/newsfirstlive-kannada/media/post_attachments/wp-content/uploads/2024/12/KANNADA_HABBA_3.jpg)
ಮಂಡ್ಯ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ್ದಾರೆ. ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಗೊ.ರು ಚನ್ನಬಸಪ್ಪ ಅವರು ಬರೆದಿರುವ ‘ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ’ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ಹಾಗೂ ನಿರ್ಮಲಾನಂದನಾಥ ಶ್ರೀ ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಬರೆದಿದ್ದಾರೆ. ಇದನ್ನು ಕನ್ನಡಕ್ಕೆ ಗೊ.ರು ಚನ್ನಬಸಪ್ಪ ಅವರು ಅನುವಾದಿಸಿದ್ದಾರೆ. ಇದಕ್ಕೂ ಮೊದಲು ವೇದಿಕೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಗೊ.ರು ಚನ್ನಬಸಪ್ಪ ಅವರ ಮೆರವಣಿಗೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಗೊ.ರು ಚನ್ನಬಸಪ್ಪ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಧ್ವಜವನ್ನು ಕ.ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು, ನಾಡ ಧ್ವಜವನ್ನು ಪರಿಷತ್ತಿನ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಅವರು ಧ್ವಜಾರೋಹಣ ಮಾಡಿದರು.
ಇದನ್ನೂ ಓದಿ:ಕನ್ನಡ ಹಬ್ಬದಲ್ಲಿ ಭೂರಿ ಭೋಜನ.. ಮೊದಲ ದಿನದ ಉಪಾಹಾರ-ಊಟ ಏನೇನು ಇದೆ?
ಸಮ್ಮೇಳನವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮೂರು ದಶಕಗಳ ಹಿಂದೆ ಸಾಹಿತಿ ಚದುರಂಗ ಅವರ ಅಧ್ಯಕ್ಷತೆಯಲ್ಲಿ 63ನೇ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಿತ್ತು. ಆಗ ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಆಗಿದ್ದ ಡಾ.ಗೊ.ರು ಚನ್ನಬಸಪ್ಪನವರು ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. 30 ವರ್ಷಗಳ ನಂತರ ಈಗ ನಡೆಯುತ್ತಿರುವ 87ನೇ ಸಮ್ಮೇಳನದ ಅಧ್ಯಕ್ಷರು ಚನ್ನಬಸಪ್ಪನವರೇ ಆಗಿರುವುದು ಕನ್ನಡದ ಗೌರವವನ್ನು ಹೆಚ್ಚಿಸಿದೆ ಎಂದು ಸಿಎಂ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