Advertisment

ಕಾಂತಾರ ಸಿನಿಮಾ ನೋಡಿದವರ ವಿಮರ್ಶೆ : ಕಾಂತಾರ ದೈವದ ದರ್ಶನ, ಥಿಯೇಟರ್ ನಲ್ಲೇ ಕೈ ಮುಗಿದ ಜನರು

ಕಾಂತಾರ-1 ಸಿನಿಮಾವನ್ನು ನಿನ್ನೆ ಸಾಕಷ್ಟು ಮಂದಿ ಪ್ರೀಮಿಯರ್ ಷೋನಲ್ಲಿ ನೋಡಿದ್ದಾರೆ. ನ್ಯೂಸ್ ಫಸ್ಟ್‌ನ ಬುಲೆಟಿನ್ ಪ್ರೊಡ್ಯೂಸರ್ ಪ್ರಿಯತೋಷ್ ಅಗ್ನಿಹಂಸ ಸಿನಿಮಾ ನೋಡಿ ಈ ವಿಮರ್ಶೆ ಬರೆದಿದ್ದಾರೆ. ಥಿಯೇಟರ್ ನಲ್ಲೇ ಜನರು ದೈವಕ್ಕೆ ಕೈ ಮುಗಿದಿದ್ದಾರೆ. ಸಿನಿಮಾ ಹೇಗಿದೆ ಅನ್ನೋ ವಿಮರ್ಶೆ ಇಲ್ಲಿದೆ ಓದಿ.

author-image
Chandramohan
Kanthara cinema review

ಕಾಂತಾರ ಸಿನಿಮಾದ ವಿಮರ್ಶೆ

Advertisment
  • ಕಾಂತಾರ ಸಿನಿಮಾದ ವಿಮರ್ಶೆ
  • ಕಾಂತಾರ ಸಿನಿಮಾ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದೇನು?
  • ನ್ಯೂಸ್ ಫಸ್ಟ್ ಬುಲೆಟಿನ್ ಪ್ರೊಡ್ಯೂಸರ್ ಪ್ರಿಯತೋಷ್ ಅಗ್ನಿಹಂಸ ಬರೆದ ವಿಮರ್ಶೆ


ಕಾಂತಾರ.. ಬೆಳಕು ಬೆಳಕಲ್ಲಿ ಕಣ್ಣ ಮುಂದೆ ಇರೋದೆಲ್ಲಾ ಕಾಣ್ತದೆ ಆದರೆ ಇದು ಬೆಳಕಲ್ಲ ದರ್ಶನ.. ಇದು ನಿಜಕ್ಕೂ ದರ್ಶನ.. ದೈವದ ದರ್ಶನ.. ಅದೆಷ್ಟೋ ಜನರನ್ನ ಥಿಯೇಟರ್​ನಲ್ಲೇ ಕೈ ಮುಗಿಯುವಂತೆ ಮಾಡುತ್ತೆ. ಚಿತ್ರಮಂದಿರ ಅನ್ನೋದ್ರ ಭಾವನೆಯನ್ನ ಮರೆಸಿ ದೈವದ ಲೋಕಕ್ಕೆ ಕರೆದೊಯ್ಯುತ್ತೆ. ಒಂದೊಂದು ದೃಶ್ಯವೂ ಆಲೋಚಿಸುವಂತೆ ಮಾಡುತ್ತೆ. ಆಲೋಚನೆ ಹೆಚ್ಚಿದಷ್ಟು ಕಾಡುವಂತೆ ಮಾಡುತ್ತೆ. ಕಾಡಿದಷ್ಟು ಕಾಂತಾರ ಲೋಕದೊಳಗೆ ಪ್ರೇಕ್ಷಕರನ್ನ ಕರೆದೊಯ್ಯುತ್ತೆ. 

