/newsfirstlive-kannada/media/post_attachments/wp-content/uploads/2024/10/Kiccha-Sudeep-1-1.jpg)
ಸೆಪ್ಟೆಂಬರ್ 02 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬ. ಪ್ರತಿ ವರ್ಷದಂತೆ ಈ ವರ್ಷಗಳು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ಕಿಚ್ಚ ಸುದೀಪ್ ಭಾವುಕರಾಗಿ ಈ ರೀತಿ ಬರೆದುಕೊಂಡಿದ್ದಾರೆ.
To all my dearest Frnzzz,,,
— Kichcha Sudeepa (@KicchaSudeep) August 25, 2025
Saw many videos posted about
the excitement shown to celebrate 2nd Sept.
Big big thanks for this unconditional luv.
Mch luv and Hugs
❤️🤗 pic.twitter.com/Q3fP0otsxQ
ಪ್ರಿಯ ಸ್ನೇಹಿತರೇ..
ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ...! ಸೆಪ್ಟೆಂಬರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ. ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ಟಬ್ಬ ಹುಟ್ಟಬೇಕು! ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ; ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಸದಾ ಪ್ರೀತಿ ಇರಲಿ.
ನಿಮ್ಮ ಕಿಚ್ಚ.
ಕಳೆದ ವರ್ಷ ಕಿಚ್ಚ ಸುದೀಪ್ ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಅಭಿಮಾನಿಗಳಿಗಾಗಿಯೇ ಬರ್ತ್ ಡೇ ಕೇಕ್ ಕಟಿಂಗ್ ಹಮ್ಮಿಕೊಂಡಿದ್ದರು. ಹಾಗಾಗಿ ನಾನಾ ಜಿಲ್ಲೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬೆಳಗ್ಗೆ 10 ಗಂಟೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಆದ್ರೆ, ಈ ಬಾರಿಯ ಹುಟ್ಟು ಹಬ್ಬಕ್ಕೆ ಮನೆಯ ಬಳಿ ಬರಬೇಡಿ, ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ ಎಂದು ಹೇಳಿದ್ದಾರೆ. ಅಮ್ಮನ ಅಗಲಿಕೆಯ ನೋವಿನಿಂದ ಕಿಚ್ಚ ಸುದೀಪ್ ಈಗಲೂ ಹೊರ ಬಂದಿಲ್ಲ. ಹೀಗಾಗಿ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