/newsfirstlive-kannada/media/media_files/2026/03/06/vijay-2026-03-06-09-31-50.jpg)
ತಮಿಳು ನಟ, ರಾಜಕಾರಣಿ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಸುದ್ದಿ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಒಂದೇ ಕಾರಿನಲ್ಲಿ ಬಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಲಿವುಡ್ ನಟ ಹಾಗೂ ತಮಿಳು ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನವೀಗ ಸಾರ್ವಜನಿಕ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಗುರುವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪಾತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಆರತಕ್ಷತೆ (AGS Family Wedding Reception) ಕಾರ್ಯಕ್ರಮದಲ್ಲಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿರುವುದು ಹೊಸ ವದಂತಿಗಳಿಗೆ ರೆಕ್ಕೆ-ಪುಕ್ಕ ಮೂಡುವಂತೆ ಮಾಡಿದೆ.
/filters:format(webp)/newsfirstlive-kannada/media/media_files/2026/02/27/thalapathy-vijay-wife-sangeetha-files-for-divorece-2026-02-27-19-51-08.jpg)
ತಮಿಳು ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದ ಈ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಒಟ್ಟಿಗೆ ಆಗಮಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ. ಡಿಸೆಂಬರ್ 2025ರಲ್ಲಿ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ, ಇವರಿಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು.
ವಿಚ್ಛೇದನ ಅರ್ಜಿಯಲ್ಲಿ ಏನಿದೆ?
ವಿಜಯ್ ಪತ್ನಿ ಸಂಗೀತಾ ಅವರು ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಡಿಸೆಂಬರ್ 2025ರಲ್ಲೇ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಏಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ.
ಅರ್ಜಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, "ನಟಿಗೆ ವಿವಾಹೇತರ ಸಂಬಂಧವಿದೆ" (Extramarital relationship) ಎಂದು ಉಲ್ಲೇಖಿಸಿದ್ದಾರೆ. ವಿಜಯ್ ಅವರು ತನಗೆ ನಿರಂತರ ಮಾನಸಿಕ ಹಿಂಸೆ ನೀಡಿದ್ದು, ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಗತ್ಯಬಿದ್ದರೆ ಆ ನಟಿಯನ್ನೇ ಈ ಪ್ರಕರಣದಲ್ಲಿ ಎರಡನೇ ಪ್ರತಿವಾದಿಯನ್ನಾಗಿ (Second respondent) ಸೇರಿಸುವುದಾಗಿಯೂ ಹೇಳಿದ್ದಾರೆ. ವಿಚ್ಛೇದನದ ಜೊತೆಗೆ ಜೀವನಾಂಶ (Permanent alimony) ಮತ್ತು ಮನೆಯಲ್ಲಿ ವಾಸಿಸುವ ಹಕ್ಕನ್ನ ಸಂಗೀತಾ ಕೋರಿದ್ದಾರೆ.
ಇದನ್ನೂ ಓದಿ:Karnataka budget ಸಿದ್ದರಾಮಯ್ಯ ಬಜೆಟ್ ಮಂಡನೆ.. ಬೆಂಗಳೂರಿನ ನಿರೀಕ್ಷೆಗಳು ಏನೇನು..?
ವಿಜಯ್ ಮತ್ತು ಸಂಗೀತಾ ಅವರದ್ದು ವಿಶಿಷ್ಟ ಪ್ರೇಮಕಥೆ. ಸಂಗೀತಾ, ವಿಜಯ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ ಆಗಸ್ಟ್ 25, 1999 ರಂದು ಚೆನ್ನೈನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು. 2000ರಲ್ಲಿ ಪುತ್ರ ಜೇಸನ್ ಸಂಜಯ್ ಹಾಗೂ 2005ರಲ್ಲಿ ಪುತ್ರಿ ದಿವ್ಯಾ ಸಾಶಾಗೆ ಜನ್ಮ ನೀಡಿದ್ದರು. ದಕ್ಷಿಣ ಭಾರತದ ಅತಿದೊಡ್ಡ ಸೂಪರ್‌ಸ್ಟಾರ್‌ನ ಪತ್ನಿಯಾಗಿದ್ದರೂ ಸಂಗೀತಾ ಅವರು ಚಿತ್ರರಂಗದ ಲೈಮ್‌ಲೈಟ್‌ನಿಂದ ಸದಾ ದೂರವೇ ಉಳಿದಿದ್ದರು.