Advertisment

ಸಿನಿಮಾದ ಟೈಟಲ್​ನಲ್ಲೇ ಬರುವಂತೆ ಇದೊಂದು ದಂತಕಥೆಯೇ ಹೌದು.. ಸಿನಿಮಾದ ಬಗ್ಗೆ ಹೇಳಬೇಕು ಅಂದ್ರೆ ರಿಷಬ್ ಶೆಟ್ಟಿಯೇ ಇಡೀ ಕಥೆಯ ಜೀವಾಳ.. ಅತ್ಯಂತ ಪ್ರಮುಖ ಪಾತ್ರ.. ಆದ್ರೆ ಕಥೆಯ ನಾಯಕನ ಪಾತ್ರ ರಿಷಬ್​ ಶೆಟ್ಟರದ್ದಲ್ಲ.. ಬದಲಾಗಿ ದೈವದ್ದು.. ಆ ದೈವದ ಸುತ್ತಾ ನಡೆಯುವ ಬೆಳವಣಿಗೆಗಳೇ ಕಥೆಯ ಹೂರಣ. ಅದರಂತೆ ಇಡೀ ಸಿನಿಮಾ ಆವರಿಸಿರೋದು ಕಾಂತಾರದ ಕಾನನ.

ದೈವವನ್ನೇ ನಂಬಿ ಬದುಕುವವರು ಒಂದೆಡೆ, ಆ ದೈವವನ್ನ ತಮ್ಮ ವಶಕ್ಕೆ ಪಡೆದು ನಾವು ಬಲಾಢ್ಯರಾಗಬೇಕು ಅಂತಾ ಯತ್ನಿಸ್ತಿರೋರು ಇನ್ನೊಂದೆಡೆ.. ಆ ಕಾಡಿನಲ್ಲಿ ಇರೋ ಶಕ್ತಿ ಏನೆಂದು ತಿಳಿಯದಿದ್ದರೂ ಅಲ್ಲಿನ ಸಂಪತ್ತನ್ನ ಪಡೆಯಬೇಕು ಅನ್ನೋರು ಮತ್ತೊಂದೆಡೆ.. ಭಯ, ಭಕ್ತಿ, ಬೇಟೆಯ ಮೂರು ಮಾರ್ಗದ ಸಂಗಮದಲ್ಲಿ ನಡೆಯೋದು ಈ ಸಿನಿಮಾ ಕಥೆ. 

ಕಾಂತಾರದ ಪ್ರೀಕ್ವೆಲ್ ಈ ಚಿತ್ರ ಆಗಿರೋದ್ರಿಂದ ಕದಂಬರ ಕಾಲದ ಕಥೆಯಿಂದ ಸಿನಿಮಾ ಆರಂಭವಾಗುತ್ತೆ. ಆಳುವವರು ಒಂದೆಡೆ, ದೈವವನ್ನೇ ನಂಬಿದ ಕಾಡಿನ ಮಂದಿ ಇನ್ನೊಂದೆಡೆ.. ಈ ಕಾಡಿನ ಜನರನ್ನ ಕಾಪಾಡುವ ಪಾತ್ರ ಬೆರ್ಮೆಯಾಗಿ ನಮ್ಮ ರಿಷಬ್ ಶೆಟ್ರು ಕಾಣಿಸಿಕೊಂಡಿದ್ದಾರೆ.  ಮೊದಲಾರ್ಧ ಈ ಎರಡು ವರ್ಗದವರ ನಡುವೆ ಏನೇನು ಆಗುತ್ತೆ ಅನ್ನೋದರ ಕಥೆ ಕಾಣಸಿಗುತ್ತೆ.  ಇಲ್ಲಿ ಅಸ್ಪೃಶ್ಯತೆ, ಮೇಲ್ವರ್ಗ ಕೆಳವರ್ಗದ ಭಿನ್ನತೆ, ಸುಂಕದ ಎಳೆಯನ್ನ ತೆರೆದಿಡುತ್ತಾ, ಪ್ರೀತಿ, ಹಾಸ್ಯ, ಕುಟುಂಬದ ಕಥೆಗಳು ಸಿನಿಮಾವನ್ನ ನಿಧಾನಗತಿಯಲ್ಲಿ ಕಾಂತಾರದ ಕಾಡಿನೊಳಗೆ ನಮ್ಮನ್ನ ಆಹ್ವಾನಿಸುವಂತೆ ಮಾಡುತ್ತೆ.. ಅಸಲಿ ಕಥೆ ಶುರುವಾಗೋದು ದ್ವಿತೀಯಾರ್ಧದಲ್ಲಿ.. 

