Advertisment

ಮೈಸೂರು ಕಬ್ಜ ಮಾಡಲು ಸಿದ್ದರಾಮಯ್ಯ ರಣವ್ಯೂಹ; ತವರಿನಲ್ಲಿ ರಾಜಕೀಯ ಹಿಡಿತಕ್ಕೆ ಪಣ ತೊಟ್ಟ ಸಿಎಂ

author-image
Veena Gangani
Updated On
ಮೈಸೂರು ಕಬ್ಜ ಮಾಡಲು ಸಿದ್ದರಾಮಯ್ಯ ರಣವ್ಯೂಹ; ತವರಿನಲ್ಲಿ ರಾಜಕೀಯ ಹಿಡಿತಕ್ಕೆ ಪಣ ತೊಟ್ಟ ಸಿಎಂ
Advertisment
  • ರಾಜ್ಯದಲ್ಲಿ ರಂಗೇರಿದ ಲೋಕಸಭೆ ಚುನಾವಣೆ ಕಹಳೆ
  • ‘ಕೈ’ ನಾಯಕರಿಗೆ ಟಾಸ್ಕ್ ನೀಡಿದ ಸಿಎಂ ಸಿದ್ದರಾಮಯ್ಯ
  • ಅಭ್ಯರ್ಥಿ ಪರ ಒಗ್ಗೂಡಿ ಕೆಲಸ ಮಾಡುವಂತೆ ಕಿವಿಮಾತು

ಸಿದ್ದರಾಮಯ್ಯ ರಾಜಕೀಯ ರಣಬೇಟೆಗಾರ. ಎದುರಾಳಿಗಳಿಗೆ ಸೋಲುಣಿಸಬಲ್ಲ ಕಲೆಗಳನ್ನ ಕರಗತ ಮಾಡಿಕೊಂಡಿರೋ ಚತುರ. ಇದೀಗ ಲೋಕಸಮರದ ಕಣದಲ್ಲಿ ಸಿದ್ದರಾಮನಹುಂಡಿಯ ಸರದಾರ ಸಖತ್ ಆ್ಯಕ್ಟಿವ್ ಆಗಿದ್ದಾರೆ. ದಶಕಗಳ ಕಾಲ ಕೇಸರಿ ಕೋಟೆಯಾಗಿದ್ದ ತವರನ್ನ ಮತ್ತೆ ಕೈ ವಶ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರಗಳನ್ನ ಗೆಲ್ಲಲು ಮೊಕ್ಕಾಂ ಹೂಡಿ ರಣತಂತ್ರ ಸಿದ್ಧಪಡಿಸಿದ್ದಾರೆ.

Advertisment

ಸಿಂಹದ ಗುಹೆಯಾಗಿದ್ದ ಮೈಸೂರನ್ನ ಕಬ್ಜ ಮಾಡಲು ಕಾಂಗ್ರೆಸ್ ಜಗಜಟ್ಟಿಯ ಎಂಟ್ರಿಯಾಗಿದೆ. ತವರು ಜಿಲ್ಲೆಯನ್ನ ಮತ್ತೆ ಕಾಂಗ್ರೆಸ್ ಕೋಟೆಯಾಗಿ ಕಟ್ಟಲು ಸಿದ್ದರಾಮಯ್ಯ ರಣಬೇಟೆಗಾರನಂತೆ ಹೊಂಚು ಹಾಕಿದ್ದಾರೆ. ಬಿಜೆಪಿಯ ರಾಜನನ್ನ ಮಣ್ಣುಮುಕ್ಕಿಸಲು ಗ್ಯಾರಂಟಿ ರಾಮಯ್ಯ ರಣವ್ಯೂಹ ರಚಿಸಿದ್ದಾರೆ.

publive-image

ಮೈಸೂರು ಕಬ್ಜ ಮಾಡಲು ಸಿದ್ದರಾಮಯ್ಯ ರಣವ್ಯೂಹ!

ಲೋಕಸಭಾ ಮತಯುದ್ಧಕ್ಕೆ ಮುಹೂರ್ತವಿಟ್ಟ ಬಳಿಕ ಮೈಸೂರು ಕದನ ಕಣಕ್ಕೆ ಮೊದಲ ಸಲ ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಆಗಿದೆ. ತವರು ಜಿಲ್ಲೆಯಲ್ಲಿ ರಾಜಕೀಯ ಬಿಗಿ ಹಿಡಿತಕ್ಕೆ ಕಂಕಣ ತೊಟ್ಟ ಸಿದ್ದರಾಮಯ್ಯ, ತವರು ಜಿಲ್ಲೆ ಮೈಸೂರು, ಪಕ್ಕದ ಚಾಮರಾಜನಗರ ವಶಕ್ಕೆ ಮಾಸ್ಟರ್​​​ ಪ್ಲಾನ್​​ ರೂಪಿಸಿದ್ದಾರೆ. ಯದುವೀರ್ ಒಡೆಯರ್ ರಂಗಪ್ರವೇಶ ಮಾಡ್ತಿದ್ದಂತೆ ಮೈಸೂರು ರಾಜ್ಯದಲ್ಲಿ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿದೆ. ದಶಕಗಳ ಬಳಿಕ ಅರಮನೆ ನಗರಿ ವಶಕ್ಕೆ ಸಿದ್ದು ಹಗಲು-ರಾತ್ರಿ ಎನ್ನದೇ ರಾಜಕೀಯ ಚಕ್ರವ್ಯೂಹವನ್ನ ಭೇಧಿಸುತ್ತಿದ್ದಾರೆ.

ಇದನ್ನೂ ಓದಿ: ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?

Advertisment

publive-image

ತವರಲ್ಲಿ ಸಿದ್ದು ಸ್ಟ್ರಾಟಜಿ!

