳಯರಾಜ ತನ್ನ ಜೀವನ ಪರ್ಯಂತ ದುಡಿಮೆಯ ಒಂದು ಭಾಗವನ್ನು ತಾಯಿ ಮೂಕಾಂಬಿಕೆಗೆ ಅರ್ಪಿಸುತ್ತಾ ಬಂದಿದ್ದಾರೆ. ಇದೀಗ 4 ಕೋಟಿ ವೆಚ್ಚದಲ್ಲಿ ತಾಯಿ ಮುಕಾಂಬಿಕೆಗೆ ವಜ್ರದ ಕಿರೀಟ ಹಾಗೂ ಇತರ ಆಭರಣಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆಭರಣಗಳ ಸಮರ್ಪಣಾ ಕಾರ್ಯಕ್ರಮ ಅತ್ಯಂತ ಸರಳವಾಗಿ ಕ್ಷೇತ್ರದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬಂದ ಆಡಳಿತ ಮಂಡಳಿಯವರು ಪೂಜೆಗೈದ ವಜ್ರದ ಕಿರೀಟವನ್ನು ತಾಯಿಯ ಮುಡಿಗೆ ಅರ್ಪಿಸಿದರು. ಜೊತೆಗೆ ವೀರಭದ್ರ ಸ್ವಾಮಿಗೂ ಬೆಳ್ಳಿಯ ಕಿರೀಟ ಹಾಗೂ ಖಡ್ಗವನ್ನು ಇಳಯರಾಜ ಸಮರ್ಪಿಸಿದರು. ನಂದೇನೂ ಇಲ್ಲ ಎಲ್ಲಾ ತಾಯಿಯ ಕೃಪೆ ಎಂದು ಕೈ ಮುಗಿದರು.
ಇದನ್ನೂ ಓದಿ:ರಿಲೀಸ್ಗೂ ಮುನ್ನವೇ ಕಾಂತಾರ ಕಮಾಯಿ.. OTT ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ?
ಮೂಕಾಂಬಿಕೆ ತನ್ನ ಜೀವನದಲ್ಲಿ ಪವಾಡಗಳನ್ನು ನಡೆಸುತ್ತಲೇ ಬಂದಿದ್ದಾಳೆ ಅನ್ನೋದು ಇಳಯರಾಜರ ಅಂತರಂಗದ ಮಾತು. ಈ ಹಿಂದೆಯೂ ಅನೇಕ ಸಂದರ್ಶನಗಳಲ್ಲಿ ಮೂಕಾಂಬಿಕೆಯ ಕುರಿತಾದ ತನ್ನ ಭಕ್ತಿಯನ್ನು ಇವರು ಹೇಳುತ್ತಲೇ ಬಂದಿದ್ದಾರೆ. ದಶಕಗಳ ಹಿಂದೆ ಮೂಕಾಂಬಿಕೆಗೆ ಕೆಲ ಆಭರಣಗಳನ್ನು ಅರ್ಪಿಸಿದ್ದ ಇಳಯರಾಜ, ಈ ಬಾರಿಯೂ ಸದ್ದಿಲ್ಲದೇ ಬಂದು ಮಹಾದಾನ ನೀಡಿದ್ದಾರೆ. ವರ್ಷಂಪ್ರತಿ ಕ್ಷೇತ್ರಕ್ಕೆ ಭೇಟಿ ಕೊಡುವ ಇವರು, ಮುಕಾಂಬಿಕೆಯೇ ತನ್ನ ಸಂಗೀತ ಸಾಧನೆಗಳಿಗೆ ಪ್ರೇರಣೆ ಎನ್ನುತ್ತಾರೆ.
ತಾಯಿ ಮೂಕಾಂಬಿಕೆ ಕಲಾಮಾತೆಯೂ ಹೌದು. ಹಾಗಂತಲೇ ಸಾವಿರಾರು ಮಂದಿ ಪ್ರತಿವರ್ಷ ಇಲ್ಲಿ ಬಂದು ತಾಯಿಯ ಮುಂದೆ ಕಲಾಪ್ರದರ್ಶನ ನೀಡಿ ಹೋಗುತ್ತಾರೆ. ಇಳಿಯರಾಜರಂತೆ ಜೇಸುದಾಸ್ ಕೂಡ ಮೂಕಾಂಬಿಕೆಗೆ ಶರಣಾಗಿದ್ದಾರೆ. ದೇಶದ ಅನೇಕ ಸೆಲೆಬ್ರಿಟಿ ನಟರು, ರಾಜಕಾರಣಿಗಳು ಮೂಕಾಂಬಿಕೆಯ ಸನ್ನಿಧಾನಕ್ಕೆ ಬರುವುದು ಸಾಮಾನ್ಯ. ಅದರಲ್ಲೂ ಇಳಯರಾಜರಂತೂ ಜೀವನದ ದುಡಿಮೆಯನ್ನೆಲ್ಲಾ ತಾಯಿಗೆ ಈ ರೀತಿ ಅರ್ಪಿಸಿ ಹೋಗುತ್ತಿರುವುದು ಅವರ ಭಕ್ತಿಯ ಆಳವನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ:ರಿಲೀಸ್ಗೂ ಮುನ್ನವೇ ಕಾಂತಾರ ಕಮಾಯಿ.. OTT ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