Advertisment

ಇಂಟರ್ವಲ್ ಮುಗಿದ ಬಳಿಕ ಸಿನಿಮಾ ಶರವೇಗ ಪಡೆಯುತ್ತೆ. ರಾಜರ ವಿರುದ್ಧದ ಕಾಳಗದಲ್ಲಿ ಕಾಡಿನಲ್ಲಿ ಹುಟ್ಟಿ ಬೆಳೆದ ರಿಷಬ್ ಶೆಟ್ಟಿ ಗೆಲ್ಲೋದಕ್ಕೆ ಸಾಧ್ಯವಾಗುತ್ತಾ ಅನ್ನೋ ಫಸ್ಟ್ ಹಾಫ್​ನ ಕುತೂಹಲದ ಪ್ರಶ್ನೆಗೆ ಸೆಕೆಂಡ್​ ಹಾಫ್​ನಲ್ಲಿ ಉತ್ತರ ಸಿಗುತ್ತೆ. ಅಷ್ಟರಲ್ಲಿ ಸಿನಿಮಾದ ಮೊದಲ ಮಹಾಕಾಳಗ ಶುರುವಾಗಿರುತ್ತೆ. ಅಲ್ಲಿಂದ ಶುರುವಾಗೋದು ಯುದ್ಧ. ಕಾಂತಾರದ ಕಿಚ್ಚಿನಲ್ಲಿ ಕ್ಲ್ಯೈಮ್ಯಾಕ್ಸ್​ ಮುಗಿದು, ರಾಜರ ಆಸೆ ಅಳಿದು, ಧರ್ಮ ಸ್ಥಾಪನೆ ಶುರು ಆಯ್ತು ಅನ್ನೋವಾಗ ಯಾರೂ ಊಹಿಸದ ಟ್ವಿಸ್ಟ್ ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ. ಇದನ್ನ ಹೇಳೋ ಬದಲು, ಥಿಯೇಟರ್​​ನಲ್ಲೇ ನೋಡಿದಾಗ ಸಿಗೋ ರೋಮಾಂಚನವೇ ಒಂದು ಅದ್ಭುತ ಅನುಭವ.. ಸಿನಿಮಾ ಭಾಷೆಯಲ್ಲಿ ಹೇಳಬೇಕಂದ್ರೆ ಇದನ್ನು ಡಬಲ್ ಕ್ಲೈಮ್ಯಾಕ್ಸ್ ಇರೋ ಸಿನಿಮಾ ಅನ್ನಬಹುದು.. ಈ ಕ್ಲೈಮ್ಯಾಕ್ಸ್ ನಡುವೆ ನಡೆಯೋ ‘ಪರಮಶಿವ’ನ ದರ್ಶನ, ಅಲ್ಲೊಂದು ನಂದಿಯ ಕಬಂಧಬಾಹು, ಟ್ರೇಲರ್​ನಲ್ಲಿ ನೋಡಿದ ಹುಲಿಯ ಎಂಟ್ರಿ, ಹೀಗೆ ಎಲ್ಲವೂ ಪ್ರತಿಯೊಂದು ಕ್ಷಣವನ್ನ ಕುತೂಹಲಕಾರಿಯಾಗಿ ಇಡೋದ್ರ ಜೊತೆಜೊತೆಗೆ ದೈವಿಕ ಅನುಭವವನ್ನೂ ನೀಡುತ್ತೆ. 