ವಿಶ್ರಾಂತಿ ನೆಪದಲ್ಲಿ ಸಿದ್ದರಾಮಯ್ಯ ಚುನಾವಣಾ ತಂತ್ರಗಾರಿಕೆ ನಡೆಸ್ತಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನ ಗೆಲ್ಲಲು ಸಿದ್ದು ರಣತಂತ್ರ ರೂಪಿಸಿದ್ದಾರೆ. ಶನಿವಾರ ಮಧ್ಯರಾತ್ರಿ 2 ಗಂಟೆವರೆಗೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಮೈಸೂರಿನ ನಾಗರಹೊಳೆಯ ರೆಸಾರ್ಟ್‌ವೊಂದರಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ ಹಾಲಿ ಸಚಿವರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ರು ಅಂತ ತಿಳಿದುಬಂದಿದೆ. ಇನ್ನು ಈ ಸಭೆಯಲ್ಲಿ ಚುನಾವಣೆಯ ಸಾಧಕಬಾಧಕಗಳ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿ ಯದುವೀರ್ ಬಗೆಗಿನ ಚುನಾವಣೆ ಸೂಕ್ಷ್ಮತೆಗಳ ಬಗ್ಗೆ ಸಿದ್ದು ತಿಳಿ ಹೇಳಿದ್ದಾರಂತೆ. ಅಲ್ಲದೇ ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದು, ಎರಡು ದಿನ ರೆಸಾರ್ಟ್‌ನಲ್ಲೇ ತಂಗಲಿರುವ ಸಿದ್ದರಾಮಯ್ಯ, ಮತ್ತಷ್ಟು ರಾಜಕೀಯ ರಣವ್ಯೂಹವನ್ನ ರಚಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತೆ ಸಿಎಂ ಜಿಲ್ಲೆಯ ನಾಯಕರಿಗೆ ಟಾಸ್ಕ್‌ ಕೊಟ್ಟಿದ್ದಾರೆ. ಜೊತೆಗೆ ಯದುವೀರ್ ಬಗೆಗಿನ ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ಕಿವಿಮಾತನ್ನೂ ಹೇಳಿದ್ದಾರೆ.

publive-image

ತವರು ಅಭ್ಯರ್ಥಿಗಾಗಿ ಸಿಎಂ ಟಾಸ್ಕ್​!

ಮೈಸೂರು ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬಂತೆ ಪ್ರತಿಯೊಬ್ಬ ನಾಯಕರು ಕೆಲಸ ಮಾಡಬೇಕು ಅಂತ ಸಿಎಂ ಕೈ ಕಲಿಗಳಿಗೆ ಟಾಸ್ಕ್ ಕೊಟ್ಟಿದ್ದಾರಂತೆ. ಜೊತೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಕುರಿತು ಅರಿವು ಮೂಡಿಸಿ. ಮಹಿಳಾ ಮತದಾರರು ಹೆಚ್ಚಾಗಿ ಮತ ಹಾಕುವಂತೆ ನೋಡಿಕೊಳ್ಳಿ ಅಂತ ಸಿದ್ದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಗ್ಗೆ ಹೆಚ್ಚು ಮಾತು ಆಡಬೇಡಿ ಎಂದಿರುವ ಸಿಎಂ, ಯದುವೀರ್ ರಾಜವಂಶಸ್ಥ ಆಗಿರೋದ್ರಿಂದ ಜನರ ಭಾವನೆ ವಿರುದ್ಧ ಮಾತಾಡಬೇಡಿ. ಯದುವೀರ್ ಬಗ್ಗೆ ಎಲ್ಲಿಯೂ, ಯಾರೂ ಕೂಡ ಮಾತನಾಡಬಾರದು. ಆದ್ರೆ, ಪ್ರತಾಪ್​ ಸಿಂಹರಿಗೆ ಟಿಕೆಟ್ ತಪ್ಪಿದ್ದರ ಕುರಿತು ಹೆಚ್ಚು ಮಾತನಾಡಿ ಅಂತ ಹೇಳಿದ್ದಾರಂತೆ. ಅಲ್ಲದೇ ಅನವಶ್ಯಕವಾಗ ಟೀಕೆ, ಟಿಪ್ಪಣಿಗಳಿಗೆ ಆಸ್ಪದ ಮಾಡಿಕೊಡಬೇಡಿ. ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಎಸಗಿದೆ ಎಂಬುದನ್ನು ಜನಕ್ಕೆ ತಿಳಿಸಿ. ಮುಖ್ಯವಾಗಿ ಅಹಿಂದ ಮತ ಕ್ರೂಢೀಕರಣಕ್ಕೆ ಹೆಚ್ಚು ಗಮನ ಹರಿಸಿ ಅಂತ ಸಿಎಂ ಜಿಲ್ಲೆಯ ನಾಯಕರಿಗೆ ಟಾಸ್ಕ್‌ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಾರೆ, ಅರಮನೆ ನಗರಿಯನ್ನ ಕೈ ವಶ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಎಲ್ಲ ರೀತಿಯ ರಣವ್ಯೂಹ ರಚಿಸಿದ್ದಾರೆ. ಜಿಲ್ಲೆಯ ನಾಯಕರನ್ನೆಲ್ಲಾ ಒಟ್ಟುಗೂಡಿಸಿ ರಾಜಕೀಯ ಪಾಠ ಹೇಳಿದ್ದಾರೆ. ಎರಡು ದಿನಗಳ ಕಾಲ ಸಿಎಂ ತವರಲ್ಲೇ ಇರಲಿದ್ದು, ಲೋಕ ಗೆಲ್ಲಲು ಮತ್ತಷ್ಟು ಕಾರ್ಯತಂತ್ರ ರೂಪಿಸ್ತಿರೋದಂತೂ ನಿಜ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment