/newsfirstlive-kannada/media/media_files/2025/10/02/kanthara-cinema-review02-2025-10-02-14-06-49.jpg)
ಕಾಂತಾರ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ
ಮೂರು ವರ್ಷದ ಹಿಂದೆ ಕಾಂತಾರ ಸಿನಿಮಾ ಹಚ್ಚಿದ ಭಕ್ತಿಯ ಕಿಚ್ಚು ಇನ್ನೂ ಕಮ್ಮಿ ಆಗಿಲ್ಲ.. ಆ ಕಿಚ್ಚು ಈಗ ಕಾಂತಾರ ಚಾಪ್ಟರ್ 1 ಮೂಲಕ ಕಾಡ್ಗಿಚ್ಚಾಗಿ ಬದಲಾಗಿದ್ದು, ಡಬಲ್ ಡಿವೈನ್ ಫೀಲ್ ಕೊಡ್ತಿದೆ..
ಬೆಳಕು.. ಇದು ಬೆಳಕಲ್ಲ ದರ್ಶನ.. ಅಂತೇಳಿ ಇಡೀ ದೇಶಕ್ಕೆ ಭಕ್ತಿರಸವನ್ನು ಉಣಬಡಿಸಿದ ಸಿನಿಮಾ ಕಾಂತಾರ.. ಧರ್ಮ, ಜಾತಿ, ಗಡಿಗಳ ಸಂಕೋಲೆ ಒಡೆದಾಕಿ ಎಲ್ಲರೂ ವಾರೆವ್ಹಾ ಅನ್ನೋ ಮಟ್ಟಿಗೆ, ದೈವಿಕ ಪ್ರಪಂಚವನ್ನು ಕಾಂತಾರ ಹುಟ್ಟು ಹಾಕಿತ್ತು.. ಆ ಯಶಸ್ಸಿನ ಬೆನ್ನಲ್ಲೇ, ಅದ್ಯಾವಾಗ ರಿಷಬ್ ಶೆಟ್ರು ಕಾಂತಾರ ಪ್ರೀಕ್ವೆಲ್ ಪ್ರಸ್ತಾಪ ಮಾಡಿದ್ರೋ, ಅಲ್ಲಿಂದ ಚಾಪ್ಟರ್ 1 ಮೇಲೆ ಬೆಟ್ಟದಷ್ಟು ನಿರೀಕ್ಷೆ ಶುರುವಾಗಿತ್ತು.. ಆ ನಿರೀಕ್ಷೆಗಳೆಲ್ಲವೂ ಈಗ, ಜನರ ಜೈಕಾರದ ರೂಪವಾಗಿ ಹೊರ ಬರ್ತಿದೆ.
ಕಾಂತಾರ - ಒಂದು ದಂತಕಥೆ.. ಈ ದಂತಕಥೆಯ ಹೊಸ ಅಧ್ಯಾಯ ನೋಡೋಕೆ ಲಕ್ಷಾಂತರ ಕಾಂತಾರ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ರು.. ಇದು ಪ್ರೀಕ್ವೆಲ್ ಸಿನಿಮಾ ಆಗಿರೋದ್ರಿಂದ.. ಕಥೆಯ ಕುರಿತಾಗಿ ನಾನಾ ಚರ್ಚೆಗಳು ಶುರುವಾಗಿದ್ವು.. ಈ ಅಧ್ಯಾಯದಲ್ಲಿ ಆ ಕಥೆ ಹೇಳಿರಬಹುದಾ..? ಈ ಕಥೆ ಹೇಳಿರಬಹುದಾ..? ಅನ್ನೋ ನಾನಾ ಕಥೆಗಳು ಸೃಷ್ಟಿಯಾಗಿದ್ವು.. ಅದೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.. ಕಾಂತಾರ ಎಗೇನ್ ಮ್ಯಾಜಿಕ್ ಮಾಡಿದ್ದು, ಸ್ಯಾಂಡಲ್ವುಡ್ ಮತ್ತೊಮ್ಮೆ ತಲೆ ಎತ್ತಿ ನಿಲ್ಲುವಂತಾಗಿಸಿದೆ..