Kanthara cinema review02



ಇನ್ನು, ಪಾತ್ರದ ಬಗ್ಗೆ ಮಾತನಾಡೋದಾದ್ರೆ ರಿಷಬ್​ ಶೆಟ್ರು ಇಡೀ ಸಿನಿಮಾವನ್ನ ತಮ್ಮ ಕಥೆ, ನಿರ್ದೇಶನದ ಜೊತೆಗೆ ನಟನೆಯಿಂದ ಹಿಡಿದಿಡುವಂತೆ ಮಾಡಿದ್ದಾರೆ. ಅತ್ತ ಕನಕವತಿಯಾಗಿ ಕಾಣಿಸಿಕೊಂಡ ರುಕ್ಮಿಣಿ ವಸಂತ್ ಕೇವಲ ಹೆಸರಿಗಷ್ಟೇ ನಟಿ ಅನ್ನೋ ಥರ ಸೀಮಿತ ಮಾಡಿಲ್ಲ.. ಆ ಪಾತ್ರಕ್ಕೊಂದು ಕಥೆ ಇದೆ. ಮಹತ್ವ ಇದೆ. ಹೀಗಾಗಿ ರುಕ್ಮಿಣಿ ವಂಸತ್, ಪ್ರೀತಿ ಮಾಡುವಾಗಲೂ ಕತ್ತಿ ಹಿಡಿದಾಗಲೂ ಸ್ಕ್ರೀನ್ ಹೊಳೆಯುವಂತೆ ಮಾಡಿದ್ದಾರೆ. ಬಾಲಿವುಡ್ ನಟ ಗುಲ್ಶನ್ ದೇವಯ್ಯ, ಚಿತ್ರದ ಪ್ರಮುಖ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ತುಂಬಾ ಗಂಭೀರವೂ ಅಲ್ಲದ, ಹಾಸ್ಯಭರಿತವಾದದ್ದೂ ಅಲ್ಲದ, ಒಂದು ರೀತಿಯ ವಿಶಿಷ್ಠ ಪಾತ್ರ ಅದು.. ಈ ಪಾತ್ರದಲ್ಲಿ ಗುಲ್ಶನ್ ದೇವಯ್ಯ ಚೆನ್ನಾಗಿ ನಟನೆ ಮಾಡಿದ್ದಾರೆ. ಇವರನ್ನ ಬಿಟ್ರೆ, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಎಲ್ಲರ ಪಾತ್ರವೂ ತೂಕಭರಿತವಾಗಿದೆ. ಪ್ರತಿಯೊಬ್ಬರು ಆಯಾ ಪಾತ್ರಕ್ಕೆ ಜೀವತುಂಬಿದ್ದಾರೆ. ಪ್ರಮುಖವಾಗಿ ನಮ್ಮನ್ನಗಲಿದ ರಾಕೇಶ್ ಶೆಟ್ಟಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕೇಶ್ ಹಾಸ್ಯ ನಗಿಸೋದ್ರ ಜೊತೆಗೆ ಇಂಥಾ ಕಲಾವಿದನ ಅಗಲಿಕೆಯ ನೋವು ಆ ಬೆಳಕಿನಲ್ಲಿ ಮೂಡಿ ಮರೆಯಾಗುವಂತೆ ಮಾಡುತ್ತೆ. 

ಇದೆಲ್ಲದರ ಹೊರತಾಗಿ ಅಜನೀಶ್​ರ ಮ್ಯೂಸಿಕ್ ಇಡೀ ಸಿನಿಮಾವನ್ನ ಒಂದು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯೋದಕ್ಕೆ ಪ್ರೇಕ್ಷಕರು ಹಾಗೂ ಸಿನಿಮಾದ ಕಥೆಯ ನಡುವಿನ ಪುಷ್ಪಕ ವಿಮಾನದಂತೆ ಕೆಲಸ ಮಾಡಿದೆ. ಹಿಂದಿನ ಕಾಂತಾರ ಚಿತ್ರದ ಹಾಡುಗಳು ಅಲ್ಲ್ಲ್ಲಲ್ಲಿ ಪ್ರತ್ಯಕ್ಷವಾಗುತ್ತವೆ.  ಸಿನಿಮಾದ ವಿಫೆಎಕ್ಸ್ ಬಗ್ಗೆ ಹೇಳೋದಾದ್ರೆ ಅರೆದು ಕುಡಿದಿದ್ದಾರೆ ಅನ್ನುವಷ್ಟು ಅದ್ಭುತವಾಗಿದೆ. ​ಪ್ರತಿಯೊಂದು ಫ್ರೇಮ್​ನಲ್ಲೂ ಟೆಕ್ನಾಲಜಿಯ ಬಳಕೆ ಎದ್ದು ಕಾಣುತ್ತೆ. ಸಿನಿಮಾದಲ್ಲಿ ಬರೋ ಹುಲಿ, ಕಾಡುಪಾಪಗಳು, ನಿಜವೇನೋ ಅನ್ನುವಷ್ಟು ಕಣ್ಣಿಗೆ ಕಟ್ಟುವಂತಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣ ಮಾಡಿರೋದು ಕಥೆಯ ನೈಜತೆಯನ್ನ ಉಳಿಸಿಕೊಳ್ಳೋದಕ್ಕೆ ಪ್ರಮುಖ ಕಾರಣ. ಅರವಿಂದ್ ಕಶ್ಯಪ್ ಕ್ಯಾಮರಾದಲ್ಲಿ ಕಾಂತಾರ ಲೋಕ ನಿರೀಕ್ಷೆಗೂ ಮೀರಿ ಕಾಣಸಿಕ್ಕಿದೆ. ಅದರಲ್ಲೂ ಯುದ್ಧದ ಸೀನ್​ ಬಾಹುಬಲಿಯನ್ನ ನೆನಪಿಸುವಂತೆ ಮಾಡುತ್ತೆ. ಆದ್ರೆ ಅದಕ್ಕಿಂತ ವಿಭಿನ್ನ ಪ್ರಯತ್ನಗಳನ್ನ ತೆರೆದಿಡಲು ಡೈರೆಕ್ಟರ್ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. 