ಬಿರುಕಿನ ವದಂತಿ ಶುರುವಾಗಿದ್ದು ಯಾವಾಗ?
2023ರಲ್ಲಿ ವಿಜಯ್ ಅವರ ‘ವಾರಿಸು’ ಚಿತ್ರದ ಆಡಿಯೋ ಲಾಂಚ್ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ಸಂಗೀತಾ ಗೈರಾದಾಗಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿತ್ತು. ಆಗ ಅವರು ಮಕ್ಕಳೊಂದಿಗೆ ಅಮೆರಿಕದಲ್ಲಿದ್ದಾರೆ ಎನ್ನಲಾಗಿತ್ತು. ಆದರೆ 2025ರಲ್ಲಿ ವಿಜಯ್ ಅವರ ರಾಜಕೀಯ ಪಕ್ಷದ (TVK) ಪ್ರಮುಖ ಸಭೆಗಳಲ್ಲೂ ಸಂಗೀತಾ ಕಾಣಿಸಿಕೊಳ್ಳದಿರುವುದು ವದಂತಿಗಳಿಗೆ ಪುಷ್ಟಿ ನೀಡಿತ್ತು.
ವಿಜಯ್-ತ್ರಿಷಾ 'ಅಫೇರ್' ವದಂತಿಗಳೇನು?
ವಿಜಯ್ ಮತ್ತು ತ್ರಿಷಾ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಆನ್-ಸ್ಕ್ರೀನ್ ಜೋಡಿ. 'ಗಿಲ್ಲಿ' ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದ ಈ ಜೋಡಿ, ನಂತರ 'ತಿರುಪಾಚಿ', 'ಆತಿ', ಮತ್ತು 'ಕುರುವಿ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬರೋಬ್ಬರಿ 15 ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿತ್ತು.
ಇವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹಾಗೂ ಆಫ್-ಸ್ಕ್ರೀನ್ ಸ್ನೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿನಿಂದಲೂ ಹಲವು ವದಂತಿಗಳಿದ್ದವು. ನೆಟ್ಟಿಗರು ಇವರಿಬ್ಬರ ನಡುವೆ 'ಅಫೇರ್' ಇದೆ ಎಂದು ಶಂಕಿಸಿದ್ದರು. ಇತ್ತೀಚೆಗೆ ರಾಜಕೀಯ ವಲಯದಲ್ಲೂ ಕೆಲ ನಾಯಕರು ವಿಜಯ್ ಅವರನ್ನು ಟೀಕಿಸುವಾಗ ಈ ಕಥೆಯನ್ನು ಉಲ್ಲೇಖಿಸಿದ್ದರು.
ಈಗ ವಿಚ್ಛೇದನ ಅರ್ಜಿಯಲ್ಲಿ 'ನಟಿಯೊಂದಿಗಿನ ಸಂಬಂಧ'ದ ಉಲ್ಲೇಖವಿರುವುದು, ಅದರ ಬೆನ್ನಲ್ಲೇ ವಿಜಯ್-ತ್ರಿಷಾ ಒಂದೇ ಕಾರಿನಲ್ಲಿ ಬಂದು ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿರುವುದು ಆನ್ಲೈನ್‌ನಲ್ಲಿ ಮತ್ತೊಮ್ಮೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ವಿಚ್ಛೇದನ ವದಂತಿಗಳ ಬಗ್ಗೆ ಈ ಇಬ್ಬರೂ ತಾರೆಯರು ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us