ವಿಜಯದಶಮಿ ಇದ್ರೂ, ಜನ ಕಾಂತಾರದ ಹಬ್ಬ ಮರೆತಿರಲಿಲ್ಲ.. ಬೆಳ್ಳಂಬೆಳಗ್ಗೆಯೇ ಹಬ್ಬವನ್ನೂ ಲೆಕ್ಕಿಸದೇ, ಥಿಯೇಟರ್ ಕಡೆಗೆ ಆಗಮಿಸಿದ್ರು.. ಎಷ್ಟೊತ್ತಿಗೆ ಕಾಂತಾರದ ದರ್ಶನ ಆಗುತ್ತೋ ಅಂತಾ ಕಾಯುತ್ತಾ ನಿಂತಿದ್ರು.. ಟೈಟಲ್ ಕಾರ್ಡ್ನಿಂದ ಶುರುವಾದ ಶಿಳ್ಳೆ ಚಪ್ಪಾಳೆ ಕ್ಲೈಮ್ಯಾಕ್ಸ್ ತನಕ ಕಂಟಿನ್ಯೂ ಆಗಿತ್ತು.. ಫಸ್ಟ್ ಹಾಫ್ ತನಕ ಒಂದು ವೇಗವಾದ್ರೆ, ಸೆಕೆಂಡ್ ಹಾಫ್ ದಿಗ್ದರ್ಶನ ಮಾಡಿಸಿತ್ತು.. ಸೆಕೆಂಡ್ ಹಾಫ್ನ ಪ್ರತಿ ಸೀನ್ ಗೂ ಜನ ಶಿಳ್ಳೆ, ಚಪ್ಪಾಳೆ, ಜೈಕಾರದ ಮಳೆಗೈದಿದ್ರು.
ಅಕ್ಷರಶಃ, ಈ ಪ್ರೇಕ್ಷಕರು ಹೇಳ್ತಿರೋದೆಲ್ಲ ನಿಜ.. ಕಾಂತಾರ ನಿರೀಕ್ಷೆಗೂ ಮೀರಿದ ಇತಿಹಾಸ ಬರೆದಿದ್ದು, ರಿಷಬ್ ಶೆಟ್ಟರ ಡಿವೈನ್ ಪರ್ಫಾಮೆನ್ಸ್, ಇಡೀ ಟೀಂ ಎಫರ್ಟ್ ತೆರೆ ಮೇಲೆ ರಾರಾಜಿಸ್ತಿದೆ.. ಅದರಲ್ಲೂ ಪ್ರೀ ಕ್ಲೈಮ್ಯಾಕ್ಸ್ ಹಾಗೂ ಕ್ಲೈಮ್ಯಾಕ್ಸ್ ಸಿನಿಮಾದ ಜೀವಾಳ ಆಗಿದ್ದು, ಪಂಜುರ್ಲಿ, ಗುಳಿಗ, ಶಿವ, ಚಾಮುಂಡಿ ಅವತಾರ ಥಿಯೇಟರನ್ನು ದೇಗುಲದಂತೆ ಬದಲಾಯಿಸಿ ಬಿಟ್ಟಿತ್ತು..
ಒಟ್ಟಾರೆ ಕಾಂತಾರ ಟೀಂ ತಮ್ಮ ಮೇಲಿನ ನಂಬಿಕೆಯನ್ನ ಉಳಿಸಿಕೊಂಡಿದ್ದು, ದೇಶವ್ಯಾಪಿ ಮತ್ತೊಮ್ಮೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ.
ಲೋಕೇಶ್, ಫಿಲ್ಮ್ ಬ್ಯೂರೋ, ನ್ಯೂಸ್ ಫಸ್ಟ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.