Advertisment

ಸೀಕ್ವೆಲ್, ಪ್ರೀಕ್ವೆಲ್​ಗಳ ಭರಾಟೆಯಲ್ಲಿ ಅಬ್ಬರಿಸೋ ಸಿನಿಮಾಗಳಿಗಿಂತ ಮುಗ್ಗರಿಸೋ ಸಿನಿಮಾಗಳ ಹೆಚ್ಚು. ಆದ್ರೆ ಈ ಸಾಲಿಗೆ ನಿಲ್ಲದೇ ಕಾಂತಾರ-1 ವಿಭಿನ್ನವಾಗಿ ನಿಂತಿದೆ. ಕಳೆದ ಬಾರಿಯ ಕಾಂತಾರದ ಸಕ್ಸಸ್ ಸೂತ್ರವನ್ನೇ ಈ ಬಾರಿಯೂ ಶೆಟ್ರು ಬಳಸಿಕೊಂಡಿದ್ದಾರೆ. ಆದ್ರೆ, ಸ್ವಲ್ಪ ಜಾಣತನದ ರೈಟಿಂಗ್ ಪ್ರೇಕ್ಷಕರಿಗೆ ರಿಪೀಟ್ ಅನುಭವ ಆಗದಂತೆ ನೋಡಿಕೊಂಡಿದೆ. ಸಿನಿಮಾದ ಪ್ರತಿಯೊಂದು ಫ್ರೇಮ್ ಕೂಡ ರಿಷಬ್ ಶೆಟ್ಟರ ತೆರೆ ಹಿಂದಿನ ಪ್ರಯತ್ನ ಎಷ್ಟು ಅನ್ನೋ ತೋರ್ಪಡಿಸುತ್ತೆ.  ಒಟ್ಟಾರೆಯಾಗಿ ಸಿನಿಮಾ ನೋಡಿ ಹೊರಬಂದಾಗ  ಮನತೃಪ್ತಿ ಭಾವನೆ ಮೂಡದೇ ಇರಲಾರದು.. ವೈಯಕ್ತಿಕವಾಗಿ ನಮ್ಮ ಕನ್ನಡ ಸಿನಿಮಾ ಅನ್ನೋ ಹೆಮ್ಮೆಯೂ ಮೂಡಿತು.. ಜೊತೆಗೆ ಕಾಂತಾರ ಸರಣಿ ಮುಂದುವರಿಯೋ ಸುಳಿವು ಕೂಡ ಸಿಕ್ಕಿತು.  

ಪ್ರಿಯತೋಷ್ ಅಗ್ನಿಹಂಸ
ಬುಲೆಟಿನ್ ಪ್ರೊಡ್ಯೂಸರ್, ನ್ಯೂಸ್ ಫಸ್ಟ್. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kanthara cinema review
Advertisment
Advertisment
Advertisment